ನಿರ್ದೇಶಕ ರಾಜಮೌಳಿ ತಮ್ಮ ‘ಆರ್‌ಆರ್‌ಆರ್‌’ ಚಿತ್ರದ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಎರಡು ಬಾರಿ ಬಂದು ಹೋಗಿದ್ದಾರೆ. ಈ ಹೊತ್ತಲ್ಲಿ ಅವರ ವರ್ತನೆ ಮೆಚ್ಚುವಂತಿತ್ತು.

ಇಬ್ಬರು ಸೂಪರ್‌ಸ್ಟಾರ್‌ಗಳು, ಆಲಿಯಾ ಭಟ್‌ರಂತಹ ನಟಿಯನ್ನು ಕೂಡ ಅವರು ಮಾತೇ ಆಡದೆ ನಿಯಂತ್ರಿಸಬಲ್ಲರು. ನೂರಾರು ಮಂದಿ ತಂಡವನ್ನು ಮುತ್ತಿಗೆ ಹಾಕಿದಾಗ ಒಂದೇ ಒಂದು ಕೂಗಿಗೆ ಎಲ್ಲರನ್ನೂ ತಡೆದು ನಿಲ್ಲಿಸಿದರು. ಟೀಸರ್‌ ತಮಗೆ ಬೇಕಾದ ಹಾಗೆ ಪ್ರದರ್ಶನ ಆಗಲಿಲ್ಲ ಎಂದಾಗ ತಕ್ಷಣ ಎದ್ದು ನಿಂತು ಪ್ರದರ್ಶನ ನಿಲ್ಲಿಸಿ ಸರಿ ಮಾಡಿಸಿ ಮತ್ತೆ ಶುರು ಮಾಡಿದರು. ಎಲ್ಲರೂ ಹೇಳುವ ಹಾಗೆ ರಾಜಮೌಳಿಗೆ ಏನು ಬೇಕು ಅನ್ನುವುದು ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ಆ ಕಾರಣದಿಂದಲೇ ಅವರು ಎಲ್ಲರಿಗೂ ಗೌರವಿಸುವ ನಿರ್ದೇಶಕರಾಗಿದ್ದಾರೆ.

ಈ ಸಂದರ್ಭದಲ್ಲಿ ಅವರು ಹೇಳಿದ ಒಂದೆರಡು ಮಾತುಗಳು ಮನನ ಮಾಡುವಂತಿದೆ.

1. ಕತೆಯ ಹಂತದಲ್ಲಿ ಕತೆ ನನಗೆ ವಾವ್‌ ಅನ್ನಿಸದೇ ಇದ್ದರೆ ನಾನು ಆ ಸಿನಿಮಾ ಮಾಡುವುದಿಲ್ಲ. ಲಾರ್ಜರ್‌ ದ್ಯಾನ್‌ ಲೈಫ್‌ ಸಿನಿಮಾ ಮಾಡುವವನು ನಾನು. ವಾವ್‌ ಫ್ಯಾಕ್ಟರ್‌ ಹೆಚ್ಚಿದ್ದಷ್ಟೂನಾನು ಸಿನಿಮಾ ಮಾಡಲು ಮುಂದಾಗುತ್ತೇನೆ. ಇಲ್ಲದಿದ್ದರೆ ನನ್ನ ಸಮಯ ಕೊಡುವುದಕ್ಕೆ ನಾನು ಮುಂದಾಗುವುದಿಲ್ಲ.

2. ಭಾವನೆಗಳು ಮುಖ್ಯ. ಭಾವನೆಗಳಿಲ್ಲದೆ ನಾನು ಸಿನಿಮಾ ಮಾಡುವುದಿಲ್ಲ. ಹಾಡಲ್ಲಿಯೂ ಫೈಟ್‌ನಲ್ಲಿಯೂ ಎಲ್ಲದರ ಹಿಂದೆಯೂ ಇಮೋಷನ್‌ ಇರಬೇಕು. ಇಮೋಷನ್‌ಗಳಿಲ್ಲದ ನನ್ನ ಸಿನಿಮಾ ಇಲ್ಲ.

3. ಕತೆಗೆ ಒಂದು ಗ್ರಾಮರ್‌ ಇರುತ್ತದೆ. ಅದೇ ಥರ ನವರಸಗಳಿಗೂ ಗ್ರಾಮರ್‌ ಇರುತ್ತದೆ. ಒಂದು ರಸ ಬಂದ ಮೇಲೆ ಇನ್ನೊಂದು ರಸ ಬರಬೇಕು. ಅದಕ್ಕೊಂದು ಕ್ರಮಬದ್ಧತೆ ಇರುತ್ತದೆ. ಬೇರೆ ಬೇರೆ ರಸ ಸೇರಿಸಬಾರದು. ಚಂದದ ನಾಯಕಿ ಇದ್ದಾಳೆ ಅನ್ನುವ ಕಾರಣಕ್ಕೆ ಅನವಶ್ಯಕವಾಗಿ ನಾನು ಪ್ರೇಮ ದೃಶ್ಯಗಳನ್ನು ಸೇರಿಸುವುದಿಲ್ಲ. ಕತೆ ಬಯಸಿದರೆ ಮಾತ್ರ ಪ್ರೇಮ ದೃಶ್ಯ ಇರುತ್ತದೆ. ಕತೆ ನನಗೆ ಎಲ್ಲಕ್ಕಿಂತ ಮುಖ್ಯ.

4. ಸ್ಟಾರ್‌ಗಳು, ದೊಡ್ಡ ನಿರ್ಮಾಣ ಸಂಸ್ಥೆ ಇತ್ಯಾದಿ ಇತ್ಯಾದಿ ಎಲ್ಲವೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬರುವವರೆಗೆ ಮಾತ್ರ. ಸಿನಿಮಾ ಶುರುವಾದ 10 ನಿಮಿಷದ ನಂತರ ಪಾತ್ರಗಳು ಮಾತ್ರ ಮನಸ್ಸಲ್ಲಿ ಉಳಿಯುತ್ತವೆ. ಆ ಕಾರಣಕ್ಕೆ ನಾನು ನಂಬಬೇಕಾದದ್ದು ಕತೆಯನ್ನು ಮಾತ್ರ ಎಂಬುದು ತಿಳಿದಿದೆ.

ಸ್ಟಾರ್‌ಗಳು, ದೊಡ್ಡ ಬಜೆಟ್‌ ಇತ್ಯಾದಿ ಎಲ್ಲವೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಒಳಗೆ ಕರೆದುಕೊಂಡು ಬರುವವರೆಗೆ ಮಾತ್ರ ಕೆಲಸ ಮಾಡುತ್ತದೆ. ಸಿನಿಮಾ ಶುರುವಾಗಿ 10 ನಿಮಿಷ ಆದ ಮೇಲೆ ಪಾತ್ರಗಳು ಮಾತ್ರ ಉಳಿಯುತ್ತವೆ. ನಾನು ಎಮೋಷನ್‌ಗಳನ್ನು ನಂಬಿ ಸಿನಿಮಾ ಮಾಡುವವನು. ಪ್ರತಿಯೊಂದರಲ್ಲೂ ಎಮೋಷನ್‌ ಇರುತ್ತದೆ. ಎಮೋಷನ್‌ ಇಲ್ಲದೆ ನನ್ನ ಸಿನಿಮಾ ಇಲ್ಲ.- ಎಸ್‌ಎಸ್‌ ರಾಜಮೌಳಿ

5. ಪ್ರತಿಯೊಂದು ಸಿನಿಮಾವನ್ನೂ ನಾನು ನನ್ನ ಮೊದಲ ಸಿನಿಮಾ ಎಂದು ಭಾವಿಸಿಕೊಂಡೇ ಮಾಡುತ್ತೇನೆ. ನಾನು ಯೋಚಿಸಿದ ದೃಶ್ಯಗಳನ್ನು ಸಮರ್ಥವಾಗಿ ದಾಟಿಸಲು ಸೂಕ್ತವಾದ ಕಲಾವಿದರು ಬೇಕು. ಸಮರ್ಥ ಕಲಾವಿದರ ಆಯ್ಕೆಯಿಂದಲೇ ನನಗೆ ಗೆಲುವು ಸಿಕ್ಕಿದೆ ಎಂದು ಭಾವಿಸುತ್ತೇನೆ.

ಕನ್ನಡದಲ್ಲೇ ಮಾತನಾಡಿದ ಜೂ.ಎನ್‌ಟಿಆರ್‌

ಜೂ.ಎನ್‌ಟಿಆರ್‌ ತಾಯಿ ಕುಂದಾಪುರದವರು. ಆ ವಿಚಾರ ನೆನಪಿಸಿಕೊಂಡೇ ಮಾತು ಶುರು ಮಾಡಿದ ಜೂ.ಎನ್‌ಟಿಆರ್‌, ‘ನನ್ನ ಅಮ್ಮ ಇಲ್ಲಿಯವರು. ನಾನು ಹುಟ್ಟಿಬೆಳೆದಿದ್ದೆಲ್ಲಾ ಹೈದರಾಬಾದ್‌. ನನ್ನ ಕನ್ನಡದಲ್ಲಿ ತುಂಬಾ ವ್ಯತ್ಯಾಸ ಇದೆ. ತಪ್ಪಾದರೆ ಕ್ಷಮಿಸಿ. ಕನ್ನಡದಲ್ಲಿ ಡಬ್‌ ಮಾಡುವ ವಿಚಾರ ಗೊತ್ತಾದಾಗ ಅಮ್ಮನವರು ಕೇರ್‌ಫುಲ್‌ ಆಗಿ ಮಾಡು, ಅಲ್ಲಿ ನಮ್ಮೋರು ಇದ್ದಾರೆ. ತಲೆ ಬಗ್ಗಿಸುವ ಹಾಗೆ ಮಾಡಬೇಡ. ಹೇಳದಿದ್ದರೂ ಪರವಾಗಿಲ್ಲ, ಹೇಳಿದರೆ ಸರಿಯಾಗಿ ಹೇಳು ಎಂದು ಹೇಳಿದ್ದರು. ಕನ್ನಡದಲ್ಲಿ ಡಬ್‌ ಮಾಡಿದ್ದಕ್ಕೆ ಖುಷಿ ಇದೆ’ ಎಂದರು.

ತಂದೆಯವರು ಸಿಪಾಯಿಯಲ್ಲಿ ಮಾಡಿದಂತೆ ನಾನೂ ಕನ್ನಡದಲ್ಲಿ ಸಿನಿಮಾ ಮಾಡಬೇಕು ಅಂತ ಕಾಯುತ್ತಿದ್ದೇನೆ. ಆರ್‌ಆರ್‌ಆರ್‌ ಬಂದ ಮೇಲೆ ಯಾರಾದರೂ ಒಳ್ಳೆಯ ಪಾತ್ರ ಕೊಡುತ್ತಾರಾ ನೋಡಬೇಕು.- ರಾಮ್‌ಚರಣ್‌ತೇಜಾ

"