ಸಾಧಕರಿಗೆ ಸಂಗೀತವೇ ನಶೆ ಎಂದ ಅನುರಾಧ ಭಟ್
ನಮ್ಮಲ್ಲಿ ಸಾಕಷ್ಟು ಗಾಯಕಿಯರಿದ್ದಾರೆ. ಆದರೆ ಪರಭಾಷಾ ಗಾಯಕಿಯರನ್ನು ಮರೆಸುವ ಮಟ್ಟಕ್ಕೆ ಕನ್ನಡ ಸಿನಿ ಸಂಗೀತದಲ್ಲಿ ಮೆರೆದವರು ಅನುರಾಧಾ ಭಟ್ ಮಾತ್ರ.
ಸ್ವತಃ ಪರಭಾಷೆಗಳಲ್ಲಿಯೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಅನುರಾಧಾ ಭಟ್ ಜತೆಗಿನ ವಿಶೇಷ ಮಾತುಕತೆ ಇದು.
ಅನುರಾಧಾ ಭಟ್ ಕನ್ನಡದ ಅಪರೂಪದ ಗಾಯಕಿ. ಸಾವಿರಾರು ಹಾಡುಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. ಮಾತ್ರವಲ್ಲ, ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್, ಸೈಮಾ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಇವರ ಬಗಲಲ್ಲಿವೆ. ಪ್ರಸ್ತುತ ದಿನಗಳಲ್ಲಿ ಸಿನಿಮಾ ಸಂಗೀತ ಚಟುವಟಿಕೆಗಳು ಹೇಗೆ ನಡೆಯುತ್ತಿವೆ? ಇತ್ತೀಚೆಗೆ ಕನ್ನಡ ಚಿತ್ರರಂಗದ ಕೆಲವು ಸಂಗೀತ ನಿರ್ದೇಶಕರು ಡ್ರಗ್ಸ್ ಜತೆಗೆ ಸಂಬಂಧ ಇರಿಸಿಕೊಂಡಿದ್ದಾರೆ ಎನ್ನುವ ಆಪಾದನೆ ಹರಡಿದೆ. ಸಂಗೀತಕ್ಕೂ ಮಾದಕ ಪದಾರ್ಥಕ್ಕೂ ಸಂಬಂಧವೇನು ಮೊದಲಾದ ಪ್ರಶ್ನೆಗಳನ್ನುಅನುರಾಧಾ ಅವರಲ್ಲಿ ವಿಚಾರಿಸಿದಾಗ ಅವರು ನೀಡಿದ ಉತ್ತರವೇನು ಎನ್ನುವುದನ್ನು ಇಲ್ಲಿ ನೀಡಿದ್ದೇವೆ.
- ಶಶಿಕರ ಪಾತೂರು
ಡ್ರಗ್ಸ್ ಮಾದಕತೆ ಬಗ್ಗೆ ದುನಿಯಾ ಸೂರಿ ಜೊತೆ ಮಾತುಕತೆ
ಸಿನಿಮಾ ಚಟುವಟಿಕೆಗಳು ಕಡಿಮೆಯಾಗಿರುವುದು ಗಾಯಕಿಯಾಗಿ ನಿಮ್ಮನ್ನು ಎಷ್ಟು ಬಾಧಿಸಿವೆ?
ಒಬ್ಬ ಸಿನಿಮಾ ಹಿನ್ನೆಲೆ ಗಾಯಕಿ ಎನ್ನುವ ನಿಟ್ಟಿನಲ್ಲಿ ಖಂಡಿತವಾಗಿ ಬಾಧಿಸಿವೆ. ಹಾಡುಗಳ ರೆಕಾರ್ಡಿಂಗ್ ಆಗಲೀ, ಸ್ಟುಡಿಯೋಗಳಲ್ಲಿನ ಕೆಲಸಗಳು ಕೂಡ ನಡೆಯುತ್ತಿಲ್ಲ. ಹಿಂದೆ ದಿನಕ್ಕೆ ಮೂರು ನಾಲ್ಕರಂತೆ ನನ್ನದೇ ಹಾಡುಗಳ ರೆಕಾರ್ಡಿಂಗ್ ನಡೆಯುತ್ತಿದ್ದವು. ಈಗ ವಾರಕ್ಕೆ ಒಂದೋ, ಎರಡೋ ಹಾಡುಗಳಂತೆ ಲಾಕ್ಡೌನ್ ಬಳಿಕ ಸುಮಾರು ಇಪ್ಪತ್ತು ಹಾಡುಗಳನ್ನಷ್ಟೇ ಹಾಡಿದ್ದೇನೆ. ಅದು ಕೂಡ ನಾನೇ ಮನೆಯಲ್ಲಿ ರೆಕಾರ್ಡ್ ಮಾಡಿದ್ದೇನೆ. ಕನ್ನಡದ ಜತೆಗೆ ತೆಲುಗು ಹಾಡುಗಳನ್ನು ಕೂಡ ಮನೆಯಿಂದಲೇ ಹಾಡಿ ಕಳಿಸಿದ್ದೇನೆ. ನಾವು ನಾವೇ ರೆಕಾರ್ಡ್ ಮಾಡಿಕೊಂಡು ಹಾಡುವುದು ಒಂದು ರೀತಿ ಚಾಲೆಂಜಿಂಗ್. ಯಾಕೆಂದರೆ ಸ್ಟುಡಿಯೋಗೆ ಹೋಗಿ ಹಾಡುವುದಾದರೆ ಅಲ್ಲಿ ಇಂಜಿನಿಯರ್ ಇರುತ್ತಾರೆ. ಆದರೆ ಮನೇಲಿ ಹಾಡುವಾಗ ಸ್ಟುಡಿಯೋ ಇಂಜಿನಿಯರ್ ಕೆಲಸವನ್ನು ಕೂಡ ನಾನೇ ಮಾಡಬೇಕಾಗುತ್ತದಲ್ಲ. ಅದು ಸ್ವಲ್ಪ ಕಷ್ಟವೇ.
ಬಾಡಿ ಬೆಳೆಸಲು ಡ್ರಗ್ಸ್ ಮೊರೆ ಹೋದವರಿದ್ದಾರೆ: ರಘು ರಾಮಪ್ಪ
ಒಂದು ರೀತಿಯಲ್ಲಿ ಲಾಕ್ಡೌನ್ ನಿಮಗೆ ಹೊಸ ಕಲಿಕೆಗೆ ಅವಕಾಶ ಮಾಡಿಕೊಟ್ಟಿತು ಎನ್ನಬಹುದೇ?
ಹೌದು. ನಿಜ ಹೇಳಬೇಕೆಂದರೆ ಅಂಥದೊಂದು ಅನಿವಾರ್ಯತೆ ಸೃಷ್ಟಿಯಾಯಿತು. ಬಹುಶಃ ಇನ್ನು ಸೌಂಡ್ ಇಂಜಿನಿಯರ್ ಆಗಿಯೂ ಕೆಲಸ ಮಾಡಬಹುದು(ನಗು).
ಮಾತ್ರವಲ್ಲ, ಏನಾದರೂ ಹೊಸತು ಕಲಿಯಬೇಕು, ಹಾಡೊಂದೇ ಕಲಿತಿದ್ದರೆ ಸಾಲದು ತಾಂತ್ರಿಕವಾಗಿ ಕೂಡ ಸ್ವಲ್ಪ ಅರಿವು ಪಡೆದುಕೊಳ್ಳೋಣ ಎಂದು ನಿರ್ಧಾರ ಮಾಡಿಕೊಂಡೆ. ಯಾಕೆಂದರೆ ಈ ಹಿಂದೆ ಖುದ್ದಾಗಿ ನಾನೇ ಇಂಥ ಪ್ರಯತ್ನ ಮಾಡಿರಲಿಲ್ಲ. ಆದರೆ ಲಾಕ್ಡೌನ್ ಬಳಿಕ ಸೌಂಡ್ ಇಂಜಿನಿಯರ್ ಬಳಿ ಕೇಳಿ ರೆಕಾರ್ಡಿಂಗ್ ಬಗ್ಗೆ ಕಲಿತುಕೊಂಡೆ. ಅದರ ಜತೆಗೆ ಕಳೆದುಕೊಂಡ ವಿಚಾರಗಳು ಕೂಡ ಇವೆ. ಈ ವರ್ಷ ಯು ಎಸ್, ಜರ್ಮನಿ, ಆಫ್ರಿಕಾ ಮೊದಲಾದ ಕಡೆಗಳಲ್ಲೆಲ್ಲ ಕಾರ್ಯಕ್ರಮ ನೀಡಲು ರೂಪು ರೇಷೆ ತಯಾರಾಗಿತ್ತು. ಆದರೆ ಕೊರೊನಾದಿಂದಾಗಿ ಎಲ್ಲವೂ ಬದಲಾಯಿತು. ಮತ್ತೆ ಯಾವಾಗ ಅಂಥ ಕಾರ್ಯಕ್ರಮ ಎನ್ನುವುದನ್ನು ನಿರ್ಧಾರ ಮಾಡುವ ಹಂತಕ್ಕೆ ಯಾರೂ ತಲುಪಿಲ್ಲ.
ಮಾಸ್ಟರ್ ಆನಂದ್ ಜತೆಗೆ ಅಧ್ಯಾತ್ಮದ ಮಾತು
ಮನೆಯಲ್ಲಿ ಸಿಕ್ಕ ಹೆಚ್ಚುವರಿ ಸಮಯವನ್ನು ಹೇಗೆ ಕಳೆದಿರಿ?
ಮನೆಯಲ್ಲಿ ಈ ಹಿಂದೆ ಎಲ್ಲಾದರೂ ಸ್ವಲ್ಪ ಫ್ರೀ ಟೈಮ್ ಸಿಕ್ಕಿತು ಅಂದೊಡನೆ ನಿದ್ದೆ ಮಾಡುವ ಅಭ್ಯಾಸ ಇತ್ತು. ಈಗ ಪ್ರತಿ ದಿನ ಮನೆಯಲ್ಲೇ ಇರುವ ಕಾರಣ ನಿದ್ದೆ ಮಾಡಿ ಎದ್ದರೂ ಮನೆಯಲ್ಲೇ ಇರಬೇಕಾಗಿತ್ತು. ಆದರೆ ಮನೆಯವರೆಲ್ಲ ಒಟ್ಟಿಗೆ ಇರುವ ಕಾರಣ ತುಂಬ ಸಮಯ ಇದೆ ಎಂದೂ ಅನಿಸಿಲ್ಲ. ಮೊದಲು ಮನೆಯ ಜತೆಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಗೇಮ್ಸ್ ಆಡುವಷ್ಟು ಅವಕಾಶ ಸಿಕ್ಕಿತು. ಲುಡೋ, ಚೆನ್ನೆಮಣೆ ಆಟ ಆಡಿ ಸಮಯ ಕಳೆದಿದ್ದೇವೆ. ಸಂಜೆ ಮನೆಯ ಮಹಡಿ ಮೇಲೆ ಹೋದರೆ ಅಲ್ಲಿ ಸಾಕಷ್ಟು ಗಿಳಿಗಳು ಬಂದಿರುತ್ತವೆ. ನೂರಾರು ಗಿಳಿಗಳು ಸುಮಾರು ಗುಂಪುಗಳಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರಾಡುತ್ತಿರುತ್ತವೆ. ಅವುಗಳನ್ನು ನೋಡುವುದು ಕೂಡ ಖುಷಿಯೆನಿಸುತ್ತಿತ್ತು. ಇವಲ್ಲದೆ ಸುಮಾರು ಹದಿನೈದರಿಂದ ಇಪ್ಪತ್ತರಷ್ಟು ವರ್ಚುಯಲ್ ಕನ್ಸರ್ಟ್ಸೇ ಇದ್ದವು. ಸಾಗರದಾಚೆ ಇರುವ ಕನ್ನಡಿಗರಿಗಾಗಿಯೂ ಕಾರ್ಯಕ್ರಮ ಮಾಡಿದ್ದೇವೆ. ಅದು ಕರ್ನಾಟಕದಲ್ಲಿ ಕಷ್ಟದಲ್ಲಿರುವವರ ಸಹಾಯಾರ್ಥವಾಗಿ ಮಾಡಿದಂಥ ಕಾರ್ಯಕ್ರಮವಾಗಿತ್ತು. ಉತ್ತಮ ಪ್ರತಿಕ್ರಿಯೆ ದೊರಕಿದೆ. ಅದರ ಮೂಲಕ ಮ್ಯೂಸಿಕ್ ಮ್ಯನ್ಷನ್ ಕಡೆಯಿಂದ ಸಂಗೀತ ಕ್ಷೇತ್ರದಲ್ಲಿರುವ ಸುಮಾರು ಇನ್ನೂರರಷ್ಟು ಮಂದಿಗೆ ಸಹಾಯ ಮಾಡಲು ಸಾಧ್ಯವಾಯಿತು.
ನಿಮ್ಮ ಪ್ರಕಾರ ಸಂಗೀತ ಕ್ಷೇತ್ರದಲ್ಲಿ ಮಾದಕ ಪದಾರ್ಥಗಳ ಬಳಕೆಗೆ ಕಾರಣ ಏನಿರಬಹುದು?
ನನಗೆ ಇದರ ಬಗ್ಗೆ ಯಾವುದೇ ಮಾಹಿತಿಯಾಗಲೀ, ಅರಿವಾಗಲೀ ಇಲ್ಲ. ಅಂಥ ನನಗೆ ಡ್ರಗ್ಸ್ ತೆಗೆದುಕೊಳ್ಳುವ ಸಂಗೀತ ನಿರ್ದೇಶಕರ ಬಗ್ಗೆಯಾಗಲೀ ಅಥವಾ ಡ್ರಗ್ಸ್ ತೆಗೆದುಕೊಳ್ಳುವ ಉದ್ದೇಶದ ಬಗ್ಗೆಯಾಗಲೀ ಅರಿತುಕೊಳ್ಳುವ ಆಸಕ್ತಿಯೂ ನನಗಿಲ್ಲ. ನನ್ನ ಇಡೀ ಜೀವನದಲ್ಲಿ ಚಹಾ ಅಥವಾ ಕಾಫಿ ಕುಡಿದೇ ಅರಿವಿಲ್ಲದ ಹುಡುಗಿ ನಾನು ಎಂದರೆ ನೀವು ನಂಬಲೇಬೇಕು. ಯಾಕೆಂದರೆ ನಮಗೆ ಸಂಗೀತವೇ ಎಲ್ಲ. ಅದರಲ್ಲೇ ಭಕ್ತಿ, ಅದರಲ್ಲೇ ವೃತ್ತಿ ಹೊರತು ಬೇರೆ ಏನೂ ಇಲ್ಲ. ಸಂಗೀತದಲ್ಲೇ ಮೈಮರೆತು ಹಾಡಿದ ಸಾಧಕರಿಗೆ ಸಂಗೀತವೇ ಒಂದು ನಶೆಯಾಗಿ ಕಾಡಿತ್ತೆಂದು ಕೇಳಿದ್ದೇನೆ. ಬೇರೆ ಯಾವ ನಶೆಯ ಪದಾರ್ಥಗಳ ಬಗ್ಗೆ ಮಾತನಾಡುವಷ್ಟು ಜ್ಞಾನ ನನ್ನಲ್ಲಿ ಇಲ್ಲ.