ಚಾಮರಾಜನಗರ ಸಂಸದ ಸುನಿಲ್ ಬೋಸ್, ಎನ್‌ಕೌಂಟರ್‌ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್‌ಕೌಂಟರ್‌ ನಂತರ ಶವಗಳನ್ನು ಮೈಸೂರಿಗೆ ಏಕೆ ತರಲಾಯಿತು ಎಂದು ಪ್ರಶ್ನಿಸಿರುವ ಅವರು, ಅರಣ್ಯಾಧಿಕಾರಿಗಳ ಹೇಳಿಕೆ ಮಾತ್ರವಲ್ಲದೆ, ಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.

ಮೈಸೂರು (ಆ.16): ಎನ್‌ಕೌಂಟರ್‌ ಆದ ಮೇಲೆ ಮೈಸೂರಿಗೆ ಶವಗಳನ್ನ ಯಾಕೆ ತಂದರು. ಇದು ಬಹುದೊಡ್ಡ ಅನುಮಾನ ಮೂಡಿಸುವ ಪ್ರಶ್ನೆ. ಈ ಪ್ರಶ್ನೆಗೆ ಯಾರಿಂದಲೂ ನಮಗೆ ಸಮರ್ಪಕ ಉತ್ತರ ‌ಸಿಗುತ್ತಿಲ್ಲ. ಈ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಎಂದು ಚಾಮರಾಜನಗರ ಸಂಸದ ಸುನಿಲ್ ಬೋಸ್ ಹೇಳಿದರು.

ಅರಣ್ಯಾಧಿಕಾರಿಗಳು ಹೇಳೋದೇನು?

ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಕೌಂಟರ್‌ ಆದವರು ಬೇಟೆಯಾಡಿ ಬೇಟೆಯ ಮಾಂಸ ಹಂಚಿಕೊಳ್ಳುತ್ತಿದ್ದರು. ಆಗ ಅರಣ್ಯ ಅಧಿಕಾರಿಗಳು ಅವರನ್ನ ನೋಡಿ ಶರಣಾಗುವಂತೆ ಹೇಳಿದ್ದಾರೆ. ಅವರು ಅಧಿಕಾರಿಗಳು ಮೇಲೆ ಫೈರ್ ಮಾಡಿದ್ದಾರೆ. ಅದಕ್ಕೆ ಅಧಿಕಾರಿಗಳು ಎನ್ಕೌಂಟರ್ ಮಾಡಿದ್ದಾರೆ. ಇದು ಅರಣ್ಯ ಅಧಿಕಾರಿಗಳು ನಮಗೆ ಹೇಳುತ್ತಿರುವ ಮಾಹಿತಿ ಎಂದರು.

ಒಂದು ಕಡೆಯ ಮಾಹಿತಿಯನ್ನು ನಂಬಲು ನಾನು ಸಿದ್ಧನಿಲ್ಲ. ಇನ್ನೊಂದು ಕಡೆಯ ಮಾಹಿತಿ ಏನು ಎಂಬುದು ನಮಗೆ ಬೇಕಿದೆ. ಎನ್‌ಕೌಂಟರ್ ಬಳಿಕ ಮೈಸೂರಿಗೆ ಏಕೆ ಶವ ತಂದರು. ಇದಕ್ಕೆ ಉತ್ತರ ಬೇಕಿದೆ. ಆ ಮಾಹಿತಿಯನ್ನ ಸ್ಥಳಕ್ಕೆ ಹೋಗಿ ಪಡೆಯುತ್ತೇನೆ. ಸಂಸದರು ತಿಳಿಸಿದರು.