Asianet Suvarna News Asianet Suvarna News

ಕೇವಲ 3% ಕನ್ನಡಿಗರಿಗಷ್ಟೇ ಐಎಎಸ್‌, ಐಪಿಎಸ್‌ ಹುದ್ದೆ..!

ಪ್ರತಿ ವರ್ಷ 60% ಹಿಂದಿ ಭಾಷಿಕರು ಆಯ್ಕೆ, ಕನ್ನಡದಲ್ಲಿ ಪರೀಕ್ಷೆ ಅವಕಾಶ ನೀಡದೆ ಯುಪಿಎಸ್ಸಿಯಿಂದ ಕನ್ನಡಿಗರಿಗೆ ತೀವ್ರ ಅನ್ಯಾಯ, ಕನ್ನಡ- ಹಿಂದಿ ಎರಡಕ್ಕೂ ಸಂವಿಧಾನದಲ್ಲಿ ಸಮಾನ ಸ್ಥಾನ

Only 3 Percent of Kannadigas Selected for IAS and IPS Posts grg
Author
First Published Nov 1, 2022, 9:30 AM IST

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ನ.01):  ಕೇಂದ್ರದ ಉದ್ಯೋಗ ನೇಮಕಾತಿಗಳ ಪೈಕಿ ಕೇವಲ ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಮಾತ್ರವಲ್ಲ ಯುಪಿಎಸ್‌ಸಿ ಪರೀಕ್ಷೆಗಳಲ್ಲೂ ಕನ್ನಡಿಗರಿಗೆ ತೀವ್ರ ಅನ್ಯಾಯವಾಗುತ್ತಿದೆ. ಯುಪಿಎಸ್‌ಸಿ ಪರೀಕ್ಷೆಗಳು ಹಿಂದಿ ಹಾಗೂ ಇಂಗ್ಲಿಷ್‌ಗೆ ಸೀಮಿತವಾಗಿರುವ ಪರಿಣಾಮ ಪ್ರತಿ ವರ್ಷ ಐಎಎಸ್‌, ಐಪಿಎಸ್‌ನಂತಹ ಹುದ್ದೆಗಳಿಗೆ ಶೇ.50-60 ರಷ್ಟು ಹಿಂದಿ ಭಾಷಿಕರೇ ಆಯ್ಕೆಯಾಗುತ್ತಿದ್ದಾರೆ. ಆದರೆ, ಈ ಹುದ್ದೆಗಳಿಗೆ ಕನ್ನಡಿಗರು ಆಯ್ಕೆಯಾಗುತ್ತಿರುವ ಪ್ರಮಾಣ ಶೇ.2 ರಿಂದ 3 ರಷ್ಟು ಮಾತ್ರ.

- ಈ ಮೂಲಕ ಸಂವಿಧಾನದಲ್ಲಿ ಕನ್ನಡ ಹಾಗೂ ಹಿಂದಿಗೆ ಸಮಾನ ಸ್ಥಾನಮಾನ ಕಲ್ಪಿಸಿದ್ದರೂ ಕೇಂದ್ರದ ನೇಮಕಾತಿಗಳ ದೃಷ್ಟಿಯಿಂದ ಮಾತ್ರ ಕನ್ನಡಿಗರು ದ್ವಿತೀಯ ದರ್ಜೆ ನಾಗರಿಕರಾಗಿಯೇ ಉಳಿಯುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಸಂಸದರು, ನಾಗರಿಕರು ಧ್ವನಿ ಎತ್ತಿ ಅಭಿಯಾನ ನಡೆಸಿದರೂ ಯುಪಿಎಸ್‌ಸಿಯ ಆರಂಭಿಕ (ಪ್ರಿಲಿಮಿನರಿ) ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ಆಯ್ಕೆ ನೀಡುವ ಬಗ್ಗೆ ಕೇಂದ್ರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕನ್ನಡಿಗರಿಗೆ ಅನ್ಯಾಯ ಮುಂದುವರೆದಿದೆ.

NAAC RECRUITMENT 2022: ಉಪ ಸಲಹೆಗಾರರ ​​ಹುದ್ದೆಗೆ ಅರ್ಜಿ ಆಹ್ವಾನ

ಮೊದಲ ಹಂತದಲ್ಲೇ ಕನ್ನಡವಿಲ್ಲ:

ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಪೂರ್ವಭಾವಿ ಅಥವಾ ಆರಂಭಿಕ ಪರೀಕ್ಷೆ (ಪ್ರಿಲಿಮಿನರಿ), ಮುಖ್ಯ ಪರೀಕ್ಷೆ (ಮೈನ್ಸ್‌) ಹಾಗೂ ಸಂದರ್ಶನ ಎಂಬ 3 ಹಂತಗಳಿವೆ. ಈ ಪೈಕಿ ಆರಂಭಿಕ ಪರೀಕ್ಷೆಯನ್ನು ಕಡ್ಡಾಯವಾಗಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲೇ ಬರೆಯಬೇಕು. ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶವಿದ್ದರೂ ಪ್ರಶ್ನೆಗಳನ್ನು ಕನ್ನಡದಲ್ಲಿ ನೀಡುವುದಿಲ್ಲ. ಬದಲಿಗೆ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ನೀಡುವ ಪ್ರಶ್ನೆಪತ್ರಿಕೆಯನ್ನು ಅರ್ಥ ಮಾಡಿಕೊಂಡು ಕನ್ನಡದಲ್ಲಿ ಉತ್ತರ ಬರೆಯಬಹುದು.

ಸಂದರ್ಶನದಲ್ಲೂ ಕನ್ನಡವಿಲ್ಲ:

ಇನ್ನು ಸಂದರ್ಶನದ ವೇಳೆಯೂ ಕನ್ನಡಕ್ಕೆ ಅವಕಾಶ ನೀಡಬೇಕು ಎಂಬ ನಿಯಮವಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಸಂದರ್ಶಕರಲ್ಲಿ ಒಬ್ಬರು ಮಾತ್ರ ಕನ್ನಡ ಬರುವ ಸಂದರ್ಶಕರಿರುತ್ತಾರೆ. ಸಂದರ್ಶಕರು ಅಭ್ಯರ್ಥಿಗೆ ಇಂಗ್ಲಿಷ್‌ ಅಥವಾ ಹಿಂದಿಯಲ್ಲೇ ಪ್ರಶ್ನೆಗಳನ್ನು ಕೇಳುತ್ತಾರೆ. ಅದನ್ನು ಅರ್ಥೈಸಿಕೊಂಡು ಕನ್ನಡದಲ್ಲಿ ಉತ್ತರಿಸಲು ಅವಕಾಶವಿರುತ್ತದೆ.

ಕನ್ನಡ ಅಭ್ಯರ್ಥಿಗಳಿಗೆ ಕನ್ನಡ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ, ಸಂದರ್ಶನದ ವೇಳೆ ಪೂರ್ಣ ಪ್ರಮಾಣದಲ್ಲಿ ಕನ್ನಡ ಆಯ್ಕೆ ನೀಡುವ ಪ್ರಯತ್ನ ಮಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಹಂತಗಳಿಗೆ ಬರಲು ಅತ್ಯಗತ್ಯವಾಗಿರುವ ಆರಂಭಿಕ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲ. ಹೀಗಾಗಿ ಕನ್ನಡ ಅಭ್ಯರ್ಥಿಗಳು ಪ್ರಾರಂಭಿಕ ಹಂತದಲ್ಲೇ ವೈಫಲ್ಯ ಹೊಂದುತ್ತಿದ್ದಾರೆ ಎಂದು ಯುಪಿಎಸ್ಸಿ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕನ್ನಡಿಗರು ದ್ವಿತೀಯ ದರ್ಜೆ ನಾಗರಿಕರು- ಜಾವಗಲ್‌:

ಸಂವಿಧಾನದ 14ನೇ ಪರಿಚ್ಛೇದದಲ್ಲಿ ಹಿಂದಿ ಸೇರಿದಂತೆ 22 ಭಾಷೆಗಳನ್ನು ದೇಶದ ಅಧಿಕೃತ ಭಾಷೆಗಳೆಂದು ಘೋಷಿಸಲಾಗಿದೆ. ಹೀಗಾಗಿ ಎಲ್ಲಾ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನೂ 22 ಭಾಷೆಗಳಲ್ಲೂ ನೀಡಬೇಕು. ಆಗ ಮಾತ್ರ ಭಾಷಾ ಸಮಾನತೆ ಹಾಗೂ ಎಲ್ಲಾ ಭಾಷಿಕರಿಗೆ ಸಮಾನ ಅವಕಾಶಗಳು ಲಭಿಸುತ್ತವೆ. ಆದರೆ, 14ನೇ ಪರಿಚ್ಛೇದದಲ್ಲಿ ಹಿಂದಿ ಹಾಗೂ ಕನ್ನಡ ಭಾಷೆಗೆ ಸಮಾನ ಸ್ಥಾನಮಾನ ನೀಡಿದ್ದರೂ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಹಿಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಯುಪಿಎಸ್ಸಿ ಆಯ್ಕೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಹಿಂದಿ ಭಾಷಿಕರೇ ಆಯ್ಕೆಯಾಗುತ್ತಿದ್ದಾರೆ. ರಾಜ್ಯದ ಎಲ್ಲಾ ವ್ಯವಸ್ಥಾಪಕ ಹುದ್ದೆಗಳಿಗೂ ಹಿಂದಿ ಭಾಷಿಕರೇ ಬರುತ್ತಿದ್ದಾರೆ. ತನ್ಮೂಲಕ ಕನ್ನಡಿಗರು ದ್ವಿತೀಯ ದರ್ಜೆ ನಾಗರಿಕರಂತಾಗುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ಅರುಣ್‌ ಜಾವಗಲ್‌ ಆರೋಪಿಸುತ್ತಾರೆ.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಾಗಲು ಹಿಂದಿ ಭಾಷಿಕರಿಗೆ ಎಷ್ಟುಹಕ್ಕಿದೆಯೋ ಕನ್ನಡ, ತಮಿಳು, ತೆಲುಗು ಸೇರಿದಂತೆ ಪ್ರಾದೇಶಿಕ ಭಾಷಿಕರಿಗೂ ಅಷ್ಟೇ ಹಕ್ಕಿದೆ. ಹೀಗಿರುವಾಗ ಹಿಂದಿಯವರಿಗೆ ಮಾತ್ರ ಅವರ ನುಡಿಯಲ್ಲಿ ಪರೀಕ್ಷೆ ಬರೆಸುವ ಮೋಸ ಯಾಕೆ? ಎಂದು ಪ್ರಶ್ನಿಸುತ್ತಾರೆ.

ಕನ್ನಡ ಭಾಷಿಕರ ಒತ್ತಾಯಕ್ಕೆ ಮನ್ನಣೆಯಿಲ್ಲ:

ರಾಜ್ಯದ ಹಲವು ಸಂಸದರು ಯುಪಿಎಸ್ಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ. ಹೀಗಿದ್ದರೂ ಯುಪಿಎ ಸರ್ಕಾರದ ಅವಧಿಯಿಂದಲೂ ಕನ್ನಡಿಗರಿಗೆ ಅನ್ಯಾಯ ಮುಂದುವರೆದಿದೆ. ‘ಕನ್ನಡದಲ್ಲಿಯುಪಿಎಸ್‌ಸಿ’ ಹಾಗೂ ‘ಯುಪಿಎಸ್‌ಸಿಇನ್‌ಕನ್ನಡ’ ಹ್ಯಾಶ್‌ಟ್ಯಾಗ್‌ಗಳ ಮೂಲಕ ಅಭಿಯಾನ ರೂಪಿಸಿ ಒತ್ತಾಯಿಸಿದರೂ ಕನ್ನಡಗಿರ ಒತ್ತಾಯಕ್ಕೆ ಕೇಂದ್ರ ಮನ್ನಣೆ ನೀಡಿಲ್ಲ. ಹೀಗಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡುವ ಉಜ್ವಲ ಅಕಾಡೆಮಿ ನಿರ್ದೇಶಕ ಕೆ.ಯು. ಮಂಜುನಾಥ್‌ ಅಸಮಾಧಾನ ತೋಡಿಕೊಂಡಿದ್ದಾರೆ.

ಶೇ.50ರಿಂದ 60 ರಷ್ಟು ಹುದ್ದೆ ಹಿಂದಿಯರ ಪಾಲು:

ಆಡಳಿತದ ಚುಕ್ಕಾಣಿ ಪ್ರಮುಖ ಹುದ್ದೆಗಳು ಎಂದರೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹುದ್ದೆನಂತಹ ವ್ಯವಸ್ಥಾಪಕ ಹುದ್ದಗಳು. ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರವೇ ಪರೀಕ್ಷೆ ನಡೆಸುತ್ತಿರುವುದರಿಂದ ಯುಪಿಎಸ್ಸಿಯಲ್ಲಿ ಶೇ.50 ರಿಂದ 60 ಹುದ್ದೆಗಳು ಹಿಂದಿಯವರ ಪಾಲಾಗುತ್ತಿವೆ.

DRDO Recruitment 2022: ಬರೋಬ್ಬರಿ 1061  ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಬಗ್ಗೆ ಅಕ್ಕ ಐಎಎಸ್‌ ಅಕಾಡೆಮಿಯು ಮಾಚ್‌ರ್‍ನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಆಗ್ರಹಿಸಿ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿತ್ತು. ಜತೆಗೆ ಕನ್ನಡಿಗರಿಗೆ ಆಗುತ್ತಿರುವ ಮೋಸವನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು.

ಅಕ್ಕ ಅಕಾಡೆಮಿ ಪ್ರಕಾರ 2014ರಲ್ಲಿ ಆಯ್ಕೆಯಾದ ಯುಪಿಎಸ್ಸಿಯ 1,362 ಹುದ್ದೆಗಳಲ್ಲಿ 743 ಹುದ್ದೆ ಹಿಂದಿಯವರ ಪಾಲಾಗಿದೆ. ಉಳಿದಂತೆ 2015ರ 1,164 ಹುದ್ದೆಗಳಲ್ಲಿ 643, 2016ರಲ್ಲಿನ 1,209 ಹುದ್ದೆಗಳಲ್ಲಿ 664 ಹುದ್ದೆ, 2017ರಲ್ಲಿ 1,056 ಹುದ್ದೆಗಳ ಪೈಕಿ 663, 2018ರಲ್ಲಿನ 812 ಹುದ್ದೆಗಳಲ್ಲಿ 485 ಹುದ್ದೆ ಹಿಂದಿ ಪಾಲಾಗಿವೆ. ಆದರೆ, ಇದೇ ಅವಧಿಯಲ್ಲಿ ಕನ್ನಡಿಗರ ಶೇ.2ರಿಂದ 3 ರಷ್ಟುಮಾತ್ರ ಆಯ್ಕೆಯಾಗಿದ್ದಾರೆ. ಉದಾ: 2017ರಲ್ಲಿ 1,056 ಹುದ್ದೆಗಳಲ್ಲಿ ಕನ್ನಡಿಗರು ಆಯ್ಕೆಯಾಗಿದ್ದು 30 ಮಂದಿ ಮಾತ್ರ, 2018ರಲ್ಲಿನ 812 ಹುದ್ದೆಗಳಲ್ಲಿ 20, ಉಳಿದಂತೆ 2019ರಲ್ಲಿ 23, 2020ರಲ್ಲಿ 26 ಮಂದಿ ಮಾತ್ರ ಕನ್ನಡಿಗರು ಆಯ್ಕೆಯಾಗಿದ್ದಾರೆ. ಹೀಗಾಗಿ ಕನ್ನಡ ನಾಡಿನ ವ್ಯವಸ್ಥಾಪಕ ಹುದ್ದೆಗಳೂ ಹಿಂದಿಯವರ ಪಾಲಾಗುತ್ತಿವೆ.

ಕೇಂದ್ರದ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಇನ್ನೂ ಅನ್ಯಾಯ ಮುಂದುವರಿದಿರುವ ಕುರಿತು ಬೆಳಕು ಚೆಲ್ಲುವ ‘ಕನ್ನಡಪ್ರಭ’ ವಿಶೇಷ ಸರಣಿ ಇಂದಿನಿಂದ ಆರಂಭ.
 

Follow Us:
Download App:
  • android
  • ios