ಶುದ್ಧ ಕನ್ನಡದಲ್ಲಿ ಮಾತನಾಡಿ ಅಚ್ಚರಿಗೊಳಿಸಿದ ಬಾಲಿವುಡ್ ಬ್ಯೂಟಿ ಟಬು: ವಿಡಿಯೋ ವೈರಲ್
ಬಾಲಿವುಡ್ ನಟಿ ಟಬು ಅವರು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಬಾಲಿವುಡ್‌ನ ಎವರ್‌ಗ್ರೀನ್ ನಟಿಯರಲ್ಲಿ ಒಬ್ಬರು ಟಬು. ಈಗ ಅವರಿಗೆ 53 ವರ್ಷ. ವಯಸ್ಸು ಇಷ್ಟಾದರೂ ಇಂದಿಗೂ ಅವರಿಗೆ ಬಾಲಿವುಡ್‌ನಲ್ಲಿ ಸಕತ್ ಡಿಮ್ಯಾಂಡ್ ಇದೆ, ಮಾತ್ರವಲ್ಲದೇ ಯಾವ ನಾಯಕನ ತಾಯಿಯಾಗಿಯೂ ನಟಿಸುವ ಕಾಲ ಬಂದಿಲ್ಲ, ನಾಯಕಿಯಾಗಿಯೇ ನಟಿಸುತ್ತಿರುವ ಹೆಮ್ಮೆ ಇವರದ್ದು. ದೃಶ್ಯಂ 2 ರಲ್ಲಿ ತಮ್ಮ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುವ ಪ್ರತಿಸ್ಪರ್ಧಿಯಾಗಿ ಅವರು ಕಾಣಿಸಿಕೊಂಡರೆ ಭೂಲ್ ಭುಲೈಯಾ 2 ರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು, ಎರಡೂ ಪಾತ್ರಗಳು ಪರಸ್ಪರ ಭಿನ್ನವಾಗಿವೆ. ಹೀಗೆ ಎಲ್ಲಾ ಪಾತ್ರಗಳಲ್ಲಿ ಟಬು ಅವರದ್ದು ಎತ್ತಿದ ಕೈ. ಇಂತಿಪ್ಪ ನಟಿ ಇಂದಿಗೂ ಸಿಂಗಲ್. ಮದುವೆಯಾಗುವ ಗೋಜಿಗೆ ಹೋಗಲಿಲ್ಲ, ಅದರ ಆಸೆಯೂ ಅವರಿಗೆ ಇಲ್ಲವಂತೆ. ಸಿಂಗಲ್ ಆಗಿರುವುದನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಟಬುವಿಗೆ ಇಂದಿಗೂ ಖುಷಿಯಿದೆ. ಅಂದಹಾಗೆ ನಟಿ ಟಬು ಅವರ ಪೂರ್ಣ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಇವರ ಚಿಕ್ಕಮ್ಮ ಶಬಾನಾ ಅಜ್ಮಿ ಬಾಲಿವುಡ್‌ನ ಪ್ರಸಿದ್ಧ ನಟಿ ಎನ್ನುವುದನ್ನು ಬಿಟ್ಟರೆ, ಯಾವುದೇ ಚಿತ್ರರಂಗದ ಬ್ಯಾಕ್‌ಗ್ರೌಂಡ್ ಇಲ್ಲದ ನಟಿ ಟಬು.
ನಟಿ ಟಬು ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅಷ್ಟಕ್ಕೂ ಬೆಂಗಳೂರು ಎಂದರೆ ಸೆಲೆಬ್ರಿಟಿಗಳಿಗೂ ಸ್ವರ್ಗವೇ. ಆಗಾಗ್ಗೆ ಇಲ್ಲಿಗೆ ಬಾಲಿವುಡ್ ತಾರೆಯರೂ ಭೇಟಿ ಕೊಡುವುದು ಇದೆ. ಈ ಸಂದರ್ಭದಲ್ಲಿ ಪಾಪರಾಜಿಗಳ ಮಾತಿಗೆ ಸಿಕ್ಕಿದ್ದಾರೆ ಟಬು. ಆಗ ಕನ್ನಡದಲ್ಲಿಯೇ ಮಾತನಾಡಿದ್ದು, ಜನರ ಶ್ಲಾಘನೆಗೆ ಕಾರಣವಾಗಿದೆ. ಇದರ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ನಟಿ, ನನಗೆ ಪುನಃ ಬೆಂಗಳೂರಿಗೆ ಬರುವ ಆಸೆ ಇದೆ. ಅದನ್ನು ಕನ್ನಡದಲ್ಲಿ ಹೇಳಬೇಕು ಎಂದಿದ್ದಾರೆ ನಟಿ. ಬಳಿಕ ಸಂದರ್ಶಕ ಹೇಳಿಕೊಟ್ಟಂತೆ, ನಟಿ, ಪ್ರೀತಿಯ ಕನ್ನಡಿಗರೇ, ನಾನು ನಿಮ್ಮ ಟಬು, ನನಗೆ ಬೆಂಗಳೂರು ಅಂದರೆ ತುಂಬಾ ಇಷ್ಟ. ಮತ್ತೆ ಮತ್ತೆ ಬರ್ತಿನಿ ಎಂದು ಶುದ್ಧವಾಗಿಯೇ ಹೇಳಿದ್ದಾರೆ. ಇದು ನೆಟ್ಟಿಗರ ಶ್ಲಾಘನೆಗೆ ಕಾರಣವಾಗಿದೆ.
ನಾನು ಜಗ್ಗೇಶ್ ಪತ್ನಿ ಎಂದು ಪ್ರೆಸ್‌ಮೀಟ್‌ನಲ್ಲೇ ಹೇಳಿಬಿಟ್ರು: ಶಾಕಿಂಗ್ ಘಟನೆ ತೆರೆದಿಟ್ಟ ನಟಿ ವಿಜಯಲಕ್ಷ್ಮಿ
ಇನ್ನು ಟಬು ಚಿತ್ರದ ನಂಟಿನ ಕುರಿತು ಹೇಳುವುದಾದರೆ, 1980 ರಲ್ಲಿ 'ಬಜಾರ್' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಇದಾದ ನಂತರ 14ನೇ ವಯಸ್ಸಿನಲ್ಲಿ ‘ಹಮ್ ನೌಜವಾನ್’ ಚಿತ್ರದಲ್ಲಿ ದೇವಾನಂದ್ ಅವರ ಮಗಳಾಗಿ ಕಾಣಿಸಿಕೊಂಡರು.ನಂತರ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬೋನಿ ಕಪೂರ್ ನಿರ್ಮಾಣದ ಚಿತ್ರ 'ಪ್ರೇಮ್' ಮೂಲಕ. ಸಂಜಯ್ ಕಪೂರ್ ಈ ಚಿತ್ರದ ನಾಯಕ. ನಂತರ ಇವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಗುಸುಗುಸು ಶುರುವಾಗಿತ್ತು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ಇದಾದ ಬಳಿಕ ನಟಿ 'ಕಾಲಾಪಾನಿ', 'ಮಾಚಿಸ್', 'ಚಾಂದಿನಿ ಬಾರ್', 'ಮಕ್ಬೂಲ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದರು.
ಅಂದಹಾಗೆ ಇವರಿನ್ನೂ ಸಿಂಗಲ್. ಅವರು ತಾವು ಮದ್ವೆ ಯಾಕೆ ಆಗಿಲ್ಲ ಎನ್ನುವ ಬಗ್ಗೆ ಇದುವರೆಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಆದರೆ, ಹಿಂದೊಮ್ಮೆ ಸಂದರ್ಶನದಲ್ಲಿ, ಒಂಟಿಯಾಗಿರುವುದಕ್ಕೆ ತಮಗೆ ಖುಷಿ ಇದೆ ಎಂದಿದ್ದರು. ನಾನು ಒಂದು ವೇಳೆ ಮದುವೆಯಾಗಿದ್ದರೆ ಎಲ್ಲವನ್ನೂ ತ್ಯಜಿಸಬೇಕಿತ್ತು. ಕೆಲವು ನಟಿಯರು ಮದುವೆಯಾದ ಬಳಿಕ ಗಂಡ, ಸಂಸಾರ ಎಂದು ನಟನಾವೃತ್ತಿಯನ್ನು ಅನಿವಾರ್ಯವಾಗಿ ತೊರೆದಿದ್ದಾರೆ. ಇಂಥ ಅನ್ಯಾಯ ನನಗೂ ಆಗುತ್ತಿತ್ತು ಎಂದಿರುವನ ನಟಿ, ನನ್ನ ನಟನಾ ವೃತ್ತಿಯೇ ನನಗೆ ಜೀವ. ಜಗತ್ತನ್ನು ಸುತ್ತುವ ಬಯಕೆ ಇದೆ. ಆದರೆ ಒಬ್ಬ ವ್ಯಕ್ತಿಗಾಗಿ ಇವೆಲ್ಲವನ್ನೂ ತ್ಯಜಿಸುವ ಇಚ್ಛೆ ನನಗಿಲ್ಲ ಎಂದಿದ್ದಾರೆ. ಒಂಟಿತನದ ಜೀವನವನ್ನು ಸುಲಭವಾಗಿ ನಿಭಾಯಿಸಬಹುದು, ಆದರೆ ದುರ್ದೈವವಶಾತ್ ತಪ್ಪು ಸಂಗಾತಿ ಆಯ್ಕೆ ಮಾಡಿಕೊಂಡರೆ ಅದಕ್ಕಿಂತ ಭಯಾನಕ ಮತ್ತೊಂದಿಲ್ಲ. ಆದ್ದರಿಂದ ಒಂಟಿ ಜೀವನವೇ ಲೇಸು ಎಂದಿದ್ದರು. ಆದರೆ ನಟಿ, ಮದುವೆಯಿಲ್ಲದೆ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದೇನೆ ಎಂದೂ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.
ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್ ಶಾಕ್