ಆಗ ಹೋಟೆಲ್​ ಮಾಣಿ, ಈಗ ಎರಡೂವರೆ ಸಾವಿರ ಕೋಟಿಯ ಒಡೆಯನಾಗಿರುವ ನಟ ಅಕ್ಷಯ್​ ಕುಮಾರ್​ ರೋಚಕ ಸ್ಟೋರಿ ಇಲ್ಲಿದೆ... 

ಅದೃಷ್ಟ ಒಂದಿದ್ದರೆ, ಯಾರು ಏನು ಬೇಕಾದರೂ ಆಗಬಹುದು. ಅದೃಷ್ಟ ಕೈಕೊಟ್ಟರೆ ಆಗರ್ಭ ಶ್ರೀಮಂತ ರಾತ್ರೋರಾತ್ರಿ ಬಿಕಾರಿಯಾಗಬಹುದು, ಅದೃಷ್ಟ ಕೈಹಿಡಿದರೆ ಭಿಕ್ಷುಕನೂ ಮಿಲೇನಿಯರ್​ ಆಗಬಹುದು. ಕೆಲವರಿಗೆ ಅದೃಷ್ಟ ತಂತಾನೇ ಬಂದು ಒದಗಿದರೆ, ಇನ್ನು ಕೆಲವರು ಹಗಲೂ ರಾತ್ರಿ ಕಷ್ಟಪಟ್ಟು ದುಡಿದು, ಸ್ವಂತ ಬಲದಿಂದ ಮೇಲೆ ಬರುತ್ತಾರೆ. ಇದೇ ವೇಳೆ ಸಾಧಿಸುವ ಛಲ, ಗುರಿಯನ್ನು ಮುಟ್ಟುವ ತಾಳ್ಮೆಯಿದ್ದರೆ ಜೀವನದಲ್ಲಿ ಏನು ಬೇಕಾದರೂ ಮಾಡಲು ಸಾಧ್ಯ. ಅಂಥವರಲ್ಲಿ ಒಬ್ಬರು ನಟ ಅಕ್ಷಯ್​ ಕುಮಾರ್​! ಹೋಟೆಲ್​ನಲ್ಲಿ ಸರ್ವರ್​ (ಮಾಣಿ) ಆಗಿ ಕೆಲಸ ಆರಂಭಿಸಿರುವ ಅಕ್ಷಯ್​ ಕುಮಾರ್​ ಒಂದು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಮಾತ್ರವಲ್ಲದೇ ಇದೀಗ ಎರಡೂವರೆ ಸಾವಿರ ಕೋಟಿ ರೂಪಾಯಿಗಳ ಒಡೆಯ!

ಎಷ್ಟೋ ಮಂದಿಗೆ ಶಿಕ್ಷಣವೇ ದುರ್ಲಭವಾದರೆ, ಇನ್ನು ಕೆಲವರಿಗೆ ಶಿಕ್ಷಣ ಯಾಕೋ ತಲೆಗೆ ಹತ್ತುವುದೇ ಇಲ್ಲ. ಶಾಲೆಗೆ ಹೋಗುವುದು ಎಂದರೆ ಆಗುವುದೇ ಇಲ್ಲ. ಶಾಲೆ ಎಂದರೆ ಮೂದಲಿಕೆ ಮಾಡುತ್ತಿದ್ದ ವ್ಯಕ್ತಿಯಲ್ಲಿ ಒಬ್ಬರು ಅಕ್ಷಯ್​ ಕುಮಾರ್​. ಮಾತುಂಗಾದ ಡಾನ್ ಬಾಸ್ಕೋ ಶಾಲೆಗೆ ಹೋಗುತ್ತಿದ್ದ ಅಕ್ಷಯ್​ಗೆ ಶಿಕ್ಷಣ ಬಿಟ್ಟು ಕ್ರೀಡೆಯಲ್ಲಿಯೇ ಹೆಚ್ಚು ಆಸಕ್ತಿ. ಕರಾಟೆ ಪಟವಾಗಿದ್ದರು. ಓದಿನಲ್ಲಿ ಆಸಕ್ತಿಯೇ ಇಲ್ಲದ ಅಕ್ಷಯ್​ ಕುಮಾರ್​ 7ನೇ ತರಗತಿಯಲ್ಲಿ ಫೇಲ್ ಆಗಿಬಿಟ್ಟರು. ಶಾಲೆ ಬಿಡುವುದು ಎಂದರೆ ಅವರಿಗೆ ಎಗ್ಗಿಲ್ಲದ ಸಂತೋಷ. ಮಗನ ಈ ಪರಿಸ್ಥಿತಿ ನೋಡಿ ದುಃಖಿತರಾದ ತಂದೆ, ನೀನು ಮುಂದೆ ಏನಾಗಬೇಕೆಂದು ಬಯಸುತ್ತಿಯಾ ಎಂದು ಕೇಳಿದಾಗ, ಅಕ್ಷಯ್​ ಅವರಿಗೆ ಬಂದ ಮೊದಲ ಮಾತು ನಟನಾಗುವೆ ಎಂದಂತೆ. ಈ ಕುರಿತು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದ ನಟಿಯ ಪರೀಕ್ಷಾ ರಿಪೋರ್ಟ್​ ಕೊನೆಗೂ ಬಂತು: ಫ್ಯಾನ್ಸ್​ ಫುಲ್​ ಖುಷ್​!

ತಮ್ಮ ಬಾಲ್ಯದ ಜೀವನದ ಕುರಿತು ಹೇಳಿದ ಅಕ್ಷಯ್​ ಕುಮಾರ್​, ನಾನು ಚಿಕ್ಕವನಿದ್ದಾಗ ದೆಹಲಿಯ ಚಾಂದಿನಿ ಚೌಕ್‌ನಲ್ಲಿ ವಾಸಿಸುತ್ತಿದ್ದೆ. ನಮ್ಮದು 24 ಜನರು ವಾಸಿಸುವ ಕುಟುಂಬ. ಆ ಮನೆಯ ಬಾಡಿಗೆ ಆಗ ಬರೀ 100 ರೂಪಾಯಿ ಆಗಿತ್ತು. ಎಲ್ಲರೂ ಒಂದೇ ಕೋಣೆಯಲ್ಲಿ ಮಲಗುತ್ತಿದ್ದೆವು. ಅಷ್ಟು ಚಿಕ್ಕ ಮನೆಯಾಗಿತ್ತು ಎಂದಿದ್ದಾರೆ. ಓದಿನಲ್ಲಿ ಆಸಕ್ತಿಯೇ ಇರಲಿಲ್ಲ. ಮಾರ್ಷಲ್ ಆರ್ಟ್ಸ್ ಕಲೆ ಎಂದರೆ ಸಕತ್​ ಇಂಟರೆಸ್ಟ್​ ಇತ್ತು. ಇದಕ್ಕಾಗಿ ಹಾಗೂ ಹೀಗೂ ಹಣ ಹೊಂದಿಸಿದ್ದ ತಂದೆ ಅವರನ್ನು ಥಾಯ್ಲೆಂಡ್‌​ಗೆ ಕಳಿಸಿದ್ದರಂತೆ. ಬ್ಯಾಂಕಾಕ್‌ನಲ್ಲಿ ಐದು ವರ್ಷಗಳನ್ನು ಕಳೆದ ಅವರು ಥಾಯ್ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡರು. ಈ ವೇಳೆ ಅಕ್ಷಯ್​ ಅವರ ಬಳಿ ಹಣವಿರಲಿಲ್ಲ. ಇದೇ ಕಾರಣಕ್ಕೆ, ಬಾಣಸಿಗ ಮತ್ತು ಮಾಣಿಯಾಗಿ ಬ್ಯಾಂಕಾಕ್​ನಲ್ಲಿ ಕೆಲಸ ಮಾಡಿದರಂತೆ. ಅಲ್ಲಿ ಒಂದಿಷ್ಟು ಸಂಪಾದನೆ ಮಾಡಿ, ಕೋಲ್ಕತಾದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಿದರು, ಢಾಕಾ ಮತ್ತು ದೆಹಲಿಯಲ್ಲಿ ಕುಂದನ್ ಆಭರಣಗಳನ್ನು ಮಾರಾಟ ಮಾಡಿದರು. ಇದೇ ದುಡಿಮೆಯಲ್ಲಿ ಮಾರ್ಷಲ್​ ಆರ್ಟ್​ ಕಲಿತುಕೊಂಡ ಅಕ್ಷಯ್​ ಅವರು, ಆಗಿನ ಬಾಂಬೆ (ಈಗಿನ ಮುಂಬೈ)ಗೆ ಹಿಂದಿರುಗಿದ , ಮಾರ್ಷಲ್ ಆರ್ಟ್ಸ್ ಕ್ಲಾಸ್​ ತೆರೆದರು. 

ನಂತರ ನಟನಾಗುವ ತಮ್ಮ ಬಾಲ್ಯದ ಕನಸನ್ನು ಬೆನ್ನತ್ತಿ ಹೋದರು. ಅವರಿಗೆ ಆಜ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಚಿತ್ರದಲ್ಲಿ ಕರಾಟೆ ಬೋಧಕನ ಪಾತ್ರದಲ್ಲಿ ಕಾಣಿಸಿಕೊಂಡರು. ಕೆಲವೊಮ್ಮೆ ಜೀವನವು ಯಾವ ರೀತಿಯ ತಿರುವು ಪಡೆಯುತ್ತದೆ ಎಂದು ಊಹಿಸುವುದೇ ಕಷ್ಟ. ಏನೋ ಮಾಡಬೇಕಾದ ಕೆಲಸ ಕೈತಪ್ಪಿ ಹೋದಾಗ ನೊಂದುಕೊಳ್ಳುತ್ತಿದ್ದರೆ, ಆ ಕೆಲಸ ಕೈತಪ್ಪಿ ಹೋದುದಕ್ಕೇ ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನುವುದು ಕೂಡ ಅಷ್ಟೇ ದಿಟ. ಅಕ್ಷಯ್​ ಜೀವನದಲ್ಲಿಯೂ ಹಾಗೆಯೇ ಆಯಿತು. ಒಮ್ಮೆ ಬೆಂಗಳೂರಿನಲ್ಲಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ಹೋಗಬೇಕಿತ್ತು. ಆದರೆ ಅವರ ವಿಮಾನ ಮಿಸ್​ ಆಯಿತಂತೆ. ಇದರಿಂದ ತುಂಬಾ ನೊಂದುಕೊಂಡಿದ್ದರು ಅಕ್ಷಯ್​. ಆಗ ಸಮೀಪವೇ ಇದ್ದ ಫಿಲ್ಮ್ ಸ್ಟುಡಿಯೋಗೆ ಹೋದಾಗ ಅವರ ಅದೃಷ್ಟದ ಬಾಗಿಲು ತೆರೆದಿತ್ತು. ಹೀಗೆಯೇ ಮಾತುಕತೆ ವೇಳೆ ಅವರಿಗೆ ನಿರ್ಮಾಪಕ ಪ್ರಮೋದ್ ಚಕ್ರವರ್ತಿ ತಮ್ಮ ದೀದಾರ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೇ ನೀಡಿದ್ದರು!

ಅಲ್ಲಿಂದ ಚಿತ್ರರಂಗದಲ್ಲಿ ಏಳು-ಬೀಳು ನೋಡುತ್ತಲೇ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಮುಂಬೈನಲ್ಲಿ 80 ಕೋಟಿ ರೂಪಾಯಿ ವೆಚ್ಚದ ಐಷಾರಾಮಿ ಬಂಗಲೆಯನ್ನು ಹೊಂದಿರುವ ಅಕ್ಷಯ್ ಕುಮಾರ್ ಈಗ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಈಗ 2,500 ಕೋಟಿ ರೂಪಾಯಿ ಆಸ್ತಿಯ ಒಡೆಯ. ಅವರು ಗೋವಾ, ಕೆನಡಾ ಮತ್ತು ಇತರ ಸ್ಥಳಗಳಲ್ಲಿ ಮನೆಗಳನ್ನು ಹೊಂದಿದ್ದಾರೆ.

ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!