ಸಿನಿಮಾ ಆರಂಭದಲ್ಲಿ ಪ್ರಸಾರವಾಗುವ ಧೂಮಪಾನ ವಿರೋಧಿ ಜಾಹೀರಾತುಗಳು ಪ್ರೇಕ್ಷಕರ ಚಿತ್ರ ವೀಕ್ಷಣಾ ಮನಸ್ಥಿತಿ ಹಾಳುಮಾಡುತ್ತವೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ. 2013ರಲ್ಲೇ ಸೆನ್ಸಾರ್ ಮಂಡಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಕಲಾತ್ಮಕ ಅನುಭವಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಿದ್ದಾರೆ. ೨೦೧೨ರಿಂದ ಈ ಜಾಹೀರಾತು ಕಡ್ಡಾಯಗೊಳಿಸಲಾಗಿತ್ತು.
ನಿಮ್ಮ ನೆಚ್ಚಿನ ಸಿನಿಮಾ (movie) ನೋಡೋಗೆ ನೀವು ಥಿಯೇಟರ್ (theater) ಗೆ ಹೋಗಿರ್ತೀರಿ. ಸಿನಿಮಾ ಪ್ರೋಮೋ, ಸಾಂಗ್ ನೋಡಿದ ಗುಂಗಿನಲ್ಲೇ ಥಿಯೇಟರ್ ನಲ್ಲಿ ಕುಳಿತುಕೊಂಡಿರುವ ನಿಮ್ಮ ಮುಂದೆ ಮೊದಲು ಬರೋದೇ, ಮೊದಲು ನನ್ನ ಜೀವನ ಹೀಗಿರಲಿಲ್ಲ ಎನ್ನುವ ಮಹಿಳೆಯ ಮುಖ. ಸಿನಿಮಾ ಥಿಯೇಟರ್ ಗಳಲ್ಲಿ ಸಿನಿಮಾ ಶುರು ಆಗುವ ಮುನ್ನ ಸ್ಮೋಕಿಂಗ್ ವಿರೋಧಿ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತೆ. ಧೂಮಪಾನ (smoking)ದಿಂದ ಆಗುವ ಹಾನಿ ಹಾಗೂ ತಂಬಾಕು ಸೇವನೆಯಿಂದ ಆಗುವ ಕ್ಯಾನ್ಸರ್ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸುವ ವಿಡಿಯೋ ಪ್ರಸಾರವಾಗುತ್ತದೆ. ಈ ವಿಡಿಯೋ ಬಗ್ಗೆ ಮತ್ತೊಮ್ಮೆ ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ. ನೇರ ನುಡಿಗೆ ಹೆಸರಾದ ಅನುರಾಗ್ ಕಶ್ಯಪ್, ಈ ಹಿಂದೆಯೂ ಸ್ಮೋಕಿಂಗ್ ಜಾಹೀರಾತಿನ ಬಗ್ಗೆ ತನ್ನ ವಿರೋಧ ವ್ಯಕ್ತಪಡಿಸಿದ್ದರು. ಸೆನ್ಸಾರ್ ಬೋರ್ಡ್ ಗೆ ಅರ್ಜಿ ಕೂಡ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಜಾಹೀರಾತಿನ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಶುರುವಾಗುವ ಮೊದಲು ಪ್ರಸಾರವಾಗುವ ಜಾಹೀರಾತು, ಸಿನಿಮಾ ವೀಕ್ಷಣೆ ಮಾಡುವ ಮೂಡ್ ಹಾಳು ಮಾಡುತ್ತೆ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್, ಜಾಹೀರಾತಿನ ಬಗ್ಗೆ ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾಹೀರಾತು, ಪ್ರೇಕ್ಷಕರಿಗೆ ಎಚ್ಚರಿಕೆಯನ್ನು ನೀಡುತ್ತದೆ ನಿಜ. ಆದ್ರೆ ಜಾಗೃತಿಗೊಳಿಸುವ ಈ ಜಾಹೀರಾತೇ ಅವರ ಮೂಡ್ ಹಾಳು ಮಾಡುತ್ತದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ. ನಿರ್ಮಾಪಕರು ಶ್ರಮವಹಿಸಿ ಸಿನಿಮಾ ತಯಾರಿಸಿರುತ್ತಾರೆ, ಆ ಸಿನಿಮಾ ನೋಡುವ ಮೂಡ್ ನಲ್ಲಿ ಪ್ರೇಕ್ಷಕರು ಥಿಯೇಟರ್ ಗೆ ಬಂದಿರ್ತಾರೆ. ಆದ್ರೆ ಇದೊಂದು ಜಾಹೀರಾತು, ಚಿತ್ರ ವೀಕ್ಷಿಸುವ ಅವರ ಮನಸ್ಥಿತಿಯನ್ನು ಬದಲಿಸುತ್ತದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಸೆನ್ಸರ್ ಮಂಡಳಿಗೆ ದೂರು ನೀಡಿದ್ದ ಅನುರಾಗ್ ಕಶ್ಯಪ್ : ಸಂದರ್ಶನದಲ್ಲಿ ಸೆನ್ಸರ್ ಮಂಡಳಿಗೆ ದೂರು ನೀಡಿದ್ದ ಬಗ್ಗೆಯೂ ಅನುರಾಗ್ ಕಶ್ಯಪ್ ಹೇಳಿದ್ದಾರೆ. 2013 ರ ಅಗ್ಲಿ ಚಿತ್ರ ಬಿಡುಗಡೆ ವೇಳೆ ಅನುರಾಗ್ ಕಶ್ಯಪ್ ದೂರು ದಾಖಲಿಸಿದ್ದರು. ಇದು ಕಲಾತ್ಮಕ ಅಭಿವ್ಯಕ್ತಿಗೆ ಮೂಲಭೂತ ಬೆದರಿಕೆ ಎಂದು ಅವರು ವಾದಿಸಿದ್ದರು. ಈ ವಿಷ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ಸಿಕ್ಕಿರಲಿಲ್ಲ. ದೀರ್ಘಕಾಲ ಈ ವಿಷ್ಯದ ಬಗ್ಗೆ ಚರ್ಚೆ ನಡೆದಿತ್ತು. ಆದ್ರೆ ಅಗ್ಲಿ ಚಿತ್ರ ಪೈರಸಿಗೆ ಒಳಗಾದ ಕಾರಣ ಅನುರಾಗ್ ಕಶ್ಯಪ್ ಗೆ, ಸಿನಿಮಾ ಬಿಡುಗಡೆ ಮಾಡುವ ಅನಿವಾರ್ಯತೆ ಎದುರಾಗಿತ್ತು. ಒಬ್ಬ ಚಲನಚಿತ್ರ ನಿರ್ಮಾಪಕ ದೃಶ್ಯಗಳು, ಸಂಗೀತ ಮತ್ತು ವಿವರಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ಒಂದೇ ಕಡೆ ಹಿಡಿದಿಡುವ ಪ್ರಯತ್ನ ನಡೆಸುತ್ತಾನೆ. ಆದ್ರೆ ಆ ಜಗತ್ತಿಗೆ ಪ್ರೇಕ್ಷಕ ಪ್ರವೇಶ ಮಾಡುವ ಮೊದಲೇ ಆಘಾತಕಾರಿ ಜಾಹೀರಾತು ಇಡೀ ಅನುಭವವನ್ನು ಹಾಳುಮಾಡುತ್ತದೆ. ಈ ಸಮಸ್ಯೆಯ ವಿರುದ್ಧ ಕೆಲವು ಪ್ರತಿಭಟನೆಗಳ ಹೊರತಾಗಿಯೂ, ಲಾ ಮೇಕರ್ಸ್, ಕಲೆಯ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದ್ರಿಂದ ಏನೂ ಬದಲಾಗುವುದಿಲ್ಲ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಜಾಹೀರಾತು ಶುರುವಾಗಿದ್ದು ಎಂದಿನಿಂದ ? : 2012 ರಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಜಾಹೀರಾತಿಗೆ ಅನುಮತಿ ನೀಡಿತ್ತು. ಧೂಮಪಾನ ದೃಶ್ಯಗಳನ್ನು ಹೊಂದಿರುವ ಸಿನಿಮಾ ಪ್ರಸಾರದ ವೇಳೆ ಥಿಯೇಟರ್ ನಲ್ಲಿ ಧೂಮಪಾನ ವಿರೋಧಿ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿತ್ತು. ಆರು ವರ್ಷಗಳ ಕಾಲ ಅಕ್ಷಯ್ ಕುಮಾರ್ ನಂದು ಜಾಹೀರಾತು ಕೂಡ ಪ್ರಸಾರವಾಗಿತ್ತು. ಆದ್ರೆ ಕಳೆದ ವರ್ಷ ಈ ಜಾಹೀರಾತು ಪ್ರದರ್ಶಿಸಲು ಸಿಬಿಎಫ್ಸಿ ನಿರಾಕರಿಸಿದೆ.


