ರಮೇಶ್‌ ಅರವಿಂದ್‌ ನಾಯಕ ನಟರಾಗಿ ಅಭಿನಯಿಸಿರುವ, ಆಕಾಶ್‌ ಶ್ರೀವತ್ಸ ನಿರ್ದೇಶನದ, ರೇಖಾ ಕೆಎನ್‌ ಮತ್ತು ಅನೂಪ್‌ ಗೌಡ ನಿರ್ಮಾಣದ ‘ಶಿವಾಜಿ ಸುರತ್ಕಲ್‌ 2’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ರಮೇಶ್‌ ಅರವಿಂದ್‌ ಸಂದರ್ಶನ.

ರಾಜೇಶ್‌ ಶೆಟ್ಟಿ

ಶಿವಾಜಿ ಸುರತ್ಕಲ್‌ 2 ಸಿನಿಮಾ ಈ ಕಾಲಕ್ಕೆ ತಕ್ಕಂತೆ ನಿಮಗೆ ಎಷ್ಟುಮುಖ್ಯ?

100 ಸಿನಿಮಾ ಆದಮೇಲೆ ನಾನು ಇದುವರೆಗೆ ಮಾಡದೇ ಇರುವಂತಹ ಸಿನಿಮಾ, ಪಾತ್ರ ಮಾಡಬೇಕು ಅನ್ನುವ ಆಸೆ ಇತ್ತು. ಆ ಹಿನ್ನೆಲೆಯಲ್ಲಿ ಮಾಡಿದ ಸಿನಿಮಾ ಪುಷ್ಪಕ ವಿಮಾನ, 100 ಮತ್ತು ಶಿವಾಜಿ ಸುರತ್ಕಲ್‌. ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ 10 ಸಿನಿಮಾಗಳ ಲಿಸ್ಟ್‌ ನೋಡಿದರೆ ಅದರಲ್ಲಿ ಬಹುತೇಕ ಸಿನಿಮಾಗಳು ಸಸ್ಪೆನ್ಸ್‌ ಮಿಸ್ಟ್ರಿ ಚಿತ್ರಗಳು. ನಮ್ಮ ಈ ಸಿನಿಮಾ ಕೂಡ ಮರ್ಡರ್‌ ಮಿಸ್ಟ್ರಿ.

ಶಿವಾಜಿ ಪಾತ್ರ ನಿಮಗೆ ಎಷ್ಟುಆಪ್ತ, ಎಷ್ಟುಹತ್ತಿರ?

ಷೆರ್ಲಾಕ್‌ ಹೋಮ್ಸ್‌ ಪಾತ್ರ ಎಷ್ಟೋ ಕಾಲದಿಂದ ನಮ್ಮ ಗಮನ ಸೆಳೆಯುತ್ತಿದೆ. ಅಂಥಾ ಒಂದು ಶಕ್ತಿಯುತ ಪಾತ್ರ ಇದ್ದರೆ ಹೊಸ ಹೊಸ ಕತೆಯನ್ನು ಹೇಳಬಹುದು. ಶಿವಾಜಿ ನಗೋದೇ ಇಲ್ಲ. ಅವನಿಗೆ ನಿದ್ರೆ ಬರಲ್ಲ. ಅವನಿಗೆ ಸತ್ತೋಗಿರೋರು ಕನಸಲ್ಲಿ ಬರುತ್ತಾರೆ. ಅವನಿಗೇ ಹತ್ತಾರು ಸಮಸ್ಯೆಗಳಿವೆ. ಅವೆಲ್ಲವನ್ನೂ ಮೀರಿ ಅವನು ಸಮಸ್ಯೆಗಳನ್ನು ಭೇದಿಸುತ್ತಾನೆ. ಅವನು ಅಪರಿಪೂರ್ಣ ಹೀರೋ. ಆದರೆ ಪ್ರೇಕ್ಷಕನಿಗೆ ಕನೆಕ್ಟ್ ಆಗಬಲ್ಲ ಹೀರೋ. ಸಿನಿಮಾ ನೋಡುತ್ತಿರುವಷ್ಟೂಹೊತ್ತು ಪ್ರೇಕ್ಷಕನೂ ಶಿವಾಜಿಯೇ ಆಗಿರುತ್ತಾನೆ. ಪ್ರೇಕ್ಷಕ ಹುಡುಕಿರುವ ಕೊಲೆಗಾರ, ಶಿವಾಜಿ ಹುಡುಕುವ ಕೊಲೆಗಾರ ಒಬ್ಬನೇನಾ ಅನ್ನುವುದೇ ಈ ಸಿನಿಮಾ.

ತಮಿಳು- ತೆಲುಗು ಸಿನಿಮಾ ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್‌ ಹೆಚ್ಚಿರುತ್ತಿತ್ತು: ನಟ ರಮೇಶ್ ಅರವಿಂದ್ ಶಾಕಿಂಗ್ ಹೇಳಿಕೆ

ನೀವು ಸಿನಿಮಾ ಒಪ್ಪಿಕೊಳ್ಳುವಾಗ ಗಮನಿಸುವ ಅಂಶಗಳೇನು? ಈ ಸಿನಿಮಾ ಯಾಕೆ ಇಷ್ಟವಾಯಿತು?

ಎರಡೂವರೆ ಗಂಟೆ ನನ್ನನ್ನು ಆಚೀಚೆ ಹೋಗದಂತೆ ಒಂದೇ ಕಡೆ ಕೂರಿಸುವ ಮನರಂಜನೆಯನ್ನು ಒದಗಿಸುತ್ತದಾ? ಆ ಸಿನಿಮಾದಲ್ಲಿ ನನಗೆ ಪ್ರಮುಖವಾದ, ಶಕ್ತಿಯುತವಾದ ಪಾತ್ರ ಇದೆಯಾ? ಆಸಿನಿಮಾವನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವ ಶಕ್ತಿ ತಂಡಕ್ಕೆ ಇದೆಯಾ? ಇವೆಲ್ಲವೂ ಇದ್ದರೆ ಸಿನಿಮಾ ಒಪ್ಪುತ್ತೇನೆ. ಇಲ್ಲಿ ವೇಗದ ಥ್ರಿಲ್ಲರ್‌ ಕತೆ ಇದೆ. ಸಂಬಂಧಗಳನ್ನು ಸಂಭ್ರಮಿಸುವ ರೀತಿ ಇದೆ. ಜೊತೆಗೊಂದು ಸೈಕಾಲಜಿಕಲ್‌ ವಾರ್‌ ಇದೆ. ಶಿವಾಜಿಯ ಒಳಗೇ ಒಬ್ಬ ರಾಕ್ಷಸ ಇದ್ದಾನೆ. ಅವನೊಂದಿಗಿನ ಹೋರಾಟ ಇದೆ. ನಾವು ಹೊರಗಿನ ರಾಕ್ಷಸರ ಜೊತೆ ಹೋರಾಡಬಹುದು. ಆದರೆ ಒಳಗಿರುವ ರಾಕ್ಷಸನನ್ನು ಗುರುತಿಸುವುದೇ ಕಷ್ಟ.

ಈ ಸಿನಿಮಾ ದಾಟಿಸುವ ವಿಚಾರ ಯಾವುದು?

ನಮಗೆ ಇಷ್ಟವಾಗಿರುವುದನ್ನೆಲ್ಲಾ ಕಳೆದುಕೊಳ್ಳುತ್ತಾ ಬರುವುದೇ ಜೀವನ ಎಂಬುದು ಬುದ್ಧನ ಒಂದು ಮಹತ್ವದ ಹೇಳಿಕೆ. ನಾವು ಇಷ್ಟಪಟ್ಟವಿಚಾರ, ವ್ಯಕ್ತಿ, ವಸ್ತು ಎಲ್ಲವನ್ನೂ ನಾವು ಕಳೆದುಕೊಳ್ಳುತ್ತಾ ಬರುತ್ತೇವೆ. ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಇಂಥದ್ದೊಂದು ಆಳವಾದ, ಗಾಢವಾದ ವಿಚಾರವನ್ನು ದಾಟಿಸಲು ಯತ್ನಿಸಿದ್ದೇವೆ.

ಬುದ್ಧಿಗೆ ಕೆಲಸ ಕೊಡುವ, ಹೃದಯ ತಾಕುವ ಚಿತ್ರ ಶಿವಾಜಿ ಸುರತ್ಕಲ್‌ 2: ನಿರ್ದೇಶಕ ಆಕಾಶ್‌ ಶ್ರೀವತ್ಸ

ಈ ಕಾಲಕ್ಕೆ ಸಲ್ಲಬೇಕಾದರೆ ಎಂಥಾ ಸಿನಿಮಾ ಬೇಕು?

ಎಲ್ಲಾ ಕಾಲಘಟ್ಟದಲ್ಲೂ ಅಂಥಾ ಪ್ರಶ್ನೆ ಇತ್ತು. ಅದಕ್ಕೆ ಉತ್ತರ ಇಲ್ಲ. ಉತ್ತರ ಇಲ್ಲದೇ ಇರುವುದೇ ಚಂದ. ಒಂದೊಳ್ಳೆ ಸಿನಿಮಾ ಬಂದಾಗ ಎಲ್ಲರೂ ಹೋಗಿ ನೋಡಿ ಬರುತ್ತಾರೆ. ಆ ಒಳ್ಳೆಯ ಸಿನಿಮಾ ಯಾವುದು ಎನ್ನುವುದು ಅವರವರ ಸ್ನೇಹಿತ ವರ್ಗ ಸೂಚಿಸುತ್ತದೆ. ನಮ್ಮ ಶಿವಾಜಿ ಸುರತ್ಕಲ್‌ 2 ಕೂಡ ಅಂಥಾ ಒಂದು ಸಿನಿಮಾ ಆಗಲಿ ಎಂಬುದೇ ನಮ್ಮ ಆಶಯ.