₹500ನಲ್ಲಿ ಕುಂಭಮೇಳದ ಪುಣ್ಯಸ್ನಾನ; ತ್ರಿವೇಣಿ ಸಂಗಮದಲ್ಲಿ ಫೋಟೋ ಮುಳುಗಿಸಿ ಆತ್ಮ ಶುದ್ಧೀಕರಣ ಮಾಡ್ತಾರಂತೆ!
ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಫೋಟೋಗೆ ಪುಣ್ಯಸ್ನಾನ ಮಾಡಿಸುವ ಹೊಸ ದಂಧೆ ಆರಂಭವಾಗಿದೆ. 500 ರೂ. ಶುಲ್ಕ ಪಡೆದು ಭಕ್ತರ ಫೋಟೋಗಳನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸಲಾಗುತ್ತಿದೆ.

ಬೆಂಗಳೂರು (ಫೆ.13): ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ನಿಮಗೆ ಪುಣ್ಯಸ್ನಾನ ಮಾಡಲು ಹೋಗುವುದಕ್ಕೆ ಆಗುತ್ತಿಲ್ಲವೇ? ಹಾಗಿದ್ದರೆ ನಿಮಗಿದೋ ಸದಾವಕಾಶ ಇಲ್ಲಿದೆ ನೋಡಿ.. ನಿಮ್ಮ ಉತ್ತಮವಾದ ಫೋಟೋವನ್ನು ವಾಟ್ಸಾಪ್‌ಗೆ ಕಳುಹಿಸಿದರೆ ಅದನ್ನು ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸುವ ಮೂಲಕ ಪುಣ್ಯ ಸಿಗುವಂತೆ ಮಾಡಲಾಗುವುದು ಎಂದು ಜಾಹೀರಾತು ಹರಿದಾಡುತ್ತಿದೆ. ಅದಕ್ಕೆ 500 ರೂ. ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ ವಿರೋಧ ಚರ್ಚೆ ಆಗುತ್ತಿವೆ.
ಹಿಂದೂ ಧಾರ್ಮಿಕ ಪದ್ದತಿಗಳ ಪ್ರಕಾರ ಪ್ರತಿ 144 ವಗಳಿಗೆ ಒಮ್ಮೆ ಬರುವ ಮಹಾಕುಂಭ ಮೇಳದಲ್ಲಿ ಎಲ್ಲ ಹಿಂದೂಗಳು ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು ಎಂಬ ಆಶಯ ಹೊಂದಿರುತ್ತಾರೆ. ಅದು ಕೂಡ 144 ವರ್ಷಗಳಿಗೆ ಒಮ್ಮೆ ಬರುವ ಈ ಮಹಾಕುಂಭಮೇಳದ ನೋಡಲು ಎಷ್ಟೋ ಜನರಿಗೆ ಸಿಗುವುದೇ ಇಲ್ಲ. ಇದೀಗ ನಾವೇ ಧನ್ಯರು ಎಂದು ಸುಮಾರು 45 ರಿಂದ 50 ಕೋಟಿ ಜನರು ಪುಣ್ಯಸ್ನಾನ ಮಾಡಿ ಬಂದಿದ್ದಾರೆ. ಆದರೆ, ಬಹುತೇಕರಿಗೆ ಇನ್ನೂ ಪುಣ್ಯಸ್ನಾನ ಮಾಡಲು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಫೋಟೋವನ್ನಾದರೂ ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಪುಣ್ಯಸ್ನಾನ ಮಾಡಿಸುವುದಾಗಿ ಕೆಲವರು ಜಾಹೀರಾತು ಮೂಲಕ ಮುಂದೆ ಬಂದಿದ್ದಾರೆ.
ಇಲ್ಲಿದೆ ನೋಡಿ ಜಾಹೀರಾತು:
ಜಾಗತಿಕವಾಗಿ 144 ವರ್ಷಗಳಿಗೊಮ್ಮೆ ಬರುವ ದೈವಿಕ ಮಹಾಕುಂಭ ಸ್ನಾನಕ್ಕೆ ಇದು ನಿಮ್ಮ ಕೊನೆಯ ಅವಕಾಶ ತಪ್ಪಿಸಿಕೊಳ್ಳಬೇಡಿ. ನಿಮ್ಮ ಫೋಟೋವನ್ನು, ವಾಟ್ಸಾಪ್ ಮೂಲಕ ನಮಗೆ ಕಳುಹಿಸಿ. ನಾವು ನಿಮ್ಮ ಫೋಟೋದ ಕಾಪಿಯನ್ನು ತೆಗೆದುಕೊಳ್ಳುತ್ತೇವೆ. ಮತ್ತು ನಿಮ್ಮ ಫೋಟೋದೊಂದಿಗೆ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು ಫೋಟೋಗೆ ಪುಣ್ಯಸ್ನಾನ ಮಾಡಿಸುವುದರಿಂದ ಹಲವು ಪ್ರಯೋಜನಗಳು ಸಿಗುತ್ತವೆ ಎಂದೂ ಹೇಳಿದ್ದಾರೆ. ಅವರು ಹೇಳುವಂತೆ ನಿಮ್ಮ ಫೋಟೋಗೆ ಪುಣ್ಯಸ್ನಾನ ಮಾಡಿಸುವುದರಿಂದ ನಿಮ್ಮ ಆತ್ಮ ಶುದ್ಧೀಕರಣ ಆಗುತ್ತದೆ. ನೀವು ದೈವಿಕ ಆಶೀರ್ವಾದವನ್ನು ಪಡೆಯುತ್ತೀರಿ. ಮಹಾಕುಂಭದಲ್ಲಿ ಸ್ನಾನ ಮಾಡಿದ್ದಕ್ಕಾಗಿ ನಿಮ್ಮ ಪೂರ್ವಜರು ನಿಮ್ಮನ್ನು ಆಶೀರ್ವದಿಸುತ್ತಾರೆ. ಈ ಕ್ಷಣ ನಿಮ್ಮ ಜೀವಿತಾವಧಿಯಲ್ಲಿ ಮತ್ತೆ ಬರುವುದಿಲ್ಲ. ಕೇವಲ ರೂ. 500 ಮಾತ್ರ ಎಂದು ಜಾಹೀರಾತು ಒಂದನ್ನು ಹಂಚಿಕೊಂಡಿದ್ದಾರೆ. ಇದಕ್ಕಾಗಿ ಸಂಪರ್ಕ ಮಾಡಲು ಮೊಬೈಲ್ ಸಂಖ್ಯೆ 8169695760 ಕೊಟ್ಟಿದ್ದಾರೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಸಚಿವ Satish Jarakiholi ಸಿಎಂ ಆಗುವಂತೆ ಹರಕೆ | Kannada News | Suvarna News
ಸತೀಶ್ ಜಾರಕಿಹೊಳಿ ಫೋಟೋಗೆ ಪುಣ್ಯಸ್ನಾನ: ಕರ್ನಾಟಕದ ಬೆಳಗಾವಿಯಿಂದ ಪ್ರಯಾಗಗರಾಜ್‌ನ ಕುಂಭಮೇಳಕ್ಕೆ ಹೋದ ಭಕ್ತರು ತ್ರಿವೇಣಿ ಸಂಗಮದಲ್ಲಿ ಸತೀಶ್ ಜಾರಕಿಹೊಳಿ ಅವರ ಫೋಟೋವನ್ನು ಮುಳುಗಿಸಿ ಪುಣ್ಯಸ್ನಾನ ಮಾಡಿಸಿದ್ದಾರೆ. ಈ ಮೂಲಕ ಸತೀಶ್ ಜಾರಕಿಹೊಳಿ ಅವರು ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ಜೊತೆಗೆ, ಐಪಿಎಲ್ ಕ್ರಿಕೆಟ್‌ನಲ್ಲಿ ಕಳೆದ 15 ವರ್ಷಗಳಿಂದ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡವು ಈಬಾರಿಯಾದರೂ ಟ್ರೋಫಿ ಗೆಲ್ಲಲಿ ಎಂದು ಹಲವು ಅಭಿಮಾನಿಗಳು ಆರ್‌ಸಿಬಿ ಜೆರ್ಸಿಗೆ ಪುಣ್ಯಸ್ನಾನ ಮಾಡಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳದ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಅಂಬಾನಿ ಕುಟುಂಬದ ನಾಲ್ಕು ತಲೆಮಾರು