ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ಡ್ರೀಮ್ ಪಾತ್ರ ಸಿಕ್ಕಿದೆ: Rukmini Vasanth
ರುಕ್ಮಿಣಿ ವಸಂತ್ ಲಂಡನ್‌ನ ಸ್ಕೂಲ್ ಆಫ್ ಆ್ಯಕ್ಟಿಂಗ್‌ನಲ್ಲಿ ನಟನೆ ಕಲಿತಿರುವ ಪ್ರತಿಭಾವಂತೆ. ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿದ್ದಾರೆ. ಮೊದಲರ್ಧದ ಶೂಟಿಂಗ್ ಮುಗಿಸಿರುವ ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದ ಬಗ್ಗೆ, ಅವರ ಆಸಕ್ತಿಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
ಪ್ರಿಯಾ ಕೆರ್ವಾಶೆ
ಸಪ್ತಸಾಗರದಾಚೆಗೆಲ್ಲೋ ಶೂಟಿಂಗ್ ಅನುಭವ?
ಕೋ ವಿಡ್ ನಡುವೆ ಕೆಲಸಗಳು ಸ್ವಲ್ಪ ನಿಧಾನವಾದರೂ ಮಾಡಿರುವ ಕೆಲಸದ ಬಗ್ಗೆ ಬಹಳ ತೃಪ್ತಿ ಇದೆ. ಬಹಳ ಸ್ಮೂತ್ ಆಗಿ ಎಲ್ಲ ನಡೆದುಕೊಂಡು ಹೋದವು. ಪ್ರತೀ ದಿನದ ಅನುಭವವೂ ಬಹಳ ಸೊಗಸಾಗಿತ್ತು.
ರಕ್ಷಿತ್ ಶೆಟ್ಟಿ ಜೊತೆಗಿನ ನಿಮ್ಮ ಕಾಂಬಿನೇಶನ್ ಬಹಳ ಸೊಗಸಾಗಿದೆ ಅಂತ ಜನ ಹೇಳ್ತಿದ್ದಾರೆ. ನೀವೇನಂತೀರಿ?
ಖುಷಿ ಆಗುತ್ತೆ. ಇದೊಂದು ಲವ್ ಸ್ಟೋರಿ. ಬಹಳ ಎಮೋಶನಲ್ ಸಬ್ಜೆಕ್ಟೂ ಆಗಿರುವ ಕಾರಣ ಹೇಮಂತ್ ಮೊದಲೇ ವರ್ಕ್‌ಶಾಪ್ ಮಾಡಿದ್ರು. ಅಲ್ಲಿ ಪಾತ್ರದ ಬಗ್ಗೆ, ನಮ್ಮ ಮೂವ್‌ಮೆಂಟ್ ಬಗ್ಗೆ ಸ್ಪಷ್ಟ ಚಿತ್ರ ಸಿಕ್ಕಿತ್ತು. ಹೀಗಾಗಿ ಸಿನಿಮಾದುದ್ದಕ್ಕೂ ಸಹಜವಾಗಿ ನಟಿಸೋದು ಸಾಧ್ಯವಾಯ್ತು.
ಈ ಸಿನಿಮಾದಲ್ಲಿ ನಿಮ್ಮನ್ನು ಟಚ್ ಮಾಡಿರೋ ಅಂಶಗಳು?
ಪ್ರತೀ ಸೀನ್ ಸಹ ಸ್ಪೆಷಲ್ ಆಗಿತ್ತು. ಇಡೀ ಸಿನಿಮಾದ ಕಾನ್ಸೆಪ್‌ಟ್, ಥಾಟ್ ಬಹಳ ಇಷ್ಟ ಆಯ್ತು.
ಬೀರ್‌ಬಲ್ ಬಳಿಕ ಇದು ಎರಡನೇ ಸಿನಿಮಾ. ಇಲ್ಲಿ ಕಲಿತ ಪಾಠಗಳು?
ಕೊಲಾಬರೇಶನ್ ಸ್ಪಿರಿಟ್ ಹೇಗಿರಬೇಕು ಅನ್ನೋದನ್ನು ಕಲಿತೆ. ಪ್ರತಿಯೊಬ್ಬರೂ ಅವರವರ ಕೆಲಸವನ್ನು ಬಹಳ ಚೆನ್ನಾಗಿ ನಿರ್ವಹಿಸುವ ಜೊತೆಗೆ ಇಡೀ ಗ್ರೂಪಿನಲ್ಲೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದರು. ಟೀಮ್‌ಗೆ ಟೀಮೇ ಕ್ರಿಯಾಶೀಲವಾಗಿ ಕೆಲಸ ಮಾಡುವ ರೀತಿ ನನಗೆ ಕಲಿಯಬೇಕಿರೋದು ಅನಿಸಿತು.
ನಿಮ್ಮ ಪಾತ್ರದ ಬಗ್ಗೆ ಸ್ವಲ್ಪ ಹೇಳಬಹುದಾ?
ಇದರಲ್ಲಿ ನನ್ನ ಪಾತ್ರದ ಹೆಸರು ಪ್ರಿಯಾ. ಮೊದಲ ಅರ್ಧ ಭಾಗ ನಾನು ಕಾಲೇಜ್ಹುಡುಗಿ ಆಗಿರ್ತೀನಿ. ಸಿಂಗರ್ ಆಗಿರ್ತೀನಿ. ಎರಡನೇ ಭಾಗ 10 ವರ್ಷದ ನಂತರ ನಡೆಯೋದು. ಅದು ಹೇಗಿರುತ್ತೆ ಅಂತ ನೀವು ಸಿನಿಮಾದಲ್ಲಿ ನೋಡಬೇಕು.
ರಕ್ಷಿತ್ ಶೆಟ್ಟಿ ಜೊತೆಗೆ ಕೆಲಸ ಮಾಡಿದ ಅನುಭವ?
ಆರಂಭದಲ್ಲಿ ಭಯ ಇತ್ತು. ಇಷ್ಟು ದೊಡ್ಡ ಟೀಮ್, ರಕ್ಷಿತ್ ಅವರಂಥಾ ನಟನ ಜೊತೆಗೆ ಕೆಲಸ ಮಾಡೋದು ಹೇಗೋ ಏನೋ ಅಂತ. ಆದರೆ ರಕ್ಷಿತ್ ಅವರ ಫ್ರೆಂಡ್ಲಿ ಸ್ವಭಾವ, ಅವರು ಪಾತ್ರಕ್ಕೆ ಜೀವ ತುಂಬೋದಕ್ಕೆ ಹಾಕುವ ಎಫರ್ಟ್‌ಗಳು ಹಿಡಿಸಿದವು. ಟೇಕ್ ತಗೊಳ್ತಿದ್ರೂ ಬೇಜಾರು ಮಾಡಲ್ಲ, ಸಹ ನಟರನ್ನು ಡಿಸ್ಕರೇಜ್ಮಾಡಲ್ಲ. ಬದಲಿಗೆ ಪಾತ್ರ ಇನ್ನೂ ಚೆನ್ನಾಗಿ ನಿರ್ವಹಿಸೋ ಹಾಗೆ ಮಾಡ್ತಾರೆ.
ನೀವು ಡ್ಯಾನ್ಸರ್ ಕೂಡ. ಇದರಲ್ಲಿ ಆ ಪ್ರತಿಭೆಗೆ ಅವಕಾಶ?
ಈವರೆಗೆ ಸಿಕ್ಕಿಲ್ಲ. ಬದಲಿಗೆ ಹಾಡೋದಕ್ಕೆ ಅವಕಾಶ ಸಿಕ್ಕಿದೆ.
ನಿಮ್ಮ ಹಿನ್ನೆಲೆ?
ನನಗೆ ಹೈಸ್ಕೂಲ್ ದಿನಗಳಿಂದಲೇ ಪರ್ಫಾರ್ಮೆನ್‌ಸ್ ಅಂದರೆ ಇಷ್ಟ. ಒಂದು ವರ್ಷ ಲಂಡನ್‌ನ ಆ್ಯಕ್ಟಿಂಗ್ ಸ್ಕೂಲ್‌ನಲ್ಲಿ ನಟನೆ ಕಲಿತಿದ್ದೀನಿ. ಬೀರ್‌ಬಲ್ ಅನ್ನೋ ಸಿನಿಮಾದಲ್ಲಿ ನಟಿಸಿದೆ. ಭರತನಾಟ್ಯದ ಜೊತೆಗೆ 10 ವರ್ಷಗಳಿಂದ ವೆಸ್ಟರ್ನ್ ಬ್ಯಾಲೆ ಕಲಿಯುತ್ತಿದ್ದೇನೆ. ತಂದೆ ಮಿಲಿಟರಿ ಆಫೀಸರ್ ಆಗಿದ್ದವರು. ದೇಶದ ಬೇರೆ ಬೇರೆ ಭಾಗಗಳಲ್ಲಿ ಇದ್ದ ಕಾರಣ ಹಿಂದಿ ಸೇರಿದಂತೆ ಕೆಲವು ಭಾಷೆಗಳು ತಿಳಿದಿವೆ.
ಡ್ರೀಮ್ ರೋಲ್?
ಸಪ್ತಸಾಗರದಾಚೆಗೆಲ್ಲೋ ಚಿತ್ರದಲ್ಲಿ ಮಾಡುತ್ತಿರುವ ಪಾತ್ರ.