ನೀಟ್ ಪೇಪರ್ ಲೀಕ್ ಪ್ರತಿಭಟನೆ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ತಾವು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದವರ ಬಗ್ಗೆ ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.
ಚಿಕ್ಕಮಗಳೂರು (ಜು.26): ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಂಎಲ್‌ಸಿ ಸಿಟಿ ರವಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿ ಪ್ರತಿಕ್ರಿಯಿಸಿರುವ ಸಿಟಿ ರವಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು 'ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ' ಎಂದಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಅವರು ಒತ್ತಾಯಿಸುತ್ತಿದ್ದಾರೆ. ನಾನು ಈ ಅನಕ್ಷರಸ್ಥ ಜನರನ್ನು ಕೇಳಲು ಬಯಸುತ್ತೇನೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೂ ಸಿಎಎ ಮತ್ತು ಎನ್‌ಆರ್‌ಸಿಗೂ ಏನು ಸಂಬಂಧ? ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸುವ ರಾಷ್ಟ್ರವಿರೋಧಿ ಅಂಶಗಳು ಮತ್ತು 'ತುಕ್ಡೆ ತುಕ್ಡೆ ಗ್ಯಾಂಗ್' ಸದಸ್ಯರು ಈ ಪ್ರತಿಭಟನೆಗಳಲ್ಲಿ ಭಾಗವಹಿಸಿ ಭಾಷಣ ಮಾಡುತ್ತಿದ್ದಾರೆ ಎಂದು ರವಿ ಹೇಳಿದ್ದಾರೆ.
ಮುಲ್ಲಾನಿಗೂ ನನ್ನ ಮೇಲೆ ಕೇಸ್ ಕೊಟ್ಟವನಿಗೂ ಏನು ಸಂಬಂಧ?
ನನ್ನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ಪೆಟ್ರೋಲ್ ಟ್ಯಾಂಕ್‌ಗೆ ಕಡ್ಡಿ ಗೀರಲು ಹೋದ ಮುಲ್ಲಾನ ಬಗ್ಗೆ ನಾನು ಮಾತನಾಡಿದ್ದೇನೆ, ಜೀಪಿಗೆ ಬೆಂಕಿ ಹಚ್ಚು ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ, ಸಾವಿರ ಮಾತನಾಡುತ್ತೇನೆ ಎಂದು ವಿಡಿಯೋ ಸಮೇತ ಸಾಕ್ಷಿ ತೋರಿಸಿದ ಸಿಟಿ ರವಿ ಅವರು, ನಾನು ದೇಶ ವಿರೋಧಿ ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ, ಮುಸ್ಲಿಮರ ಬಗ್ಗೆ ಮಾತನಾಡಿಲ್ಲ. ಮುಸ್ಲಿಮರ ಬಗ್ಗೆ ಒಂದು ಪದವೂ ಮಾತನಾಡಿಲ್ಲ. ನಾಗರೀಕ, ದೇಶಭಕ್ತ, ನೀಟ್ ವಿದ್ಯಾರ್ಥಿಗಳು ಈ ರೀತಿ ಬೆಂಕಿ ಹಚ್ಚುವ ಕೆಲಸ ಮಾಡೋಲ್ಲ. ಸಂವಿಧಾನ ಕಾಳಜಿ ಇರೋರು ಇಂಥ ಕೆಲಸ ಮಾಡೋಲ್ಲ. ಅವನ ಎದೆ ಸೀಳಿದರೆ ಮೂರಕ್ಷರ ಇರಲ್ಲ, ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದವನ ಬಗ್ಗೆ ಮಾತನಾಡಿದರೆ ಕೇಸ್ ಹಾಕ್ತೀರಾ? ಪಹಲ್ಗಾಂ ನಲ್ಲಿ ಕಲ್ಮಾ ಹೇಳದಿದ್ದಕ್ಕೆ ಸಾಯಿಸಿದ್ರಲ್ಲ ಅದಕ್ಕೆ ಏನು ಹೇಳ್ತೀರಾ? ನನ್ನ ಮೇಲೆ ಕೇಸ್ ಕೊಟ್ಟಿರೋನಿಗೂ, ಅವನಿಗೂ ಏನು ಸಂಬಂಧ? ಮೊದಲು ಪೊಲೀಸರು ಈ ಬಗ್ಗೆ ತನಿಖೆ ಮಾಡಲಿ. ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ, ಆದರೆ ಜಿಹಾದಿಗಳ ಒಳ್ಳೆಯವರು ಅಂತಾ ನಾನು ಹೇಳೋಲ್ಲ ಎಂದರು.
ಪೊಲೀಸರ ನಡೆ ವಿರುದ್ಧವೂ ಸಿಟಿ ರವಿ ಕಿಡಿ
ಅಕ್ರಮ ಬಾಂಗ್ಲಾದೇಶಿಗರ ಬಗ್ಗೆ ದೂರು ಕೊಟ್ರೆ ಸ್ವೀಕರಿಸಲ್ಲ. ಬೇರೆಯವರು ದೂರು ಕೊಟ್ರೆ ಎನ್‌ಸಿ ಕೊಡೋದು ಕಷ್ಟ. ವಿಪಕ್ಷ ನಾಯಕರು ದೂರು ಕೊಟ್ಟರೆ ದೂರು ದಾಖಲಿಸಲ್ಲ, ನೀವು ಇಡೀ ರಾತ್ರಿ ಡ್ರಾಮಾ ಮಾಡ್ತೀರಿ. ಅವರು ದೂರು ಕೊಟ್ರೆ ತಕ್ಷಣ ದೂರು ದಾಖಲಿಸುತ್ತೀರ? ಪೊಲೀಸ್ ಜೀಪಿಗೆ ಬೆಂಕಿ ಹಚ್ಚುವವನ ಬಗ್ಗೆ ಮಾತನಾಡಿದ್ರೆ ಎಫ್‌ಐಆರ್ ಮಾಡ್ತೀರಾ? ಕರ್ನಾಟಕ ಪೊಲೀಸರು ಏನು ಸಂದೇಶ ಕೊಡ್ತಿದ್ದಾರೆ ಎಂದು ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ
ಚಿಕ್ಕಮಗಳೂರಿನಲ್ಲಿ ಯೂತ್ ಫಾರ್ ನೇಷನ್ ಸಂಘಟನೆ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, 'ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಸಂಬಂಧವೇನು? ಸಂಪೂರ್ಣವಾಗಿ ಅನಕ್ಷರಸ್ಥನಾದ ಒಬ್ಬ ಮುಲ್ಲಾ ಬಂದು ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾನೆ' ಎಂದು ರವಿ ಹೇಳಿದ್ದಾರೆಂದು ಆರೋಪಿಸಲಾಗಿತ್ತು. ಕೋಮು ವಿಷಯಗಳನ್ನು ನೀಟ್ ವಿವಾದಕ್ಕೆ ಎಳೆದು ತಂದಿದ್ದಕ್ಕಾಗಿ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಫೆಡರೇಶನ್ ಸರ್ಕಾರವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆ ಚಿಕ್ಕಮಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದ ನಿರ್ದೇಶನದ ಮೇರೆಗೆ ಚಿಕ್ಕಮಗಳೂರು ಪಟ್ಟಣ ಪೊಲೀಸರು ಸಿಟಿ ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 353(2) ರ ಅಡಿಯಲ್ಲಿ ಎಫ್‌ಐಆರ್ ಎಫ್‌ಐಆರ್ ದಾಖಲಿಸಿದ್ದಾರೆ.


