ಕರಿಸುಬ್ಬು ಅವರು ಇದುವರೆಗೆ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. `ಅಧ್ಯಕ್ಷ', `ವಿಷ್ಣುವರ್ಧನ' ಮತ್ತು `ದಂಡುಪಾಳ್ಯ'ದಲ್ಲಿನ ಅವರ ಪಾತ್ರಗಳು ಜನಪ್ರಿಯವಾಗಿವೆ. 'ನಾಗದೇವತೆ', `ನೀಲಾಂಬರಿ'ಯಂಥ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸಾಧನೆ, ಚಲಿಸುವ ಮೋಡಗಳು, ನಾಲ್ಕು ತಂತಿ ಸೇರಿದಂತೆ ಹಲವಾರು ಧಾರಾವಾಹಿ, ಟೆಲಿಫಿಲ್ಮ್‌ಗಳಲ್ಲಿ ನಟಿಸಿದ್ದಾರೆ. ಅವರ ಮಾಲೀಕತ್ವದಲ್ಲಿರುವ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಕನ್ನಡ ಚಿತ್ರೋದ್ಯಮದ ಅರ್ಧದಷ್ಟು ಪ್ರಮುಖ ಕೆಲಸಗಳು ನಡೆಯುತ್ತವೆ. ಲಾಕ್ಡೌನ್ ಬಳಿಕ ಆಗಿರುವ ಬದಲಾವಣೆಗಳ ಬಗ್ಗೆ ಕರಿಸುಬ್ಬು ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಆಡಿರುವ ಮಾತುಗಳು ಇವು.
 
- ಶಶಿಕರ ಪಾತೂರು

ಲಾಕ್ಡೌನ್ ದಿನಗಳನ್ನು ಹೇಗೆ ಕಳೆದಿರಿ?
ಮನೆಯಲ್ಲೇ ಗಾರ್ಡನ್ ಕೆಲಸ ಮಾಡುತ್ತಿದ್ದೆ. ಚೆನ್ನಾಗಿ ವಾಕ್ ಮಾಡುವುದು ಮತ್ತು ಯೋಗದಲ್ಲಿ ತೊಡಗಿಸಿಕೊಂಡಿದ್ದೆ. ಕಳೆದ ಒಂದೂವರೆ ದಶಕದಿಂದಲೇ ಹಾಟ್ ವಾಟರ್ ಥೆರಪಿ ಮಾಡುತ್ತಿದ್ದೆ. ಬಿಸಿನೀರನ್ನೇ ಕುಡಿಯುತ್ತಿದ್ದೆ. ಮನೆಯ ಗಾರ್ಡನ್ ಕ್ಲೀನಿಂಗ್ ಮಾಡುತ್ತಿದ್ದೆ. ವಾರಕ್ಕೊಮ್ಮೆ ಸ್ಟುಡಿಯೋ ಕಡೆಗೆ ಹೋಗಿ ಐದು ನಿಮಿಷ ಇದ್ದು ಬರುತ್ತಿದ್ದೆ. ಒಟ್ಟಿನಲ್ಲಿ ನನ್ನ ನಾಲ್ಕು ದಶಕದ ಸಿನಿಮಾ  ಬದುಕಿನಲ್ಲಿ ಇಂಥದೊಂದು ಸಂದರ್ಭವನ್ನು ಪ್ರಥಮ ಬಾರಿ ಅನುಭವಿಸಿದೆ. ಲಾಕ್ಡೌನ್ ಗಿಂತ ಎರಡು ತಿಂಗಳು ಮೊದಲು ವಿದೇಶ ಪ್ರವಾಸ ಹೋಗಿ ಬಂದಿದ್ದೆವು. ಆದರೆ ಎರಡೇ ತಿಂಗಳೊಳಗೆ ಅಂಗಳಕ್ಕೂ ಕಾಲಿಡದ ಹಾಗಾಯಿತು!

ಕಾಜೋಲ್‌ಗೂ ಮುಂಚೆ ಇವರೊಂದಿಗೆ ಡೇಟಿಂಗ್ ಮಾಡಿದ್ದ ಅಜಯ್ ದೇವಗನ್

ವಿದೇಶ ಪ್ರವಾಸದ ಅನುಭವ ಹೇಗಿತ್ತು?
ಅದು ಕುಟುಂಬ ಸಮೇತ ವಿಯೆಟ್ನಾಂ ಮತ್ತು ಕಾಂಬೋಡಿಯಾಗೆ ಹೋದಂಥ ಪ್ರವಾಸ. ಕಾಂಬೋಡಿಯಾದಲ್ಲಿ ಹಿಂದೂ ದೇವಸ್ಥಾನ ಒಂದಿದೆ. ಅಂಗ್ಕೊರ್ ವಾಟ್ ಎನ್ನುವ ವಲ್ಡ್ ಹೆರಿಟೇಜ್ ಟೆಂಪಲ್. ಹನ್ನೊಂದನೇ ಶತಮಾನದಲ್ಲಿ ಕಟ್ಟಿದಂಥ ವಿಷ್ಣುವಿನ ದೇವಸ್ಥಾನ ಅದು. ಈಗ ಅದು ಬುದ್ಧಿಸಮ್ ಟೆಂಪಲ್‌ ಆಗಿದೆ. ಅದು ಜಗತ್ತಿನ ಅತಿ ದೊಡ್ಡ ದೇವಸ್ಥಾನವಾಗಿದ್ದು, ಒಂದು ಕಡೆಯಿಂದ ಪ್ರವೇಶಿಸಿ ಮತ್ತೊಂದು ಕಡೆಯಿಂದ ಹೊರಗೆ ಬರಬೇಕಾದರೆ ಸುಮಾರು 2ಕಿ.ಮೀಗಳಷ್ಟು ಕ್ರಮಿಸಬೇಕಾಗುತ್ತದೆ. ಅಷ್ಟು ದೂರ ಹೋಗಿದ್ದೆವಲ್ಲ, ಹಾಗೇ ವಿಯೆಟ್ನಾಂಗೂ ಹೋಗಿ ಬಂದೆವು. 

ನಿಮ್ಮ ಸ್ಟುಡಿಯೋ ಕೆಲಸಗಳು ಹೇಗೆ ಸಾಗಿವೆ?
ಲಾಕ್ಡೌನ್ ಶುರುವಾಗುವ ಹೊತ್ತಿಗೆ ಮಂಸೋರೆಯವರ `ಆಕ್ಟ್ 1978', ದರ್ಶನ್ ಅವರ `ರಾಬರ್ಟ್', ರಮೇಶ್ ಅರವಿಂದ್ ಅವರ `100', ಅಜಯ್ ರಾವ್ ನಟನೆಯ `ಕೃಷ್ಣ ಟಾಕೀಸ್' ಸಿನಿಮಾಗಳ ಡಬ್ಬಿಂಗ್ ಪೂರ್ತಿಯಾಗಿತ್ತು. `ಪೊಗರು' ಚಿತ್ರದ ಒಂದು ಹಂತತದ ಡಬ್ಬಿಂಗ್ ಮುಗಿದಿದೆ. ಮರಾಠಿ ಮತ್ತು ಕನ್ನಡದಲ್ಲಿ ತೆರೆಕಾಣಲಿರುವ `ರಾಜಸ್ಥಾನ್ ಡೈರೀಸ್' ಮತ್ತು ಡಾಲಿ ಧನಂಜಯ್ ಅವರ `ಬಡವ ರಾಸ್ಕಲ್' ಚಿತ್ರದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಜತೆಗೆ `ಪಿ ಆರ್ ಕೆ ಮೂವೀಸ್'ನ  ಫ್ರೆಂಚ್ ಬಿರಿಯಾನಿ ಚಿತ್ರದ ಕೆಲಸವೂ ನಡೆಯುತ್ತಿದೆ. ಸೋಶಿಯಲ್ ಡಿಸ್ಟೆನ್ಸ್ ಮಾಡಿಕೊಂಡು ಡಬ್ಬಿಂಗ್ ಶುರು ಮಾಡಲಾಗಿದೆ. ಸ್ಟುಡಿಯೋಗೆ ಆದಷ್ಟು ಕಡಿಮೆ ಜನ ಬನ್ನಿ ಎಂದು ಮೊದಲೇ ಹೇಳಿರುತ್ತೇವೆ. ಮೊದಲಿನ ಹಾಗೆ ಸೌಂಡ್ ಇಂಜಿನಿಯರ್ ಪಕ್ಕ ನಾಲ್ಕೈದು ಮಂದಿ ಕುಳಿತುಕೊಳ್ಳಲು ಅವಕಾಶ ನೀಡುವುದಿಲ್ಲ. 

ಕನಸುಗಾರನ ಹೊಸ ಕನಸು

ನಿಮ್ಮ ನಟನೆಯ ಚಿತ್ರಗಳ ಬಗ್ಗೆ ಹೇಳಿ
ತೆರೆಕಾಣಲಿರುವ `ರಾಬರ್ಟ್' ಮತ್ತು `ಪೊಗರು' ಚಿತ್ರಗಳಲ್ಲಿ ನಟಿಸಿದ್ದೇನೆ. ದರ್ಶನ್ ಅವರೊಂದಿಗೆ `ಲಾಲಿ ಹಾಡು' ಚಿತ್ರ ಆದಮೇಲೆ ನಟಿಸುತ್ತಿರುವುದು ಇದೇ ಸಿನಿಮಾ. ನಿರ್ದೇಶಕ ತರುಣ್ ಕಿಶೋರ್ ಒಂದು ಒಳ್ಳೆಯ ಪಾತ್ರ ನೀಡಿದ್ದಾರೆ. ಅದರ ಬಗ್ಗೆ ಇದಕ್ಕಿಂತ ಹೆಚ್ಚು  ವಿವರ ಹೇಳುವಂತಿಲ್ಲ. ಪೊಗರು ಚಿತ್ರದಲ್ಲಿ ಕೂಡ ಚೆನ್ನಾಗಿರುವ ಪಾತ್ರವೇ ಇದೆ. ಚಿಕ್ಕಣ್ಣನ ತಂದೆಯ ಪಾತ್ರ. ನಾವಿಬ್ಬರು ಅಪ್ಪ ಮಗನ ಕಾಂಬಿನೇಶನ್ನಲ್ಲಿ ಈ ಹಿಂದೆ `ಅಧ್ಯಕ್ಷ', `ಭರತ ಬಾಹುಬಲಿ'ಯಲ್ಲಿಯೂ ನಟಿಸಿದ್ದೆವು. ಇವಲ್ಲದೆ ನಾನೇ ಪ್ರಧಾನ ಪಾತ್ರ ನಿರ್ವಹಿಸಿರುವ ದಿನೇಶ್ ಬಾಬು ಅವರ ನಿರ್ದೇಶನದ `ಅಭ್ಯಂಜನ' ಚಿತ್ರ ಬಿಡುಗಡೆಯಾಗಬೇಕಿದೆ. ಹಳ್ಳಿಯೊಂದರಲ್ಲಿ ನಡೆಯುವ ದಯಾಮರಣ ಮಾದರಿಯ ಕೊಲೆಯನ್ನು ಆಧರಿಸಿರುವ ಕತೆಯ ಪೂರ್ತಿ  ಚಿತ್ರೀಕರಣ ಚಾಮರಾಜನಗರ ಜಿಲ್ಲೆಯ ತಮಿಳುನಾಡು ಗಡಿಭಾಗದಲ್ಲಿ ನಡೆಸಲಾಗಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಸಿನಿಮಾ ತೆರೆಕಂಡಾಗ ತುಂಬ ಒಳ್ಳೆಯ ಪ್ರತಿಕ್ರಿಯೆ ದೊರಕಿತ್ತು.

ಸದ್ದಿಲ್ಲದೇ ಮದುವೆಯಾದ ಸುಮನ್ ಕಿತ್ತೂರು