ರಂಗೂಪುರ ಶಿವಕುಮಾರ್‌

ಗುಂಡ್ಲುಪೇಟೆ(ಅ.10): ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಚೌಡಹಳ್ಳಿಯ ಇಬ್ಬರು ರೈತರನ್ನು ಬಲಿ ತೆಗೆದುಕೊಂಡ ನರಭಕ್ಷಕ ಹುಲಿ ಸೆರೆಗೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಬುಧವಾರ ಪ್ರಾರಂಭಿಸಿದೆ. ಸಾಕಾನೆಗಳನ್ನು ಬಳಸಿ ಹುಲಿಯನ್ನು ಸೆರೆ ಹಿಡಿಯಲು ಆದ್ಯತೆ ನೀಡಲಾಗುವುದು. ಒಂದು ವೇಳೆ ಕಾರ್ಯಾಚರಣೆ ವೇಳೆ ಹುಲಿ ಪ್ರತಿದಾಳಿ ಮಾಡಲು ಪ್ರಯತ್ನಿಸಿದರೆ ಮಾತ್ರ ಗುಂಡು ಹೊಡೆಯಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೆ.1 ರಂದು ಚೌಡಹಳ್ಳಿ ಶಿವಮಾದಯ್ಯನ ಮೇಲೂ ದಾಳಿ ನಡೆಸಿ ಸಾಯಿಸಿದ್ದ ಹುಲಿ, 8 ರಂದು ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಜಮೀನಿನಲ್ಲಿ ದನ ಮೇಯುಸುತ್ತಿದ್ದ ಚೌಡಹಳ್ಳಿಯ ಶಿವಲಿಂಗಪ್ಪ ಎಂಬ ರೈತನ ಮೇಲೆರಗಿ ಸಾಯಿಸಿತ್ತು. ಹುಲಿ ರೈತರನ್ನು ಬಲಿ ತೆಗೆದುಕೊಂಡ ಅನತಿ ದೂರದಲ್ಲಿ ಎರಡು ತಾತ್ಕಾಲಿಕ ಟೆಂಟ್‌ ಹಾಕಲಾಗಿದ್ದು, ಅಲ್ಲಿ ಬಂಡೀಪುರ ಸಾಕಾನೆ ರೋಹಿತ್‌, ಪಾರ್ಥ, ಗಣೇಶ ಬೀಡು ಬಿಟ್ಟಿವೆ. ಮೂರು ಆನೆಗಳೊಂದಿಗೆ ದಸರಾದಲ್ಲಿ ಭಾಗವಹಿಸಿದ್ದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ ಸಾಕಾನೆಗಳ ಜೊತೆಗೆ ಬಿಳಿಗಿರಿರಂಗನ ಬೆಟ್ಟದ ಗಜೇಂದ್ರ ಕೂಡ ಬುಧವಾರ ರಾತ್ರಿಯೊಳಗೆ ಟೆಂಟ್‌ ಸೇರಲಿವೆ. ವೈದ್ಯರು ಹಾಗು ಶಾಪ್‌ರ್‍ ಶೂಟರ್‌ಗಳ 4 ಮಂದಿ ತಂಡ ಈಗಾಗಲೇ ಸ್ಥಳಕ್ಕಾಗಮಿಸಿದೆ.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಎಸಿಎಫ್‌ಗಳಾದ ರವಿಕುಮಾರ್‌, ಕೆ.ಪರಮೇಶ್‌, ಅರಣ್ಯಾಧಿಕಾರಿಗಳಾದ ನವೀನ್‌ಕುಮಾರ್‌, ಮಹದೇವು, ಮಂಜುನಾಥ್‌ ಪ್ರಸಾದ್‌ ಸೇರಿದಂತೆ ನೂರಾರು ಮಂದಿ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆ ಮೊದಲ ಆದ್ಯತೆ ನೀಡಲಾಗಿದ್ದು, ಕಾರ್ಯಾಚರಣೆ ವೇಳೆ ಹುಲಿ ಅಪಾಯ ಮಾಡಲು ಬಂದಲ್ಲಿ ಮಾತ್ರ ಗುಂಡಿಕ್ಕುವಂತೆ ಸೂಚನೆ ನೀಡಿದ್ದೇನೆ ಎಂದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.

ಕೊಂದದ್ದು ಯಾವ ಹುಲಿ ಸಂಶಯದಲ್ಲಿ ಇಲಾಖೆ

ಅಪರ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ ರಾಂ ಚೌಡಹಳ್ಳಿಯಲ್ಲಿ ರೈತನ ಕೊಂದ ಹುಲಿ ಸೆರೆ ಹಿಡಿಯಿರಿ ಇಲ್ಲ, ಗುಂಡಿಕ್ಕಿ ಕೊಲ್ಲಿ ಎಂದಿದ್ದಾರೆ. ಆದರೆ ರೈತನ ಕೊಂದ ಹುಲಿ ಯಾವುದು ಎಂದು ಇಲಾಖೆಯಲ್ಲೇ ಗೊಂದಲವಿದೆ.
ಕಳೆದ ತಿಂಗಳು ವೃದ್ಧನ ಮೇಲೆ ಎರಗಿ ಕೊಂದಿದ್ದ ಹುಲಿ ಹಾಗೂ ಮಂಗಳವಾರ ರೈತನ ಸಾಯಿಸಿದ ಹುಲಿ ಇದೇನಾ ಎಂಬ ಗೊಂದಲ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿದೆ. ಇಬ್ಬರು ರೈತರ ಕೊಂದ ಹುಲಿ ಯಾವುದು ಎಂಬುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳೂ ಪತ್ತೆ ಹಚ್ಚಬೇಕಿದೆ. ಪತ್ತೆ ಹಚ್ಚಿದ ಬಳಿಕವೇ ಸೆರೆ ಹಿಡಿವ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಜನರ ಕೊಂದ ಹುಲಿಯನ್ನು ಸೆರೆ ಅಥವಾ ಗುಂಡಿಕ್ಕಿ ಕೊಲ್ಲುವುದಾಗಿ ಎಪಿಸಿಸಿಎಫ್‌ ಜಗತ್‌ ರಾಂ ಹೇಳಿಕೆ ನೀಡಿದ್ದಾರೆ.

48 ಗಂಟೆಯಲ್ಲ, ನಾಲ್ಕು ದಿನವಾದ್ರೂ ಸರಿ ಹುಲಿ ಕೊಲ್ಬೇಡಿ: ಅರಣ್ಯ ಸಚಿವರ ಆದೇಶ!

ಹುಲಿ ಸೆರೆ ಹಿಡಿಯುವ ಕೆಲಸಕ್ಕೆ ಮೊದಲ ಆದ್ಯತೆ ಎಂದು ಬಂಡೀಪುರ ಹುಲಿ ಯೋಜನೆ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಟಿ.ಬಾಲಚಂದ್ರ ಸ್ಪಷ್ಟಪಡಿಸಿದ್ದಾರೆ. ಗೋಪಾಲಸ್ವಾಮಿ ಬೆಟ್ಟವಲಯದಲ್ಲಿ ನಾಲ್ಕು ಹುಲಿಗಳಿವೆ ಎನ್ನಲಾಗುತ್ತಿದೆ. ಇದೇ ಹುಲಿ ರೈತನ ಕೊಂದದ್ದು ಹೇಳಲು ಸದ್ಯಕ್ಕೆ ಆಗದ ಕೆಲಸ. ಕಾರ್ಯಾಚರಣೆಯಲ್ಲಿ ಹುಲಿ ಕಾಣಿಸಿದರೂ ರೈತನ ಕೊಂದ ಹುಲಿ ಇದೆ ಎಂದು ಗುರುತಿಸಲು ಸಮಯ ಬೇಕಾಗುತ್ತದೆ. ಕ್ಯಾಮೆರಾ ಅಳವಡಿಸಿ ಸೆರೆಯಾದ ಹುಲಿ ರೈತನ ಕೊಂದದ್ದೇ ಎಂದು ಪತ್ತೆ ಹಚ್ಚಬೇಕಾಗುತ್ತದೆ ಎಂದು ನಿವೃತ್ತ ಹಿರಿಯ ಐಎಫ್‌ಎಸ್‌ ಅಧಿಕಾರಿಯೊಬ್ಬರು ತಿಳಿಸಿದರು.

5 ಲಕ್ಷ ರು.ಪರಿಹಾರ ವಿತರಣೆ

ಹುಲಿ ದಾಳಿಯಿಂದ ಸಾವನ್ನಪ್ಪಿದ ಚೌಡಹಳ್ಳಿ ಗ್ರಾಮದ ರೈತ ಶಿವಲಿಂಗಪ್ಪ ಕುಟುಂಬಕ್ಕೆ ಅರಣ್ಯ ಇಲಾಖೆ 5 ಲಕ್ಷ ರು.ಪರಿಹಾರ ಚೆಕ್‌ ನ್ನು ವಿತರಿಸಿದರು. ಮೃತನ ಮನೆಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಭೇಟಿ ನೀಡಿ ಪರಿಹಾರ ಚೆಕ್‌ ವಿತರಿಸಿ ಸಾಂತ್ವನ ಹೇಳಿದರು.

ಅಂತ್ಯ ಸಂಸ್ಕಾರ:

ಮಂಗಳವಾರ ಹುಲಿ ಎರಗಿ ರೈತ ಶಿವಲಿಂಗಪ್ಪ ಸಾವನ್ನಪ್ಪಿದ್ದರು. ಬುಧವಾರ ಮಧ್ಯಾಹ್ನ ಗ್ರಾಮದ ವೀರಶೈವ ಸಮಾಜದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಹುಲಿ ದಾಳಿಗೆ ಒಳಗಾದ ಶಿವಲಿಂಗಪ್ಪ ಶವ ಸಂಸ್ಕಾರಕ್ಕೆ ನೂರಾರು ಮಂದಿ ಅಕ್ಕ ಪಕ್ಕದ ಗ್ರಾಮದ ಜನರು ಭಾಗವಹಿಸಿದ್ದರು.

ಮೃತ ರೈತನ ಮನೆಗೆ ಧ್ರುವನಾರಾಯಣ ಭೇಟಿ

ಹುಲಿ ದಾಳಿಯಿಂದ ಸಾವನ್ನಪ್ಪಿದ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಲಿಂಗಪ್ಪ ಮನೆಗೆ ಮಾಜಿ ಸಂಸದ ಆರ್‌.ಧ್ರುವನಾರಾಯಣ ಭೇಟಿ ನೀಡಿ ಸಾಂತ್ವನ ಹೇಳಿದರು.

ಬುಧವಾರ ಬೆಳಗ್ಗೆ ತಾಲೂಕಿನ ಚೌಡಹಳ್ಳಿ ಗ್ರಾಮದ ಶಿವಲಿಂಗಪ್ಪ ಮನೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಕಾಂಗ್ರೆಸ್‌ ಮುಖಂಡ ಎಚ್‌.ಎಂ.ಗಣೇಶಪ್ರಸಾದ್‌ ದಿವಂಗತ ಎಚ್‌.ಎಸ್‌.ಮಹದೇವಪ್ರಸಾದ್‌ ಟ್ರಸ್ಟ್‌ನಿಂದ ಮೃತರ ಕುಟುಂಬಕ್ಕೆ ನೆರನ ಸಹಾಯ ಹಸ್ತ ನೀಡಿದರು.

ಈ ಸಮಯದಲ್ಲಿ ಎಂಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಎಚ್‌.ಎಸ್‌.ಪ್ರಭುಸ್ವಾಮಿ, ಚೌಡಹಳ್ಳಿ ಸಿ.ಎಸ್‌.ರಾಜೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ್‌, ಗ್ರಾಪಂ ಮಾಜಿ ಸದಸ್ಯ ಬೆಳ್ಳಿಯಪ್ಪ, ಡೇರಿ ಅಧ್ಯಕ್ಷ ಎಚ್‌.ಪಿ.ಮಹೇಂದ್ರ,ದಲಿತ ಮುಖಂಡ ಆಂಜನೇಯ ಸೇರಿದಂತೆ ಹಲವರಿದ್ದರು. ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯ ಹುಲಿ ದಾಳಿಗೆ ಮೃತಪಟ್ಟಶಿವಲಿಂಗಪ್ಪ ಕುಟುಂಬಕ್ಕೆ ಕಾಂಗ್ರೆಸ್‌ ಮುಖಂಡ ಎಚ್‌.ಎಂ.ಗಣೇಶಪ್ರಸಾದ್‌ ಧನ ಸಹಾಯ ಮಾಡಿದರು.