`ನಾನು ಆಕಾಶದಿಂದ ಹಾರಲಿಕ್ಕೂ ಸಿದ್ಧ' ಎನ್ನುತ್ತಾರೆ ರಮೇಶ್ ಅರವಿಂದ್‌

ರಮೇಶ್ ಅರವಿಂದ್ ಅವರು ಕಳೆದ ಮೂರುವರೆ ದಶಕಗಳಿಂದ ನಟರಾಗಿ, ನಿರ್ದೇಶಕರಾಗಿ, ನಿರೂಪಕರಾಗಿ, ಸ್ಫೂರ್ತಿ ನೀಡುವ ಮಾತುಗಾರರಾಗಿ ವೈವಿಧ್ಯಮಯ ರೂಪದಲ್ಲಿ ನಮ್ಮೆಲ್ಲರ ಕಣ್ಮನ ಸೆಳೆದಿದ್ದಾರೆ. ಆದರೆ ಕಳೆದ ಮೂರು ತಿಂಗಳಲ್ಲಿ ಕೊರೊನಾಗೆ ಸಂಬಂಧಿತ ಲಾಕ್ಡೌನ್ ಕಾರಣದಿಂದ ನಮ್ಮೆಲ್ಲರಂತೆ ಅವರಿಗೂ ಮನೆಯೊಳಗೆ ಇರಬೇಕಾಗಿ ಬಂದಿದೆ. ಆಗಸದೆತ್ತರ ವೈವಿಧ್ಯಮಯ ಪ್ರತಿಭೆಯನ್ನಿರಿಸಿಕೊಂಡವರು ಗೃಹಬಂಧಿತನಾದಾಗ ಏನಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ತಾನು ಎಲ್ಲ ಪರಿಸ್ಥಿತಿಗಳಿಗೂ ಹೇಗೆ ಹೊಂದಿಕೊಳ್ಳಬಲ್ಲೆನೆಂದು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. 
 

Kannada actor Ramesh Aravind exclusive interview

ರಮೇಶ್ ಅರವಿಂದ್ ಅವರು ಕಳೆದ ಮೂರುವರೆ ದಶಕಗಳಿಂದ ನಟರಾಗಿ, ನಿರ್ದೇಶಕರಾಗಿ, ನಿರೂಪಕರಾಗಿ, ಸ್ಫೂರ್ತಿ ನೀಡುವ ಮಾತುಗಾರರಾಗಿ ವೈವಿಧ್ಯಮಯ ರೂಪದಲ್ಲಿ ನಮ್ಮೆಲ್ಲರ ಕಣ್ಮನ ಸೆಳೆದಿದ್ದಾರೆ. ಆದರೆ ಕಳೆದ ಮೂರು ತಿಂಗಳಲ್ಲಿ ಕೊರೊನಾಗೆ ಸಂಬಂಧಿತ ಲಾಕ್ಡೌನ್ ಕಾರಣದಿಂದ ನಮ್ಮೆಲ್ಲರಂತೆ ಅವರಿಗೂ ಮನೆಯೊಳಗೆ ಇರಬೇಕಾಗಿ ಬಂದಿದೆ. ಆಗಸದೆತ್ತರ ವೈವಿಧ್ಯಮಯ ಪ್ರತಿಭೆಯನ್ನಿರಿಸಿಕೊಂಡವರು ಗೃಹಬಂಧಿತನಾದಾಗ ಏನಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ತಾನು ಎಲ್ಲ ಪರಿಸ್ಥಿತಿಗಳಿಗೂ ಹೇಗೆ ಹೊಂದಿಕೊಳ್ಳಬಲ್ಲೆನೆಂದು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. 

ಶಶಿಕರ ಪಾತೂರು

ಸದಾ ಯಾವುದಾದರೊಂದು ಕಡೆ ಸಕ್ರಿಯರಾಗಿದ್ದ ನಿಮಗೆ ಎರಡು ತಿಂಗಳು ಮನೆಯಲ್ಲೇ ಇರುವುದು ಹೇಗೆ ಅನಿಸಿತು?

ಈ ದಿನಗಳು ಮನೆಯಲ್ಲಿದ್ದೇ ಎಲ್ಲ ಕಡೆಯೂ ಸಕ್ರಿಯವಾಗಬಹುದು ಎನ್ನುವುದನ್ನು ಕಲಿಸಿತು. ಈ ದಿನಗಳಲ್ಲಿನ ನನ್ನ ಕೆಲಸಗಳನ್ನು ಎರಡು ಮೂರು ರೀತಿಯಲ್ಲಿ ವರ್ಗೀಕರಿಸಬಹುದು.  ಒಂದು ಸಿನಿಮಾಗೆ ಸಂಬಂಧ ಪಟ್ಟಹಾಗೆ. ಅದರಲ್ಲಿ ಈ ದಾಡಿ ಬಿಟ್ಟಿರುವುದು ಕೂಡ ಸೇರುತ್ತದೆ. ಅದು ಯಾವ ಚಿತ್ರ ಎನ್ನುವ ವಿವರವನ್ನೆಲ್ಲ ಸದ್ಯಕ್ಕೆ ಹೇಳೋದಿಲ್ಲ. ಎರಡನೆಯದು ಸಿನಿಮಾದಿಂದ ಹೊರತಾದ ನನ್ನ ವೈಯಕ್ತಿಕ ಆಸಕ್ತಿಗಳು ಮತ್ತು ಮೂರನೆಯದಾಗಿ ಮನೆಯೊಳಗಿನ ಲೈಬ್ರೆರಿ ಪುಸ್ತಕಗಳನ್ನು ಬಿಡಿಸಿ ನೀಟಾಗಿ ಆರ್ಗನೈಸ್ ಮಾಡಿರುವುದು. ಈ ಎಲ್ಲ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದ ಕಾರಣ ನನಗೆ ಮನೆಯೊಳಗಿರುವುದು ಕಟ್ಟು ಹಾಕಿದ ರೀತಿಯ ಅನುಭವ ನೀಡಿಲ್ಲ ಎಂದು ಹೇಳಬಹುದು.

ಪೌರ ಕಾರ್ಮಿಕರಿಗೆ ರಮೇಶ್ ಅರವಿಂದ 'ಹೂಮಳೆ'

ಕುಟುಂಬದ ಜತೆಗೆ ಇಷ್ಟೊಂದು ದಿನ ಕಳೆದಾಗ ಸಿಕ್ಕ ಅನುಭವ ಏನು?

ನಿಜಕ್ಕೂ ಅನನ್ಯ. ಮೊದಲೆಲ್ಲ ನನ್ನ ಹೆಂಡ್ತಿ ನನಗಾಗಿ ಊಟಕ್ಕೆ ಕಾದು ಫೋನ್ ಮಾಡುವುದು;  ನಾನು ಫೋನೆತ್ತಿದಾಕ್ಷಣ ಆಕೆ "ಎಲ್ಲಿದ್ದೀರ?" ಎಂದು ಕೇಳುವುದು ಸಾಮಾನ್ಯವಾಗಿತ್ತು! ಆದರೆ ಈಗ ಎಲ್ಲಿದ್ದೀರ ಎನ್ನುವ ಪ್ರಶ್ನೆಗೇ ಅರ್ಥವಿಲ್ಲ ಎನ್ನುವಂತೆ ಮನೆಯಲ್ಲೇ ಇದ್ದೇನೆ. ನಾನು, ಹೆಂಡ್ತಿ, ಮಗಳು, ನಮ್ಮಮ್ಮ ಎಲ್ಲ ಸೇರಿ ಪ್ರತಿದಿನ ಜತೆಯಲ್ಲೇ ಊಟ ಮಾಡುತ್ತೇವೆ. ನಿಜವಾಗಿ ಅದು ಒಂದು ಹೊಸ ಅನುಭವ. ಯಾವಾಗಲೂ ನಾನು ಶೂಟಿಂಗ್‌ಗೆ, ಮಗಳೆಲ್ಲೋ ಆಫೀಸಿಗೆ ಹೋಗುತ್ತಿದ್ದ ಕಾರಣ ಎಲ್ಲರೂ ಒಟ್ಟಾಗಿರಲು ಟೈಮಿಂಗ್ಸ್‌ ಮ್ಯಾಚ್ ಆಗುತ್ತಲೇ ಇರಲಿಲ್ಲ. ನನಗೆ ಟೈಮ್ ಕೊಡೋಲ್ಲ ಯಾವಾಗಲೂ ಹೊರಗೆ ಇರುತ್ತೀರಿ ಎನ್ನುವುದೇ ಮಹಿಳೆಯರ ಕಂಪ್ಲೇಂಟ್ ಆಗಿರುವಾಗ ಈಗ ಸಂಪೂರ್ಣವಾಗಿ ಟೈಮ್ ಕೊಡುವ ಅವಕಾಶ ದೊರಕಿದಂತಾಗಿದೆ. ನನ್ನ ಪ್ರಕಾರ ಐವತ್ತು ದಿನಗಳು ಅಂದರೆ ಐವತ್ತು ಗುಣಿಸು ಹತ್ತು ಅಂದರೆ ಐನೂರು ಎಕ್ಸೆಟ್ರಾ ಗಂಟೆಗಳು ಸಿಕ್ಕಿವೆ. ಮನೆಯಲ್ಲಿ ನನ್ನ ಶ್ರೀಮತಿಗೆ ಎಷ್ಟಾಗುತ್ತೋ ಅಷ್ಟು ಸಹಾಯ ಮಾಡುತ್ತೀನಿ. ಕಳೆದೊಂದು ವಾರದ ಹಿಂದಿನವರೆಗೂ ನನ್ನ ಮನೆಯಲ್ಲಿ ಯಾರೂ ಕೆಲಸದವರು ಇರಲಿಲ್ಲ. ಸ್ವಲ್ಪ ಬಟ್ಟೆ ಮಡಚಿಡುವುದು, ಇಸ್ತ್ರಿ ಮಾಡುವುದು ಇವನ್ನೆಲ್ಲ ಮಾಡುತ್ತೀನಿ. 

Kannada actor Ramesh Aravind exclusive interview

ಸಿನಿಮಾ ಹೊರತಾಗಿ ನಿಮ್ಮ ಆಸಕ್ತಿಯ ಯಾವ ಕೆಲಸಗಳನ್ನು ಮಾಡಿದಿರಿ?

ವೈಯಕ್ತಿಕವಾಗಿ ನನಗೆ ಹಲವಾರು ವಿಚಾರಗಳ ಬಗ್ಗೆ ಕುತೂಹಲಗಳಿವೆ. ಆದರೆ ಅದಕ್ಕೆಲ್ಲ ಸಮಯ ಸಿಕ್ಕಿರಲಿಲ್ಲ. ಈಗ ಅದನ್ನೆಲ್ಲ ಸ್ಟಡಿ ಮಾಡಲು ಶುರು ಮಾಡಿದ್ದೇನೆ. ನಾನು ಸಿನಿಮಾಗೆ ಬಂದಾಗಿನಿಂದ ವೈಜ್ಞಾನಿಕ ವಿಚಾರಗಳತ್ತ ಗಮನವೇ ನೀಡಿಲ್ಲ. ಸೈನ್ಸು ಅಂದರೆ ತುಂಬ ಆಸಕ್ತಿ ನನಗೆ. ಫಿಸಿಕ್ಸು, ಕೆಮಿಸ್ಟ್ರಿ, ಬಯಾಲಜಿ ಎಲ್ಲ ಸಿಕ್ಕಾಪಟ್ಟೆ ಇಷ್ಟ. ಅದಕ್ಕೆ ತಕ್ಕಂತೆ `ಹಿಸ್ಟರಿ ಆಫ್ ಸೈನ್ಸ್' ಎನ್ನುವ ಅದ್ಭುತವಾದ ಪುಸ್ತಕವೂ ಕೈಗೆ ಸಿಕ್ಕಿತು. ನ್ಯೂಟನ್ ಆ ಕಾಲದಲ್ಲಿ ಗುರುತ್ವಾಕರ್ಷಣೆಯನ್ನು ಹೇಗೆ ಕಂಡು ಹಿಡಿದ?, ಸೌರವ್ಯೂಹದ ಬದಲಾವಣೆಯನ್ನು ಹೇಗೆ ಕಂಡುಹಿಡಿದರು? ಹೀಗೆ ಕೆಮಿಸ್ಟ್ರಿಯಲ್ಲಿ `ಪೀರಿಯಾಡಿಕ್ ಟೇಬಲ್' ಎಲ್ಲ ಇದೆಯಲ್ಲ? ಅವೆಲ್ಲ ಹೇಗೆ ಶುರುವಾಯಿತು? ವಿಜ್ಞಾನಿಗಳ ಮಧ್ಯೆ ಹೇಗೆ ಗಲಾಟೆಗಳಾಗುತ್ತವೆ? ಯಾರದೋ ಥಿಯರಿ ಹೇಗೆ ಇನ್ಯಾರದೋ ಪಾಲಾಗುತ್ತದೆ? ಈ ರೀತಿಯ ವಿಷಯಗಳನ್ನು ಆಸಕ್ತಿಯಿಂದ ಓದಿದೆ. ಅದರ ಜತೆಗೆ ಬಹಳ ಹಿಂದಿನ ಮತ್ತೊಂದು ಆಸೆಯನ್ನು ಈಡೇರಿಸಿಕೊಂಡೆ. ವರ್ಷಗಳಿಂದ ಮಂಕುತಿಮ್ಮನ ಕಗ್ಗಗಳನ್ನು  ಸಂಗ್ರಹಿಸುವ ಒಲವಿತ್ತು. ಆದರೆ ಅದರ ಓದಿನ ಕಡೆ ತಲೆ ಹಾಕಲು ಸಾಧ್ಯವಾಗಿರಲಿಲ್ಲ. ನಮ್ಮ ಲೈಬ್ರೆರಿಯಲ್ಲಿದ್ದ ಓದದೇ ಇರುವ ಪುಸ್ತಕಗಳನ್ನು ಓದಿದೆ. ಅದರಿಂದ ಕಗ್ಗದ ಬಗ್ಗೆಯೂ ಒಂದಷ್ಟು ತಿಳಿದುಕೊಂಡೆ.

Kannada actor Ramesh Aravind exclusive interview

ಲಾಕ್ಡೌನ್ ಬಳಿಕ ಬರಲಿರುವ ನಿಮ್ಮ ಚಿತ್ರಗಳು ಯಾವುವು?

ನನ್ನ ನಿರ್ದೇಶನದ `100' ಹೆಸರಿನ ಚಿತ್ರದ ಸೆನ್ಸಾರ್ ಕೂಡ ಮುಗಿದಿದೆ. ಅದರ ಪೋಸ್ಟರ್ ಡಿಸೈನ್, ಲಿರಿಕಲ್ ವಿಡಿಯೋ, ಸೋಶಿಯಲ್ ಮೀಡಿಯಾ ಪ್ರಮೋಶನ್‌ಗೆ ಬೇಕಾದ ವಿಡಿಯೋಗಳನ್ನು ಕೂಡ ಈ ದಿನಗಳಲ್ಲೇ ರೆಡಿ ಮಾಡಿದ್ದೇನೆ. ಇನ್ನು `ಶಿವಾಜಿನ ಸುರತ್ಕಲ್' ಚಿತ್ರದ  ಎರಡನೇ ಭಾಗ ಶುರು ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಅದರ ಕತೆ  ಇನ್ನೂ ಫೋನಿನ್ ಚರ್ಚೆಯಲ್ಲಿದೆ. ಒಂದು ದಿನ ನಾನು ನಿರ್ದೇಶಕರು ಮತ್ತು ಸ್ನೇಹಿತರೊಬ್ಬರು ಸೇರಿಕೊಂಡು ಈ ಬಗ್ಗೆ ಮಾತನಾಡಲು ಶುರು ಮಾಡಿದ ಮರುದಿನವೇ ಕೊರೊನ ಬಂತು. ಬಳಿಕ ನಾವು ಫೋನಲ್ಲೇ ಚರ್ಚೆ ಮಾಡುತ್ತಿದ್ದೇವೆ. ಒಂದು ಲೈನ್ ರೆಡಿಯಾಗಿದೆ. ನಿರ್ದೇಶಕ ಆಕಾಶ್ ಕತೆ ಬರೀತಿದ್ದಾರೆ. ಇದರ ನಡುವೆ ನನಗೆ ಕೊರೊನಾವನ್ನು ಬೇಸ್ ಮಾಡಿಕೊಂಡು ಹಲವಾರು ವಿಷಯಗಳು ಹೊಳೆದಿವೆ. ಅದನ್ನು ಮುಂದೆ ಹೇಗೆ, ಎಲ್ಲಿ ಬಳಸಲಿದ್ದೇನೆ ಎನ್ನುವುದು ಸದ್ಯಕ್ಕೆ ನನಗೂ ಗೊತ್ತಿಲ್ಲ. 

ಸನ್ನಿವೇಶವನ್ನು ಸ್ವಾಗತಿಸಿ, ಪಾಸಿಟಿವ್‌ ಆಗಿರಿ : ರಮೇಶ್‌ ಅರವಿಂದ್‌

ಸಿನಿಮಾಗಳನ್ನು 'ಒಟಿಟಿ ಫ್ಲಾಟ್‌ಫಾರ್ಮ್‌' ಮೂಲಕ ಬಿಡುಗಡೆಗೊಳಿಸುತ್ತಿರುವ ಬಗ್ಗೆ ಏನು ಹೇಳುತ್ತೀರಿ?

ಭಗವದ್ಗೀತೆಯಲ್ಲಿ ಹೇಳಿರುವ ತರಹ ಯಾವುದೂ ಶಾಶ್ವತ ಅಲ್ಲ. ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಇವತ್ತು ಜನ ಒಟಿಟಿ ಫ್ಲಾಟ್‌ಫಾರ್ಮಲ್ಲಿ ನೋಡಲು ಇಷ್ಟಪಡುತ್ತಿರಬಹುದು.  ಆದರೆ ಒಂದು ಸಲ ಥಿಯೇಟರ್ ಓಪನಾಯಿತು ಅಂದರೆ ಜನ ಥಿಯೇಟರ್‌ಗೆ ನುಗ್ಗಿ ಬಿಡ್ತಾರೆ. ಯಾಕೆಂದರೆ ಮನುಷ್ಯ ಮೂಲತಃ ಸಮಾಜ ಜೀವಿ. ಸಾಮೂಹಿಕವಾಗಿ ಬೆಳೆದೇ ಅಭ್ಯಾಸ. ಎಲ್ಲ ಸಿನಿಮಾಗಳನ್ನು ಒಟಿಟಿಯಲ್ಲೇ ನೋಡಿಕೊಂಡಿರಲು ಸಾಧ್ಯವಿಲ್ಲ. ಲಾಕ್ಡೌನ್ ಟೈಮಲ್ಲಿ ನೆಟ್‌ ಫ್ಲಿಕ್ಸ್, ಪ್ರೈಮ್ ಮೂಲಕ ನಾನು ಕೂಡ ಸಿನಿಮಾಗಳನ್ನು ನೋಡಿದ್ದೇನೆ. ಜನಗಳೂ ನೋಡಿದ್ದಾರೆ. ಅವರಿಗೆ ಹೊಸ ರೀತಿಯ ಕತೆಗಳು ಸಿಕ್ಕಿವೆ. ಜವರ ಬದಲಾದ ಅಭಿರುಚಿಗೆ ತಕ್ಕಂತೆ ಒಳ್ಳೆಯ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದರೆ, ಥಿಯೇಟರ್ ಹೌಸ್‌ಫುಲ್ ಆಗಲೇಬೇಕು! ಅದೇ ವೇಳೆ ನಾಳೆ ಹೇಗೆ ಎಂದು ಯಾರಿಗೂ ಗೊತ್ತಿಲ್ಲ. ಕೊರೊನಾದ ಸೆಕೆಂಡ್ ವೇವ್ ಬರುತ್ತೆ ಎಂದು ನಾವೆಲ್ಲ ಓದಿದ್ದೇವೆ. ಆ ತರಹ ಸೆಕೆಂಡ್ ವೇವ್ ಏನಾದರೂ ಬಂದರೆ ಮತ್ತೆ ಮನೆಯಲ್ಲೇ ಇರಬೇಕಾದೀತು! ನಾನಂತು ಎಲ್ಲದಕ್ಕೂ ತಯಾರಾಗಿರುತ್ತೇನೆ. "ನಾಳೆ ನಿಮಗೆ ಸಿನಿಮಾ ಇಲ್ಲ. ಬರಿಯ ವೆಬ್ ಸೀರಿಸ್ ನಟಿಸಬೇಕು" ಅಂದರೆ ನನಗದು ಓಕೆ. ಅದೂ ಇಲ್ಲ, "ನೀವು ಒಬ್ಬ ಅಕೌಟೆಂಟ್ ಆಗಬೇಕು" ಅಂದರೆ ಅದಕ್ಕೂ ರೆಡಿ. ಆಕಾಶದಿಂದ ಹಾರಬೇಕು ಅಂದರೆ ಅದಕ್ಕೂ ತಯಾರಾಗಬಲ್ಲೆ.

Latest Videos
Follow Us:
Download App:
  • android
  • ios