Asianet Suvarna News Asianet Suvarna News

ನಾನು ಹೀರೋ ಅಲ್ಲ, ಈ ಚಿತ್ರದ ಕೂಸು: ಶಿವರಾಜ್‌ ಕೆಆರ್‌ ಪೇಟೆ

ಮೊದಲ ಬಾರಿಗೆ ಶಿವರಾಜ್‌ ಕೆಆರ್‌ ಪೇಟೆ ನಾಯಕನಾಗಿ ನಟಿಸಿರುವ ಸಿನಿಮಾ ‘ನಾನು ಮತ್ತು ಗುಂಡ’ ಇವತ್ತೇ (ಜ.24) ತೆರೆ ಮೇಲೆ ಬರುತ್ತಿದೆ. ಚಿತ್ರ ತೆರೆಗೆ ಬರುತ್ತಿರುವ ಸಂಭ್ರಮದಲ್ಲಿ ಶಿವರಾಜ್‌ ಜತೆಗಿನ ಮಾತುಗಳು ಇಲ್ಲಿವೆ.

Shivraj KR pete Kannada movie Nanu mattu Gunda exclusive interview
Author
Bangalore, First Published Jan 24, 2020, 9:16 AM IST

ಆರ್‌ ಕೇಶವಮೂರ್ತಿ

ಮೊದಲ ಬಾರಿಗೆ ಹೀರೋ ಆಗಿ ತೆರೆ ಮೇಲೆ ಬರುತ್ತಿದ್ದೀರಿ. ಏನನಿಸುತ್ತಿದೆ?

ನಾನು ಹೀರೋ ಅಲ್ಲ. ಈ ಚಿತ್ರದ ಒಂದು ಕೂಸು. ಅಂದರೆ ಚಿತ್ರದ ಮುಖ್ಯ ಪಾತ್ರಧಾರಿ. ನಿರ್ದೇಶಕ, ನಿರ್ಮಾಪಕ, ಕತೆ ಹಾಗೂ ನಮ್ಮ ಚಿತ್ರದಲ್ಲಿ ನಟಿಸಿರುವ ಸಿಂಬಾ ಹೆಸರಿನ ನಾಯಿ... ಇವರೆಲ್ಲರಂತೆ ನಾನೂ ಒಂದು ಪಾತ್ರವಷ್ಟೆ. ಪಾತ್ರಧಾರಿಯಾಗಿ ತುಂಬಾ ಖುಷಿ ಕೊಡುತ್ತಿರುವ ಮತ್ತು ಕೊಟ್ಟಿರುವ ಸಿನಿಮಾ ಇದು.

ಶ್ವಾನಗಳಿಗೆ 'ನಾನು ಮತ್ತು ಗುಂಡ' ಚಿತ್ರ ಪ್ರದರ್ಶನ!

ಇದೊಂದು ಮರೆಯಲಾಗದ ಭಾವನಾತ್ಮಕವಾದ ಕತೆ. ಪ್ರತಿಯೊಬ್ಬರನ್ನೂ ಕಾಡುತ್ತದೆ. ಹಾಗೆ ಕಾಡುವ ಕತೆಯನ್ನು ನಗು ಮತ್ತು ಎಮೋಷನ್‌ ಮೂಲಕ ಹೇಳಿದ್ದೇವೆ. ಅದೇ ಈ ಚಿತ್ರದ ಶಕ್ತಿ.-ಶ್ರೀನಿವಾಸ್‌ ತಮ್ಮಯ್ಯ, ನಿರ್ದೇಶಕ

ಯಾಕೆ ಹೀರೋ ಆಂದ್ರೆ ಭಯನಾ?

ಖಂಡಿತ ಇಲ್ಲ. ಹೀರೋ ಆಗಕ್ಕೆ ತುಂಬಾ ಜವಾಬ್ದಾರಿಗಳು ಇವೆ. ನಾನು ಈಗಷ್ಟೆಬೆಳೆಯುತ್ತಿರುವ ಕಲಾವಿದ. ಎಲ್ಲ ಹೀರೋಗಳ ಜತೆ ನಟಿಸಬೇಕು. ಪ್ರೇಕ್ಷಕರನ್ನು ನಟಿಸಬೇಕು ಎಂದು ಕನಸು ಕಾಣುತ್ತಿರುವ ನಟ. ಇಂಥವರಿಗೆ ನಿರ್ಮಾಪಕ ರಘು ಹಾಸನ್‌ ಹಾಗೂ ಶ್ರೀನಿವಾಸ್‌ ತಮ್ಮಯ್ಯ ಅವರು ಕರೆದು ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಮುಖ್ಯ ಪಾತ್ರ ಕೊಟ್ಟಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ.

ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಏನು?

ಚಿತ್ರದಲ್ಲಿ ಶಂಕ್ರ ಎನ್ನುವ ಪಾತ್ರ. ಆಟೋ ಓಡಿಸಿಕೊಂಡು ಮಧ್ಯಮ ವರ್ಗದ ಜೀವನ ಸಾಗಿಸುತ್ತಿರುವ ಶಂಕ್ರನ ಪಾತ್ರವನ್ನು ಕತೆಯೊಗೆ ತಂದಿರುವ ರೀತಿಗೆ ನಾನು ಫಿದಾ ಆದೆ. ಶಂಕ್ರನ ಪಾತ್ರದಲ್ಲಿ ನಾನು ನಟಿಸುತ್ತೇನೆ ಎಂಬುದೇ ದೊಡ್ಡ ಖುಷಿ. ಇದುವರೆಗೂ ನಾನು ಮಾಡದೆ ಇರುವ ಪಾತ್ರ ಸಿಕ್ಕಾಗ ಕಣ್ಣು ಮುಂಚ್ಚಿಕೊಂಡು ಚಿತ್ರದಲ್ಲಿ ನಟಿಸಲು ಸೈ ಎಂದೆ.

ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

ತುಮಕೂರಿನ ವ್ಯಕ್ತಿಯೊಬ್ಬನ ನಾಯಿ ಪ್ರೀತಿ ಕಂಡು ಅದರ ಮೇಲೊಂದು ಕಿರು ಚಿತ್ರ ಮಾಡಲು ಹೋಗಿ ಅದೇ ದೊಡ್ಡ ಸಿನಿಮಾ ಆಗಿ ಈಗ ನಿಮ್ಮ ಮುಂದೆ ಬರುತ್ತಿದೆ. ನಾನೂ ಒಬ್ಬ ನಿರ್ದೇಶಕನೇ. ಆದರೂ ಬೇರೆಯವರ ಸಿನಿಮಾ ನಿರ್ಮಿಸಿದ್ದೇನೆ ಅಂದರೆ ಅದಕ್ಕೆ ಕಾರಣ ಈ ಚಿತ್ರದ ಕತೆ.- ರಘು ಹಾಸನ್‌, ನಿರ್ಮಾಪಕ

ನಾನು ಮತ್ತು ಗುಂಡನ ಕತೆ ಏನು?

ಇದೊಂದು ನೈಜ ಕತೆ. ತುಮಕೂರಿನಲ್ಲಿ ಆಟೋ ಚಾಲಕನೊಬ್ಬನ ನಾಯಿ ಪ್ರೀತಿಯನ್ನು ಕೇಳಿ ತುಂಬಾ ಅಚ್ಚರಿಯಾಗಿ ನಿರ್ಮಾಪಕರು ಮತ್ತು ನಿರ್ದೇಶಕರು ಸೇರಿ ಮಾಡಿರುವ ಕತೆ ಇದು. ಆಟೋ ಚಾಲನಕನ ಬದುಕಿನ ಶ್ವಾನವೊಂದು ಪ್ರವೇಶವಾಗುತ್ತದೆ. ಅದರ ಜತೆಗೆ ಆತನ ಬದುಕು ರೂಪಗೊಳ್ಳುತ್ತದೆ. ಈ ನಡುವೆ ಗಂಡ, ಹೆಂಡತಿ ಮುಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ಗುಂಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಿ. ಇದರಿಂದ ಸಂಸಾರದ ಕತೆ ಏನಾಗುತ್ತದೆ ಎಂಬುದು ಸಿನಿಮಾ. ಒಂದು ಭಾವುಕತ ಜಗತ್ತಿನ ಕತೆ ಇಲ್ಲಿದೆ.

ಇಲ್ಲಿವರೆಗೂ ನಗಿಸಿದ್ದೀರಿ. ಈಗ ಅಳಿಸುತ್ತೀರಾ?

ಖಂಡಿತ ನಗು ಜತೆಗೆ ಅಳು ಕೂಡ ಇರುತ್ತದೆ. ಆ ಮಟ್ಟಿಗೆ ಭಾವುಕರನ್ನಾಗಿಸುವ ಕತೆಯ ಎಳೆ ಈ ಚಿತ್ರದಲ್ಲಿದೆ. ನಗಿಸುವುದು ಸುಲಭ. ಅಳಿಸುವುದು ಕಷ್ಟೆ. ಆದರೆ, ಕಲಾವಿದನಾಗಿ ಎಲ್ಲವೂ ನಿಭಾಯಿಸಬೇಕು. ಅದನ್ನು ತೆರೆ ಮೇಲೆ ಮಾಡಿರುವೆ. ಯಾಕೆಂದರೆ ಹಿಂದಿಯಲ್ಲಿ ಒಂದು ಶಾಹಿರಿ ಇದೆ. ‘ಕಣ್ಣಂಚಲ್ಲಿ ನೀರಿರುತ್ತೆ, ತುಂಟಿಗಳಲ್ಲಿ ನೋವಿರುತ್ತೆ, ನೋಡುವವನಿಗೆ ಏನ್‌ ಗೊತ್ತಾಗಬೇಕು ನಗಿಸುವವ ಹಿಂದಿನ ನೋವು’ ಎನ್ನುವುದು ಆ ಶಾಹಿರಿಯ ಅರ್ಥ. ಇದನ್ನೇ ಇಲ್ಲಿ ನನ್ನ ಪಾತ್ರದ ಮೂಲಕ ನೋಡುತ್ತೀರಿ.

ನಿಮಗೆ ಈ ಹೊಸ ಜಾನರ್‌ ಸಿನಿಮಾ ಸವಾಲು ಅನಿಸಿತಾ?

ಹೌದು. ಯಾಕೆಂದರೆ ಮೂಕ ಪ್ರಾಣಿ ಜತೆ ನಟಿಸುವುದೇ ದೊಡ್ಡ ಸವಾಲು. ಕತೆ ಕೇಳಿದ ಮೇಲೂ ನಾನು ಈ ಪಾತ್ರ ನಿಭಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿತು. ಆಗಲೂ ನಿರ್ದೇಶಕರು ಧೈರ್ಯ ತುಂಬಿದರು. ಮೂಕ ಪ್ರಾಣಿಯನ್ನು ಪಳಗಿಸಿಕೊಂಡು ಅದರ ಜತೆ ನಟಿಸಿವುದು ಅಷ್ಟುಸುಲಭವಲ್ಲ ಅನಿಸಿದ್ದು ನಿಜ.

ಈ ಚಿತ್ರದ ಮೂಲಕ ನಿಮ್ಮಲ್ಲಿ ಮೂಡಿಸಿದ ವಿಶ್ವಾಸ ಏನು?

ಮಂಡ್ಯ ಭಾಗದ ಭಾಷೆಯ ಶೈಲಿಯೊಂದಿಗೆ ಕಾಮಿಡಿ ಕಿಲಾಡಿಗಳಲ್ಲಿ ನಗಿಸುತ್ತ ಬಂದೆ. ನಂತರ ಹಲವು ಚಿತ್ರಗಳಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಈಗ ‘ನಾನು ಮತ್ತು ಗುಂಡ’ ಚಿತ್ರದ ಕತೆಯೊಂದು ನನ್ನ ಸುತ್ತಲೇ ತಿರುಗುತ್ತದೆ. ನಾನೇ ಅದರ ಮುಖ್ಯ ಪಾತ್ರಧಾರಿ. ಒಬ್ಬ ಪುಟ್ಟಕಲಾವಿದನನ್ನು ಚಿತ್ರರಂಗ ಗುರುತಿಸುತ್ತಿದೆ ಎನ್ನುವ ನಂಬಿಕೆ ಮೂಡಿದೆ. ಮುಂದೆ ಯಾವ ಪಾತ್ರ ಕೊಟ್ಟರೂ ಮಾಡಬಹುದು, ಅದು ಕಲಾವಿದನಿಗೆ ಸಾಧ್ಯ ಎನ್ನುವ ವಿಶ್ವಾಸ ಮೂಡಿಸಿದೆ.

Follow Us:
Download App:
  • android
  • ios