ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧ ಮತ್ತು ಮಾನಸಿಕ ಹಿಂಸೆಯಿಂದ ನೊಂದ 24 ವರ್ಷದ ತಾಯಿಯೊಬ್ಬಳು ತನ್ನ ಏಳು ತಿಂಗಳ ಹಸುಗೂಸನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ನೋಡುತ್ತಿದ್ದಂತೆಯೇ ವಿಡಿಯೋ ಕಾಲ್‌ನಲ್ಲೇ ಬದುಕು ಅಂತ್ಯ.
ಬೆಂಗಳೂರು: ಏಳು ತಿಂಗಳ ಹಸಿಗೂಸನ್ನು ಬಿಟ್ಟು ತಾಯಿಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯ ಅಕ್ರಮ ಸಂಬಂಧ ಹಾಗೂ ಆತ ನೀಡಿದ ಮಾನಸಿಕ ಹಿಂಸೆಗೆ ಬೇಸತ್ತು ಸಾನಿಕ ಗೌಡ (24) ಎಂಬುವವರು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.
ಏನಿದು ಪ್ರಕರಣ?
ಸಾನಿಕ ಗೌಡಗೆ ಚಿಕ್ಕಮಗಳೂರು ಮೂಲದ ಶರಣ್ ಗೌಡ ಎಂಬುವವರ ಜೊತೆ ಒಂದು ವರ್ಷ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಇತ್ತೀಚೆಗಷ್ಟೇ ಸಾನಿಕ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಾಣಂತನಕ್ಕಾಗಿ ರಾಯಸಂದ್ರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದ ಸಾನಿಕ, ಅಲ್ಲಿಯೇ ಜೀವನ ಅಂತ್ಯಗೊಳಿಸಿದ್ದಾರೆ.
ಪತಿಯ ಕ್ರೌರ್ಯಕ್ಕೆ ಬಲಿಯಾದ ಸಾನಿಕ?
ಆರೋಪಿ ಪತಿ ಶರಣ್ ಗೌಡ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಅಮಾನವೀಯತೆಯ ಪರಮಾವಧಿ ಎಂಬಂತೆ, ಶರಣ್ ಗೌಡ ತಾನು ಪ್ರಿಯತಮೆ ಜೊತೆ ಮಾತನಾಡುತ್ತಿರುವ ವಿಡಿಯೋ ಮತ್ತು ಆಡಿಯೋ ಕ್ಲಿಪ್‌ಗಳನ್ನು ಪತ್ನಿ ಸಾನಿಕಳಿಗೆ ಕಳುಹಿಸಿ ವಿಕೃತ ಸಂತೋಷ ಪಟ್ಟಿದ್ದ ಎನ್ನಲಾಗಿದೆ. ಇದನ್ನು ಕಂಡು ತೀವ್ರ ಮನನೊಂದ ಸಾನಿಕ, ಪತಿಗೆ ವಿಡಿಯೋ ಕಾಲ್ ಮಾಡಿ ಆತ ನೋಡುತ್ತಿರುವಂತೆಯೇ ನೇಣಿಗೆ ಶರಣಾಗಿದ್ದಾರೆ.
ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಸಾನಿಕ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಸಣ್ಣ ಮಗು ಹಸಿವಿನಿಂದ ಅಳುತ್ತಿದ್ದರೂ ಗಮನಿಸದಷ್ಟು ನೋವಿನಲ್ಲಿದ್ದ ತಾಯಿ, ಕೊನೆಗೆ ಸಾವಿನ ಹಾದಿ ಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪರಪ್ಪನ ಅಗ್ರಹಾರ ಪೊಲೀಸರು ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸಾನಿಕ ಅವರ ಪೋಷಕರು ಪತಿ ಶರಣ್ ಗೌಡ ವಿರುದ್ಧ ಕಿರುಕುಳ ಹಾಗೂ ಆತ್ಮ*ತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ದೂರು ನೀಡಿದ್ದಾರೆ. ಮಗುವಿನ ಭವಿಷ್ಯವನ್ನು ಕಿತ್ತುಕೊಂಡ ಪತಿಯ ಅಕ್ರಮ ಸಂಬಂಧದ ವಿಡಿಯೋಗಳೇ ಈಗ ಈ ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ..


