ಹಿಂದಿ, ಇಂಗ್ಲಿಷಲ್ಲಿ ಮಾತ್ರ ಎಸ್‌ಎಸ್‌ಸಿ: ಕನ್ನಡಿಗರ ವಿರೋಧ
24,369 ಹುದ್ದೆಗೆ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ ಅರ್ಜಿ ಆಹ್ವಾನ, ಕನ್ನಡ ಸೇರಿ ಯಾವ ಪ್ರಾದೇಶಿಕ ಭಾಷೆಯಲ್ಲೂ ಪರೀಕ್ಷೆಗೆ ಅವಕಾಶವಿಲ್ಲ
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ನ.03): ಕೇಂದ್ರ ಸರ್ಕಾರ ವಿವಿಧ ಪಡೆಗಳಲ್ಲಿ 24,369 ಪೇದೆ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದು ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ. ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ವ್ಯಾಪಕ ಕೂಗು ಬೇರೆ ರಾಜ್ಯಗಳಿಂದಲೂ ಕೇಳಿಬಂದಿದೆ. ಆದರೆ, ಇದ್ಯಾವುದಕ್ಕೂ ಕೇಂದ್ರ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ.
ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿ, ಐಟಿಬಿಪಿ, ಎಆರ್, ಎಸ್‌ಎಸ್‌ಎಫ್, ಎನ್‌ಸಿಬಿಯ 24,369 ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಎಲ್ಲ ಪ್ರಾದೇಶಿಕ ಭಾಷೆಗಳನ್ನೂ ಕಡೆಗಣಿಸಿ ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷೆಗೆ ಅವಕಾಶ ನೀಡಿದೆ. ಇದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇವಲ 3% ಕನ್ನಡಿಗರಿಗಷ್ಟೇ ಐಎಎಸ್, ಐಪಿಎಸ್ ಹುದ್ದೆ..!
‘ತ್ರಿಭಾಷಾ ಸೂತ್ರವನ್ನು ಉಲ್ಲಂಘಿಸಲಾಗುತ್ತಿದೆ. ದೇಶದಲ್ಲಿ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳಿದ್ದು ಆಯಾ ರಾಜ್ಯಗಳು ತಮ್ಮದೇ ಭಾಷೆ, ಭೌಗೋಳಿಕ ಸನ್ನಿವೇಶ, ಸಂಸ್ಕೃತಿ, ಜೀವನ ಶೈಲಿ, ಆಚಾರ-ವಿಚಾರ ಹೊಂದಿವೆ. ಸಂವಿಧಾನದ 8ನೇ ಪರಿಚ್ಛೇದದ ಪ್ರಕಾರ ಕನ್ನಡವೂ ಸೇರಿದಂತೆ 22 ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ನೀಡಲಾಗಿದೆ. ಹೀಗಿದ್ದರೂ ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ ವಿಶೇಷ ಪ್ರಾಧಾನ್ಯತೆ ನೀಡುತ್ತಿರುವುದು ಏಕೆ?’ ಎಂಬ ಪ್ರಶ್ನೆ ಹಲವು ರಾಜ್ಯಗಳಿಂದ ವ್ಯಕ್ತವಾಗಿದೆ.
ಉಗ್ರ ಹೋರಾಟದ ಎಚ್ಚರಿಕೆ:
ಕಾಂಗ್ರೆಸ್, ಜೆಡಿಎಸ್, ಡಿಎಂಕೆ, ಎಐಎಡಿಎಂಕೆ, ಟಿಆರ್‌ಎಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳೂ ಕೇಂದ್ರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಉಗ್ರ ಹೋರಾಟದ ಎಚ್ಚರಿಕೆ ನೀಡಿವೆ. ‘ಎಸ್‌ಎಸ್‌ಸಿ ಪರೀಕ್ಷೆಗೆ ಯಾವಾಗ ಅರ್ಜಿ ಆಹ್ವಾನಿಸಲಾಗುತ್ತದೆ ಎಂಬ ಬಗ್ಗೆ ರಾಜ್ಯದವರಿಗೆ ಸರಿಯಾಗಿ ಮಾಹಿತಿಯೇ ಸಿಗುವುದಿಲ್ಲ. ಈ ಪರೀಕ್ಷೆಗಳ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ಜಾಹೀರಾತೂ ನೀಡುವುದೂ ಇಲ್ಲ’ ಎಂಬ ದೂರುಗಳೂ ಕೇಳಿಬಂದಿವೆ. ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅ.27 ರಿಂದ ಆರಂಭವಾಗಿದ್ದು ನ.30 ಕೊನೆಯ ದಿನವಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ 2023 ಜನವರಿಯಲ್ಲಿ ನಡೆಯಲಿದೆ. ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುತ್ತಿರುವುದಕ್ಕೆ ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿದ್ದರೂ ಇದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಿದ್ಯಾರ್ಹತೆ ಎಸ್‌ಎಲ್‌ಸಿ ಆಗಿರುವುದರಿಂದ ಹಿಂದಿ, ಇಂಗ್ಲಿಷ್ ಸುಲಲಿತವಾಗಿ ಬರೆಯಲು ಹೇಗೆ ಸಾಧ್ಯ? ರಾಜ್ಯದ ಹುದ್ದೆಗಳಿಗಾದರೂ ಕನ್ನಡದಲ್ಲಿ ಪರೀಕ್ಷೆ ನಡೆಸಬೇಕು ಎಂದು ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದ್ದಾರೆ.
ದಕ್ಷಿಣ ಭಾರತದವರಿಗೇ ಅನ್ಯಾಯ:
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಾವಣಗೆರೆಯ ವಿನ್ನರ್ಸ್ ಕೆರಿಯರ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಡಾ.ಶಿವರಾಜ್ ಕಬ್ಬೂರ್, ‘ರೈಲ್ವೆ ಇಲಾಖೆಯಲ್ಲಿ ಯಾವ ರೀತಿ ಗ್ರೂಪ್ ‘ಡಿ’ ಹುದ್ದೆಗಳಿಗೆ ಕನ್ನಡವನ್ನು ಪರಿಗಣಿಸಲಾಗುತ್ತದೆಯೋ ಅದೇ ರೀತಿ ಎಸ್‌ಎಸ್‌ಬಿಯಲ್ಲೂ ಗಣನೆಗೆ ತೆಗೆದುಕೊಳ್ಳಬೇಕು. ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಇಲ್ಲದಿದ್ದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ದಕ್ಷಿಣ ಭಾರತದವರಿಗೆ ಅನ್ಯಾಯವಾಗುತ್ತದೆ. ನಮ್ಮ ಗ್ರಾಮೀಣ ಭಾಗದ ಮಕ್ಕಳಿಗಂತೂ ಇದು ಕಬ್ಬಿಣದ ಕಡಲೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
NAAC Recruitment 2022: ಉಪ ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ
ಸಿಬ್ಬಂದಿ ನೇಮಕಾತಿ ಆಯೋಗವು ಪ್ರಾದೇಶಿಕ ಭಾಷೆಗಳ ವಿರೋಧಿ ನೀತಿಯನ್ನು ಅನುಸರಿಸಿದ್ದು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈ ಭಾಷಾ ವಿರೋಧಿ ನೀತಿ ಅಕ್ಷಮ್ಯವಾಗಿದ್ದು ವಿಶ್ರಾಂತ ನ್ಯಾ. ಅರಳಿ ನಾಗರಾಜ್ ಅವರ ಮಾರ್ಗದರ್ಶನದೊಂದಿಗೆ ನ್ಯಾಯಾಂಗ ಹೋರಾಟಕ್ಕೆ ಮುಂದಾಗಲಿದ್ದೇವೆ ಅಂತ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಹುದ್ದೆ ಸಂಖ್ಯೆ
ಬಿಎಸ್‌ಎಫ್ 10,497
ಸಿಐಎಸ್‌ಎಫ್ 100
ಸಿಆರ್‌ಪಿಎಫ್ 8911
ಎಸ್‌ಎಸ್‌ಬಿ 1284
ಐಟಿಬಿಪಿ 1613
ಎಆರ್ 1697
ಎಸ್‌ಎಸ್‌ಎಫ್ 103
ಎನ್‌ಸಿಬಿ 164