ಸಿನಿಮಾರಂಗದಲ್ಲಿ ನಿರ್ದೇಶಕಿಯರು ಅಪರೂಪ. ಸ್ಯಾಂಡಲ್‌ವುಡ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಶೀತಲ್ ಶೆಟ್ಟಿ. ಹೌದು; ಅವರ ನಿರ್ದೇಶನದ ಪ್ರಥಮ ಚಿತ್ರಕ್ಕೆ ಸಿದ್ಧವಾಗುತ್ತಿದೆ. ಒಮ್ಮೆ ಚಿತ್ರ ಬಿಡುಗಡೆಯಾದರೆ ಜನ ಥಿಯೇಟರಲ್ಲಿ ಹೌಸ್‌ ಫುಲ್ ಆಗಬಹುದು. ಆಗ ಸೀಟ್ ಹಿಡಿಯುವುದೇ ಗುರಿಯಾಗಬಹುದು ಎನ್ನುವ ಆತ್ಮ ವಿಶ್ವಾಸ ಅವರಲ್ಲಿದೆ. ಆದರೆ ಕೊರೋನಾದಿಂದಾಗಿ ಮುಚ್ಚಿರುವ ಚಿತ್ರಮಂದಿರಗಳು ಯಾವಾಗ ತೆರೆಯಲಿವೆ ಎಂದು ಕಾಯುವುದೇ ಸಮಸ್ಯೆಯಾಗಿದೆ. ಮೊದಲ ಪ್ರಯತ್ನ ಮತ್ತು ಅದಕ್ಕೆ ಎದುರಾದ ಕೊರೊನಾ ಸಮಸ್ಯೆಯ ಬಗ್ಗೆ ಸುವರ್ಣ ನ್ಯೂಸ್ ಜತೆಗೆ ಮನಸು ತೆರೆದು ಮಾತನಾಡಿದ್ದಾರೆ ನಿರ್ದೇಶಕಿ ಶೀತಲ್ ಶೆಟ್ಟಿ.

- ಶಶಿಕರ ಪಾತೂರು

ನಿರ್ದೇಶಕಿಯಾಗುವ ಕನಸು ಮೂಡಿದ್ದು ಹೇಗೆ?
ಮೊದಲು ಸೃಷ್ಟಿಯಾಗಿದ್ದು ಕತೆ. ಅದು ಕೂಡ ನಾನು ಬರೆಯಬೇಕೆಂದು ಕುಳಿತು ಬರೆದಿದ್ದೇನಲ್ಲ. ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಬಿಡುವು ಸಿಕ್ಕಾಗ ಅನಿಸಿದ ವಿಚಾರಕ್ಕೆ ಕತೆಯ ರೂಪ ನೀಡುತ್ತಾ ಹೋದೆ. ಆದರೆ ಬರೆಯುತ್ತಿದ್ದ ಹಾಗೆ ಇದನ್ನೊಂದು ಸಿನಿಮಾ ಮಾಡಬಹುದು ಅನಿಸಿತು. ಬರೆದ ಮೇಲೆ ಯಾರಾದರೂ ನಿರ್ದೇಶಕ ಸ್ನೇಹಿತರಿಗೆ ಕೊಡೋಣ ಎಂದುಕೊಂಡಿದ್ದೆ. ಅವರೆಲ್ಲ 'ನಿಮ್ಮ ವಿಶನ್ ನೀವೇ ಮಾಡಿದರೆ ಚೆನ್ನಾಗಿರುತ್ತದೆ' ಎಂದು ಪ್ರೋತ್ಸಾಹಿಸಿದರು. ಅಲ್ಲಿಂದಲೇ ನಿರ್ದೇಶನದ ಬಗ್ಗೆ ಯೋಚಿಸತೊಡಗಿದೆ. ಅದು ಬಾಯಲ್ಲಿ ಕತೆ ಹೇಳಿದಷ್ಟು ಸುಲಭವಲ್ಲ ಎಂದು ಗೊತ್ತಿತ್ತು. ಆದರೆ ಅದನ್ನು ದೃಶ್ಯವಾಗಿ ಮೂಡಿಸಬೇಕಲ್ಲ? ಅದಕ್ಕಾಗಿಯೇ ಒಂದೆರಡು ಶಾರ್ಟ್ ಮೂವಿ ಮಾಡಿದೆ. ಆಗ ವಿಶುವಲಿ ಕತೆ ಹೇಳಬಲ್ಲೆ ಎಂದು ಧೈರ್ಯ ಬಂತು. ಅದಕ್ಕೂ ಮೊದಲು ನನ್ನದೇ ಆದ ಒಂದು ಟೀಮ್ ಬಿಲ್ಡ್ ಮಾಡಿದ್ದೆ.

ಹುಂಬತನ ಬಿಡಿ, ಮಾಸ್ಕ್ ಧರಿಸಿ

ನಿಮ್ಮ ತಂಡದ ಬಗ್ಗೆ ಹೇಳಿ
ನನ್ನೊಂದಿಗೆ ನಿರ್ದೇಶನ ವಿಭಾಗ ಸೇರಿದಂತೆ ತುಂಬ ಮಂದಿ ಹೊಸಬರೇ ಇದ್ದಾರೆ. ಅವರನ್ನೆಲ್ಲ ಆಡಿಶನ್ ಮೂಲಕ ಆಯ್ಕೆ ಮಾಡಿದ್ದೇನೆ. ಮೊದಲು ಆನ್ಲೈನಲ್ಲಿ ಒಂದಷ್ಟು ಪ್ರಶ್ನೆಗಳನ್ನು ಕೊಟ್ಟು ಅದಕ್ಕೆ  ಆಕರ್ಷಕವಾಗಿ ಸರಿ ಉತ್ತರ ನೀಡಿದವರನ್ನು ಕರೆಸಿ , ಆಡಿಶನ್ ಮಾಡಿ, ಸಂದರ್ಶಿಸಿ ನಾನೇ ತಂಡ ಮಾಡಿದೆ. ಕೆಲವರನ್ನು ಬರವಣಿಗೆ ನೋಡಿ, ಇನ್ನು ಕೆಲವರ ಎಡಿಟಿಂಗ್, ಕ್ಯಾಮೆರಾ ವಿಭಾಗದಲ್ಲಿನ ಆಸಕ್ತಿಗಳನ್ನು ಗಮನಿಸಿ ತಂಡಕ್ಕೆ ಸೇರಿಸಿದೆ. ಮುಖ್ಯವಾಗಿ ನನ್ನ ಸಿನಿಮಾದಲ್ಲಿ ಎಂಥವರು ಬೇಕಾಗುತ್ತಾರೆ, ನನ್ನ ಸಿನಿಮಾಗೆ ಏನು ಬೇಕು ಎನ್ನುವುದನ್ನು ನೋಡಿಕೊಂಡು ಆಯ್ಕೆ ಮಾಡಿದೆ.  ಆ ತಂಡ ಇರಿಸಿಕೊಂಡೇ ಕಿರುಚಿತ್ರ ಮಾಡಿದೆ. ನನ್ನ ಜತೆ ಆಡಿಶನ್ ನಡೆಸಲು ಇಬ್ಬರು ಪಾಲ್ಗೊಂಡಿದ್ದರು. ಅವರು ನನಗೆ ಬೆನ್ನೆಲುಬಾಗಿದ್ದರು. ಒಟ್ಟಿನಲ್ಲಿ ವಿಂಡೋ ಸೀಟ್ ಒಳಗೆ ಬಂದು ಸೇರಿದವರೆಲ್ಲ ಒಳ್ಳೆಯ ಹುಡುಗರೇ. ಒಬ್ಬಳು ಹುಡುಗಿ ಕೂಡ ಇದ್ದಾಳೆ. 

ಕಲಾವಿದರಿಂದ ನಟನೆ ತೆಗೆಸಿದ ಅನುಭವ ಹೇಗಿತ್ತು?
ಕಲಾವಿದರ ವಿಚಾರಕ್ಕೆ ಬಂದರೆ ಎಲ್ಲರೂ ಚಿತ್ರರಂಗದಲ್ಲಿ ಹೆಸರು ಮಾಡಿದವರೇ. ಹಾಗಾಗಿ ಅವರಿಗೆ ನಟಿಸಿ ತೋರಿಸಬೇಕಾದ ಅಗತ್ಯ ಇರಲಿಲ್ಲ. ಸನ್ನಿವೇಶ ವಿವರಿಸಿದರೆ ಅರ್ಥ ಮಾಡಿಕೊಳ್ಳುತ್ತಿದ್ದರು. ಚಿತ್ರದ ನಾಯಕ ನಿರೂಪ್ ಭಂಡಾರಿ ಈಗಾಗಲೇ ಹೆಸರು ಮಾಡಿದವರು. ಯಶಸ್ವಿ ಚಿತ್ರ ನೀಡಿದವರು. ನಾನು ಎಷ್ಟೇ ಆದರೂ ಮೊದಲ ಚಿತ್ರದ ನಿರ್ದೇಶಕಿ. ಆದರೆ ನನಗೆ ಆ ಫೀಲ್ ಬಾರದ ಹಾಗೆ ಸಪೋರ್ಟಿವ್ ಆಗಿ ನಿಂತಿದ್ದು ನಿರೂಪ್ ಅವರ ದೊಡ್ಡ ಗುಣ. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಇಬ್ಬರು ನಾಯಕಿಯರು. ಅದರಲ್ಲಿ ಅಮೃತಾ ಅಯ್ಯಂಗಾರ್ ಅವರಂತೂ ಸೂರಿಯವರ `ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ನಾಯಕಿಯಾದವರು. ಆದರೆ ಅಂಥದೊಂದು ಹಮ್ಮುಬಿಮ್ಮುಗಳಿಲ್ಲದೆ ತುಂಬ ಚೆನ್ನಾಗಿ ನನ್ನೊಂದಿಗೆ ಹೊಂದಿಕೊಂಡಿದ್ದರು. ನಟನೆಯ ವಿಚಾರದಲ್ಲಿ ಇಬ್ಬರೂ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ. ಇವರ ಜತೆಯಲ್ಲಿ ರವಿಶಂಕರ್, ಕಾಮಿಡಿ ಕಿಲಾಡಿ ಸೂರಜ್, ಚಂದನ್ ಮೊದಲಾದವರು ಇದ್ದಾರೆ. ನಂದಕುಮಾರ್ ಎನ್ನುವ ಹೊಸ ಹುಡುಗ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರ ನೋಡಿದ ಬಳಿಕ ಲೇಖಾ ಎನ್ನುವ ರಂಗಭೂಮಿ ಕಲಾವಿದೆ ನಿರ್ವಹಿಸಿರುವ ಪಾತ್ರವಂತೂ ಖಂಡಿತವಾಗಿ ನಿಮ್ಮ ತಲೆಯಲ್ಲಿ ಉಳಿದು ಕಾಡಲಿದೆ. 

ಆತ್ಮಕಥೆ ಬರೆಯುತ್ತಿದ್ದಾರೆ ಪ್ರಣಯರಾಜ

ಚಿತ್ರ ಮತ್ತು ಕತೆಯ ಬಗ್ಗೆ ಏನು ಹೇಳುತ್ತೀರಿ? 
ಇದು ಒಂದು ಎಲ್ಲ ಭಾವಗಳ ಸಂಗಮವೆನಿಸುವ ಚಿತ್ರ. ನಿರೂಪ್ ಈ ಹಿಂದೆ ನಟಿಸಿದ ಚಿತ್ರಗಳಲ್ಲಿ ಕಂಡಿರದ ಮಾದರಿಯ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕವಿರಾಜ್ ಮತ್ತು ಯೋಗರಾಜ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಮುಂದೆ ಒಂದೊಂದಾಗಿ ನೀಡುತ್ತೇನೆ. ಯಾಕೆಂದರೆ ಪ್ರಸ್ತುತ ಎಲ್ಲ ರಂಗಗಳಂತೆ ಚಿತ್ರರಂಗದ ಪರಿಸ್ಥಿತಿಯೂ ಕಷ್ಟದಲ್ಲಿದೆ. ಚಿತ್ರಮಂದಿರಗಳು ತೆರೆಯಲು ಕಾಯಬೇಕಾಗಿದೆ. ನನ್ನ ಸಿನಿಮಾ ದೃಶ್ಯಾತ್ಮಕವಾಗಿ ಚೆನ್ನಾಗಿ ಕಾಣಲು, ಸೌಂಡ್, ಮ್ಯೂಸಿಕ್ ವಿಚಾರಗಳಲ್ಲಿ ತಂತ್ರಜ್ಞರ ಜತೆ ಕುಳಿತು ತುಂಬ ಕೆಲಸ ಮಾಡಿದ್ದೇನೆ. ಅಷ್ಟೆಲ್ಲ ಮಾಡಿದಂಥ ಚಿತ್ರವನ್ನು ಯಾರೋ ಒಂದಷ್ಟು ಮಂದಿ ಒಟಿಟಿ  ಮೂಲಕ ಮೊಬೈಲಲ್ಲೇ ನೋಡಿ ಮರೆತರೆ ನಿಜಕ್ಕೂ ಬೇಸರವಾಗುತ್ತದೆ. ಹಾಗಾಗಿ ಥಿಯೇಟರ್ ನಾರ್ಮಲ್ ಆಗುವ ತನಕ ಕಾಯುವ ಮನಸ್ಸಿದೆ.  ಸದ್ಯಕ್ಕೆ ಕೊರೊನಾ ದೂರಾಗಲು ಕಾಯುವುದು ಬಿಟ್ಟರೆ ಯಾವ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ಒಟ್ಟಿನಲ್ಲಿ ಚಿತ್ರ ನೋಡಿದ ಹೆಚ್ಚಿನ ಮಂದಿಗೆ ಮೆಚ್ಚುಗೆಯಾಗಲಿದೆ ಎನ್ನುವ ಭರವಸೆ ನೀಡಬಲ್ಲೆ.