ನನ್ಗೇನು ಗೊತ್ತು, ಸರ್ಕಾರನ ಕೇಳಿ ಎಂದು ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇದರ ಬೆನ್ನಲ್ಲೇ ಅಮಿತಾಬ್ ಬಚ್ಚನ್ ಕಾಲರ್ ಟ್ಯೂನ್‌ನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ.
ನವದೆಹಲಿ (ಜೂ.26) ನನ್ನನ್ನು ಕೇಳುವ ಬದಲು ನೀವು ಸರ್ಕಾರವನ್ನೇ ಕೇಳಿ ಎಂದು ಅಮಿತಾಬ್ ಬಚ್ಚನ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಪ್ರತಿಕ್ರಿಯೆ ಭಾರಿ ಸಂಚಲನ ಸೃಷ್ಟಿಸಿತ್ತು. ಎಲ್ಲೆಡೆ ಈ ಪ್ರತಿಕ್ರಿಯೆ ಚರ್ಚೆಯಾಗಿತ್ತು. ಅಮಿತಾಬ್ ಬಚ್ಚನ್ ಈ ಪ್ರತಿಕ್ರಿಯೆ ನೀಡಿದ ಕೆಲವೇ ದಿನಗಳಲ್ಲಿ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದ ಸೈಬರ್ ಕ್ರೈಂ ಜಾಗೃತಿ ಸಂದೇಶವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಈ ಮೂಲಕ ಮತ್ತೆ ಅಮಿತಾಬ್ ಬಚ್ಚನ್ ಸುದ್ದಿಯಲ್ಲಿದ್ದಾರೆ.
ಸೈಬರ್ ಕ್ರೈಂ ಜಾಗೃತಿ ಸಂದೇಶ ಕಿತ್ತು ಹಾಕಿದ ಕೇಂದ್ರ
ಕಳೆದ ಹಲವು ತಿಂಗಳಿನಿಂದ ಕರೆ ಮಾಡುವಾಗ ಸೈಬರ್ ಅಪರಾಧಗಳ ಕಾಲರ್ ಟ್ಯೂನ್ ಕೇಳಿಸುತ್ತಿತ್ತು. ಈ ಜಾಗೃತಿ ಸಂದೇಶಕ್ಕೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದರು. ಪ್ರತಿ ಬಾರಿ ಕರೆ ಮಾಡಿದಾಗ ಈ ಸೈಬರ್ ಅಪರಾಧ ಕುರಿತು ಜಾಗೃತಿ ನೀಡುತ್ತಿದ್ದ ಸಂದೇಶ ಕೇಳಿಸುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಈ ಕಾಲರ್ ಟ್ಯೂನ್ ತೆಗೆದು ಹಾಕಿದೆ. ಸೈಬರ್ ಕುರಿತು ಜಾಗೃತಿ ಮೂಡಿಸಲು ಈ ಕಾಲರ್ ಟ್ಯೂನ್ ಹಾಕಲಾಗಿತ್ತು. ಪ್ರಮುಖವಾಗಿ ಅಧಿಕಾರಿಗಳು, ಪೊಲೀಸರ ಸೋಗಿನಲ್ಲಿ ಕರೆ ಅಥವಾ ಸಂದೇಶ ಕಳುಹಿಸಿದರೆ ಪ್ರತಿಕ್ರಿಯಸಬೇಡಿ. ಅವರ ಸೈಬರ್ ಅಪರಾಧಿಗಳಾಗಿರಬಹುದು. ಸೈಬರ್ ಅಪರಾಧಗಳಿಂದ ಎಚ್ಚರವಾಗಿರಿ ಅನ್ನೋ ಸಂದೇಶ ಇದಾಗಿತ್ತು.
ರೋಸಿ ಹೋಗಿದ್ದ ಜನರಿಂದ ಪ್ರತಿಕ್ರಿಯೆ
ಮೊದಲು ಕಾಲರ್ ಟ್ಯೂನ್ ಕೇಳಿಸಿದ ಬಳಿಕವಷ್ಟೇ ಕರೆ ಕನೆಕ್ಟ್ ಆಗುತ್ತಿತ್ತು. ಕರೆ ಮಾಡುವಾಗ ನಟ ಅಮಿತಾಬ್ ಬಚ್ಚನ್ ಧ್ವನಿ ನೀಡಿದ ಸೈಬರ್ ಕ್ರೈಂ ಕಾಲರ್ ಟ್ಯೂನ್ ಕೇಳಿ ಕೇಳಿ ರೋಸಿ ಹೋದ ಗ್ರಾಹಕರು ನೇರವಾಗಿ ಅಮಿತಾಬ್ ಬಚ್ಚನ್‌ಗೆ ಕಮೆಂಟ್ ಮಾಡಿದ್ದರು. ಇತ್ತ ಅಮಿತಾ ಬಚ್ಚನ್ ಪ್ರತಿ ಪೋಸ್ಟ್‌ಗೆ ಹಲವರು ಜಾಗೃತಿ ಸಂದೇಶ ನಿಲ್ಲಿಸುವಂತೆ ಕಮೆಂಟ್ ಮಾಡುತ್ತಿದ್ದರು. ಹೀಗಾಗಿ ಅಮಿತಾಬ್ ಬಚ್ಚನ್ ಕೂಡ ಈ ಕಮೆಂಟ್‌ಗಳಿನಿಂದ ಗರಂ ಆಗಿದ್ದರು.
ಸರ್ಕಾರವನ್ನೇ ಕೇಳಿ ಎಂದಿದ್ದ ಅಮಿತಾಬ್
ಇತ್ತೀಚೆಗೆ ಅಮಿತಾಬ್ ಬಚ್ಚನ್ ನಾನೂ ಒಬ್ಬ ಅಭಿಮಾನಿ ಎಂದು ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್‌ಗೆ ಹಾಗಿದ್ದರೆ ಫೋನ್‌ನಲ್ಲಿ ಜಾಗೃತಿ ಸಂದೇಶ ಸಾಕುಮಾಡಿ ಎಂದು ಕಮೆಂಟ್ ಮಾಡಿದ್ದರು. ಈ ಮಾತನ್ನು ನೀವು ಸರ್ಕಾರಕ್ಕೆ ಹೇಳಿ, ಸರ್ಕಾರ ನನ್ನಲ್ಲಿ ಏನು ಮಾಡಲು ಹೇಳಿದೆಯೋ ಅದನ್ನು ಮಾಡಿದ್ದೇನೆ ಎಂದು ಅಮಿತಾಬ್ ಬಚ್ಚನ್ ಈ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿದ್ದರು.
ಬಹುತೇಕ ಕಾಲರ್ ಟ್ಯೂನ್ ಜಾಗೃತಿ ಸಂದೇಶಕ್ಕೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಹಲವು ಬಾರಿ ಅಮಿತಾಬ್ ಬಚ್ಚನ್ ಉಚಿತವಾಗಿ ಈ ರೀತಿಯ ಜಾಗೃತಿ ಸಂದೇಶ ಹರಡಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ಜಾಗೃತಿ ಸಂದೇಶಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.
ಕೋವಿಡ್ ಬಳಿಕ ಚರ್ಚೆಯಾಗಿದ್ದ ಜಾಗೃತಿ ಸಂದೇಶ
ಕೋವಿಡ್ ವೈರಸ್ ಜನರನ್ನು ಬೆಚ್ಚಿ ಬೀಳಿಸಿತ್ತು. ಲಾಕ್‌ಡೌನ್ ಸೇರಿದಂತೆ ಹಲವು ನಿರ್ಬಂಧಗಳಿಂದ ಎಲ್ಲಾ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ಕೋವಿಡ್ ಕುರಿತು ಜಾಗೃತಿ ಸಂದೇಶ ನೀಡಲಾಗಿತ್ತು. ಪ್ರತಿ ಕರೆ ಮೊದಲು ಕೋವಿಡ್ ಜಾಗೃತಿ ಸಂದೇಶ ಪ್ಲೇ ಆಗುತ್ತಿತ್ತು. ಆದರೆ ಕೋವಿಡ್ ಮುಗಿದು ವರ್ಷವಾದರೂ ಈ ಜಾಗೃತಿ ಸಂದೇಶ ಮಾತ್ರ ಕೇಳುತ್ತಲೇ ಇತ್ತು. ಈ ಸಂದರ್ಭದಲ್ಲಿ ಗ್ರಾಹಕರು ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದರು. ಕೋವಿಡ್ ಮುಗಿದರೂ ಜಾಗೃತಿ ಸಂದೇಶ ಮಾತ್ರ ಇನ್ನು ಕೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ತೀವ್ರ ಆಕ್ರೋಶದ ಬಳಿಕ ಈ ಜಾಗೃತಿ ಸಂದೇಶವನ್ನು ತೆಗೆದು ಹಾಕಲಾಗಿತ್ತು.
