2022ರಲ್ಲಿ ಬಾಲಿವುಡ್‌ನ ಅನೇಕ ಫಿಲಂಗಳು ನೆಲಕಚ್ಚಿವೆ. ಅದರಲ್ಲೂ ಬಿಗ್‌ ಬಜೆಟ್‌ನ, 100 ಕೋಟಿ ರೂಪಾಯಿಗೂ ಹೆಚ್ಚಿನ ತಯಾರಿಕೆ ವೆಚ್ಚ ದಾಖಲಿಸಿದ ಚಿತ್ರಗಳೇ ಮಕಾಡೆ ಮಲಗಿವೆ. ಯಾವ್ಯಾವ ಚಿತ್ರಗಳು ಅಂತ ಡೀಟೇಲ್ಸ್‌ ಇಲ್ಲಿದೆ. 

ಹಾಗೆ ನೋಡಿದರೆ 2022ರ ವರ್ಷ ಬಾಲಿವುಡ್‌ಗೆ (bollywood) ಭರ್ಜರಿ ಪುಷ್‌ ಕೊಡಬೇಕಿತ್ತು. ಯಾಕೆಂದರೆ 2020 ಮತ್ತು 2021 ವರ್ಷಗಳು ಕೊರೊನಾದ (coronavirus) ದಾಳಿಗೆ ಸಿಲುಕಿ ನಲುಗಿದ್ದವು. ಲಾಕ್‌ಡೌನ್ ಹಾಗೂ ಅರ್ಧ ಸೀಟು ಭರ್ತಿಯ ನಿಯಮಗಳಿಂದಾಗಿ ಚಿತ್ರಮಂದಿರಗಳು ನವೆದಿದ್ದವು. 2022ರಲ್ಲಿ ಬಹುನಿರೀಕ್ಷೆಯ ಸುಮಾರು ಹಿಂದಿ ಸಿನಿಮಾಗಳು ಬಂದವು ನಿಜ. ಆದರೆ ಇವೆಲ್ಲವನ್ನು ದಕ್ಷಿಣ ಭಾರತೀಯ ಸಿನಿಮಾಗಳು ಗುಡಿಸಿ ಹಾಕಿದವು.

ಕಳೆದ ವರ್ಷ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನವನ್ನು ದಕ್ಷಿಣದ ಸಿನಿಮಾಗಳೇ ಆವರಿಸಿಕೊಂಡಿವೆ. ಕೆಜಿಎಫ್‌ (kgf), ಕಾಂತಾರ (kantara), ಆರ್‌ಆರ್‌ಆರ್‌ (RRR), ಪೊನ್ನಿಯಿನ್‌ ಸೆಲ್ವನ್‌ಗಳ (ponniyin selwan) ನಡುವೆ ಸಿಲುಕಿ ಹಿಂದಿ ನಲುಗಿತು. ನಂತರ ʼಬಾಯ್ಕಾಟ್‌ ಬಾಲಿವುಡ್‌ ಅಭಿಯಾನ ಶುರುವಾಯಿತು. ಆಮೀರ್ ಖಾನ್ ರೀತಿಯ ಸ್ಟಾರ್ ನಟನ ಚಿತ್ರವೇ ಬಾಯ್‌ಕಾಟ್ ಅಭಿಯಾನಕ್ಕೆ ಸಿಲುಕಿ ನಷ್ಟ ಅನುಭವಿಸಿತು. ಹೀಗೆ ಈ ವರ್ಷ ತತ್ತರಿಸಿದ ಬಾಲಿವುಡ್ ಚಿತ್ರರಂಗದ ಪೈಕಿ ಗೆದ್ದ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಸೋತ ಚಿತ್ರಗಳ ಹಿಂಡೇ ಇದೆ. ಅದರಲ್ಲಿಯೂ ಗೆಲ್ಲುತ್ತೇವೆ ಎಂದು ನೂರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ಬಜೆಟ್ ಆಗಿ ಸುರಿದು ಹಾಕಿದ್ದ ಬಂಡವಾಳದಷ್ಟು ಕೂಡ ಚಿತ್ರ ಗಳಿಸದೆ ಕೈ ಸುಟ್ಟುಕೊಂಡಿದ್ದಾರೆ.

Prabhas To Chiranjeevi: 2022ರಲ್ಲಿ ಫ್ಲಾಪ್ ಆಗಿರುವ ದಕ್ಷಿಣದ ಸೂಪರ್‌ಸ್ಟಾರ್ಸ್‌

ಹಿಂದಿ ಮಾತ್ರವಲ್ಲದೇ ಈ ಪಟ್ಟಿಯಲ್ಲಿ ಸೌತ್ ಚಿತ್ರಗಳೂ ಸಹ ಸೇರಿವೆ. ಹೀಗೆ ನೂರು ಕೋಟಿಗೂ ಅಧಿಕ ಹಣವನ್ನು ಬಂಡವಾಳವನ್ನಾಗಿ ಹೊಂದಿ ನಂತರ ತನ್ನ ಬಜೆಟ್‌ನಷ್ಟೂ ಕೂಡ ಗಳಿಸದೆಯೇ ವಿಫಲವಾದ ಚಿತ್ರಗಳು ಈ ಕೆಳಗಿನಂತಿವೆ:

ರನ್ ವೇ (ಹಿಂದಿ- ಬಜೆಟ್ 105 ಕೋಟಿ ರೂಪಾಯಿ, ಕಲೆಕ್ಷನ್ 53 ಕೋಟಿ ರೂಪಾಯಿ)
ಶಂಷೆರಾ (ಹಿಂದಿ- ಬಜೆಟ್ 150 ಕೋಟಿ ರೂಪಾಯಿ, ಕಲೆಕ್ಷನ್ 65 ಕೋಟಿ ರೂಪಾಯಿ)
ಬಚ್ಚನ್ ಪಾಂಡೆ (ಹಿಂದಿ- ಬಜೆಟ್ 130 ಕೋಟಿ ರೂಪಾಯಿ, ಕಲೆಕ್ಷನ್ 73 ಕೋಟಿ ರೂಪಾಯಿ)
ಸಾಮ್ರಾಟ್ ಪೃಥ್ವಿರಾಜ್ (ಹಿಂದಿ- ಬಜೆಟ್ 225 ಕೋಟಿ ರೂಪಾಯಿ, ಕಲೆಕ್ಷನ್ 91 ಕೋಟಿ ರೂಪಾಯಿ)
ರಾಮ್ ಸೇತು (ಹಿಂದಿ- ಬಜೆಟ್ 140 ಕೋಟಿ ರೂಪಾಯಿ, ಕಲೆಕ್ಷನ್ 96 ಕೋಟಿ ರೂಪಾಯಿ)
ಲಾಲ್ ಸಿಂಗ್ ಛಡ್ಡಾ (lal singh chadda) (ಹಿಂದಿ- ಬಜೆಟ್ 180 ಕೋಟಿ ರೂಪಾಯಿ, ಕಲೆಕ್ಷನ್ 133 ಕೋಟಿ ರೂಪಾಯಿ)
ವಿಕ್ರಮ್ ವೇದಾ (ಹಿಂದಿ- ಬಜೆಟ್ 150 ಕೋಟಿ ರೂಪಾಯಿ, ಕಲೆಕ್ಷನ್ 135 ಕೋಟಿ ರೂಪಾಯಿ)
ರಾಧೆ ಶ್ಯಾಮ್ (ತೆಲುಗು- ಬಜೆಟ್ 300 ಕೋಟಿ ರೂಪಾಯಿ, ಕಲೆಕ್ಷನ್ 177 ಕೋಟಿ ರೂಪಾಯಿ)
ಆಚಾರ್ಯ (ತೆಲುಗು- ಬಜೆಟ್ 140 ಕೋಟಿ ರೂಪಾಯಿ, ಕಲೆಕ್ಷನ್ 76 ಕೋಟಿ ರೂಪಾಯಿ)

ದಕ್ಷಿಣದಲ್ಲಿ ಭಾರಿ ಹಿಟ್, ಬಾಲಿವುಡ್‌ ರಿಮೇಕ್‌ ಫ್ಲಾಪ್ ಆದ ಚಿತ್ರಗಳಿವು!

ನೂರು ಕೋಟಿ (100 crore) ಬಜೆಟ್ ಸುರಿಯದೇ ಇದ್ದರೂ ಗಳಿಕೆಯಲ್ಲಿ ನೂರು ಕೋಟಿ ರೂಪಾಯಿ ಗಳಿಸಿದ ಹಿಂದಿ ಚಿತ್ರಗಳೂ ಇವೆ. ‘ದಿ ಕಾಶ್ಮೀರ್ ಫೈಲ್ಸ್’ (the kashmir files) ಸಿನಿಮಾ ಈ ವರ್ಷ ಬಿಡುಗಡೆಯಾದ ಎಲ್ಲಾ ಬಾಲಿವುಡ್ ಚಿತ್ರಗಳಲ್ಲಿ ಅತಿ ಹೆಚ್ಚು ಆದಾಯ ಗಳಿಸಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 252 ಕೋಟಿ ಗಳಿಸಿತು. 'ಬ್ರಹ್ಮಾಸ್ತ್ರ' (brahmastra) ಪ್ರಾಜೆಕ್ಟ್ ಬಾಲಿವುಡ್ ನಲ್ಲಿ ಅತಿ ದೊಡ್ಡ ಪ್ರಾಜೆಕ್ಟ್ ಎಂದು ಘೋಷಣೆಯಾದಾಗಲೇ ಎಲ್ಲರ ಗಮನ ಸೆಳೆದಿತ್ತು. ದೊಡ್ಡ ತಾರಾಬಳಗವಿತ್ತು. ಚಿತ್ರ 236 ಕೋಟಿ ಗಳಿಸಿತು. ಬ್ರಹ್ಮಾಸ್ತ್ರದ ನಂತರ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸಿದ ಚಿತ್ರ ದೃಶ್ಯ 2. ಇದು ಮಲಯಾಳಂ ಚಿತ್ರ ದೃಶ್ಯಂ 2 ರಿಮೇಕ್. ಆದರೆ, ಇದು ರೂ. 225 ಕೋಟಿ ಗಳಿಸಿತು. ಭೂಲ್ ಭುಲಯ್ಯ 2 ಚಿತ್ರ ರೂ. 186 ಕೋಟಿ ಗಳಿಸಿದೆ. ಆಲಿಯಾ ಭಟ್ ನಟನೆಯ ಗಂಗೂಭಾಯಿ ಕಥಿಯವಾಡಿ ಸಿನಿಮಾ 132 ಕೋಟಿ ಗಳಿಸಿದೆ.