ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಕೊಲೆ ಪ್ರಕರಣದ ಮಾದರಿಯಲ್ಲೇ ತಿರುವು ಪಡೆದುಕೊಂಡಿದೆ. ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು ಶವವನ್ನೇ ಹೂತು ಹಾಕಿ, ಕೇಸ್ ಮುಚ್ಚಿ ಹಾಕಲು ನಡೆಸಿದ್ದ ಮಾಸ್ಟರ್ ಪ್ಲಾನ್ ಸಿಸಿ ಕ್ಯಾಮೆರಾದ ಒಂದು ದೃಶ್ಯದಿಂದ ವಿಫಲವಾಗಿದೆ
ಚಿಕ್ಕಮಗಳೂರು: ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು ಶವವನ್ನು ಗುಟ್ಟಾಗಿ ಹೂತುಹಾಕಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ವಿವರ
ಕಡೂರು ತಾಲೂಕಿನ ಯಗಟಿ ಸಮೀಪದ ದೊಣ್ಣೆಕೋರನಹಳ್ಳಿ ಗ್ರಾಮದ ಕರಿಯಪ್ಪ (52) ಮೃತಪಟ್ಟ ದುರ್ದೈವಿ. ಜಮೀನಿನಲ್ಲಿ ಕಾಡುಹಂದಿಗಳ ಹಾವಳಿ ತಡೆಯಲು ಬೇಟೆಗಾರರು ವಿದ್ಯುತ್ ತಂತಿ ಅಳವಡಿಸಿದ್ದರು. ಈ ವಿದ್ಯುತ್ ಲೈನ್‌ಗೆ ಅಚಾನಕ್ಕಾಗಿ ಕರಿಯಪ್ಪ ಸಿಲುಕಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಬೇಟೆಗಾರರು ಯಾರಿಗೂ ತಿಳಿಯದಂತೆ ಶವವನ್ನು ಜಮೀನಿನಲ್ಲೇ ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.

ರಹಸ್ಯ ಬಯಲಾಗಿದ್ದು ಹೇಗೆ?
ಮನೆಗೆ ಹೋದ ಕರಿಯಪ್ಪ ಅವರು ಎಷ್ಟು ಹೊತ್ತಾದರೂ ಮರಳಿ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಮೀಪದ ಜಮೀನಿನ ಬಳಿ ಇದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಕರಿಯಪ್ಪ ಓಡಾಡುತ್ತಿರುವ ದೃಶ್ಯ ಪತ್ತೆಯಾಗಿದೆ. ಅದರ ಬೆನ್ನಲ್ಲೇ ಕೆಲವೇ ಗಂಟೆಗಳ ನಂತರ ಅದೇ ಮಾರ್ಗದಲ್ಲಿ ಮತ್ತೋರ್ವ ವ್ಯಕ್ತಿ ಸಂಶಯಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ಪ್ರಕರಣದ ಸತ್ಯಾಂಶ ಹೊರಬಿದ್ದಿದೆ.
ಮೂವರು ಆರೋಪಿಗಳ ಬಂಧನ
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಯಗಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬೇಟೆಗಾರರು ತಂತಿ ಹಾಕಿದ್ದ ಜಾಗದಲ್ಲೇ ಕರಿಯಪ್ಪ ಮೃತಪಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಶವ ಹೂತು ಹಾಕಿರುವ ಸ್ಥಳಕ್ಕೆ ತರೀಕೆರೆ ಎಸಿ (ಸಹಾಯಕ ಆಯುಕ್ತರು) ಅವರು ಇಂದು ಭೇಟಿ ನೀಡಲಿದ್ದು, ಅವರ ಸಮ್ಮುಖದಲ್ಲಿ ಹೂತಿರುವ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಅಹಿತಕರ ಘಟನೆ ನಡೆಯದಂತೆ ಮತ್ತು ಸಾಕ್ಷ್ಯಗಳಿಗೆ ಧಕ್ಕೆಯಾಗದಂತೆ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.


