ಚಾಮರಾಜನಗರ(ಅ.12): ಬಕಾಸುರನ ಒಟ್ಟಿಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ನೆರೆ ಪ್ರವಾಹದಿಂದ ರಾಜ್ಯದಲ್ಲಿ 38 ಸಾವಿರ ಕೋಟಿಗೂ ಅಧಿಕ ನಷ್ಟವಾಗಿ ಲಕ್ಷಾಂತರ ಜನರು ಮನೆ, ಮಠ ಕಳೆದು ನಿರಾಶ್ರಿತರಾಗಿ ಎರಡು ತಿಂಗಳಿನ ನಂತರ ಕೇಂದ್ರ ಸರ್ಕಾರ 1200 ಕೋಟಿ ಪರಿಹಾರ ಘೋಷಣೆ ಮಾಡಿರುವುದನ್ನು ಅಭಿನಂದಿಸಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಅವರ ಹೇಳಿಕೆ ನಗೆಪಾಟಿಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ಟೀಕಿಸಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅರೆಕಾಸಿನ ನೆರವು ಸಹ ಕಾಂಗ್ರೆಸ್‌ನಿಂದ ಹೋರಾಟ ನಡೆಸಿದ ಮೇಲೆ ನೀಡಿರುವುದು, ಇದನ್ನೇ ದೊಡ್ಡದೆಂದು ಬಿಂಬಿಸಿ ಅಭಿನಂದಿಸಿ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಕಾಣಲಿಲ್ಲವೆ? ಯಾವ ಪುರಷಾರ್ಥಕ್ಕಾಗಿ ಈ ಹೇಳಿಕೆ ನೀಡಿದ್ದಾರೆ ಎಂದರು.

ಸಾವಿರಾರು ಕೋಟಿ ರು. ನೀಡಿದ್ದ ಸಿಂಗ್‌:

ಕೇಂದ್ರದಲ್ಲೂ ಇವರದೆ ಸರ್ಕಾರ, ರಾಜ್ಯದಲ್ಲೂ ಇವರದೇ ಸರ್ಕಾರ ಇದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವರು, ಗೃಹ ಸಚಿವರು ಬಂದು ಪ್ರವಾಹ ಪರಿಶೀಲನೆ ಮಾಡಿ ಹೋದರೂ ರಾಜ್ಯದ ಸಂತ್ರಸ್ತರ ನೆರವಿಗೆ ಧಾವಿಸದೇ ಇರುವುದು ಖಂಡನೀಯ, ಯುಪಿಎ ಸರ್ಕಾರವಿದ್ದಾಗ ರಾಜ್ಯದಲ್ಲಿ ಇದೇ ಯಡಿಯೂರಪ್ಪ ಮುಖ್ಮಮಂತ್ರಿಯಾಗಿದ್ದಾಗ ರಾದ್ದದಲ್ಲಿ ಇದೇ ರೀತಿ ಪ್ರವಾಹ ಉಂಟಾಗಿ ಜನರು ನಿರಾಶ್ರಿತರಾಗಿದ್ದಾಗ ಆಗಿನ ಪ್ರಧಾನಮಂತ್ರಿ ಮನಮೋಹನ್‌ಸಿಂಗ್‌ ತಕ್ಷಣ ಸಾವಿರಾರು ಕೋಟಿ ಮಧ್ಯಂತರ ನೆರವು ನೀಡಿದ್ದರು ಎಂದರು.

ಗುಂಡ್ಲುಪೇಟೆಯಲ್ಲಿ ನರಭಕ್ಷಕ ಹುಲಿ ಸೆರೆಗೆ ಆಪರೇಷನ್ ಸ್ಟಾರ್ಟ್.

ಯಡಿಯೂರಪ್ಪ ಅವರನ್ನು ಒಲೈಸುವ ಭರದಲ್ಲಿ ಸತ್ಯವನ್ನು ಮರೆಮಾಚಿರುವುದು ಸರಿಯಲ್ಲ. 25 ಜನ ಬಿಜೆಪಿ ಸದಸ್ಯರನ್ನು ಗೆಲ್ಲಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರೀಕ್ಷೆಯಂತೆ ಪರಿಹಾರ ನೀಡಿಲ್ಲ. ಉತ್ತರ ಕರ್ನಾಟಕದ ಜನಪ್ರತಿಧಿನಗಳೇ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.

ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್‌, ಶಾಸಕ ಬಸವನಗೌಡ ಯತ್ನಾಳ್‌ ಅವರೆ ಕೇಂದ್ರ ಸರ್ಕಾರ ಸಂತ್ರಸ್ತರ ನೆರವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದ ಕೇಂದ್ರ ಸಚಿವರು, ಬಿಜೆಪಿ ಸಂಸದರು, ಪ್ರಧಾನಿ ಮಂತ್ರಿ ಹಾಗೂ ಗೃಹ ಸಚಿವರ ಮುಂದೆ ನಿಲ್ಲಲು ಹೆದರುತ್ತಾರೆ ಎಂದು ಟೀಕಿಸಿದರು.

48 ಗಂಟೆಯಲ್ಲ, ನಾಲ್ಕು ದಿನವಾದ್ರೂ ಸರಿ ಹುಲಿ ಕೊಲ್ಬೇಡಿ: ಅರಣ್ಯ ಸಚಿವರ ಆದೇಶ!...

ಮನೆ ಕಳೆದು ಕೊಂಡವರಿಗೆ 5 ಲಕ್ಷ ರು. ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ, ಎರಡೂವರೆ ಲಕ್ಷ ಮನೆ ಕಳೆದುಕೊಂಡವರಿದ್ದಾರೆ. ಒಂದು ಲಕ್ಷ ಕೋಟಿಗೂ ಹೆಚ್ಚು ಹಣ ನೀಡಬೇಕು. ಇಂದು ಸಾಧ್ಯವೇ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು. ಅಲ್ವಸ್ವಲ್ಪ ನೀಡಿದ ಪರಿಹಾರವು ಸರಿಯಾಗಿ ಜನರಿಗೆ ತಲುಪಿಲ್ಲ ಎಂದು ದೂರಿದರು.

ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಮಾತನಾಡಿ, ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನೆರೆ ಸಂತ್ರಸ್ತರಿಗೂ ಸರಿಯಾದ ನೆರವು ಸಿಕ್ಕಿಲ್ಲ. ಗುಂಡ್ಲುಪೇಟೆ ತಾಲೂಕಿನಲ್ಲಿ ಹುಲಿ ದಾಳಿಯಿಂದ ಇಬ್ಬರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬ ರೈತ ಪ್ರಾಣ ಕಳೆದುಕೊಂಡಾಗಲೇ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದರೆ ಇನ್ನೊಂದು ಸಾವು ತಪ್ಪಿಸಬಹುದಿತ್ತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಅಸ್ಗರ್‌ (ಮುನ್ನಾ) ಪ್ರಧಾನಕಾರ್ಯದರ್ಶಿ ಚಿಕ್ಕಮಹದೇವ, ವಕ್ಕಾರ ಅರುಣ್‌ಕುಮಾರ್‌ ಇದ್ದರು.

ಆಪರೇಷನ್ ಟೈಗರ್: 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ