'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಸಂಜನಾ ಆನಂದ್ ಜೊತೆ ಸಿನಿ ಜರ್ನಿ ಬಗ್ಗೆ ಮಾತುಕತೆ

ಆರಂಭದ ದಿನಗಳನ್ನು ಈಗ ನೆನಪಿಸಿಕೊಂಡಾಗ?

ನಾನು ಇನ್ನೂ ಆರಂಭದ ಹಂತದಲ್ಲೇ ಇದ್ದೀನಿ. ಮೊದಲ ಸಿನಿಮಾ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಮತ್ತೊಂದು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ. ಸ್ಟಾರ್ ನಟನ ಜತೆಗೆ ನಾಯಕಿಯಾಗಿರುವ ಸಿನಿಮಾ.
ಇನ್ನೇನು ಸಿನಿಮಾ ಬಿಡುಗಡೆ ಆಗಿ ನಾನೂ ಕೂಡ ದೊಡ್ಡ ನಟಿ ಅನಿಸಿಕೊಳ್ಳುತ್ತೇನೆ ಎನ್ನುವ ಹೊತ್ತಿಗೆ ಕೊರೋನಾ, ಲಾಕ್‌ಡೌನ್ ಬಂದು ಎಲ್ಲರನ್ನೂ ಮನೆಯಲ್ಲಿ ಕೂರಿಸಿತು. ಹೀಗಾಗಿ ಆರಂಭ ದಿನಗಳು ಎಂದಾಗ ಈಗ ನಾನು ಈ ಕೊರೋನಾ ಸಂಕಷ್ಟವನ್ನೇ ಹೇಳಬೇಕು.

ಖುಷಿ ಕೊಟ್ಟ ಆ ಕ್ಷಣಗಳು ಯಾವುವು?

ಪ್ರತಿಯೊಂದು ಸಿನಿಮಾ ಒಪ್ಪಿಕೊಂಡಾಗಲೂ, ನಾನು ಈ ಚಿತ್ರಕ್ಕೆ ನಾಯಕಿಯಾಗಿ ಸೂಟ್ ಆಗುತ್ತೇನೆ ಎಂದಾಗ ಖುಷಿ ಆಗಿದೆ. ಕನಸು ನಿಜ ಆಗುತ್ತಿರುವ ಸಂದರ್ಭ, ಕ್ಷಣಗಳನ್ನು ನಾನು ಕಂಡಿದ್ದೇನೆ. 

'ಕೆಮಿಸ್ಟ್ರಿ ಆಫ್‌ ಕರಿಯಪ್ಪ'ದಲ್ಲಿ ಮಿಂಚಿ 'ಸಲಗ' ಜೊತೆ ನಿಂತಿರುವ ನಟಿ ಇವರೇ! 

ನಿರೀಕ್ಷೆಯೇ ಇಲ್ಲದೆ ಬಂದ ಸಂಭ್ರಮ?

ದುನಿಯಾ ವಿಜಯ್ ಅವರ ಜತೆ ನಾಯಕಿಯಾಗುವ ಅವಕಾಶ. ಇದು ನನ್ನ ಜೀವನದ ಸರ್ಪ್ರೈಸ್ ಸಂಭ್ರಮ ಅಥವಾ ಅವಕಾಶ ಎನ್ನಬಹುದು. ಯಾಕೆಂದರೆ ನಟರಾಗಿ ದುನಿಯಾ ವಿಜಯ್ ಅವರು ತಮ್ಮ ಛಾಪು ಮೂಡಿಸಿದವರು. ಅಂಥವರು ಮೊದಲ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದಾರೆ, ಅವರ ಮೊದಲ ನಿರ್ದೇಶನದಲ್ಲಿ ನಾನು ನಾಯಕಿಯಾಗುತ್ತೇನೆ ಎಂದು ಯಾವತ್ತೂ ನಿರೀಕ್ಷೆ ಮಾಡಿರಲಿಲ್ಲ. ಆಕಸ್ಮಿಕವಾಗಿ ಬಂತು. ಅದೇ ಸಲಗ ಚಿತ್ರ. 

ಯಶಸ್ಸಿನ ಸೂತ್ರಗಳೇನು?

ನಿಜ ಹೇಳಬೇಕು ಅಂದರೆ ಗೊತ್ತಿಲ್ಲ. ಚಿತ್ರರಂಗದಲ್ಲಿ ಯಾವುದೇ ಸಿನಿಮಾ, ನಟಿ, ನಟ, ತಂತ್ರಜ್ಞರು, ಹೀರೋ ಗೆಲ್ಲಕ್ಕೆ ಇಂಥದ್ದೇ ಸೂತ್ರಗಳು ಇವೆ ಎಂದು ಹೇಳಕ್ಕೆ ಆಗಲ್ಲ. ಆದರೆ, ಅದೇ ಸಿನಿಮಾ ಗೆದ್ದಾಗ ಅದನ್ನು ನೋಡಿ ಫಾಲೋ ಮಾಡುತ್ತೇವೆ. ಮುಂದೆ ಅದು ಸೂತ್ರ ಆಗುತ್ತದೆ. ನನ್ನ ಪ್ರಕಾರ ಪ್ರೀತಿಯಿಂದ, ಆಸಕ್ತಿ ವಹಿಸಿ ನಮಗೆ ಕೊಟ್ಟ ಪಾತ್ರಗಳನ್ನು ನಿಭಾಯಿಸುವುದು ಮಾತ್ರ ನಮ್ಮ ಕೆಲಸ. ಉಳಿದಿದ್ದು ಪ್ರೇಕ್ಷಕರ ಕೈಯಲ್ಲಿರುತ್ತದೆ. 

ಸಂಜನಾ ಆನಂದ್‌ಗೆ 5 ಪ್ರಶ್ನೆಗಳು;ಸಲಗ ಚಿತ್ರದ ನಾಯಕಿ ಜತೆ ಮಾತುಕತೆ! 

ನಿಮ್ಮ ಮುಂದಿರುವ ಕನಸುಗಳೇನು?

ಒಳ್ಳೆಯ ನಟಿ ಅನಿಸಿಕೊಳ್ಳಬೇಕು. ಇದೇ ರೀತಿ ಮುಂದೆ ಕೂಡ ಒಳ್ಳೆಯ ಕತೆಗಳಲ್ಲಿ ಕಾಣಿಸಿಕೊಳ್ಳುತ್ತಿರಬೇಕು, ಕೊಟ್ಟ ಪಾತ್ರಕ್ಕೆ ಈಕೆ ಲೈಫ್ ಕೊಡುತ್ತಾಳೆ ಎನ್ನುವ ಪ್ರಶಂಸೆ ಸಿಗಬೇಕು. ಅಂಥ ಕೆರಿಯರ್ ನನ್ನದಾಗಬೇಕು ಎನ್ನುವುದು ನನ್ನ ಕನಸು.