ರಿಷಭ್ ಶೆಟ್ಟಿ ಎಂದೊಡನೆ ಕನ್ನಡದ ಒಂದಷ್ಟು ವಿಭಿನ್ನ ಚಿತ್ರಗಳು ಕಣ್ಣೆದುರು ಬರುತ್ತವೆ. ಅವುಗಳಲ್ಲಿ ಅವರ ನಿರ್ದೇಶನದ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ಮಾತ್ರವಲ್ಲ, ಸ್ವತಃ ನಾಯಕನಾಗಿ ನಟಿಸಿದ `ಬೆಲ್ ಬಾಟಂ' ಸಿನಿಮಾ ಕೂಡ ನೆನಪಾಗುತ್ತದೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕರಾಗಿ ಸ್ವತಃ ಬೆಳೆಯುವುದರ ಜತೆಗೆ ಚಿತ್ರರಂಗಕ್ಕೂ ರಾಷ್ಟ್ರಮಟ್ಟದಲ್ಲಿ ಹೆಸರು ತಂದಂಥ ರಿಷಭ್ ಶೆಟ್ಟಿ ಪ್ರಸ್ತುತ ಲಾಕ್ಡೌನ್ ದಿನಗಳನ್ನು ಕಳೆದ ರೀತಿ ಹೇಗೆ? ಮುಂದಿನ ಸಿನಿಮಾ ಯೋಜನೆಗಳೇನು ಎನ್ನುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ. 

- ಶಶಿಕರ ಪಾತೂರು

ಚಿತ್ರಮಂದಿರ ತೆರೆದೊಡನೆ ತೆರೆಕಾಣಲಿರುವ ನಿಮ್ಮ ಸಿನಿಮಾ ಯಾವುದು?
ಖಂಡಿತವಾಗಿಯೂ ತೆರೆಕಾಣುವ ಮೊದಲ ಚಿತ್ರ `ಗರುಡ ಗಮನ ವೃಷಭ ವಾಹನ' ಆಗಿರುತ್ತದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ಸ್‌ ಲಾಕ್ಡೌನ್‌ಗೂ ಮೊದಲೇ ಶುರುವಾಗಿತ್ತು. ನಮ್ಮಲ್ಲಿ ಕೆಲವು ಚಿಕ್ಕಪುಟ್ಟದಾಗಿ ಶುರುಮಾಡಿದಂಥ ಪ್ರಾಜೆಕ್ಟ್‌ಗಳಿವೆ. ಅವುಗಳನ್ನು ನಾವು ಎಲ್ಲಿಯೂ ಅನೌನ್ಸ್‌ ಮಾಡಲು ಹೋಗಿಲ್ಲ. ಹಾಗೆ ನಮ್ಮ ಕೆಲಸಗಳು ನಿರಂತರವಾಗಿ ಸಾಗಿವೆ. ಮುಂದಿನ ತಿಂಗಳು ಹೊಸ ಪ್ರಾಜೆಕ್ಟ್‌ ಗೆ ಅವಕಾಶಗಳು ಸಿಗುಲಿದೆ ಎನ್ನುವುದಕ್ಕಿಂತ, ಅವುಗಳು ಹೇಗೆ ಕಾರ್ಯಗತಗೊಳ್ಳಲಿದೆ ಎನ್ನುವುದು ತುಂಬ ಮುಖ್ಯವಾಗುತ್ತದೆ. ಬಹುಶಃ ಫಿಲ್ಮ್ ಇಂಡಸ್ಟ್ರಿ ಚೇತರಿಸಿಕೊಂಡು ನಾರ್ಮಲ್ ಆಗೋಕೆ ಕಡಿಮೆ ಎಂದರೂ ಇನ್ನೂ ಒಂದು ವರ್ಷ ಬೇಕಾಗಬಹುದು. ಸುನಾಮಿ ಬಂದು ಎಲ್ಲವನ್ನು ಕಳೆದುಕೊಂಡು ಮತ್ತೆ ಹೊಸದಾಗಿ ಬದುಕು ಶುರು ಮಾಡಿದವರಿದ್ದಾರೆ. ಇನ್ನು ನಾವು ಮನೆಯಲ್ಲಿದ್ದು ಸಣ್ಣದೊಂದು ಗ್ಯಾಪ್ ತೆಗೆದುಕೊಂಡು ಮತ್ತೆ ಹೊಸದಾಗಿ ಆರಂಭಿಸಲು ಸಾಧ್ಯವಿಲ್ಲವೇ? ಹಾಗಾಗಿ ಬಹಳ ಇಂಡಸ್ಟ್ರಿ ಬಹಳ ಬೇಗ ಚೇತರಿಸಿಕೊಳ್ಳುವುದೆನ್ನುವ ನಂಬಿಕೆ ನನಗಿದೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುನರ್ ವಿವಾಹ ನಟಿ

ನೀವು ಲಾಕ್ಡೌನ್ ದಿನಗಳನ್ನು ಕಳೆದ ರೀತಿ ಹೇಗೆ?
  
ನಾನು ನನ್ನ ಊರಾದ ಕುಂದಾಪುರದಲ್ಲಿದ್ದೆ. ಮನೆಯಲ್ಲಿ ಮಗನ ಜತೆಗೆ ಸಮಯ ಕಳೆದೆ. ಬೆಂಗಳೂರಲ್ಲಿರುವ ಸ್ಕ್ರಿಪ್ಟ್ ರೈಟರ್ಸ್ ಜತೆಗೆ ಫೋನಲ್ಲಿ ಸಂಪರ್ಕ ಇತ್ತು. ಸಾಮಾನ್ಯವಾಗಿ ನನ್ನ ಐಡಿಯಾಗಳನ್ನು ನಾನೇ ಬರೆಯುವುದಕ್ಕಿಂತ ಇತರರಿಗೆ ಹೇಳಿ ಬರೆಸುವುದು ಅಭ್ಯಾಸ. ನಾನು ಬರೆಯುವುದು ಕಡಿಮೆ. ಮುಂದೆ ಚಿತ್ರೀಕರಣಕ್ಕೆ ಫೈನಲಾಗಿರುವ ಸ್ಕ್ರಿಪ್ಟ್‌ಗಳನ್ನು ಓದುವ ಕೆಲಸ ಇತ್ತು. ಇವೆಲ್ಲದಕ್ಕಿಂತ ಹೆಚ್ಚಾಗಿ ಮಗನ ಜತೆಗೆ ಕಾಲ ಕಳೆಯುವುದು ನನಗೆ ತುಂಬ ಮುಖ್ಯವಾಗಿತ್ತು. ಇನ್ನು ಊರಲ್ಲಿದ್ದಾಗ ಟೈಮ್ ಪಾಸ್ ಮಾಡುವುದು ಹೇಗೆ ಎನ್ನುವ ವಿಚಾರವೇ ಬರುವುದಿಲ್ಲ. ಯಾಕೆಂದರೆ ಅಲ್ಲಿನ ಬದುಕೇ ಏನಾದರೊಂದು ಕೆಲಸದಲ್ಲಿ ತೊಡಗಿಸುವಂತೆ ಮಾಡುತ್ತದೆ. ನಮ್ಮದು ಒಂದು ರೀತಿ ಕಾಡಿನ ಭಾಗದಲ್ಲಿರುವ ಮನೆ. ಹಳ್ಳಿಯಲ್ಲಿ ಏನೆಲ್ಲ ಕೆಲಸಗಳಿರುತ್ತವೆಯೋ ಅವುಗಳಿಗೆಲ್ಲ ಚೆನ್ನಾಗಿ ಒಗ್ಗಿಕೊಂಡಿದ್ದೆ. ಎರಡು ವಾರಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದೇನೆ.

ನಾನು ನನ್ನ ಕನಸು ನಟಿ ನಿಶಿತಾ

ನಿಮ್ಮನ್ನು ನಂಬಿದ ನಿರ್ಮಾಪಕರಿಗೆ ಎಂದಿಗೂ ನಷ್ಟವಾಗುವುದಿಲ್ಲ ಎನ್ನುವ ಮಾತಿಗೆ ಏನಂತೀರಿ?
ನನ್ನ ನಿರ್ಮಾಣವೇ ಇದ್ದಾಗ ನಾವು ಟೀಮ್ ಮಾಡಿಕೊಂಡು ಕೆಲಸ ಮಾಡುತ್ತೇವೆ. ನಮ್ಮ ತಂಡದಲ್ಲಿ ಫೈನಾನ್ಸ್ ಸೆಕ್ಟರ್ ನೋಡುವವರೇ ಬೇರೆ ಇರುತ್ತಾರೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ದುಡ್ಡು ಹಾಕುವಾಗ ನಾವು ಲೆಕ್ಕಾಚಾರ ಮಾಡಿಯೇ ದುಡ್ಡು ಹಾಕಬೇಕಾಗುತ್ತದೆ. ದಕ್ಷಿಣ ಭಾರತದ ಇತರ ಭಾಷೆಗಳ ಚಿತ್ರರಂಗಕ್ಕೆ ಹೋಲಿಸಿದರೆ, ಕನ್ನಡದಲ್ಲಿ  ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಪ್ರೇಕ್ಷಕರು ತುಂಬ ಕಡಿಮೆ. ನಾನು ನೋಡಿದ ಹಾಗೆ ಅಂದರೆ ಇತ್ತೀಚೆಗಂತೂ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಜನರನ್ನು ಥಿಯೇಟರ್‌ಗೆ ಆಕರ್ಷಿಸುವಂಥ ಚಿತ್ರಗಳು ಬರುತ್ತಲೇ ಇವೆ. ನಮ್ಮಲ್ಲಿ ಅವರಷ್ಟು ವಿಭಿನ್ನವಾದ ಅಂಶಗಳಿರುವ ಚಿತ್ರಗಳು ಬರುವುದು ಕಡಿಮೆ. ಆಸಕ್ತಿ ಇಲ್ಲದ ಜನಗಳನ್ನು ಮತ್ತೆ ಥಿಯೇಟರ್‌ಗೆ ಕರೆತರುವ ಪ್ರಯತ್ನ ನಡೆಯುವುದು ಕಡಿಮೆ. ಹಾಗಾಗಿ ನಾನು ಚಿತ್ರ ಮಾಡುವಾಗ ಎಚ್ಚರಿಕೆಯಿಂದಲೇ ಮಾಡುತ್ತೇನೆ. ಕತೆಗೆ ಏನು ಅಗತ್ಯವೋ ಅದನ್ನು ಹೇಗೆ ಕಡಿಮೆ ಖರ್ಚಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮಾಡಬಹುದು ಎಂದು ಯೋಜನೆ ಹಾಕಿ ಮಾಡುತ್ತೇನೆ. ಹೊಸ ಕಂಟೆಂಟನ್ನು ಹೊಸ ಮಾದರಿಯಲ್ಲಿ ಹೇಳುವುದಷ್ಟೇ ನಮ್ಮ ಗುರಿ. ಖರ್ಚು ಮಾಡಿ ನಾವು ಬೇರೆ ಭಾಷೆಗಳ ಜತೆಗೆ ಸ್ಪರ್ಧಿಸಲು ಸಾಧ್ಯವಿಲ್ಲ.