Special Interview: ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ ಎಂದು ಸಂದರ್ಶನದಲ್ಲಿ ನಟಿ ನಿಮಿಷಾ ಚಂದ್ರ ತಿಳಿಸಿದರು.
ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಕೇಳಿದ್ದೇನೆ, ಆದರೆ ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ ಎಂದು ನಟಿ ನಿಮಿಷಾ ಚಂದ್ರ ಹೇಳಿದ್ದಾರೆ. ಗ್ಲಾಮರ್ ಪಾತ್ರಗಳು, ನಾಯಕಿಯ ಘನತೆ ಮತ್ತು ಸಿನಿಮಾ ಪಯಣದ ಬಗ್ಗೆ ವಿಶೇಷ ಸಂದರ್ಶನ.
ಪ್ರಿಯಾ ಕೆರ್ವಾಶೆ
* ಸಿನಿಮಾರಂಗಕ್ಕೆ ಎಂಟ್ರಿ ಹೇಗೆ?
ನನ್ನ ತಾತ ಟೆಂಟ್ ಸಿನಿಮಾ ನಡೆಸ್ತಿದ್ರು. ವಿತರಣೆಯನ್ನೂ ಮಾಡುತ್ತಿದ್ದರು. ತಂದೆ ಬರಹಗಾರರು. ಕೇಶವಚಂದ್ರ ಅಂತ. ಲಕುಮಿ, ಪುಟ್ಟಗೌರಿ ಮದುವೆ ಆರಂಭದ ಭಾಗ ಸೇರಿ ಒಂದಿಷ್ಟು ಧಾರಾವಾಹಿಗಳಿಗೆ, ಸಿನಿಮಾಗಳಿಗೆ ಸ್ಕ್ರಿಪ್ಟ್ ಕೆಲಸ ಮಾಡಿದ್ದಾರೆ. ನಾನು ಬಿ.ಸುರೇಶ್ ಅವರ ‘ನಾಕುತಂತಿ’ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿದ್ದೆ. ಮುಂದೆ ಆನಿಮೇಶನ್ ಮತ್ತು ಡಿಜಿಟಲ್ ಮೀಡಿಯಾದಲ್ಲಿ ಡಿಗ್ರಿ ಮಾಡಿದೆ. ಈ ವೇಳೆ ಶಾರ್ಟ್ ಫಿಲಂಗಳನ್ನೂ ಮಾಡ್ತಿದ್ವಿ. ಆಗೆಲ್ಲ ನಟನೆಯತ್ತ ನನ್ನ ಒಲವಿರುವುದು ಸ್ಪಷ್ಟವಾಯಿತು. ಇನ್ನೇನು ಆ್ಯಕ್ಟಿಂಗ್‌ನಲ್ಲಿ ಕೋರ್ಸ್ ಮಾಡಬೇಕು ಅನ್ನುವಾಗ ‘ಗೋಪಿಲೋಲ’ ಸಿನಿಮಾದ ನಾಯಕಿ ಪಾತ್ರಕ್ಕೆ ಕರೆಬಂತು. ‘ಕನಕರಾಜ’ ಎರಡನೇ ಚಿತ್ರ.
* ಅಪ್ಪನಂತೆ ಬರವಣಿಗೆ ಮೇಲೆ ಪ್ರೀತಿ ಇದೆಯಾ?
ಇದೆ. ಸದ್ಯ ಕಥೆ ಬರೀತಿದ್ದೇನೆ. ಅಪ್ಪ ಗೈಡ್ ಮಾಡ್ತಿದ್ದಾರೆ. ನಿರ್ದೇಶನದಲ್ಲೂ ಆಸಕ್ತಿ ಇದೆ. ಈ ಹಿಂದಿನ ಚಿತ್ರ ‘ಗೋಪಿಲೋಲ’ ಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೆ.
* ಸಿನಿಮಾರಂಗ ನಾಯಕಿಯರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ?
ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ. ಆದರೆ ನಾನು ಆ ವಿಷಯದಲ್ಲಿ ಸ್ಟ್ರಿಕ್ಟ್. ಆ ಥರದ ಕಾಂಪ್ರಮೈಸ್ ಇರಲ್ಲ ಅನ್ನುವುದನ್ನು ಸ್ಪಷ್ಟವಾಗಿ ಹೇಳಿಯೇ ಸ್ಕ್ರಿಪ್ಟ್ ಕೈಗೆತ್ತಿಕೊಳ್ಳುತ್ತೇನೆ.
* ಕಳೆದ ವಾರ ಜಾನ್ವಿ ಕಪೂರ್ ಬೋಲ್ಡ್‌ನೆಸ್ ಬಗ್ಗೆ ಚರ್ಚೆ ಆಯ್ತಲ್ಲಾ..
ಅವರ ನಡುವೆ ಏನು ಕಮಿಟ್‌ಮೆಂಟ್ ಇತ್ತೋ ಗೊತ್ತಿಲ್ಲ. ಆದರೆ ನಾಯಕಿಯ ವ್ಯಕ್ತಿತ್ವದ ಘನತೆ ಕಾಯಬೇಕು ಅನ್ನುವುದು ನನ್ನ ಅಭಿಪ್ರಾಯ. ನನಗೆ ವ್ಯಕ್ತಿತ್ವ ಇಲ್ಲದ ನಾಯಕಿ ಪಾತ್ರ ಇಷ್ಟವಿಲ್ಲ. ನನ್ನ ಅದೃಷ್ಟಕ್ಕೆ ಈ ಎರಡೂ ಸಿನಿಮಾಗಳಲ್ಲೂ ಸ್ವತಂತ್ರ ವ್ಯಕ್ತಿತ್ವದ ಅಭಿನಯಕ್ಕೆ ಅವಕಾಶ ಇರುವ ನಾಯಕಿ ಪಾತ್ರ ಸಿಕ್ಕಿದೆ.
* ಗ್ಲಾಮರಸ್, ಬೋಲ್ಡ್ ಪಾತ್ರಗಳಲ್ಲಿ ನಟಿಸ್ತೀರ?
ಕಥೆ ಪೂರಕವಾಗಿದ್ದರೆ, ಒಂದು ಚೌಕಟ್ಟಿನೊಳಗಿದ್ದರೆ ಗ್ಲಾಮರ್ ಪಾತ್ರದಲ್ಲಿ ನಟಿಸಲು ಅಡ್ಡಿಯಿಲ್ಲ. ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲು ರೆಡಿ. ಹಾಗೆಂದು ಕನ್ನಡ ನನ್ನ ಭಾಷೆ. ಇದರಲ್ಲೇ ಮುಂದೆ ಹೋಗಬೇಕು ಎಂಬ ತುಡಿತವೂ ಇದೆ.


