5 ವರ್ಷಗಳ ಬಳಿಕ ರಾಜೀವನಾಗಿ ತೆರೆಮೇಲೆ ಮಯೂರ್ ಪಾಟೇಲ್!
ಮಯೂರ್ ಪಟೇಲ್ ಮತ್ತೆ ನಟನೆಗೆ ಮರಳಿದ್ದಾರೆ. ಒಂದು ದೊಡ್ಡ ಗ್ಯಾಪ್ ನಂತರವೀಗ 'ರಾಜೀವ'ನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಐದು ವರ್ಷಗಳ ಗ್ಯಾಪ್ ನಂತರ ತೆರೆ ಮೇಲೆ ಬರುತ್ತಿರುವ ಖುಷಿ ಹೇಗಿದೆ?
ನಾನು ಅಭಿನಯಿಸುವ ಪ್ರತಿ ಸಿನಿಮಾವೂನನಗೆ ಮೊದಲ ಸಿನಿಮಾವೇ. ‘ಮಣಿ’ ಸಿನಿಮಾದ ಸಂದರ್ಭದಲ್ಲಿದ್ದ ಎಕ್ಸೈಟ್‌ಮೆಂಟ್ ಈಗಲೂ ಇದೆ. ಹಾಗೆಯೇ ಒಂದೊಳ್ಳೆಯ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆನ್ನುವ ಖುಷಿಯೂ ಇದೆ.
ಈ ಐದು ವರ್ಷಗಳ ಗ್ಯಾಪ್ ಯಾಕೆ ?
ನಿರ್ದಿಷ್ಟವಾಗಿ ಇಂತಹದೇ ಕಾರಣ ಇತ್ತು ಅಂತ ಹೇಳಲಾರೆ. ಆದ್ರೆ ಅದಕ್ಕೆ ಒಳ್ಳೆಯ ಕತೆ ಮತ್ತು ಪಾತ್ರ ಸಿಗಬೇಕೆನ್ನುವ ನಿರೀಕ್ಷೆಯ ಜತೆಗೆ ನನ್ನದೇ ಕೆಲವು ಕಾರಣಗಳಿದ್ದವು .
ಸಿನಿಮಾ ಆಗುತ್ತಿದೆ ಮದನ್ ಪಟೇಲ್‌ರ 'ತಮಟೆ' ಕಾದಂಬರಿ!
ಜ.3 ರಂದು ತೆರೆ ಕಾಣುತ್ತಿರುವ ‘ರಾಜೀವ’ ಚಿತ್ರದ ವಿಶೇಷತೆ ಏನು?
ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ರಾಜೀವ ಆತ ಪಟ್ಟಣದಲ್ಲಿ ಓದಿ ಐಎಎಸ್ ಪರೀಕ್ಷೆ ಬರೆದ ಹುಡುಗ. ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾಗ ಒಮ್ಮೆ ಹಳ್ಳಿಗೆ ಬರುತ್ತಾನೆ. ಆತನಿಗೆ ಅಲ್ಲಿ ಹಳ್ಳಿ ಜೀವನದ ಕಷ್ಟ-ಸುಖದ ನೈಜ ಬದುಕು ಗೊತ್ತಾಗುತ್ತದೆ. ಅಲ್ಲಿಂದ ಹಳ್ಳಿಯಲ್ಲೇ ಉಳಿದು ಏನಾದ್ರೂ ಮಾಡಬೇಕೆಂದು ನಿರ್ಧರಿಸುತ್ತಾನೆ. ಅದರ ಜತೆಗೆ ಒಂದಷ್ಟು ಕಮರ್ಷಿಯಲ್ ಅಂಶಗಳೂ ಚಿತ್ರದಲ್ಲಿವೆ.
ರಾಜೀವ ಅಂದಾಕ್ಷಣ ‘ಬಂಗಾರದ ಮನುಷ್ಯ’ಚಿತ್ರ ನೆನಪಾಗುತ್ತದೆ...
ಆ ಸಿನಿಮಾಕ್ಕೂ ಇದಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಆದ್ರೆ ಈ ಕತೆಗೆ, ಆ ಸಿನಿಮಾವೇ ಸ್ಫೂರ್ತಿ ಎನ್ನುವುದು ನಿಜ. ನಿರ್ಮಾಪಕ ಬಿ.ಎಮ್. ರಮೇಶ್ ಅವರೇ ಬರೆದ ಕತೆ ಇದು. ಅವರೇ ಹೇಳಿದ ಹಾಗೆ ಈ ಕತೆಗೆ ಆ ಸಿನಿಮಾವೇ ಸ್ಫೂರ್ತಿಯಂತೆ. ಆದ್ರೆ ತಮ್ಮದೇ ಅನುಭವದಲ್ಲಿ ಕತೆ ಬರೆದು, ಡಾಕ್ಯುಮೆಂಟರಿ ಮಾಡಲು ಹೊರಟಿದ್ದರಂತೆ. ಆಕಸ್ಮಾತ್ ಅದು ಸಿನಿಮಾವಾದ್ರೆ ಚೆನ್ನಾಗಿರುತ್ತೆ ಅಂತ ನಿರ್ದೇಶಕ ಪ್ಲೈಯಿಂಗ್ ಕಿಂಗ್ ಮಂಜು ಕೊಟ್ಟ ಐಡಿಯಾದಿಂದ ಇದು ಸಿನಿಮಾ ರೂಪ ಪಡೆದಿದೆ. ನಾನೇ ಕೊಟ್ಟ ಸಲಹೆ, ಸೂಚನೆಗಳಿಂದ ಕತೆಯಲ್ಲಿ ಒಂದಷ್ಟು ಚೇಂಜಸ್ ಆಗಿವೆ. ಅವೆಲ್ಲ ಈ ಕಾಲದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಮೂಡಿ ಬಂದಿದೆ.
ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ..
ಇಲ್ಲಿ ಮೊದಲ ಬಾರಿಗೆ ವಿಭಿನ್ನವಾದ ಪಾತ್ರ ಸಿಕ್ಕಿದೆ. ಅದಕ್ಕೆ ಮೂರು ಶೇಡ್ಸ್ ಇವೆ ಎನ್ನುವುದು ಇನ್ನು ವಿಶೇಷ. ಕಥಾ ನಾಯಕ ರಾಜೀವನಾಗಿ ಕಾಣಿಸಿಕೊಳ್ಳುವುದರ ನಡುವೆಯೇ ಆತನ ತಂದೆಯಾಗಿ, ತಾತನಾಗಿ ಅಭಿನಯಿ ಸುತ್ತಿದ್ದೇನೆ. ಇದು ನಿಜಕ್ಕೂ ಸವಾಲೇ ಆಗಿತ್ತು.
ನಟನೆಯ ಜತೆಗೀಗ ನಿರ್ದೇಶನದತ್ತ ಮನಸ್ಸು ಮಾಡಿದ್ದಕ್ಕೆ ಕಾರಣ ಏನು?
ಅದೊಂದು ಆಕಸ್ಮಿಕ. ನನ್ನ ತಂದೆಯವರೇ ಬರೆದ‘ ತಮಟೆ’ ಕಾದಂಬರಿ ಓದುವಾಗ ಅದನ್ನು ಸಿನಿಮಾಕ್ಕೆ ತಂದರೆ ಹೇಗೆ ಎನ್ನುವ ಆಲೋಚನೆ ಬಂತು. ಕತೆಯ ನಾಯಕ ಮುನಿಯಾ ನನ್ನನ್ನು ತುಂಬಾನೆ ಕಾಡಿಸಿತ್ತು. ಅದೇ ಹೊತ್ತಿಗೆ ಅದನ್ನು ಓದಿದ್ದ ಒಬ್ಬರು ತಾವೇ ಸಿನಿಮಾ ನಿರ್ಮಾಣ ಮಾಡಲು ಬಂದರು. ನೀವೇ ನಿರ್ದೇಶನ ಮಾಡಿ ಅಂತಲೂ ಒತ್ತಾಯಿಸಿದರು.