ಹುಲಿ ಮೂತ್ರ ಮಾರಾಟ ಮಾಡಿದ ಮೃಗಾಲಯ: ಸಂಧಿವಾತಕ್ಕೆ ರಾಮಬಾಣವೆಂದು ಜನರಿಗೆ ವಂಚನೆ?
ಸಂಧಿವಾತಕ್ಕೆ ಹುಲಿ ಮೂತ್ರ ರಾಮಬಾಣವೆಂದು ಹೇಳಿ ಮೃಗಾಲಯವೊಂದು ಹಣಕ್ಕಾಗಿ ಮೂತ್ರ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು ₹600 ಕ್ಕೆ ಮಾರಾಟ ಮಾಡುತ್ತಿದ್ದ ಮೃಗಾಲಯದ ವಿರುದ್ಧ ಸರ್ಕಾರ ತನಿಖೆಗೆ ಆದೇಶಿಸಿದೆ.

ಮೃಗಾಲಯದ ಭೇಟಿಗೆ ಬರುವಂತಹ ಜನರಿಗೆ ಸಂಧಿವಾತಕ್ಕೆ ಹುಲಿ ಮೂತ್ರ ಸೇವನೆ ರಾಮಬಾಣವೆಂದು ಹಣಕ್ಕೆ ಮೃಗಾಲಯದ ಮೂತ್ರ ಮಾರಾಟ ಮಾಡುತ್ತಿದ್ದ ಸಿಬ್ಬಂದಿ ವಿರುದ್ಧ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮೃಗಾಲಯದಿಂದ ಈ ಬಗ್ಗೆ ಜಾಹೀರಾತು ಕೂಡ ಪ್ರದರ್ಶನ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.
ಹೌದು, ಸಂಧಿವಾತ ಚಿಕಿತ್ಸೆಗೆ ಒಳ್ಳೆಯದು ಎಂದು ಹೇಳಿ ಹುಲಿ ಮೂತ್ರ ಮಾರಾಟ ಮಾಡಿದ ಮೃಗಾಲಯದ ವಿರುದ್ಧ ತನಿಖೆಗೆ ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಮೃಗಾಲಯಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಆರೋಪ ಮಾಡಿದ್ದಾರೆ. ಈ ಘಟನೆ ನಡೆದಿದ್ದು ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಯಾನ್ ಯಾನ್ ಬಿಫೆಂಗ್ಸಿಯಾ ವನ್ಯಜೀವಿ ಮೃಗಾಲಯದಲ್ಲಿ. ಸಂಧಿವಾತಕ್ಕೆ ಹುಲಿ ಮೂತ್ರ ಒಳ್ಳೆಯದು ಎಂದು ಹೇಳಿಕೊಂಡು ಮೃಗಾಲಯದ ಅಧಿಕಾರಿಗಳೇ ಸೈಬೀರಿಯನ್ ಹುಲಿಗಳಿಂದ ಸಂಗ್ರಹಿಸಿದ ಮೂತ್ರವನ್ನು ಸುಮಾರು ₹600ಕ್ಕೆ (50 ಯುವಾನ್) ಮಾರಾಟ ಮಾಡಿದ್ದಾರೆ.
ದೇಹದಲ್ಲಿ ಯಾವುದೇ ಭಾಗದಲ್ಲಿ ಉಳುಕು, ಸ್ನಾಯು ನೋವು ಮುಂತಾದ ಸಂಧಿವಾತ ಸಮಸ್ಯೆಗಳಿಗೆ ಹುಲಿ ಮೂತ್ರ ಒಳ್ಳೆಯದು ಎಂದು ಬಾಟಲಿಯ ಮೇಲೆ ಮೃಗಾಲಯದ ಅಧಿಕಾರಿಗಳು ಜಾಹೀರಾತು ನೀಡಿದ್ದಾರೆ. ಬಿಳಿ ವೈನ್‌ನಲ್ಲಿ ಹುಲಿ ಮೂತ್ರವನ್ನು ಶುಂಠಿ ತುಂಡುಗಳೊಂದಿಗೆ ಬೆರೆಸಿ ನೋವಿರುವ ಜಾಗಕ್ಕೆ ಹಚ್ಚುವುದು ಒಳ್ಳೆಯದು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ₹500ನಲ್ಲಿ ಕುಂಭಮೇಳದ ಪುಣ್ಯಸ್ನಾನ; ತ್ರಿವೇಣಿ ಸಂಗಮದಲ್ಲಿ ಫೋಟೋ ಮುಳುಗಿಸಿ ಆತ್ಮ ಶುದ್ಧೀಕರಣ ಮಾಡ್ತಾರಂತೆ!
ಹಾಗೆಯೇ ಹುಲಿ ಮೂತ್ರವನ್ನು ಕುಡಿಯಬಹುದು, ಆದರೆ ಏನಾದರೂ ದೈಹಿಕ ತೊಂದರೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಮೃಗಾಲಯವು ವಿಶ್ವ ದರ್ಜೆಯ ಪ್ರವಾಸಿ ತಾಣವಾಗಿದೆ ಮತ್ತು ಚೀನಾದಲ್ಲಿ ನಾಗರಿಕ ಪ್ರವಾಸೋದ್ಯಮದ ಮಾದರಿ ಘಟಕ ಎಂದು ಆನ್‌ಲೈನ್‌ನಲ್ಲಿ ಹೇಳಿಕೊಂಡಿದೆ.
ಆದರೆ, ಹುಲಿ ಮೂತ್ರವು ಸಾಂಪ್ರದಾಯಿಕ ಔಷಧಿಯಲ್ಲ ಮತ್ತು ಅದಕ್ಕೆ ಯಾವುದೇ ವೈದ್ಯಕೀಯ ಪರಿಣಾಮವಿಲ್ಲ ಎಂದು ಮಧ್ಯ ಚೀನಾದ ಹುಬೈ ಪ್ರಾಂತೀಯ ಸಾಂಪ್ರದಾಯಿಕ ಚೈನೀಸ್ ಔಷಧಿ ಆಸ್ಪತ್ರೆಯ ಹೆಸರು ಬಹಿರಂಗಪಡಿಸದ ಔಷಧಿಕಾರರೊಬ್ಬರು ಹೇಳಿದ್ದಾರೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಹುಲಿ ಮೂತ್ರ ಮಾರಾಟ ಮಾಡಲು ತಮಗೆ ವ್ಯಾಪಾರ ಪರವಾನಗಿ ಇದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Video | ಬಸ್ ಚಾಲನೆ ವೇಳೆ ರೀಲ್ಸ್ ವಿಡಿಯೋ ನೋಡ್ತಾ ಕುಳಿತ ಡ್ರೈವರ್! ಭಯಂಕರ ದೃಶ್ಯ ವೈರಲ್!
ಸಾಂಪ್ರದಾಯಿಕ ಚೈನೀಸ್ ಸಂಸ್ಕೃತಿಯಲ್ಲಿ ಹುಲಿಗಳು ಧೈರ್ಯ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತವೆ. ಚೀನಾದಲ್ಲಿ ಹುಲಿಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳಾಗಿದ್ದು, ಅವುಗಳನ್ನು ಬೇಟೆ ಆಡುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.