ಆದಿತ್ಯ ನಾಯಕನಾಗಿರುವ ಇನ್ನೂ ಹೆಸರಿಡದ ಸಸ್ಪೆನ್ಸ್ ಥ್ರಿಲ್ಲರ್‌ನ ನಾಯಕಿಯಾಗಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಕಿಶೋರ್ ಮೇಗಳಮನೆ ನಿರ್ದೇಶಕರು. ಸಿನಿಮಾ, ಲೈಫಿನ ಬಗ್ಗೆ ರಂಜನಿ ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

- ಅಪರೂಪಕ್ಕೆ ಸಸ್ಪೆನ್ಸ್‌ ಥ್ರಿಲ್ಲರ್‌ನಲ್ಲಿ ನಟಿಸಿದ್ದೀರಿ. ಪಾತ್ರ, ಅನುಭವ?

ಹೌದು. ಸೈಕಿಯಾಟ್ರಿಸ್ಟ್‌ ಪಾತ್ರ. ನನ್ನ ಭಾಗದ ಶೂಟಿಂಗ್‌ ನಾಲ್ಕೈದು ದಿನಗಳಷ್ಟೇ ನಡೆದಿದೆ. ಆದಿತ್ಯ ಈ ಚಿತ್ರದಲ್ಲಿ ಪೊಲೀಸ್‌ ಆಫೀಸರ್‌ ಆಗಿದ್ದಾರೆ. ನಾನೂ ಅವರು ಗಂಡ ಹೆಂಡತಿ ಪಾತ್ರದಲ್ಲಿ ನಟಿಸಿದ್ದೇವೆ. ಹೆಚ್ಚಿನ ಭಾಗದ ಶೂಟಿಂಗ್‌ ರಾತ್ರಿಯೇ ನಡೆಯುತ್ತೆ. ನನಗಿದು ಹೊಸ ಅನುಭವ. ಸಿನಿಮಾ ಫಿಲ್ಮಿ ಫಿಲ್ಮಿ ಅನಿಸದೇ ರಿಯಲಿಸ್ಟಿಕ್‌ ಆಗಿದೆ. ನಿರ್ದೇಶಕರಿಗೆ ಸಿನಿಮಾ ಬಗ್ಗೆ ಇರುವ ಸ್ಪಷ್ಟತೆ, ಉತ್ತಮ ಕಥೆ ನನಗಿಷ್ಟವಾಯ್ತು.

- ನಿಮ್ಮ ಪಾತ್ರಕ್ಕಿರೋ ಸ್ಕ್ರೀನ್‌ ಸ್ಪೇಸ್‌?

ಇಡೀ ಸಿನಿಮಾ ನಮ್ಮಿಬ್ಬರ ಪಾತ್ರದ ಮೇಲೇ ನಿಂತಿದೆ. ಪದೇ ಪದೇ ಬರುವ ಮಿಸ್ಸಿಂಗ್‌ ಕಂಪ್ಲೇಂಟ್ಸ್‌ಗಳ ಹಿಂದಿನ ರಹಸ್ಯ ಕಥೆ ಸಿನಿಮಾದ್ದು.

ಗಾಯಕಿ ಆಗ್ಬೇಕಿತ್ತು ಅಗಲಿಲ್ಲ, HR ಆಸೆ ಇತ್ತು ಅಗಲಿಲ್ಲ; ತಪ್ಪು ದಾರಿಯಲ್ಲಿದ್ದು ಅಕ್ಟಿಂಗ್ ಅವಕಾಶ ಪಡೆದ 'ಕನ್ನಡತಿ' ರಂಜನಿ

- ಕನ್ನಡತಿ ಬಳಿಕ ಯಾವ ಥರದ ಪಾತ್ರಗಳು ಹೆಚ್ಚೆಚ್ಚು ಬರುತ್ತಿವೆ?

ಗಟ್ಟಿತನ, ಸ್ಟ್ರಾಂಗ್‌ ವ್ಯಕ್ತಿತ್ವ ಇರುವ ಪಾತ್ರಗಳು ಹೆಚ್ಚು ಬರುತ್ತಿವೆ. ನನಗೂ ಅಂಥಾ ಪಾತ್ರಗಳೇ ಇಷ್ಟ.

- ಕನ್ನಡತಿ ಜೋಡಿಯನ್ನು ಸಿನಿಮಾದಲ್ಲೂ ನೋಡ್ಬೇಕು ಅಂತಿದ್ದಾರಲ್ಲ ಜನ?

ಕನ್ನಡತಿಯಲ್ಲಿ ನನ್ನ ಹಾಗೂ ಕಿರಣ್‌ ರಾಜ್‌ ನಡುವಿನ ಕೆಮೆಸ್ಟ್ರಿ, ಮ್ಯಾನರಿಸಂ ಬಹಳ ಚೆನ್ನಾಗಿ ಕ್ಲಿಕ್‌ ಆಯ್ತು. ಅದರ ಚಿತ್ರಕಥೆಯೂ ಸೊಗಸಾಗಿತ್ತು. ಈಗ ನಮ್ಮಿಬ್ಬರಿಗೂ ಜೊತೆಯಾಗಿ ಸಿನಿಮಾದಲ್ಲಿ ನಟಿಸುವ ಕನಸಿದೆ. ಒಳ್ಳೆಯ ಸ್ಕ್ರಿಪ್ಟ್‌ ಹುಡುಕಾಟದಲ್ಲಿದ್ದೇವೆ. ಹೊಸತನ, ಚಾರ್ಮಿಂಗ್‌ ಆಗಿರೋ ಸ್ಕ್ರಿಪ್ಟ್‌ ಸಿಕ್ಕರೆ ಖಂಡಿತಾ ಜೊತೆಯಾಗಿ ನಟಿಸುತ್ತೇವೆ. ಈಗಾಗಲೇ ಕೆಲವು ಸ್ಕ್ರಿಪ್ಟ್‌ ಬಂದಿವೆ. ಕನ್ವಿನ್ಸಿಂಗ್‌ ಅನಿಸದ ಕಾರಣ ಒಪ್ಪಿಕೊಂಡಿಲ್ಲ.

- ನೀವು ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದೀರಿ. ಸಿನಿಮಾ ಸ್ಕ್ರಿಪ್ಟ್‌ ಬರೆಯೋ ಯೋಚನೆ ಇದೆಯಾ?

ಆ ಕೆಲಸ ಆರಂಭಿಕ ಹಂತದಲ್ಲಿದೆ. ನಮ್ಮ ಪ್ರತಿಭೆಯನ್ನು ಯಾರೋ ಬಂದು ಗುರುತಿಸುತ್ತಾರೆ ಅಂತ ಕಾಯುತ್ತಾ ಕೂರೋದರಲ್ಲಿ ಅರ್ಥವಿಲ್ಲ. ನಮ್ಮ ಕೆಲಸ ನಾವು ಮಾಡ್ತಾ ಇರಬೇಕು.

ಗೂಗಲ್‌ ಸೀರೆಯಲ್ಲಿ ಮಿಂಚಿದ ಕನ್ನಡತಿ ರಂಜನಿ ರಾಘವನ್‌

- ಉತ್ತರ ಭಾರತದ ಕಡೆ ಟೂರ್‌ ಮಾಡಿದ ಹಾಗಿತ್ತು?

ಅದು ಇಂಧೋರ್‌. ಮಧ್ಯ ಭಾರತ. ಬಹಳ ಖುಷಿ ಕೊಟ್ಟ ಪ್ರವಾಸ. ಜನರಿಗೆ ಅಷ್ಟಾಗಿ ತಿಳಿಯದ ಜಾಗಗಳನ್ನ ನೋಡಿದೆ. ಸರಾಫ ಬಜಾರ್‌ ಅಂತ ನಮ್‌ ಚಿಕ್ಕಪೇಟೆ ಥರದ ಒಂದು ಸ್ಟ್ರೀಟ್‌. ಅಲ್ಲಿ ಬೆಳಗ್ಗಿಂದ ರಾತ್ರಿವರೆಗೆ ಜ್ಯುವೆಲ್ಲರಿಯಂಥಾ ಐಟಂ ಮಾರುತ್ತಿರುತ್ತಾರೆ. ರಾತ್ರಿ ಒಂಭತ್ತು ಗಂಟೆ ಆಗ್ತಿದ್ದ ಹಾಗೆ ಜ್ಯುವೆಲ್ಲರಿ ಶಾಪ್‌ ಕ್ಲೋಸ್‌ ಆಗಿ ಅದೇ ಜಾಗದಲ್ಲಿ ತಿಂಡಿಗಳ ಭರ್ಜರಿ ಮಾರಾಟ ಶುರುವಾಗುತ್ತದೆ. ಮಧ್ಯರಾತ್ರಿ 2 ಗಂಟೆಯವರೆಗೆ ಸ್ಟ್ರೀಟ್‌ ಫುಡ್‌ ಬ್ಯುಸಿನೆಸ್‌ ಮಾಡ್ತಾರೆ. ಇನ್ನೊಂದು ಛಪ್ಪನ್‌ ಅನ್ನೋ ಸ್ಟ್ರೀಟ್‌. ಅಂದರೆ 56 ನಂಬರ್‌. ಅಷ್ಟೇ ಸಂಖ್ಯೆಯ ಶಾಪ್‌ಗಳು ಅಲ್ಲಿರೋದು. ಇಲ್ಲೆಲ್ಲ ಅದ್ಭುತ ಫುಡ್‌ ವೆರೈಟಿ ಟೇಸ್ಟ್‌ ಮಾಡಿದೆ.