ಡ್ರೋನ್ ಕ್ಯಾಮೆರಾ ಕಣ್ಣಿಂದಲೂ ತಪ್ಪಿಸಿಕೊಂಡ ಹುಲಿ..!
ಗುಂಡ್ಲುಪೇಟೆಯಲ್ಲಿ ಕಾರ್ಯಾಚಣೆ ನಡೆಯುತ್ತಿದ್ದು ಇಲ್ಲಿಯವರೆಗೂ ಹುಲಿಯ ಸುಳಿವು ಸಿಕ್ಕಿಲ್ಲ. ಪಕ್ಷಿ ನೋಟ ಕೊಡುವ ಡ್ರೋನ್ ಕ್ಯಾಮೆರಾಗಳನ್ನು ಬಳಸಿದರೂ ಹುಲಿ ಇರುವಿಕೆಯ ಬಗ್ಗೆ ಸಣ್ಣ ಸುಳಿವೂ ಅಧಿಕಾರಿಗಳಿಗೆ ಲಭ್ಯವಾಗಿಲ್ಲ.
ಚಾಮರಾಜನಗರ(ಅ.12): ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಒಂದೆಡೆ ಆನೆಗಳ ತಂಡ ಹುಲಿಗಾಗಿ ಹುಡುಕಾಟ ನಡೆಸಿದರ, ಮತ್ತೊಂದೆಡೆ ದ್ರೋಣ್ ಕ್ಯಾಮೆರಾದ ಮೂಲಕ ರೈತ ಸತ್ತ ಸ್ಥಳದ ಸುತ್ತಮುತ್ತ ನಿಗಾ ಇರಿಸಿದರೂ ಹುಲಿ ಕಾಣಿಸಲೇ ಇಲ್ಲ.
ಈ ವೇಳೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, 3ನೇ ದಿನದ ಕಾರ್ಯಾಚರಣೆಯಲ್ಲಿ ಏನು ಪ್ರಯೋಜನವಾಗಿಲ್ಲ ಎಂದು ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಚಾಮರಾಜನಗರ: ಹುಲಿ ದರ್ಶನವೂ ಇಲ್ಲ, ಕುರುಹೂ ಇಲ್ಲ..!
ಶುಕ್ರವಾರ ಸಂಜೆಯ ಬಳಿಕ ಹಾಲಿ ಇಟ್ಟಿರುವ ಬೋನು ಬದಲಾವಣೆ ಮಾಡಲಾಗುತ್ತದೆ. ಕಾಡಂಚಿನ ಗ್ರಾಮದ ಫಾರಂ ಹೌಸ್‌ಗಳಲ್ಲಿನ ಜನರಿಗೆ ಹುಲಿ ಹೆಜ್ಜೆ ಗುರುತು, ಹುಲಿ ಘರ್ಜನೆ ಕಂಡು ಬಂದರೆ ತಿಳಿಸಿ ಎಂದಿದ್ದಾರೆ.
ಬಂಡೀಪುರ ಅರಣ್ಯದಲ್ಲಿನ ಅಮ್ಮನ ದೇವಸ್ಥಾನದಲ್ಲಿ ಪೂಜೆ ಸ್ಥಗಿತವಾಗಿದೆ. ಪೂಜೆ ಇರದ ಕಾರಣ ಇಂತ ಅವಘಡ ನಡೆಯುತ್ತಿವೆ ಎಂದು ಜನರು ಹೇಳಿದ್ದಾರೆ. ಹಾಗಾಗಿ ಮುಂದಿನ ಮಂಗಳವಾರ ಅಮ್ಮನ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಸೂಚನೆ ನೀಡಲಾಗಿದೆ. ಜನರು ಕೂಡ ಸಂಜೆಯ ವೇಳೆ ಜಮೀನುಗಳಿಗೆ ತೆರಳಬೇಡಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ಅರೆಕಾಸಿನ ಮಜ್ಜಿಗೆ, ನೆರೆ ಪರಿಹಾರಕ್ಕೆ ವ್ಯಂಗ್ಯ
ಇಂದಿನ ಕಾರ್ಯಾಚರಣೆಯಲ್ಲಿ ಮೈಸೂರು ಅರಣ್ಯ ದಳದ ಡಿಸಿಎಫ್ ಪೂವಯ್ಯ, ಎಸಿಎಫ್ ಎಂ.ಎಸ್.ರವಿಕುಮಾರ್, ಕೆ.ಪರಮೇಶ್, ಮೋಹನ್‌ಕುಮಾರ್, ಅರಣ್ಯಾಧಿಕಾರಿಗಳಾದ ಎನ್.ಪಿ.ನವೀನ್ ಕುಮಾರ್, ಹೆಬ್ಬಾರ್, ಮಹದೇವು, ಮಂಜುನಾಥಪ್ರಸಾದ್ ನೂರಾರು ಮಂದಿ ಸಿಬ್ಬಂದಿ ಇದ್ದರು.
ಪಿಸಿಸಿಎಫ್ ಹಾಜರ್:
ರೈತರ ಕೊಂದ ಹುಲಿ ಸೆರೆ ಹಿಡಿಯಲೇಬೇಕು ಎಂದು ಅಖಾಡಕ್ಕೀಳಿದಿರುವ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಕೂಡ ಶುಕ್ರವಾರ ಬೆಳಗ್ಗೆ ಬೇಸ್ ಕ್ಯಾಂಪ್‌ಗೆ ಭೇಟಿ ನೀಡಿದ್ದಾರೆ.
ಈ ಸಮಯದಲ್ಲಿ ಅಪರ ಪ್ರಧಾನ ಸಂರಕ್ಷಣಾಧಿಕಾರಿ ಜಗತ್ ರಾಂ, ಮೈಸೂರು ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಚಾಮರಾಜನಗರ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಶಂಕರ್, ಬಂಡೀಪುರ ನಿರ್ದೇಶಕ ಟಿ.ಬಾಲಚಂದ್ರರ ಜೊತೆಗೆ ಚರ್ಚಿಸಿದ್ದಾರೆ.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಕಾರ್ಯಾಚರಣೆಯಲ್ಲಿ ಆಗು ಹೋಗುಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಕೂಡಲೇ ಹುಲಿ ಬಂಧನವಾಗಬೇಕು ಎಂದು ಹೇಳಿದ್ದಾರೆ.
ಗುಂಡ್ಲುಪೇಟೆಯಲ್ಲಿ ನರಭಕ್ಷಕ ಹುಲಿ ಸೆರೆಗೆ ಆಪರೇಷನ್ ಸ್ಟಾರ್ಟ್