ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಪ್ರಣಯರಾಜ. ಮುಖ ನೋಡಿದರೆ ಇಂದಿಗೂ ಅರಳಿ ನಿಂತ ರೋಜಾ. ಎಪ್ಪತ್ತೈದರ ಹೊಸ್ತಿಲಲ್ಲಿ ಯಾವ ನಾಯಕನೂ ಇಷ್ಟೊಂದು ಕಳೆಕಳೆಯಾಗಿ ಕಾಣುವುದು ಕಷ್ಟ. ಹಾಗಾಗಿಯೇ ಪಾತ್ರದಲ್ಲಿ ತಾತನಾದರೂ ಹೆಣ್ಣು ಮಕ್ಕಳಿಗೆ ಶ್ರೀನಾಥ್ ಅಂದರೆ ಇಂದಿಗೂ ಇಷ್ಟ. ಅವರೂ ಅಷ್ಟೇ ಇಂದಿಗೂ ಕಾರು ತೆಗೆದುಕೊಂಡು ಹೋಗಿ ಸುತ್ತಾಡಿ ಬರುತ್ತಾರೆ. ಆರೋಗ್ಯ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಈಗಲೂ ಸಿನಿಮಾಗಳಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ಇಂದಿಗೂ ಕೂಡ ಶ್ರೀಮಂತ ತಂದೆ, ಮನಸೆಳೆವ ಮಾವನ ಪಾತ್ರಗಳೆಂದರೆ ನಿರ್ದೇಶಕರಿಗೆ ನೆನಪಾಗುವುದೇ ಶ್ರಿನಾಥ್. ಆದರೆ ಶ್ರೀನಾಥ್ ಮಾತ್ರ ಪಿ.ಎಚ್ ವಿಶ್ವನಾಥ್ ರ `ಸುಳಿ'ಯಲ್ಲಿ ಮಾಡಿದಂಥ ವೈವಿಧ್ಯಮಯ ಪಾತ್ರವನ್ನು ಬಯಸುತ್ತಾರೆ. ಪುಟ್ಟಣ್ಣ ಕಣಗಾಲ್ ಗರಡಿಯಿಂದ ಬಂದವರು ಎಂದಮೇಲೆ ನಟನೆಯ ಬಗ್ಗೆ ಹೇಳಲೇಬೇಕಿಲ್ಲ. ಆದರೆ ಇಷ್ಟೊಂದು ಲವಲವಿಕೆಯಲ್ಲಿದ್ದ ಶ್ರೀನಾಥ್ ಅವರು,  ದೇಶ ದಿಢೀರ್ ಲಾಕ್ಡೌನ್ ಆಗಿ ಮನೆಯಲ್ಲಿರಬೇಕಾದಾಗ ಹೇಗಿದ್ದರು? ಅವರಿಗೆ ಆತ್ಮಕತೆ ಬರೆಯುವ ಯೋಚನೆ ಬಂದಿದ್ದೇಕೆ? ಅದನ್ನು ಕಾರ್ಯರೂಪಕ್ಕೆ ತರುತ್ತಿರುವವರು ಯಾರು? ಮೊದಲಾದ ಪ್ರಶ್ನೆಗಳಿಗೆ ಫಿಲ್ಮೀಬೀಟ್ ಮೂಲಕ ಉತ್ತರಿಸಿದ್ದಾರೆ.

ಶಶಿಕರ ಪಾತೂರು

ಅನಿರೀಕ್ಷಿತವಾಗಿ ಮನೆಯೊಳಗಷ್ಟೇ ಕಾಲ ಕಳೆಬೇಕಾದಾಗ ಕಷ್ಟವಾಯಿತೇ?

ಖಂಡಿತವಾಗಿ ಇಲ್ಲ. ನನಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಮನೆಯಲ್ಲಿಯೂ ಕೆಲಸಗಳಿರುತ್ತವಲ್ಲ? ಮಾಡಿದೆ. ಬಿಡುವಲ್ಲಿ ಸ್ನೇಹಿತರಿಗೆ ಫೋನ್ ಮಾಡಿ ಮಾತನಾಡಿದೆ. ಮುಖ್ಯವಾಗಿ ಬದುಕಿನ ಎಲ್ಲ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅದು ಒಳ್ಳೆಯದಿರಲಿ ಕೆಟ್ಟದ್ದಿರಲಿ, ನನ್ನ ಈ ಎಪ್ಪತ್ತೈದು ವರ್ಷಗಳ ಬದುಕಿನಲ್ಲಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವುಗಳನ್ನು ನೆನಪಿಸಿಕೊಳ್ಳಲು ಮೂರು ತಿಂಗಳು ಸಾಕಾಗದು. ಇನ್ನೂ ಒಂದು ಮೂರು ವರ್ಷವೇ ಬೇಕಾಗಬಹುದು. ನೆನಪಾದ ಹಾಗೆ ಗುರುತು ಹಾಕಿಕೊಳ್ಳುತ್ತೇನೆ.  

ಅಂಬರೀಷನಂಥ ನಟ ಈಗೆಲ್ಲಿದ್ದಾರೆ..?: ದೊಡ್ಡಣ್ಣ

ಆತ್ಮಕತೆ ಬರೆಯುವ ಯೋಜನೆ ಹಾಕಿದ್ದೀರ?

ಬೆಂಗಳೂರಿನದ್ದೇ ಕಾಲೇಜ್‌ ಪ್ರೊಫೆಸರ್ ಒಬ್ಬರು ಬರೆಯಲು ಮುಂದಾಗಿದ್ದಾರೆ. ಬರೆಯುತ್ತಿದ್ದಾರೆ. ಅವರಿಗೆ ನಾನೇ ಎಲ್ಲ ಮಾಹಿತಿಗಳನ್ನು ಕೊಡುತ್ತಿದ್ದೇನೆ. ಅವರು ವಿಷಯ ತೆಗೆದುಕೊಂಡು ಹೋಗಿದ್ದಾರೆ. ನಾನು ಕಂಡ ಸಾವಿರಾರು ಜನರ ಬಗ್ಗೆ ನೆನಪಿಸಿಕೊಳ್ಳುತ್ತಿದ್ದೇನೆ. ಇಷ್ಟೆಲ್ಲ ನಡೆದಿತ್ತಾ ನನ್ನ ಜೀವನದಲ್ಲಿ? ಎನ್ನುವ ಭಾವನೆ ಮೂಡುತ್ತಿದೆ. ಪುಸ್ತಕ ಇನ್ನು ಕೂಡ ಪ್ರಾಥಮಿಕ ಹಂತದಲ್ಲಿದೆ. ಹಾಗಾಗಿ ಅದಕ್ಕೆ ಹೆಸರಿಡುವ ಪ್ರಯತ್ನವನ್ನು ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ನಿಮ್ಮ ಮುಂದೆ ತರಲಿದ್ದೇನೆ. ಇದೇ ವರ್ಷಾಂತ್ಯದೊಳಗೆ ತರಬೇಕು ಎನ್ನುವ ಯೋಜನೆ ಇದೆ. ನೋಡೋಣ. 

ಈಗ ಮತ್ತೆ ಅದಕ್ಕೆ ಸೇರಿಸಬೇಕಾದ ವಿಚಾರಗಳನ್ನು ಗುರುತು ಹಾಕುತ್ತಿದ್ದೀರ?

ಈಗ ಗುರುತು ಹಾಕಿಕೊಳ್ಳುತ್ತಿರುವ ವಿಚಾರಗಳು ನನ್ನ ಆತ್ಮತೃಪ್ತಿಗೆ ಮಾತ್ರ! ಅವುಗಳನ್ನು ಎಲ್ಲಿಯೂ ಹೊರಗೆ ಹೇಳಲು ನಾನು ಬಯಸುವುದಿಲ್ಲ. ಇವೆಲ್ಲ ಆತ್ಮಕತೆಯಲ್ಲಿ ಹೇಳಿದ  ಘಟನೆಗಳಿಗೆ ಸಂಬಂಧಿಸಿದ ಉಪಕತೆಗಳಂತೆ ಬರುವ ಘಟನೆಗಳು. ನಮ್ಮಿಂದಾದ ಪ್ರಮಾದ, ಅವುಗಳಿಂದ ನಾನು ಕಲಿತಿದ್ದೇನು ಎನ್ನುವುದರ ಜತೆಗೆ ಆ ಸಂದರ್ಭದಲ್ಲಿ ಇತರರ ವರ್ತನೆಗಳಲ್ಲಿ ಒಳ್ಳೆಯದು ಕೆಟ್ಟದ್ದು ನನಗೆ ಗೊತ್ತು. ಆದರೆ ಅವುಗಳನ್ನು ನಾನು ಹೇಳುವುದಿಲ್ಲ. ಹೇಳಲೂಬಾರದು. ಹಾಗಾಗಿ ನನ್ನ ಆತ್ಮಕತೆಯಲ್ಲಿ ಇಂಥ ಬಹಳಷ್ಟು ವಿಚಾರಗಳು ಬರುವುದಿಲ್ಲ. ಈಗ ಗುರುತು ಮಾಡಿಕೊಂಡು ಸುಮ್ಮನೆ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತೇನೆ.  ಅವೆಲ್ಲವನ್ನು ಬರೆಯುವುದರಿಂದ ಈಗಲೂ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದುದರಿಂದ ಅವುಗಳ ತಂಟೆಗೆ ಹೋಗದಿರುವುದು ಉತ್ತಮ ಎಂದು ತೀರ್ಮಾನಿಸಿದ್ದೇನೆ. 

ಅಂಥ ಯೋಚನೆಗಳಿಂದ ಚಿಂತೆ ಆಗುವುದಿಲ್ಲವೇ?

ಜೀವನ ಬಂದಂತೆ ಸ್ವೀಕರಿಸುವವನು ನಾನು. ಹಾಗಾಗಿ ಯಾವುದಕ್ಕೂ ಹೆಚ್ಚು ಯೋಚಿಸಲ್ಲ. ಇದೀಗ ಕೊರೊನ ಬಂದಿದೆ. ಆ ಬಗ್ಗೆ ನಾನು ಯೋಚಿಸಿ ಉಪಯೋಗ ಇಲ್ಲ. ಯಾಕೆಂದರೆ ನಾವು ಅದರಲ್ಲಿ ಪರಿಣಿತರಲ್ಲ. ಅದಕ್ಕೆ ಔಷಧಿ ಕಂಡು ಹಿಡಿಯಬೇಕಾದವರೇ ಯೋಚಿಸಬೇಕು. ನನ್ನ ಯೋಚನೆಗಳಲ್ಲಿ ಚಿಂತೆ ಇಲ್ಲ. ಹಳೆಯ ನೆನಪುಗಳಿಂದ  ಬದುಕಿನ ರೂಪು ಸಿಗುತ್ತಾ ಹೋಗುತ್ತದೆ. ಏಕಾಂತದಲ್ಲಿ ನಮ್ಮನ್ನು ವಿಮರ್ಶೆ ಮಾಡುತ್ತಾ ಹೋಗುವಾಗ ಒಂದು ರೀತಿಯ ತೃಪ್ತಿ ದೊರಕುತ್ತದೆ. ಅದರಲ್ಲಿ ಖುಷಿಯನ್ನಷ್ಟೇ ಜ್ಞಾಪಿಸಿಕೊಂಡಿಲ್ಲ.`ಅಟಾಚ್ಮೆಂಟ್ ವಿತ್ ಡಿಟಾಚ್ಮೆಂಟ್' ಎನ್ನುವುದು ನನ್ನ ಬದುಕಿನ ರೀತಿ. ಇದರ ನಡುವೆ ಹೊಸ ಆಲೋಚನೆ ಒಂದು ಮೊಳಕೆ ಬಂದಿದೆ. ಅದು ಸಸಿಯಾದಾಗ ಹೇಳುತ್ತೇನೆ. ಮೊಳಕೆಯಲ್ಲೇ ಹೇಳಿದರೆ ಚಿವುಟಿದಂತೆ ಆದೀತು!  ಸಸಿಯಾಗುವ ವೇಳೆ ಖಂಡಿತವಾಗಿ ಮಾಧ್ಯಮದವರ ಸಹಕಾರವೂ ಬೇಕಾಗುತ್ತದೆ. ಆಗ ಆ ಬಗ್ಗೆ ನಿಮಗೆ ತಿಳಿಸುತ್ತೇನೆ.

ನಿಮ್ಮ ಪ್ರಕಾರ ಸಿನಿಮಾರಂಗ ಚೇತರಿಸಲು ಇನ್ನೆಷ್ಟು ಸಮಯ ಬೇಕಾದೀತು?

ಸಿನಿಮಾ ಬಿಡುಗಡೆಯ ವಿಚಾರಕ್ಕೆ ಬಂದರೆ ಈಗ ಒಟಿಟಿ ಫ್ಲಾಟ್ಫಾರ್ಮ್ ಸದ್ದು ಮಾಡುತ್ತಿದೆ. ನಾವು ಬೆಳೆದ ಬಂದ ರೀತಿ ಯೋಚಿಸಿದಾಗ ಸಿಂಗಲ್ ಥಿಯೇಟರೇ ಇರಬೇಕು ಅನಿಸುತ್ತದೆ. ಆದರೆ ಕಾಲಾಯ ತಸ್ಮೈ ನಮಃ. ಈಗಿನ ಕಾಲದ ಮಂದಿಗೆ ಹೇಗೆ ಬೇಕೋ ಹಾಗೆ. ನಾವು ಇದು ಕೆಟ್ಟದು ಎಂದುಕೊಂಡು ಏನಾದರೂ ಹೇಳಿದರೆ, ಅದರಿಂದ ಒಳ್ಳೆಯದಾಗಬಹುದು. ಹಾಗಾಗಿ ಎಲ್ಲದಕ್ಕೂ `ಕಾಲಾಯ ತಸ್ಮೈ ನಮಃ' ಎನ್ನಬೇಕಷ್ಟೇ. ನಾನೇ `ಸುಳಿ' ಎನ್ನುವ ಚಿತ್ರ ಮಾಡಿದಾಗ, ಸಿಂಗಲ್ ಥಿಯೇಟರಲ್ಲಿ ಅದರ ಬಿಡುಡೆಗೆ ಪ್ರಾಬ್ಲಮ್ ಬಂತು.  ಆ ರೀತಿಯ ತೊಂದರೆಗಳು ನಮ್ಮ ಕಾಲದಲ್ಲಿ ಆಗುತ್ತಿರಲಿಲ್ಲ. ಶೂಟಿಂಗ್ ವಿಚಾರಕ್ಕೆ ಬಂದರೆ `ಕ್ಷತ್ರಿಯ' ಎನ್ನುವ ಸಿನಿಮಾ ಚಿರಂಜೀವಿ ಸರ್ಜ ಜತೆಗೆ ಮಾಡುತ್ತಿದ್ದೆ. ಅದು ಮುಂದೇನಾಗುತ್ತದೆ ಎಂದು ಗೊತ್ತಿಲ್ಲ. ಆಯುರ್ವೇದದ ಕುರಿತಾದ ಒಂದು ಸಿನಿಮಾ ಮಾಡಿದ್ದೇನೆ. ಅದಕ್ಕೆ ಡಬ್ಬಿಂಗ್ ಮಾಡಬೇಕಿದೆ. `ಗಾಳಿಪಟ' ಸೆಕೆಂಡ್ ಚಿತ್ರದ ಡಬ್ಬಿಂಗ್ ಇದೆ. ಹೊಸ ಚಿತ್ರಗಳ ಮಾತುಕತೆ ನಡೆಯುತ್ತಿದೆ.