ಓ..ಆ ಕಾಲದಲ್ಲೇ ಬಲ್ಬ್ ಇತ್ತಾ; ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಲುಕ್ ಹಿಗ್ಗಾಮುಗ್ಗಾ ಟ್ರೋಲ್
ಅಕ್ಷಯ್ ಕುಮಾರ್ ನಟನೆಯ ಮರಾಠಿಯ ಛತ್ರಪತಿ ಶಿವಾಜಿ ಲುಕ್ ರಿಲೀಸ್ ಆಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸದ್ಯ ಮರಾಠಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ ಸಿನಿಮಾಗಳ ಸತತ ಸೋಲಿನ ಬಳಿಕ ಕಂಗೆಟ್ಟಿದ್ದ ಅಕ್ಷಯ್ ಕುಮಾರ್ ಮರಾಠಿ ಕಡೆ ಮುಖ ಮಾಡಿದ್ದಾರೆ. ಇತ್ತೀಚಿಗಷ್ಟೆ ಚಿತ್ರೀಕರಣ ಪ್ರಾರಂಭ ಮಾಡಿರುವ ಅಕ್ಷಯ್ ಕುಮಾರ್ ಆಗಲೇ ಮೊದಲ ಲುಕ್ ಶೇರ್ ಮಾಡಿದ್ದರು. ಚಿತ್ರೀಕರಣ ಸೆಟ್ ನಿಂದ ವಿಡಿಯೋ ಶೇರ್ ಮಾಡಿದ್ದರು. ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಕುಮಾರ್ ಶಿವಾಜಿ ಲುಕ್ ವೈರಲ್ ಆದ ಬೆನ್ನಲ್ಲೇ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸರಿಯಾಗಿ ಸಂಶೋಧನೆ ಮಾಡಿ ನಂತರ ಸಿನಿಮಾ ಮಾಡಿ ಎಂದು ನೆಟ್ಟಿಗರು ತರಾಟೆ ತೆಗೆದು ಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಮೊದಲ ಮರಾಠಿ ಸಿನಿಮಾಗೆ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ಮೊದಲ ಲುಕ್ ಶೇರ್ ಮಾಡಿದ್ದಾರೆ ಅಕ್ಷಯ್ ಕುಮಾರ್. ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿಯಾಗಿ ನಡೆದುಕೊಂಡು ಬರುತ್ತಿದ್ದಾರೆ. ಈ ವಿಡಿಯೋದಲ್ಲಿ ಬಲ್ಬ್‌ನ ಗೊಂಚಲು ಕೂಡ ಇದೆ. ನೆಟ್ಟಿಗರ ಕಣ್ಣು ಸೀದ ಬಲ್ಬ್ ಮೇಲೆ ಹೋಗಿದೆ. ಬಳಿಕ ತರಾಟೆ ತೆಗೆದುಕೊಂಡಿದ್ದಾರೆ. ಛತ್ರಪತಿ ಶಿವಾಜಿ ಆಡಳಿತ ನಡೆಸಿದ್ದು 1674 ರಿಂದ 1680ರ ವರೆಗೆ. ಆಗ ಬಲ್ಬ್ ಕಂಡುಹಿಡಿದಿರಲಿಲ್ಲ. ಆದರೆ ಅಕ್ಷಯ್ ಕುಮಾರ್ ಅವರ ಛತ್ರಪತಿ ಸಿನಿಮಾದಲ್ಲಿ ಬಲ್ಬ್ ಹೇಗೆ ಬಂತು ಎಂದು ಟ್ರೋಲ್ ಮಾಡುತ್ತಿದ್ದಾರೆ.
ಪಾಕ್‌ನಲ್ಲಿ ಬ್ಯಾನ್ ಆದ ಬಾಲಿವುಡ್ ಖಾನ್‌ಗಳ ಸಿನಿಮಾ, ಏನಿರಬಹುದು ರೀಸನ್ಸ್?
ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಸಿನಿಮಾತಂಡಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. 'ಶಿವಾಜಿ ಮಹಾರಾಜ್ 1674 ರಿಂದ 1680 ರವರೆಗೆ ಆಳ್ವಿಕೆ ನಡೆಸಿದರು. ಥಾಮಸ್ ಆಲ್ವ ಎಡಿಸನ್ ಬಲ್ಬ್ ಕಂಡುಹಿಡಿದಿದ್ದು 1880 ರಲ್ಲಿ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಅಕ್ಷಯ್ ಕುಮಾರ್ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಅನೇಕ ವಿಷಯಗಳಿವೆ. ಪ್ರಾರಂಭಿಕವಾಗಿ ಶಿವಾಜಿ ಮಹಾರಾಜ್ ಅವರು 50 ವರ್ಷದವರಾಗಿದ್ದಾಗ ನಿಧನರಾದರು. ಅಕ್ಷಯ್ ಅವರಿಗೆ 55 ವರ್ಷ. ಅವರು ನಟಿಸಲು ಉತ್ತಮ ನಟನಾ ಕೌಶಲ್ಯ ಹೊಂದಿರುವ ಮರಾಠಿ ಭಾಷಿಕ ನಟನನ್ನು ಹುಡುಕಲು ಸಾಧ್ಯವಾಗಲಿಲ್ಲವೇ?' ಮತ್ತೋರ್ವರು ಹೇಳಿದ್ದಾರೆ. ಯಾವುದೇ ಸಂಶೋಧನೆ ಮಾಡದೇ ಈ ಸಿನಿಮಾತಂಡ ಚಿತ್ರೀಕರಣ ಪ್ರಾರಂಭವಾಗಿದೆ. ಹಾಗಾಗಿ ಈ ತಪ್ಪುಗಳು ಆಗುತ್ತಿವೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಸತತ ಸೋಲಿನ ಬಳಿಕ ಛತ್ರಪತಿ ಶಿವಾಜಿಯಾಗಿ ಎಂಟ್ರಿ ಕೊಟ್ಟ ಅಕ್ಷಯ್ ಕುಮಾರ್; ರಾಯಲ್ ಲುಕ್ ವೈರಲ್
ಅಂದಹಾಗೆ ಅಕ್ಷಯ್ ಕುಮಾರ್ ನಟನೆಯ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಸಿನಿಮಾಗೆ ಮಹೇಶ್ ಮಂಜ್ರೇಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಜಯ್ ದುಧಾನೆ, ಉತ್ಕರ್ಷ ಶಿಂಧೆ, ವಿಶಾಲ್ ನಿಕಮ್, ವಿರಾಟ್ ಮಡ್ಕೆ, ಹಾರ್ದಿಕ್ ಜೋಶಿ, ಸತ್ಯ, ನವಾಬ್ ಖಾನ್, ಮತ್ತು ಪ್ರವೀಣ್ ತಾರ್ಡೆಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ವಸೀಮ್ ಖುರೇಷಿ ನಿರ್ಮಿಸಿರುವ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಮರಾಠಿ ಮತ್ತು ಹಿಂದಿ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾ 2023ರ ದೀಪಾವಳಿಯಂದು ರಿಲೀಸ್ ಆಗುತ್ತಿದೆ. ಸದ್ಯ ಮೊದಲ ಲುಕ್ ನಲ್ಲೇ ಟ್ರೋಲ್ ಆಗುತ್ತಿರುವ ಈ ಸಿನಿಮಾ ಟ್ರೈಲರ್ ಮತ್ತು ಟೀಸರ್ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.