ನನ್ನ ಆಲೋಚನೆ, ಕೆಲಸವನ್ನು ನಿಲ್ಲಿಸಿಲ್ಲ: ರಕ್ಷಿತ್‌ ಶೆಟ್ಟಿ ಲಾಕ್‌ಡೌನ್‌ ಅನುಭವ ಕಥನ!

ನಾನು ಈಗ ಲಾಕ್‌ಡೌನ್‌ ಆಗಿರುವುದನ್ನು ಹೇಳುವುದಕ್ಕಿಂತ ನಿಮಗೊಂದು ಘಟನೆ ಹೇಳಬೇಕಿದೆ. ಜಪಾನ್‌ನಲ್ಲಿ ಶೂ ತಯಾರಿಸುವ ಕಂಪನಿಯ ಕಾರ್ಮಿಕರು ಮೂರು ತಿಂಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಅಂದುಕೊಳ್ಳುತ್ತಾರೆ. ಪ್ರತಿಭಟನೆ ಹೇಗಿರಬೇಕು ಎನ್ನುವ ಚರ್ಚೆ ಶುರುವಾಯಿತು. ಉದ್ಯೋಗ, ಬದುಕನ್ನೇ ಲಾಕ್‌ಡೌನ್‌ ಮಾಡಿಕೊಳ್ಳುವ ಪ್ರತಿಭಟನೆಗಳಿಂದ ಏನೆಲ್ಲ ಮಾಡಲು ಸಾಧ್ಯ ಎಂದು ಚಿಂತಿಸಿದ ಅವರು ಒಂದು ನಿರ್ಧಾರಕ್ಕೆ ಬರುತ್ತಾರೆ.

Kannada actor rakshith shetty lockdown experience interview

ಎಲ್ಲಾ ಕಾರ್ಮಿಕರು ಎಂದಿನಂತೆ ಫ್ಯಾಕ್ಟ್ರಿಗೆ ಹೋಗುತ್ತಾರೆ. ಆದರೆ, ಹೋದವರು ಅಂದಿನಿಂದ ಮೂರು ತಿಂಗಳ ಕಾಲ ಒಂದು ಕಾಲಿನ ಶೂಗಳನ್ನು ಮಾತ್ರ ತಯಾರು ಮಾಡುತ್ತಾರೆ. ಅಂದರೆ ಕೇವಲ ಎಡಗಾಲಿನ ಶೂ ಮಾತ್ರ. ಮತ್ತೊಂದು ಶೂ ತಯಾರಿಸದೆ ಇರುವುದೇ ಪ್ರತಿಭಟನೆ. ಮೂರು ತಿಂಗಳ ನಂತರ ಅವರ ಪ್ರತಿಭಟನೆಗೆ ಮಣಿದು ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಆಗ ಎಲ್ಲರೂ ಬಲಗಾಲಿನ ಶೂ ತಯಾರಿಸುತ್ತಾರೆ. ತಾವು ಅಂದುಕೊಂಡಂತೆ ಪತ್ರಿಭಟನೆಯೂ ಆಯ್ತು, ಬೇಡಿಕೆಗಳೂ ಈಡೇರಿದವು, ಅಂದುಕೊಂಡ ಪ್ರಾಡಕ್ಟ್ ಮಾರುಕಟ್ಟೆಗೂ ಬಂತು.

ಇದರ ತಾತ್ಪರ್ಯ ಇಷ್ಟೆ, ಎಲ್ಲವನ್ನೂ ಬಂದ್‌ ಮಾಡಬೇಕು ಅಥವಾ ಅಂಥ ಸಂದರ್ಭ ಅನಿವಾರ್ಯ ಎನಿಸಿದಾಗ ಅದನ್ನೇ ಅನುಕೂಲಕರ ರೀತಿಯಲ್ಲಿ ಬಳಸಿಕೊಳ್ಳುವ ಜಾಣ್ಮೆ, ಕ್ರಿಯಾಶೀಲತೆ ಮನುಷ್ಯನಿಗೆ ಇರುತ್ತದೆ ಎಂಬುದು ಜಪಾನ್‌ನ ಶೂ ತಯಾರಿಸುವ ಫ್ಯಾಕ್ಟ್ರಿಯ ಕಾರ್ಮಿಕರ ಪ್ರತಿಭಟನೆ ಹೇಳುತ್ತದೆ.

ಸ್ಟಾರ್‌ ನಟರ ದಿಲ್ ಗೆದ್ದ ದಿಯಾ; ಒಳ್ಳೆಯ ಸಿನಿಮಾಗಳಿಗೆ ರಕ್ಷಿತ್ ಸಾಥ್!

ಈಗ ನಮ್ಮ ರಾಜ್ಯ ಸೇರಿದಂತೆ ದೇಶದ ಲಾಕ್‌ಡೌನ್‌ ವಿಚಾರಕ್ಕೆ ಬರೋಣ. ಮನುಷ್ಯ ಮೂಲತಃ ಸ್ವತಂತ್ರ ಜೀವಿ. ತನ್ನನ್ನ ತಾನು ಮಾತ್ರವಲ್ಲ, ಬೇರೊಬ್ಬರೂ ಕಟ್ಟಿಹಾಕಲು ಬಂದರೂ ಅದನ್ನು ಸ್ಪಷ್ಟಧ್ವನಿಯಲ್ಲಿ ವಿರೋಧಿಸುತ್ತಾನೆ. ಬಂಧನವನ್ನು ಯಾವ ಕಾರಣಕ್ಕೂ ಸಹಿಸದ ಮನಸ್ಥಿತಿ ನಮ್ಮದು. ಹಾಗಂತ ಎಲ್ಲ ಸಂದರ್ಭಗಳಲ್ಲಿ ಇಂಥ ಮನಸ್ಥಿತಿಯಿಂದ ಯೋಚಿಸಲಾಗದು. ಇಂಥವರು ಜಪಾನ್‌ ಶೂ ತಯಾರಿಸುವ ಕಾರ್ಮಿಕರನ್ನು ನೆನಪಿಸಿಕೊಳ್ಳಬೇಕು. ಅವರು ಬಂದ್‌, ಪ್ರತಿಭಟನೆ ಹೆಸರಿನಲ್ಲಿ ಫ್ಯಾಕ್ಟ್ರಿಗೆ ಹೋಗಿ ಒಂದು ಕಾಲಿನ ಶೂ ತಯಾರಿಸಿದರಲ್ಲ ಹಾಗೆ, ನಿಮ್ಮ ಲಾಕ್‌ಡೌನ್‌, ನನ್ನ ಯಾವ ಆಲೋಚನೆ, ಕೆಲಸಗಳನ್ನು ನಿಲ್ಲಿಸಲಾಗದು ಎನ್ನುತ್ತ ಮನೆಯಲ್ಲಿ ಕೂತು ಬಿಡಿ. ಕೂತು ಏನು ಮಾಡಬಹುದು ಅಂತ ಹೇಳುವ ಮೊದಲು ನಾನು ಏನು ಮಾಡುತ್ತಿದ್ದೇನೆ ಅಂತ ಹೇಳುತ್ತೇನೆ ಕೇಳಿ.

ನನ್ನ ದಿನಚರಿ ಹೀಗಿದೆ!

ಬೆಳಗ್ಗೆ ಬೇಗ ಎದ್ದೇಳುತ್ತೇನೆ. ಒಂದು ಒಳ್ಳೆಯ ಸಿನಿಮಾ ನೋಡುತ್ತೇನೆ. ಹೆಚ್ಚು ಕಮ್ಮಿ ಮಧ್ಯಾಹ್ನದವರೆಗೂ ಹೀಗೆ ಸಿನಿಮಾ ನೋಡಿ ಅದರ ಬಗ್ಗೆ ಯೋಚಿಸುತ್ತಾ, ಅಗತ್ಯವಿದ್ದರೆ ಅದರ ಬಗ್ಗೆ ಸಣ್ಣ ನೋಟ್‌ ಮಾಡಿಕೊಳ್ಳುತ್ತೇನೆ. ಮಧ್ಯಾಹ್ನ ಊಟ ಆದ ಮೇಲೆ ಆ ಸಿನಿಮಾ, ನೋಟು ಬದಿಗಿಟ್ಟು ಬರವಣಿಗೆ ಶುರು ಮಾಡುತ್ತೇನೆ. ಹೆಚ್ಚು ಕಮ್ಮಿ ಸಂಜೆವರೆಗೂ ಈ ಬರವಣಿಗೆ ಇರುತ್ತದೆ. ನಡುವೆ ಏನಾದರೂ ಬೇಸರ ಅನಿಸಿದರೆ ಪಕ್ಕದಲ್ಲೇ ಇಟ್ಟುಕೊಂಡಿರುವ ಪುಸ್ತಕ ಓದುತ್ತೇನೆ. ಸಂಜೆ ನಂತರ ನನ್ನ ರೈಟಿಂಗ್‌ ಟೀಮ್‌ ಜತೆಗೆ ವಿಡಿಯೋ ಕಾಲ್‌ ಮಾಡುತ್ತೇನೆ. ಎಲ್ಲರೂ ಆನ್‌ಲೈನ್‌ಗೆ ಬರುತ್ತಾರೆ. ನಾನು ಬರೆದಿದ್ದನ್ನ ಅವರ ಜತೆ ಹಂಚಿಕೊಳ್ಳುತ್ತೇನೆ. ಅವರು ಅವರ ಅಭಿಪ್ರಾಯಗಳನ್ನು ಹೇಳುತ್ತಾರೆ. ಹಾಗೆ ಅವರು ಬರೆದ, ಓದಿದ, ನೋಡಿದ ಸಿನಿಮಾ ಬಗ್ಗೆ ಮಾತು.

ಇವಿಷ್ಟುಕೆಲಸಗಳ ನಂತರ ರಾತ್ರಿ ನನಗೆ ಇಷ್ಟಅನಿಸುವ ಅಡುಗೆಯನ್ನು ನಾನೇ ಮಾಡುತ್ತೇನೆ. ಹೊಸ ಹೊಸ ಪ್ರಯೋಗಗಳು ಕಿಚನ್‌ ರೂಮ್‌ನಲ್ಲಿ ನಡೆಯುತ್ತಿವೆ. ಮತ್ತೆ ಊಟದ ನಂತರ ಮತ್ತೆ ಸ್ನೇಹಿತರ ಜತೆ ಸಿನಿಮಾ, ಬರವಣಿಗೆ, ಓದು ಎಲ್ಲಾ ಬಿಟ್ಟು ರೆಗ್ಯುಲರ್‌ ಮಾತುಗಳು, ಹರಟೆ, ತಮಾಷೆ ಮಾಡಿಕೊಳ್ಳುತ್ತೇವೆ. ಇದಿಷ್ಟುನನ್ನ ದಿನಚರಿ.

ನಿಮಗೆ ನೀವೇ ಕಂಪನಿ

ಬಹುಶಃ ಲಾಕ್‌ಡೌನ್‌ ಇಲ್ಲದೆ ಹೋಗಿದ್ದರೂ ನಾವು ಮಾಡುತ್ತಿದ್ದ ಕೆಲಸಗಳು ಇಷ್ಟೇ ಅನಿಸುತ್ತದೆ. ಹಾಗಿದ್ದ ಮೇಲೆ ಈ ಲಾಕ್‌ಡೌನ್‌ ನಮ್ಮನ್ನು ಹೇಗೆ ಬಂಧಿಸಿದೆ ಅಂದುಕೊಳ್ಳುತ್ತೀರಿ ಎಂಬುದು ನನ್ನ ಪ್ರಶ್ನೆ. ನಿಜ, ಹೊರಗೆ ಹೋಗಕ್ಕೆ ಆಗುತ್ತಿಲ್ಲ. ಹೋಗಿ ಏನು ಮಾಡುತ್ತಿದ್ರಿ ಅಂತ ಯೋಚಿಸಿ. ಹೊರಗಿನ ಕೆಲಸಗಳು ಆಮೇಲೆ ಮಾಡೋಣ ಒಳಗಿನ ಕೆಲಸಗಳನ್ನು ಈಗ ಮಾಡೋಣ ಅಂದುಕೊಂಡರೆ ಲಾಕ್‌ಡೌನ್‌ ನಮಗೆ ಯಾವ ಕಾರಣಕ್ಕೆ ಹಿಂಸೆ ಅನಿಸಲ್ಲ ನೋಡಿ. ಈಗ ನಾನು ಪುಣ್ಯಕೋಟಿ ಚಿತ್ರದ ಬರವಣಿಗೆಯಲ್ಲಿ ತೊಡಗಿರುವೆ. ತುಂಬಾ ಚೆನ್ನಾಗಿ ಸೀನ್ಸ್‌ ಬರುತ್ತಿವೆ. ನನಗೆ ಎಷ್ಟುಖುಷಿ ಆಗಿದೆ ಅಂದರೆ ಶೂಟಿಂಗ್‌ ನಡುವೆ ನಾನೇ ಬ್ರೇಕ್‌ ತೆಗೆದುಕೊಂಡು ಕೂತಿದ್ದರೂ ಇಷ್ಟುಚೆನ್ನಾಗಿ ಬರುತ್ತಿರಲಿಲ್ಲ ಅನಿಸುತ್ತದೆ.

ರಶ್ಮಿಕಾ ಎಲ್ಲೇ ಹೋದರೂ ಅಲ್ಲಿರುತ್ತೆ ಅವನ ನೆರಳು!

ಇದು ನನ್ನ ಕತೆ ಆಯ್ತು. ಈಗ ನೀವು ಒಂದು ಸಣ್ಣ ಕೆಲಸ ಮಾಡಿ. ನಿಮ್ಮ ಉದ್ಯೋಗ ಅಥವಾ ದಿನನಿತ್ಯದ ಕೆಲಸಗಳ ನಡುವೆ ನಿಮ್ಮ ಮನಸ್ಸಿಗೆ ಇಷ್ಟವಾಗುವಂತಹ ಕೆಲಸಗಳನ್ನು ಇಗ್ನೋರ್‌ ಮಾಡಿರುತ್ತೀರಿ. ಅಂಥ ಕೆಲಸಗಳನ್ನು ಒಂದು ಪಟ್ಟಿ. ತುಂಬಾ ಗಂಭೀರ ಪಟ್ಟಿಬೇಡ. ಉದಾ: ನಿಮಗೆ ಪೇಯಿಂಟಿಂಗ್‌ ಅಂದರೆ ಇಷ್ಟ. ಆದರೆ, ಜೀವನ ಜಂಜಾಟದಲ್ಲಿ ಅದನ್ನು ಮಾಡದೆ ಹೋಗಿದ್ದೀರಿ. ಈಗ ಅದು ನಮ್ಮ ಆದ್ಯತೆ ಆಗಬೇಕು. ನೀವು ಇರುವ ರೂಮು, ಮನೆಯನ್ನು ನಿಮ್ಮ ಇಷ್ಟದಂತೆ ಸಿಂಗಾರ ಮಾಡಬೇಕು, ಅಡುಗೆ ಮನೆಯಲ್ಲಿ ನಾನೂ ಹೋಗಿ ಒಂದಿಷ್ಟುಹೊಸ ರೀತಿಯಲ್ಲಿ ಕುಕ್‌ ಮಾಡಬೇಕು, ಮಕ್ಕಳು ಇದ್ರೆ ಎಂದೂ ಅವರ ಜತೆ ನೀವು ಸಮಯ ಕಳೆದಿರಲ್ಲ. ಈಗ ಅದನ್ನ ಬಳಸಿಕೊಳ್ಳಿ. ಅವರು ಆಡುವ ತೊದಲು ಮಾತುಗಳು ನಮಗೆ ತುಂಬಾ ಖುಷಿ ಕೊಡುತ್ತದೆ. ಅವರು ಕೇಳುವ ಪ್ರಶ್ನೆಗಳು ನಿಮ್ಮಲ್ಲಿ ಬೆರಗು ಮೂಡಿಸುತ್ತದೆ. ನೋಡಿ, ಇರೋದು ಒಂದೇ ಜೀವನ. ಆ ಒಂದು ಜೀವನಕ್ಕೆ ನಾವೇ ಕಂಪನಿ ಕೊಡದೆ ಹೋದರೆ ಹೇಗೆ ಹೇಳಿ. ಈ ಲಾಕ್‌ಡೌನ್‌ ಅನ್ನೋದು ನಮ್ಮ ಜತೆಗೆ ನಾವೇ ಕಂಪನಿ ಕೊಡುವ ಸಮಯ ಅಂತ ಅಂದುಕೊಂಡು ನೋಡಿ. ಮನೆಯ ಒಂಟಿತನ ಎಷ್ಟುಸುಂದರವಾಗಿ ಕಾಣುತ್ತದೆ ಅಂತ ನಿಮಗೇ ಅನಿಸಕ್ಕೆ ಶುರುವಾಗುತ್ತದೆ.

ನಿಜ ಹೇಳಬೇಕು ಅಂದರೆ ನನ್ನ ಆರಂಭದ ದಿನಗಳಲ್ಲಿ ಇಂಥ ಹಲವು ಲಾಕ್‌ಡೌನ್‌ಗಳನ್ನು ನಾನು ಹಾಕಿಕೊಂಡಿದ್ದೇನೆ. ಹಾಗೆ ಮನೆಯಲ್ಲಿ ಒಬ್ಬನೇ ಕೂತಿದ್ದಾಗಲೇ ಉಳಿದವರು ಕಂಡಂತೆ ಸಿನಿಮಾ ಕತೆ ಹುಟ್ಟಿಕೊಂಡಿತು. ಈಗ ಪುಣ್ಯಕೋಟಿಗೆ ರೆಕ್ಕೆ ಬರುತ್ತಿದೆ. ಲಾಕ್‌ಡೌನ್‌ ಮುಗಿಯುವ ಹೊತ್ತಿಗೆ ಅದು ಸ್ವಚ್ಛಂದವಾಗಿ ಹಾರಾಡುವಷ್ಟುಶಕ್ತಿಯನ್ನು ನಾನು ತುಂಬಬಲ್ಲೆ. ಲಾಕ್‌ಡೌನ್‌ ಕೊಟ್ಟಸ್ವಾತಂತ್ರ್ಯ ಇದು ಅಂತ ನಾನು ಭಾವಿಸಿದ್ದೇನೆ. ನಿಮಗೂ ಹಾಗೆ ಅನಿಸಬಹುದಾ ಅಂತ ನೋಡಿ.

Latest Videos
Follow Us:
Download App:
  • android
  • ios