ಲವ್ 360 ಪಾತ್ರ ಸಖತ್ ಚಾಲೆಂಜಿಂಗ್ ಎಂದ ಲವ್ ಮಾಕ್ಟೇಲ್ ಚೆಲುವೆ
- ಲವ್ 360 ಪಾತ್ರ ಸಖತ್ ಚಾಲೆಂಜಿಂಗ್ ಎಂದ ರಚನಾ ಇಂದರ್
- ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾದ ನಾಯಕಿ
ಲವ್ ಮಾಕ್‌ಟೇಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ರಚನಾ ಇಂದರ್. ಸದ್ಯ ಅವರೀಗ ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾದ ನಾಯಕಿ. ಹೊಸ ಬಗೆಯ ಪಾತ್ರದ ಬಗ್ಗೆ ಅವರಿಲ್ಲಿ ಮಾತಾಡಿದ್ದಾರೆ.
ಶಶಾಂಕ್ ಅವರ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾ?
ಈ ಪಾತ್ರ ತುಂಬ ಡಿಫರೆಂಟ್ ಆಗಿದೆ. ಮುಂಚೆ ಯಾವ ಸಿನಿಮಾದಲ್ಲೂ ಇಂಥಾ ಪಾತ್ರ ಮಾಡಿಲ್ಲ. ಇದು ಖಂಡಿತಾ ನಾರ್ಮಲ್ ಪಾತ್ರವಂತೂ ಅಲ್ಲ. ತುಂಬ ಖುಷಿ ಇದೆ.
ಈ ಪಾತ್ರಕ್ಕೆ ನೂರಾರು ಜನರ ಆಡಿಶನ್ ಮಾಡಿ, ಕೊನೆಗೆ ಆಯ್ಕೆ ಮಾಡಿದ್ದು ನಿಮ್ಮನ್ನು. ಇದಕ್ಕೆ ಕಾರಣ ಏನು ಅನಿಸುತ್ತೆ?
ಅದು ನನಗೆ ಗೊತ್ತಿಲ್ಲ. ಶಶಾಂಕ್ ಸರ್ ಒಮ್ಮೆ ಮೀಟ್ ಮಾಡಾಣ ಬನ್ನಿ ಅಂತ ಕರೆದಿದ್ರು. ಆಗ ಲುಕ್ ಟೆಸ್‌ಟ್ ಮಾಡಿದ್ರು. ಆಮೇಲೆ, ಡೈಲಾಗ್ ಮಾಡೋಣ್ವಾ ಅಂತ ಕೇಳಿದ್ರು. ನಾನು ಓಕೆ ಅಂದೆ. ಅವತ್ತು ಆಡಿಶನ್ ಮುಗೀತು. ಅದೇ ದಿನ ನನ್ನ ಆಯ್ಕೆಯನ್ನೂ ತಿಳಿಸಿದರು.
ಅಷ್ಟಕ್ಕೂ ಈ ಪಾತ್ರ ಯಾವ ಥರದ್ದು?
ಸದ್ಯಕ್ಕೆ ಅದನ್ನು ರಿವೀಲ್ ಮಾಡೋ ಹಾಗಿಲ್ಲ. ಪಾತ್ರ ಬಹಳ ಚಾಲೆಂಜಿಂಗ್ ಅನ್ನೋದನ್ನಷ್ಟೇ ಹೇಳಬಲ್ಲೆ.
ಆ ಚಾಲೆಂಜಿಂಗ್ ಪಾತ್ರ ಮಾಡುವ ಕಾನ್ಛಿಡೆನ್ಸ್ ಇದೆಯಾ?
ಕಾನ್ಛಿಡೆನ್ಸ್ ಏನೋ ಇದೆ. ಆದರೆ ಬಹಳ ಪ್ರಾಕ್ಟೀಸ್ ಮಾಡಬೇಕು. ಈ ಪಾತ್ರಕ್ಕೆ ಬೇರೆ ಸಿನಿಮಾಗಳಲ್ಲಿ ರೆಫರೆನ್ಸ್ ಸಿಗೋದು ಕಷ್ಟ. ಶೂಟಿಂಗ್ ಗೂ ಮೊದಲು ರಿಹರ್ಸಲ್ ಮಾಡಬೇಕಿದೆ. ಇವತ್ತು ಫಸ್ಟ್ ಪೋಸ್ಟರ್ ಶೂಟ್ ಇದೆ.
ಹೆಚ್ಚಿನ ಹೀರೋಯಿನ್‌ಗಳು ಐತಿಹಾಸಿಕ ಪಾತ್ರದ ತಲಾಶೆಯಲ್ಲಿದ್ದಾರೆ. ನಿಮಗೂ ಅಂಥಾ ಕನಸಿದೆಯಾ?
ಸದ್ಯಕ್ಕಂತೂ ಇಲ್ಲ. ನಾನು ನಿರ್ದೇಶಕರು, ಬ್ಯಾನರ್, ಹೀರೋ ಗಮನಿಸಿ ಸಿನಿಮಾ ಆಯ್ಕೆ ಮಾಡುತ್ತಿದ್ದೇನೆ. ಈಗ ಒಟ್ಟು ನಾಲ್ಕು ಪ್ರಾಜೆಕ್‌ಟ್
ಕೈಯಲ್ಲಿದೆ. ರಿಷಬ್ ಅವರ ಹರಿಕಥೆ ಅಲ್ಲ ಗಿರಿಕಥೆ, ತ್ರಿಬಲ್ ರೈಡಿಂಗ್, ಸ್ವರೂಪ್ ಅಂತ ಹೊಸ ನಿರ್ದೇಶಕರ ಜೊತೆ ಒಂದು ಸಿನಿಮಾ, ಆಮೇಲೆ ಈ ಚಿತ್ರ.
ನಿಮ್ಮೂರು, ನಿಮ್ಮ ಓದು?
ತಾಯಿ ಊರು ಮಡಿಕೇರಿಯ ಭಾಗಮಂಡಲ. ಅಪ್ಪ ಆಂಧ್ರದವರು. ನಾನು ಬೆಳೆದದ್ದು, ಓದಿದ್ದು ಬೆಂಗಳೂರಿನಲ್ಲೇ. ಬಿಕಾಂ ಮುಗಿದಿದೆ. ಈಗ
ಎಂಬಿಎ ಓದುತ್ತಿರುವೆ.
ಹೈ ಓಲ್ಟೇಜ್ ನಟನೆ ಬೇಡೋ ಪಾತ್ರ: ಶಶಾಂಕ್
ನನ್ನ ಲವ್ 360 ಚಿತ್ರದಲ್ಲಿ ಎಲ್ಲಾ ಎಮೋಶನ್‌ಗಳೂ ಇರುವ ಪಾತ್ರ ರಚನಾ ಅವರದು. ಈಕೆ ತುಂಬ ಎಂಟರ್‌ಟೇನ್ ಮಾಡ್ತಾಳೆ, ಹಾಗೇ ಅಳಿಸ್ತಾಳೆ. ಇದು ಯುನಿಕ್ ಅನಿಸೋ ಪಾತ್ರ. ಹೈ ಓಲ್ಟೇಜ್ ನಟನೆಯನ್ನು ಬೇಡುತ್ತೆ. ಈ ಪಾತ್ರಕ್ಕಾಗಿ ನೂರಾರು ಹುಡುಗಿಯರನ್ನು
ಆಡಿಶನ್ ಮಾಡಿದ್ದೆ. ಅಪೀಯರೆನ್‌ಸ್, ನಟನೆ ಎಲ್ಲದರಲ್ಲೂ ಕರೆಕ್ಟಾಗಿ ಹೊಂದಿಕೆಯಾದದ್ದು ರಚನಾ ಎಂದಿದ್ದಾರೆ ಶಶಾಂಕ್.