ಹುಟ್ಟೂರಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಭುವನ್-ಹರ್ಷಿಕಾ
- ಹುಟ್ಟೂರಿನ ಬಡಜನರ ಸಂಕಷ್ಟಕ್ಕೆ ಸ್ಪಂದಿಸಿದ ಕಲಾವಿದರು
- ಚಿತ್ರನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚಗೆ ಸಾರ್ವಜನಿಕರ ಮೆಚ್ಚುಗೆ
- ಆಹಾರ ಕಿಟ್‌ಗಳನ್ನು ನೀಡಿ 500 ಕುಟುಂಬಗಳಿಗೆ ನೆರವು
ಮಡಿಕೇರಿ (ಮೇ.26): ಹುಟ್ಟೂರಿನ ಬಡಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಚಿತ್ರನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭುವನಂ ಸಂಸ್ಥೆಯ ಮೂಲಕ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕಳೆದ 4 ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದರು. ಕೊಡಗಿನ ಜನರ ಸಂಕಷ್ಟಕ್ಕೂ ಸ್ಪಂದಿಸಬೇಕೆಂದು ಜಿಲ್ಲೆಯ ಜನತೆ ಮನವಿ ಮಾಡಿದ ಮೇರೆಗೆ ಕೊಡಗಿನ ಕಲಾವಿದರಿಬ್ಬರೂ ಸ್ಪಂದಿಸಿದ್ದು, ಜಿಲ್ಲೆಯ ಸುಮಾರು 500 ಕುಟುಂಬಗಳಿಗೆ ನೆರವು ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ಮಡಿಕೇರಿಯಲ್ಲಿ ಚಾಲನೆ ನೀಡಲಾಯಿತು. ಗೃಹರಕ್ಷಕ ದಳದ ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೆ ಕಿಟ್ ವಿತರಿಸುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರನಟಿ ಹಷಿಕಾ ಪೂಣಚ್ಚ, ಕಳೆದ 4 ವರ್ಷಗಳಿಂದ ಸ್ಪೀಡ್ ಕರ್ನಾಟಕ ಹೆಸರಿನಲ್ಲಿ ಸಮಾಜಸೇವೆ ಮಾಡಿಕೊಂಡು ಬರಲಾಗುತ್ತಿದೆ. ಕೊಡಗಿನಿಂದಲೇ ಈ ಸೇವಾ ಕಾರ್ಯವನ್ನು ಆರಂಭಿಸಿರುವುದು ವಿಶೇಷ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಸಾಕಷ್ಟುಮಂದಿಯ ಬದುಕು ಅಲ್ಲೋಲಕಲ್ಲೋಲವಾಗಿತ್ತು. ಆ ಸಮಯದಲ್ಲಿ 2 ಗಾಡಿಯಲ್ಲಿ ಅಗತ್ಯ ವಸ್ತುಗಳನ್ನು ತಂದು ವಿತರಿಸಲಾಗಿತ್ತು. ಸಂಕಷ್ಟದಲ್ಲಿರುವವರಿಗೆ ಕಿಟ್ ವಿತರಿಸುವುದಕ್ಕಿಂತಲೂ ಅವರಿಗೆ ಹೇಳುವ ಸಾಂತ್ವನ ಅವರಲ್ಲಿ ಧೈರ್ಯ ಹೆಚ್ಚಿಸುತ್ತದೆ. ಆ ಸಂದರ್ಭ ಸ್ಪೀಡ್ ಕರ್ನಾಟಕ ಹೆಸರಿನಲ್ಲಿ ಆರಂಭವಾದ ಸಮಾಜ ಸೇವೆ ಈ ವರ್ಷವೂ ಭುವನಂ ಸಂಸ್ಥೆ ಮೂಲಕ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಆಸ್ಪತ್ರೆಗಳ ಬಳಿ 'ಶ್ವಾಸ' ಸೇವೆ ಲಭ್ಯ; ನಟ ಭುವನ್, ನಟಿ ಹರ್ಷಿಕಾ ಸಮಾಜ ಸೇವೆ!
ಮಡಿಕೇರಿ ಹಾಗೂ ವಿರಾಜಪೇಟೆ ವ್ಯಾಪ್ತಿಯಲ್ಲಿ ಕಿಟ್ ವಿತರಿಸಲಾಗುತ್ತಿದೆ. ರೈತರಿಂದ ತರಕಾರಿ ಖರೀದಿಸಿ ಕಿಟ್ ಮೂಲಕ ಬಡವರಿಗೆ ಹಂಚಲಾಗುತ್ತಿದೆ. ನಮ್ಮ ಹೆಲ್ಪ್‌ಲೈನ್‌ಗೆ ಸಾಕಷ್ಟುಕರೆ ಬರುತ್ತಿದ್ದು, ಅಗತ್ಯವಿರುವವರಿಗೆ ನೆರವು ನೀಡಲಾಗುತ್ತಿದೆ. ನಮ್ಮ ಕೈಯಲಾದಷ್ಟುಸಹಾಯ ಮಾಡಲಾಗುತ್ತಿದೆ. ಮುಂಜಾಗೃತಾ ಕ್ರಮಗಳೊಂದಿಗೆ ಸಮಾಜ ಸೇವೆ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚಿತ್ರನಟ ಭುವನ್ ಪೊನ್ನಣ್ಣ ಮಾತನಾಡಿ, ಕಳೆದ ಮೂರು ವಾರಗಳ ಹಿಂದೆ ಲೈವ್ ಮೂಲಕ ನನ್ನ ದೂರವಾಣಿ ಸಂಖ್ಯೆಯನ್ನು ನೀಡಿದ್ದೆ. ಮಾಧ್ಯಮದಲ್ಲಿ ಈ ಸುದ್ದಿ ಪ್ರಕಟವಾಗಿದ್ದರಿಂದ ಸಾಕಷ್ಟುಮಂದಿ ಕರೆ ಮಾಡಿ ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡರು. ಮೊದಲನೆಯದಾಗಿ ಆಕ್ಸಿಜನ್ ಬಸ್ಸೊಂದನ್ನು ಹಾಕಿ ಆಕ್ಸಿಜನ್ ಕಾನ್ಸಟ್ರೇಟರ್ ಮೂಲಕ ಉಸಿರಾಟದ ತೊಂದರೆ ಇರುವವರಿಗೆ ಆಕ್ಸಿಜನ್ ನೀಡುವ ಕೆಲಸವನ್ನು ಮಾಡಲಾಗಿತ್ತು. ಅದರೊಂದಿಗೆ ಬಾಂಧವವೆಂಬ ಆಟೋ ಸೇವೆಯನ್ನು ಆರಂಭಿಸಿದೆವು. ಐಷೋಲೇಷನ್‌ನಲ್ಲಿರುವ ಕುಡುಬಡವರಿಗೆ ಈ ಆಟೋ ಸೇವೆಯ ಮೂಲಕ ಉಚಿತವಾಗಿ ದಿನಸಿ ಹಾಗೂ ಔಷಧಿಯನ್ನು ವಿತರಿಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಈಗ 2 ವಾಹನ ಸೇವೆಯನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಸ್‌ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಮಾಡಿದ ನಟ ಭುವನ್, ನಟಿ ಹರ್ಷಿಕಾ! ..
ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್, ಪೌರಾಯುಕ್ತ ರಾಮದಾಸ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮತ್ತಿತರರು ಈ ಸಂದರ್ಭ ಹಾಜರಿದ್ದರು.