ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟ ಪರೇಶ್ ರಾವಲ್ ಅವರ ಜೀವನದಲ್ಲಿ ಒಮ್ಮೆ ಗಾಯ ವಾಸಿಯಾಗದೆ ತಮ್ಮದೇ ಮೂತ್ರವನ್ನು ಕುಡಿಯುವ ಪರಿಸ್ಥಿತಿ ಬಂತು. ಈ ಲೇಖನದಲ್ಲಿ ಅವರ ಹೋರಾಟದ ಜೀವನ ಮತ್ತು ಸಿನಿಮಾ ಪಯಣದ ಬಗ್ಗೆ ತಿಳಿದುಕೊಳ್ಳೋಣ.

ಭಾರತದ ಅತ್ಯಂತ ಪ್ರತಿಭಾವಂತ ಮತ್ತು ಗೌರವಾನ್ವಿತ ನಟರಲ್ಲಿ ಇವರು ಕೂಡ ಒಬ್ಬರು. ಪದ್ಮಶ್ರೀ ಪ್ರಶಸ್ತಿ ಸೇರಿ ಹಲವು ಗೌರವಗಳು ಈ ನಟನಿಗೆ ಬಂದಿದೆ. ಒಂದೊಮ್ಮೆ ಅನಾರೋಗ್ಯಕ್ಕೆ ತುತ್ತಾದ ಇವರು ತಮ್ಮದೇ ಮೂತ್ರವನ್ನು ಕುಡಿಯುವ ಪರಿಸ್ಥಿತಿ ಬಂತು. ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ ಗಾಯ ವಾಸಿಯಾಗದೆ ಜೋರಾದಾಗ ಮೂತ್ರ ಕುಡಿಯವಂತೆ ಗೆಳೆಯರೊಬ್ಬರು ಸಲಹೆ ನೀಡಿದರು. ಅವರೇ ಪರೇಶ್ ರಾವಲ್. 240 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಅವರು ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದು, 2014ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಹಾಸ್ಯ, ಖಳನಾಯಕನ ಪಾತ್ರ, ಗಂಭೀರ ಪಾತ್ರ ಹೀಗೆ ಎಲ್ಲಾ ಪಾತ್ರಗಳಿಗೂ ಸೈ. ಆದರೆ ಅವರ ಯಶಸ್ಸಿನ ಹಿಂದೆ ಹಲವಾರು ಹೋರಾಟಗಳ ಕಥೆಗಳಿವೆ.

ಪರೇಶ್ ರಾವಲ್ ಮೇ 30, 1955ರಂದು ಮುಂಬೈನ ಗುಜರಾತಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ನಾರ್ಸಿ ಮಂಜೀ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ ನಂತರ ಬೇಗನೇ ಹಣ ಸಂಪಾದಿಸಬೇಕೆಂದು ಬಯಸಿ ಬ್ಯಾಂಕ್ ಆಫ್ ಬರೋಡಾಗೆ ಸೇರಿದರು. ಕಚೇರಿ ಜೀವನ ಅವರಿಗೆ ಇಷ್ಟವಾಗದೆ, ಕೇವಲ ಮೂರು ದಿನಗಳಲ್ಲಿ ಕೆಲಸವನ್ನು ತೊರೆದರು.

ಅಂದಿನ ಕಾಲದಲ್ಲಿ ಅವರ ಬಳಿ ಹಣದ ಕೊರತೆಯಿತ್ತು. ಅವರು ತಮ್ಮ ಗೆಳತಿ, ನಟಿ ಮತ್ತು 1979ರ ಮಿಸ್ ಇಂಡಿಯಾ ವಿಜೇತೆ ಸ್ವರೂಪ್ ಸಂಪತ್ ಅವರಿಂದ ಸಹಾಯ ಪಡೆದರು. ಬಳಿಕ 1987ರಲ್ಲಿ ಇಬ್ಬರೂ ವಿವಾಹವಾದರು. ಇವರಿಗೆ ಆದಿತ್ಯ ಮತ್ತು ಅನಿರುದ್ಧ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಖ್ಯಾತಿಯತ್ತ ನಡೆದ ಪಥ

ಪರೇಶ್ ರಾವಲ್ ತಮ್ಮ ಕರಿಯರ್‌ನ್ನು ಗುಜರಾತಿ ಚಿತ್ರಗಳಿಂದ ಆರಂಭಿಸಿದರು. 1984ರಲ್ಲಿ ‘ಹೋಳಿ’ ಅವರ ಮೊದಲ ಹಿಂದಿ ಚಿತ್ರವಾಗಿದ್ದು, ಬಳಿಕ ಅರ್ಜುನ್ (1985) ಮತ್ತು ನಾಮ್ (1986) ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳ ಮೂಲಕ ಪ್ರಸಿದ್ಧರಾದರು. ಹಲವಾರು ವರ್ಷಗಳ ಕಾಲ ಅವರು ಕಬ್ಜಾ, ರಾಮ್ ಲಖನ್, ದಾಮಿನಿ, ಸ್ವರ್ಗ್ ಮುಂತಾದ ಸಿನಿಮಾಗಳಲ್ಲಿ ಖಳನಾಯಕ ಅಥವಾ ಸಹಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡರು.

1994ರಲ್ಲಿ ಅವರು ಅಂದಾಜ್ ಅಪ್ನಾ ಅಪ್ನಾ ಚಿತ್ರದ ಮೂಲಕ ಹಾಸ್ಯಪೂರ್ಣ ಪಾತ್ರವನ್ನು ಮೊದಲ ಬಾರಿಗೆ ಪ್ರಯತ್ನಿಸಿದರು. ತೇಜ್ ಎಂಬ ಹಾಸ್ಯಾಸ್ಪದ ಖಳನಾಯಕನ ಪಾತ್ರದಲ್ಲಿ ಅವರು ಜನಮನ ಗೆದ್ದರು. ಈ ಯಶಸ್ಸಿನಿಂದ ಅವರು ಮೋಹ್ರಾ, ಹೀರೋ ನಂ. 1, ಜುದಾಯಿ, ಮಿಸ್ಟರ್ ಅಂಡ್ ಮಿಸೆಸ್ ಖಿಲಾಡಿ ಮುಂತಾದ ಅನೇಕ ಹಾಸ್ಯ ಚಿತ್ರಗಳಲ್ಲಿ ಅಭಿನಯಿಸಿದರು.

ಹಾಸ್ಯದತ್ತ ಮುಖ ಮಾಡಿದರೂ, ಪರೇಶ್ ರಾವಲ್ ಗಂಭೀರ ಪಾತ್ರಗಳನ್ನು ಬಿಡಲಿಲ್ಲ. ತಮನ್ನಾ ಚಿತ್ರದಲ್ಲಿ ನಪುಂಸಕನ ಪಾತ್ರವನ್ನು, ಗುಪ್ತ್ ಚಿತ್ರದಲ್ಲಿ ಕರಾಳ ಪಾತ್ರಕ್ಕೆ ಬಣ್ಣ ಹಚ್ಚಿದರು. ಆದರೆ ಅವರನ್ನು ಭಾರತೀಯ ಸಿನಿಮಾ ಇತಿಹಾಸದಲ್ಲಿ ದಂತಕಥೆಯ ಪಾತ್ರ ಎಂದರೆ, ಹೇರಾ ಫೇರಿ (2000) ಚಿತ್ರದ ಬಾಬುರಾವ್ ಗಣಪತ್ರಾವ್ ಆಪ್ಟೆ ಪಾತ್ರವೇ. ಬಾಬುರಾವ್ ಪಾತ್ರದಲ್ಲಿ ಅವರ ವಿಶಿಷ್ಟ ಧ್ವನಿ, ಕನ್ನಡಕ ಮತ್ತು ಮುಜುಗರದ ಮಾತುಗಳು ಅವರನ್ನು ಹಾಸ್ಯರಾಜನಾಗಿ ಮಾಡಿದವು. ಈ ಪಾತ್ರಕ್ಕೆ ಅವರಿಗೆ ಅನೇಕ ಪ್ರಶಸ್ತಿಗಳು ದೊರಕಿದವು. ಅವರು ಫಿರ್ ಹೇರಾ ಫೇರಿಯಲ್ಲಿಯೂ ಬಾಬುರಾವ್ ಪಾತ್ರವನ್ನು ಮರುಕಳಿಸಿದರು. ಈಗ ಹೇರಾ ಫೇರಿ 3 ಚಿತ್ರದಲ್ಲೂ ಅವರು ಮತ್ತೆ ಬಾಬುರಾವ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪರೇಶ್ ರಾವಲ್ ನಿರ್ದೇಶಕ ಪ್ರಿಯದರ್ಶನ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಒಟ್ಟಾಗಿ ಅವರು ಹಲವು ಹಿಟ್ ಹಾಸ್ಯಚಿತ್ರಗಳನ್ನು ಮಾಡಿದ್ದಾರೆ.

ವಿಚಿತ್ರ ಅನುಭವ ಮೂತ್ರ ಕುಡಿದ ಘಟನೆಯನ್ನು ಹಂಚಿಕೊಂಡ ಪರೇಶ್

ಮೂತ್ರ ಕುಡಿಯುವ ಬಗ್ಗೆ ವಿರಳ ಘಟನೆ ಅವರ ಬದುಕಿನಲ್ಲಿ ಒಮ್ಮೆ ಸಂಭವಿಸಿತು. ರಾಕೇಶ್ ಪಾಂಡೆ ಜೊತೆಗಿನ ದೃಶ್ಯದ ಚಿತ್ರೀಕರಣದ ವೇಳೆ ಪರೇಶ್ ಅವರ ಕಾಲಿಗೆ ಗಂಭೀರ ಗಾಯವಾಯಿತು. ಸಹ ನಟರಾದ ಟಿನ್ನು ಆನಂದ್ ಮತ್ತು ಡ್ಯಾನಿ ಡೆಂಜೋಂಗ್ಪಾ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಕರೆದೊಯ್ದರು. ತಮ್ಮ ವೃತ್ತಿಜೀವನ ಮುಗಿಯಬಹುದೆಂದು ಭಯಗೊಂಡ ರಾವಲ್ ಅವರಿಗೆ, ಪ್ರಸಿದ್ಧ ಸಾಹಸ ನಿರ್ದೇಶಕ ವೀರು ದೇವಗನ್ ಅಪರೂಪದ ಸಲಹೆ ನೀಡಿದರು.

ವೀರು ದೇವಗನ್ ನನ್ನನ್ನು ನೋಡಲು ನಾನಾವತಿ ಆಸ್ಪತ್ರೆಗೆ ಬಂದರು. ಏನಾಗಿದೆ ಎಂದು ಕೇಳಿದ ಮೇಲೆ ಹೇಳಿದರು ಬೆಳಿಗ್ಗೆ ಮೊದಲು ನಿನ್ನ ಸ್ವಂತ ಮೂತ್ರವನ್ನು ಕುಡಿಯಲು ಸಲಹೆ ನೀಡಿದರು. ಎಲ್ಲ ಹೋರಾಟಗಾರರೂ ಇದನ್ನು ಮಾಡುತ್ತಾರೆ. ನಿನಗೆ ಯಾವ ಸಮಸ್ಯೆಯೂ ಆಗುವುದಿಲ್ಲ.’ ಮದ್ಯ, ಕುರಿಮರಿ, ತಂಬಾಕು ಬಿಟ್ಟು ಸರಳ ಆಹಾರ ಸೇವಿಸು ಎಂದು ಹೇಳಿದರು.

ರಾವಲ್ ಕೂಡ ಆ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡರು. “ನಾನು ಅದನ್ನು ಬಿಯರ್ ಕುಡಿಯುವಂತೆ ಕುಡಿದೆ… ಏಕೆಂದರೆ ನಾನು ಅದು ಮಾಡುವುದಾದರೆ, ಸರಿಯಾಗಿ ಮಾಡಬೇಕೆಂದು ಬಯಸಿದ್ದೆ ಎಂದರು . 15 ದಿನಗಳ ಬಳಿಕ ಅವರ ಗಾಯ ಗುಣಹೊಂದಿದ ರೀತಿಗೆ ವೈದ್ಯರೂ ಆಚ್ಚರ್ಯಪಟ್ಟರು, ಏಕೆಂದರೆ ಸಾಮಾನ್ಯವಾಗಿ ಅಷ್ಟೊಂದು ಗಂಭೀರ ಗಾಯ ಗುಣವಾಗಲು ಎರಡು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು.

ನಟನೆಗೆ ಹೊಸ ಆಯಾಮ ನೀಡುವ ಪರೇಶ್

ಪರೇಶ್ ರಾವಲ್ ತಮ್ಮ ವೃತ್ತಿಜೀವನದಲ್ಲಿ ಹಾಸ್ಯ, ಖಳನಾಯಕತ್ವ, ಗಂಭೀರ ಪಾತ್ರಗಳ ಎಲ್ಲಾ ರಂಗಗಳಲ್ಲಿ ಅಪೂರ್ವ ಪ್ರದರ್ಶನ ನೀಡಿದ್ದಾರೆ. ಓ ಎಂ ಜಿ: ಓ ಮೈ ಗಾಡ್ ಚಿತ್ರದಲ್ಲಿ ದೇವರನ್ನು ಪ್ರಶ್ನಿಸುವ ಅಂಗಡಿಯವನ ಪಾತ್ರವನ್ನು ನಿರ್ವಹಿಸಿ ಜನರ ಮನಸ್ಸಿನಲ್ಲಿ ಛಾಪು ಬಿಟ್ಟರು. ನಂತರ ಟೇಬಲ್ ನಂ. 21 ನಲ್ಲಿ ಅವರು ಮತ್ತೆ ಗಂಭೀರ ಪಾತ್ರಗಳಿಗೆ ಮರಳಿದರು. ಪರೇಶ್ ರಾವಲ್ ಕೇವಲ ನಟ ಮಾತ್ರವಲ್ಲ. ಅವರು ನಿಮ್ಮನ್ನು ನಗಿಸಲು, ಅಳಿಸಲು, ಅಥವಾ ಬೆಚ್ಚಿಬೀಳಿಸಲು ಸಮರ್ಥವಾದ ಸಂಪೂರ್ಣ ಕಲಾವಿದ. ಹೊಸದನ್ನು ಪ್ರಯತ್ನಿಸುವ ಧೈರ್ಯ ಮತ್ತು ವಿಭಿನ್ನತೆಯ ಪ್ರೀತಿಯು ಅವರನ್ನು ಸಿನಿ ಲೋಕದಲ್ಲಿ ವಿಶೇಷ ಮಾಡುತ್ತದೆ.