ಸಿನಿಮಾ ನಟಿಯರು ಇಷ್ಟೊಂದು ಸಿಂಪಲ್ ಆಗಿ ಇರ್ತಾರ ಎನ್ನುವ ಸಂದೇಹ ಮೂಡಿಸಬಲ್ಲ ನಟಿ ಅದಿತಿ ಪ್ರಭುದೇವ. ಆಡಂಬರವಿಲ್ಲದ ಮಾತು, ಬಿಲ್ಡಪ್ ಇಲ್ಲದ ವರ್ತನೆ ಜತೆ ಹೊರಗಡೆ ಕಾಣಿಸಿಕೊಳ್ಳುತ್ತಾರೆ. ಮನೆಯಲ್ಲಂತೂ ಅಡುಗೆ ಕೆಲಸವನ್ನು ಖುದ್ದಾಗಿ ಮಾಡುತ್ತಾರೆ. ಲಾಕ್ಡೌನ್ ಬಿಡುವಲ್ಲಿ ಸಿಕ್ಕ ಸಮಯದಲ್ಲಿ ತಮ್ಮ ಹಳೆಯ ಹವ್ಯಾಸಗಳಿಗೆ ಮರಳಿದ್ದಾರೆ. ಆ ಹವ್ಯಾಸಗಳೇನು ಎನ್ನುವುದನ್ನು ಸ್ವತಃ ಅದಿತಿ ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.

ಶಶಿಕರ ಪಾತೂರು

ನಿಮ್ಮ ಈ ಸರಳ ವರ್ತನೆಗೆ ಸ್ಫೂರ್ತಿ ಯಾರು?

ಸರಳವಾಗಿ ವರ್ತಿಸಬೇಕು ಎನ್ನುವ ಗುರಿ ಹಾಕಿ ವರ್ತಿಸಿಕೊಂಡವಳು ನಾನಲ್ಲ. ನಾನು ಮೂಲತಃ ಹಳ್ಳಿ ಹುಡುಗಿ. ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಪುಟ್ಟ ಹಳ್ಳಿಯವಳು ನಾನು. ಯಾಕೆಂದರೆ, ನಾಲ್ಕು ವರ್ಷ ಚಿಕ್ಕಮಕ್ಕಳು ಹಳ್ಳಿಯಲ್ಲಿ ಬೆಳೆದರೆ ಹೇಗಿರುತ್ತದೆ? ಮೂರರಿಂದ ಐದನೇ ತರಗತಿ ತನಕ ಅಲ್ಲೇ ಓದಿ ಬೆಳೆದೆ. ಅಲ್ಲಿ ನೀರು ತರಲೆಂದು ಎರಡು ಕಿ.ಮೀಗಳಷ್ಟು ಕೊಡಪಾನ ಹಿಡಿದುಕೊಂಡು ಹೋಗಿದ್ದೇನೆ. ನಮ್ಮಮ್ಮ ಈಗಲೂ ನನ್ನಿಂದ ಕಸಗುಡಿಸುವ , ನೆಲ ಒರೆಸುವ ಕೆಲಸ ಮಾಡಿಸುತ್ತಾರೆ. ನಮ್ಮನೆ ಕೆಲಸ ನಾವು ಮಾಡುವುದರಲ್ಲಿ ದೊಡ್ಡ ವಿಷಯವೇನೂ ಇಲ್ಲ ಬಿಡಿ! ಹಾಗಾಗಿ ಅಭ್ಯಾಸವಾಗಿ ಬಂದ ಸರಳತೆ ಸಿನಿಮಾ ನಟಿಯಾದೊಡನೆ ಮರೆತು ಹೋಗಿಲ್ಲ ಎನ್ನುವುದು ಸತ್ಯ.

ಹಾಗಾಗಿ ಲಾಕ್ಡೌನ್ ದಿನಗಳನ್ನು ಕಳೆಯುವುದು ಕಷ್ಟವಾಗಿಲ್ಲ ಎನ್ನಬಹುದೇ?

ವೃತ್ತಿ ಜೀವನಕ್ಕೆ ಹೋಲಿಸಿ ಹೇಳುವುದಾದರೆ `ನಾಗಕನ್ನಿಕೆ' ಧಾರಾವಾಹಿ ಆದಮೇಲೆ ಏನೂ ಕೆಲಸ ಇರದೆ ಎರಡು ತಿಂಗಳು ಮನೇಲಿದ್ದೆ. ಆದರೆ ಆಮೇಲಿನ ಎರಡು ವರ್ಷಗಳಿಂದ  ಫುಲ್ ಬ್ಯುಸಿ. ನಾನು ಸಿನಿಮಾ ಪ್ರಮೋಶನ್ ಕೂಡ ತಪ್ಪಿಸುವುದಿಲ್ಲ. ಆದಕಾರಣ ಬಿಡುವು ಸಿಕ್ಕಿದ್ದೇ ವಿರಳ. ವೈಯಕ್ತಿಕ ಬದುಕಿನಲ್ಲಿ ನನ್ನ ಭಾವನೆಯ, ಆಕಾಂಕ್ಷೆಗಳಿರುತ್ತವೆ. ಅವುಗಳಲ್ಲಿ ಪುಸ್ತಕ ಓದುವುದು ಕೂಡ ಮುಖ್ಯವಾದುವು. ಶೂಟಿಂಗ್ ಇದ್ದಾಗ ವಾರಗಟ್ಟಲೆ ಎಕ್ಸರ್ಸೈಜೇ ಮಾಡುತ್ತಿರಲಿಲ್ಲ. ಆದ್ರೆ ಈಗ ಹಾಗಲ್ಲ, ನಿತ್ಯ ಯೋಗ, ಪ್ರಾಣಾಯಾಮ ಎಲ್ಲವೂ ರೆಗ್ಯುಲರಾಗಿ ದಿನಕ್ಕೆ ಒಂದೂವರೆ ಗಂಟೆ ಮಾಡ್ತೀನಿ. ತಾಯಿ ಜತೆ ಸೇರಿಕೊಂಡು ನಿತ್ಯದ ಬ್ರೇಕ್ ಪಾಸ್ಟ್ , ಮನೆ ಕೆಲಸ ಎಲ್ಲವನ್ನು ನಾನೇ ಮಾಡೋದು. ಒಂದಷ್ಟು ಗ್ಲಾಸ್ ಪೆಯಿಂಟಿಂಗ್ಸ್ ಮಾಡಿದೆ. `ಮನಿ ಹೇಸ್ಟ್', `ಹಂಡ್ರೆಡ್', `ಗೇಮ್ ಆಫ್ ತ್ರೋನ್ಸ್', `ದಿ ವ್ಯಾಂಪರ್ ಡೈರೀಸ್' ಹೀಗೆ ಹಳೆಯ ಆದರೆ ನಾನು ನೋಡಿರದ ವಿದೇಶೀ ಸಿನಿಮಾಗಳು, ಕನ್ನಡದಲ್ಲಿ ಆಲ್ರೆಡಿ ನೋಡಿರುವ `ಮಯೂರ', `ಭಕ್ತ ಕುಂಬಾರ', `ಬಂಗಾರದ ಪಂಜರ' ಮೊದಲಾದ ಸಿನಿಮಾಗಳನ್ನು ನೋಡಿ ಖುಷಿಯಿಂದ ಕಾಲ ಕಳೆದೆ. 

 

ಚಿತ್ರೀಕರಣ ಹಂತದಲ್ಲಿದ್ದ ನಿಮ್ಮ ಸಿನಿಮಾಗಳು ಯಾವುವು?

ನಾನು ನಟಿಸುತ್ತಿದ್ದ ಮೂರು, ನಾಲ್ಕು ಸಿನಿಮಾಗಳ ಚಿತ್ರೀಕರಣ ಅನಿವಾರ್ಯವಾಗಿ ಸ್ಥಗಿತವಾವೆ. ನವನಟ ರಾಮ್ ನಾಯಕರಾಗಿರುವ `ದಿಲ್ ಮಾರ್', ಶಾಹುರಾಜ್ ಶಿಂಧೆ ನಿರ್ದೇಶನದ `ಚಾಂಪಿಯನ್', ಜಗ್ಗೇಶ್ ನಾಯಕರಾಗಿರುವ `ತೋತಾಪುರಿ', ಎಂಬಿ ಶ್ರೀನಿವಾಸ್ ಅವರ `ಓಲ್ಡ್ ಮಾಂಕ್' ಹೀಗೆ ಪಟ್ಟಿ ಮಾಡಬಹುದು. ಇವುಗಳಲ್ಲಿ ಒಂದೆರಡು ಅಂತಿಮ ಹಂತ ತಲುಪಿತ್ತು. ಸದ್ಯಕ್ಕೆ ಚಿತ್ರೀಕರಣಕ್ಕಾಗಿ ಯಾರಿಂದಲೂ ಕರೆ ಬಂದಿಲ್ಲ. ಕೊರೊನಾದ ಬಗ್ಗೆ ಹೆದರಿ ಕುಳಿತುಕೊಳ್ಳುವ ಬದಲು ಎಚ್ಚರಿಕೆ ವಹಿಸುವುದು ಮುಖ್ಯ. ಆದರೆ ಸಿನಿಮಾ ಚಿತ್ರೀಕರಣ ಎಂದರೆ ತುಂಬ ಜನ ಸೇರಲೇಬೇಕಾದ ಅನಿವಾರ್ಯತೆ ಇರುತ್ತದೆ. ಒಟ್ಟಿನಲ್ಲಿ ಆದಷ್ಟು ಬೇಗ ಕೊರೊನಾ ದೂರಾಗಿ ಚಿತ್ರೀಕರಣ ಮತ್ತು ಥಿಯೇಟರಲ್ಲೇ ಸಿನಿಮಾ ಪ್ರದರ್ಶನ ಎರಡೂ ಸಾಂಗವಾಗಿ ನೆರವೇರುವ ಹಾಗಾಗಲಿ ಎಂದು ಪ್ರಾರ್ಥಿಸುತ್ತೇನೆ. ಸಿನಿಮಾಗಳು ಬೇರೆ ಬೇರೆ ಫ್ಲಾಟ್ ಫಾರ್ಮ್ ಮೂಲಕ ಬಿಡುಗಡೆಯಾಗುತ್ತಿವೆ. ಆದರೆ ವೈಯಕ್ತಿಕವಾಗಿ ನನಗೆ ಥಿಯೇಟರಲ್ಲಿ ಚಿತ್ರ ನೋಡುವ ಮಜಾನೇ ಬೇರೆ. ಪಾಪ್ ಕಾರ್ನ್ ತಿನ್ನುತ್ತಾ ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಖುಷಿಯನ್ನು  ಬೀಟ್ ಮಾಡುವಂಥ ಮನೋರಂಜನೆ ಸಿನಿಮಾರಂಗದಲ್ಲಿ ಬೇರೆ ಇಲ್ಲ.