ಚಿತ್ತಾಪುರದಲ್ಲಿ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪುತ್ರ ಪ್ರಿಯಾಂಕ್ ಖರ್ಗೆಯವರ ಕಾರ್ಯವನ್ನು ಶ್ಲಾಘಿಸಿದರು. ಅಭಿವೃದ್ಧಿ ಕಾರ್ಯಗಳ ನಡುವೆಯೂ ಅಪಪ್ರಚಾರ ಮಾಡುವ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು
ಕಲಬುರಗಿ (ಮಾ.8): ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕ್ಷೇತ್ರದ ಅಭಿವೃದ್ಧಿ ಮತ್ತು ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಮಾತನಾಡಿದರು..
ಪ್ರಿಯಾಂಕ್ ಜನಸಾಮಾನ್ಯರ ಧ್ವನಿ ಎಂದ ಖರ್ಗೆ
ಚಿತ್ತಾಪುರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪರ ಬೆಳವಣಿಗೆಯನ್ನಶ್ಲಾಘಿಸಿದ ಖರ್ಗೆ ಅವರು, ಪ್ರಿಯಾಂಕ್ ಖರ್ಗೆ ಅವರು ಈ ಕ್ಷೇತ್ರದ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಬರೋಬ್ಬರಿ 1,069 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಅವರು ತಂದಿದ್ದಾರೆ. ಇಷ್ಟೊಂದು ಕೆಲಸಗಳು ಕಣ್ಣಮುಂದೆ ನಡೆಯುತ್ತಿದ್ದರೂ ಸಹ, ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ನಮ್ಮವರೇ ಆ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ; ಯಾವಾಗಲೂ 'ಕುಂಯ್ಯಿ ಕುಂಯ್ಯಿ' ಎನ್ನುವ ಗುಣ ಬಿಡಬೇಕು ಎಂದು ಸ್ವಪಕ್ಷದವರಿಗೆ ಮತ್ತು ವಿರೋಧ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು.
ಅಭಿವೃದ್ಧಿ ಮಾಡಿದ್ದು ಯಾರು ಹೇಳಿ? ಬಿಜೆಪಿಗೆ ಖರ್ಗೆ ನೇರ ಸವಾಲು
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ ಅವರು, 'ಹಿಂದೆ ಚಿತ್ತಾಪುರಕ್ಕೆ ಬರಲು ಸರಿಯಾದ ರಸ್ತೆಗಳೇ ಇರಲಿಲ್ಲ. ಈಗಿರುವ ಅದ್ಭುತ ರಸ್ತೆಗಳನ್ನು ಮಾಡಿದ್ದು ಯಾರು? ಬಿಜೆಪಿಯವರಾ? ಪ್ರಿಯಾಂಕ್ ಖರ್ಗೆ ಬಂದ ಮೇಲೆ ಈ ಭಾಗ ಚಿತ್ರಣ ಬದಲಾಗಿದೆ. ಕೆಲಸ ಮಾಡುವವರಿಗೆ ನೀವು ಬೆಂಬಲ ನೀಡಬೇಕು. ಸುಮ್ಮನೆ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ' ಎಂದು ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಜನರ ಮುಂದಿಟ್ಟರು.
371ಜೆ ಜಾರಿಯ ಲಾಭ ಪ್ರತಿಯೊಬ್ಬರಿಗೂ ತಲುಪುತ್ತಿದೆ
ಕಲ್ಯಾಣ ಕರ್ನಾಟಕದ ಭಾಗಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡಿದ ಅವರು, 'ನಾನು ಮತ್ತು ಧರ್ಮಸಿಂಗ್ ಸೇರಿ ಹೋರಾಡಿ 371ಜೆ ಜಾರಿಗೆ ತಂದೆವು. ಇಂದು ಸಾವಿರಾರು ಕೋಟಿ ಅನುದಾನ ಬರುತ್ತಿದೆ ಎಂದರೆ ಅದು ಪುಕ್ಸಟ್ಟೆ ಬಂದಿಲ್ಲ. ಇದರ ಲಾಭ ನಾನೊಬ್ಬನೇ ಪಡೆಯುತ್ತಿಲ್ಲ, ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಉದ್ಯೋಗಾಕಾಂಕ್ಷಿಗೆ ಇದರ ಸೌಲಭ್ಯ ಸಿಗುತ್ತಿದೆ. ಕಲಬುರಗಿ ವಿಮಾನ ನಿಲ್ದಾಣಕ್ಕಾಗಿ ಸರಡಗಿ ಗ್ರಾಮದ ಜನ ಸಾವಿರ ಎಕರೆ ಜಮೀನನ್ನು ಕಡಿಮೆ ದರದಲ್ಲಿ ನೀಡಿದ್ದಾರೆ, ಅವರ ತ್ಯಾಗ ದೊಡ್ಡದು' ಎಂದು ಸ್ಮರಿಸಿದರು.
ತುರ್ತು ದೆಹಲಿ ಪ್ರವಾಸ: ಸಮಯದ ಅಭಾವದ ನಡುವೆಯೂ ಭಾಷಣ
ಪಕ್ಷದ ಕಾರ್ಯದೊತ್ತಡದ ಬಗ್ಗೆ ಮಾಹಿತಿ ನೀಡಿದ ಖರ್ಗೆ ಅವರು, ಇಂದು ಸಂಜೆ 6 ಗಂಟೆಗೆ ದೆಹಲಿಯಲ್ಲಿ ಪಕ್ಷದ ತುರ್ತು ಸಭೆಯಿದೆ. ನಾಳೆ ಕ್ಯಾಬಿನೆಟ್ ಕೂಡ ಆರಂಭವಾಗಲಿದೆ. ಹಾಗಾಗಿ ಹೆಚ್ಚು ಮಾತನಾಡಲು ಸಮಯವಿಲ್ಲ, ನನ್ನನ್ನು ಕ್ಷಮಿಸಬೇಕು' ಎಂದು ಹೇಳಿ ತಮ್ಮ ಭಾಷಣವನ್ನು ಸಂಕ್ಷಿಪ್ತವಾಗಿ ಮುಗಿಸಿ ದೆಹಲಿಯತ್ತ ಪ್ರಯಾಣ ಬೆಳೆಸಿದರು.


