ನಟನಾಗಬೇಕೆಂದು ಬಂದೆ, ಹೀರೋ ಆಗಿದ್ದು ಬೋನಸ್: ನಾಗಭೂಷಣ್
ಇವೆಲ್ಲ ಒಂಥರಾ ಬಯಸದೇ ಬಂದ ಭಾಗ್ಯಗಳು. ಹೀರೋ ಆಗ್ಬೇಕು ಅಂತಾಗ್ಲಿ, ಈ ರೀತಿ ಎಲ್ಲಾ ಸಿನಿಮಾ ಮಾಡಬೇಕು ಅನ್ನೋದಾಗಲಿ ನನ್ನ ಮನಸ್ಸಲ್ಲಿ ಇರಲಿಲ್ಲ. ಒಳ್ಳೆ ನಟ ಆಗಬೇಕು ಅನ್ನೋದಷ್ಟೇ ನನಗಿದ್ದದ್ದು.
ಪ್ರಿಯಾ ಕೆರ್ವಾಶೆ
* ಸಿಎಂ ಟ್ರೇಲರ್ ನೋಡಿ ಶಹಭಾಸ್ ಅಂದರಂತೆ?
ಹೌದು. ಅವರೂ ಹಳ್ಳಿ ಹಿನ್ನೆಲೆಯಿಂದ ಬಂದವರು, ಅದಲ್ಲದೇ ಮೈಸೂರು ಸೀಮೆಯವರು. ನಮ್ಮ ಸಿನಿಮಾ ಅಚ್ಚ ಹಳ್ಳಿ ಸೊಗಡಿನದು. ಮಳವಳ್ಳಿ- ಮಂಡ್ಯ ಭಾಷೆ, ಮೇಕಿಂಗ್ ಇರುವಂಥದ್ದು. ಚಿತ್ರವನ್ನು ಮುಖ್ಯಮಂತ್ರಿಗಳು ಇಷ್ಟಪಟ್ಟದ್ದಕ್ಕೆ ನಮಗೂ ಖುಷಿ.
* ನಾನು ಹೀರೋ ಆಗ್ಬೇಕು ಅಂತ ಬಂದವ್ನಲ್ಲ ಅಂದಿದ್ರಿ, ಆದರೆ ದರ್ಶನ್, ನಾನು ನಿಮ್ ಫ್ಯಾನ್ ಅಂದುಬಿಟ್ಟರು?
ಇವೆಲ್ಲ ಒಂಥರಾ ಬಯಸದೇ ಬಂದ ಭಾಗ್ಯಗಳು. ಹೀರೋ ಆಗ್ಬೇಕು ಅಂತಾಗ್ಲಿ, ಈ ರೀತಿ ಎಲ್ಲಾ ಸಿನಿಮಾ ಮಾಡಬೇಕು ಅನ್ನೋದಾಗಲಿ ನನ್ನ ಮನಸ್ಸಲ್ಲಿ ಇರಲಿಲ್ಲ. ಒಳ್ಳೆ ನಟ ಆಗಬೇಕು ಅನ್ನೋದಷ್ಟೇ ನನಗಿದ್ದದ್ದು. ಇದೆಲ್ಲವೂ ಜೀವನದಲ್ಲಿ ಬಂದ ಬೋಸನ್ ಅಂತಲೇ ನನ್ನ ನಂಬಿಕೆ. ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ದರ್ಶನ್ ಸಾರ್ ನಿಮ್ಮ ‘ಇಕ್ಕಟ್’ ಸಿನಿಮಾ ಬಹಳ ಸಲ ನೋಡಿದ್ದೀನಿ, ನಾನು ನಿಮ್ಮ ಫ್ಯಾನ್ ಅಂತೆಲ್ಲಾ ಹೇಳಿದಾಗ ನನಗೆ ಏನು ಹೇಳಲೂ ತೋಚಲಿಲ್ಲ. ಒಬ್ಬ ಸೂಪರ್ ಸ್ಟಾರ್ ನನ್ನ ಸಿನಿಮಾ ನೋಡಿದ್ದಾರೆ ಅನ್ನುವುದು ದೊಡ್ಡ ಖುಷಿ. ಜೊತೆಗೆ ಇಂಥ ಮಾತುಗಳಿಂದ ನಾನು ಸರಿಯಾದ ಹೆಜ್ಜೆಯನ್ನೇ ಇಡುತ್ತಿದ್ದೇನೆ ಅನ್ನುವ ವಿಶ್ವಾಸ ಬಲವಾಯಿತು.
* ಅಲ್ಲಿಗೆ ಇಂಜಿನಿಯರ್ ಆಗ್ಬೇಕಾದವ್ರು ಸಿನಿಮಾ ರಂಗಕ್ಕೆ ಬಂದದ್ದಕ್ಕೂ ಸಾರ್ಥಕ ಆಯ್ತು ಅಂದ್ಕೊಳ್ಳಬಹುದಾ?
ಒಂಥರಾ ಹಾಗೆ. ಇಂಜಿನಿಯರಿಂಗ್ ಮಾಡುತ್ತಿರುವಾಗಲೇ ನಾವೆಲ್ಲಾ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆವು. ಇಂಡಸ್ಟ್ರಿಗೆ ಬರೋದಕ್ಕೂ ಮೊದಲೇ ‘ಕೆಇಬಿ’ ಅನ್ನೋ ಹೆಸರಲ್ಲಿ ಒಂದು ಯೂಟ್ಯೂಬ್ ಚಾನೆಲ್ ಮಾಡುತ್ತಿದ್ದೆ. ಕೆಇಬಿ ಅಂದರೆ ‘ಕರ್ನಾಟಕ ಎಂಟರ್‌ಟೈನ್‌ಮೆಂಟ್ ಬೋರ್ಡ್’ ಅಂತ. ಅದರಲ್ಲಿ ತಮಾಷೆ, ವಿಡಂಬನೆ, ವ್ಯಂಗ್ಯದ ವೀಡಿಯೋಗಳನ್ನೆಲ್ಲ ಅಪ್‌ಲೋಡ್ ಮಾಡುತ್ತಿದ್ದೆ. ಅದನ್ನು ನೋಡಿ ಸಿನಿಮಾದಲ್ಲಿ ನಟಿಸಲು ಆಹ್ವಾನ ಬಂತು. ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದವನು ಈಗ ಇಲ್ಲಿ ನಿಂತಿದ್ದೇನೆ.
* ಟಗರು ಪಲ್ಯ ಅಳಿಸಲ್ಲ, ಬರೀ ನಗಿಸುತ್ತೆ ಅಂತ ಹೇಳಿದ್ರಿ?
ಇಲ್ಲ, ಸಿನಿಮಾ ಗಂಭೀರವಾದ ಸಂಗತಿಯನ್ನು ಹಾಸ್ಯ ಶೈಲಿಯಲ್ಲಿ ಹೇಳುತ್ತೆ. ಹಳ್ಳಿಯ ಜ್ವಲಂತ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತೆ. ನಿಮಗೆಲ್ಲ ಗೊತ್ತಿರಬಹುದು, ಹಳ್ಳಿ ಹುಡುಗರಿಗೆ ಹುಡುಗಿ ಸಿಗುತ್ತಿಲ್ಲ. ಹಳ್ಳಿಯಲ್ಲಿ ಅವಿವಾಹಿತರ ಸಂಖ್ಯೆ ಏರುತ್ತಲೇ ಇದೆ.
* ಟಗರು ಪಲ್ಯದಲ್ಲಿ ನಿಮ್ಮ ಪಾತ್ರ?
ಜವಾಬ್ದಾರಿಯುತ ಹಳ್ಳಿ ಹುಡುಗನ ಪಾತ್ರ. ಆತನ ಬದುಕಲ್ಲಿ ಏನೇನೋ ಸಮಸ್ಯೆ ಆಗುತ್ತೆ. ಇಡೀ ಸಿನಿಮಾ ಒಂದು ಟಗರಿನ ಹಿನ್ನೆಲೆಯಲ್ಲಿ ನಡೆಯುತ್ತೆ. ಬಲಿಗೆ ಬಂದ ಟಗರು ಏನು ಮಾಡಿದರೂ ಒದರೋದಿಲ್ಲ, ಒದರದೇ ಬಲಿ ಕೊಡೋ ಹಾಗಿಲ್ಲ. ವಧಾ ಸ್ಥಾನದಲ್ಲಿ ನಿಂತ ಟಗರನ್ನು ದೇವರಿಗೆ ಹೋಲಿಸುತ್ತಾರೆ. ಹಾಗಿದ್ದರೆ ಟಗರು ಯಾಕೆ ಒದರಲಿಲ್ಲ ಅನ್ನುವದಕ್ಕೆ ಸಿನಿಮಾದಲ್ಲಿ ಉತ್ತರ ಇದೆ.
Bikini ಬಿಟ್ಟು ಸೀರೆಯುಟ್ಟ Sonu Gowda: ನಿಮ್ಮ ಬ್ಲೌಸ್ ಮೇಲೆ ಗೊಂಬೆ ಏನ್ ಮಾಡ್ತಿದೆ ಎಂದ ನೆಟ್ಟಿಗರು!
* ಒನ್‌ಲೈನ್‌ನಿಂದ ಸಿನಿಮಾ ಆಗುವವರೆಗಿನ ಪ್ರೊಸೆಸ್ ಹೇಗಿತ್ತು?
ನಿರ್ದೇಶಕ ಉಮೇಶ್ ಒನ್‌ಲೈನ್ ಹೇಳಿದಾಗ ಧನಂಜಯ ಬಹಳ ಮೆಚ್ಚಿಕೊಂಡರು. ನನಗೂ ಸ್ಕ್ರಿಪ್ಟ್ ಬಹಳ ಇಷ್ಟ ಆಯ್ತು. ಸಿನಿಮಾಕ್ಕೆ ಯಾರನ್ನು ಹಾಕ್ಕೊಳ್ಳೋದು ಎಂಬ ಮಾತು ಬಂದಾಗ ನಿರ್ದೇಶಕರು ನನ್ನ ಹೆಸರು ಸೂಚಿಸಿದರು. ನಾನೂ ಖುಷಿಯಿಂದ ಒಪ್ಪಿದೆ. ಇಡೀ ಸಿನಿಮಾದ ಶೂಟಿಂಗ್ ನಡೆದದ್ದು ಭರಚುಕ್ಕಿಯಲ್ಲಿ. ಬಹಳ ಸೊಗಸಾದ ಲೊಕೇಶನ್. ಆದರೆ ಇಡೀ ತಂಡ ದಿನವೂ 300 ಮೆಟ್ಟಿಲು ಹತ್ತಿ ಇಳಿದು, ಮೊಬೈಲ್ ಸಿಗ್ನಲ್ ಸಿಗದೇ ಒದ್ದಾಡಿದ್ದೆಲ್ಲ ಈಗ ನೆನೆಸಿಕೊಂಡರೆ ಅಬ್ಬಾ ಅನಿಸುತ್ತೆ.