ಕನಸುಗಾರನ ಹೊಸ ಕನಸು; ಹ್ಯಾಪಿ ಬರ್ತಡೇ ಕ್ರೇಜಿಸ್ಟಾರ್ ರವಿಚಂದ್ರನ್!
ಸ್ಯಾಂಡಲ್‌ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬ. ಆ ಪ್ರಯುಕ್ತ ಅವರ ಜತೆ ಮಾತುಕತೆ.
ಆರ್‌ಕೆ
ಈ ವರ್ಷದ ಹುಟ್ಟುಹಬ್ಬ ಹೇಗಿರುತ್ತದೆ?
ಸದ್ಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಗಳಿಗೂ ಮನೆಯ ಹತ್ತಿರ ಬರಬೇಡಿ ಅಂತ ಹೇಳಿದ್ದೇನೆ. ಈ ಟೈಮ್‌ನಲ್ಲಿ ಒಂದೇ ಕಡೆ ಸೇರುವುದು ಒಳ್ಳೆಯದಲ್ಲ. ಮುಂದಿನ ವರ್ಷ 60 ತುಂಬುತ್ತದೆ. ಆಗ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿಕೊಳ್ಳೋಣ ಅಂತ ಹೇಳಿದ್ದೇನೆ.
ಗೋಲ್ಡನ್ ಜುಬ್ಲಿ ಸಂಭ್ರಮದಲ್ಲಿ ಈಶ್ವರಿ ಪ್ರೊಡಕ್ಷನ್!
ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬದ ದಿನ ನೆನಪಾಗುವುದು ಯಾರು?
ಅಂಬರೀಶ್. ಯಾಕೆಂದರೆ ನಾನು, ಅವರು ನಮ್ಮ ಹುಟ್ಟುಹಬ್ಬಗಳನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ವಿ. ಈಗ ನಾನು ಒಬ್ಬನೇ. ಇನ್ನೊಂದು ಖುಷಿ ಅಂದರೆ ನನ್ನ ಮಗಳ ಮದುವೆ ದಿನವೇ ಅಂಬರೀಶ್ ಹುಟ್ಟುಹಬ್ಬ. ಹೀಗಾಗಿ ಮಗಳ ಮದುವೆ ವಾರ್ಷಿಕೋತ್ಸವ ಹಾಗೂ ಅಂಬರೀಶ್ ಜನ್ಮದಿನ ಒಟ್ಟಿಗೆ ಆಚರಿಸುತ್ತೇನೆ. ಅಂಬರೀಶ್ ಯಾವಾಗಲೂ ನಮ್ಮ ಜತೆಗೆ ಇದ್ದಾರೆ. ವರ್ಷಕ್ಕೊಮ್ಮೆ ದೊಡ್ಡದಾಗಿ ಸಂಭ್ರಮಿಸುತ್ತೇವೆ.
ನಿಮ್ಮ ನಟನೆಯ ಯಾವ ಸಿನಿಮಾ ಬಿಡುಗಡೆಯ ಹಂತದಲ್ಲಿದೆ?
ರವಿ ಬೋಪಣ್ಣ ಚಿತ್ರೀಕರಣ ಮುಗಿದಿದೆ. ತಾಂತ್ರಿಕ ಕೆಲಸಗಳೂ ಮುಕ್ತಾಯವಾಗಿದ್ದು, ಮೊದಲ ಪ್ರತಿ ಬರಬೇಕಿದೆ. ನಾನು ಮತ್ತು ಸುದೀಪ್ ಜತೆಯಾಗಿರುವ ಸಿನಿಮಾ. ಆದರೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸಿನಿಮಾ ಮುಕ್ತಾಯದ ಹಂತಕ್ಕೆ ಬರುವಾಗ 10 ನಿಮಿಷ ಸುದೀಪ್ ಪಾತ್ರ ಪ್ರವೇಶವಾಗುತ್ತದೆ. ಇಡೀ ಕತೆಯ ತಿರುವು ಅವರ ಪಾತ್ರದ ಮೇಲೆ ನಿಲ್ಲುತ್ತದೆ. ಅದನ್ನು ಯಾರ ರೀತಿ ನಿಭಾಯಿಸಿದ್ದಾರೆ ಎಂಬುದು ನೀವು ತೆರೆ ಮೇಲೆ ನೋಡಬೇಕು. ‘ಮಾಣಿಕ್ಯ’ ಚಿತ್ರದ ನಂತರ ಇಬ್ಬರು ಜತೆಯಾಗಿರುವ ಸಿನಿಮಾ.
ರವಿ ಬೋಪಣ್ಣ ಯಾವ ರೀತಿಯ ಸಿನಿಮಾ?
ಮತ್ತೊಂದು ‘ಮಲ್ಲ’ ರೀತಿಯ ಸಿನಿಮಾ. ಅಲ್ಲಿ ಮನರಂಜನೆಯೇ ಪ್ರಧಾನವಾಗಿತ್ತು. ಇಲ್ಲಿ ತನಿಖೆ- ವಾದ, ಪ್ರತಿವಾದಗಳ ರೀತಿಯಲ್ಲಿರುತ್ತದೆ. ಮಲ್ಲ ಸಿನಿಮಾದಲ್ಲಿ ಡಿಬೇಟ್ ಇದ್ದರೆ ಹೇಗಿರುತ್ತದೆ ಎಂಬುದಕ್ಕೆ ಈ ಸಿನಿಮಾ ಸಾಕ್ಷಿ. ಬೇರೆ ಬೇರೆ ವಿಷಯಗಳನ್ನು ಒಳಗೊಂಡು ಇಡೀ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ.
ಪ್ರೇಮ ಲೋಕ ಸೃಷ್ಟಿಸಿದ 'ಸಿಪಾಯಿ'ಗೆ ಜೋಡಿಯಾಗಿ ಮಿಂಚಿದ ನಟಿಯರ ಫೋಟೋಸ್!
ರಾಜೇಂದ್ರ ಪೊನ್ನಪ್ಪ ಸಿನಿಮಾ ಎಲ್ಲಿಯವರೆಗೂ ಬಂತು?
ಚಿತ್ರಕ್ಕೆ ಅರ್ಧ ಶೂಟಿಂಗ್ ಆಗಿದೆ. ಅದು ಮತ್ತೊಂದು ಪ್ರಯೋಗ ಮತ್ತು ಕಮರ್ಷಿಯಲ್ ಸಿನಿಮಾ. ಲಾಕ್‌ಡೌನ್‌ನಿಂದ ಸಿನಿಮಾ ಸದ್ಯಕ್ಕೆ ನಿಂತಿದೆ. ಅದಕ್ಕೆ ಸಾಕಷ್ಟುಕೆಲಸಗಳು ಬಾಕಿ ಇವೆ.
ನೀವು ಈ ಲಾಕ್‌ಡೌನ್ ದಿನಗಳನ್ನು ಹೇಗೆ ಬಳಸಿಕೊಂಡ್ರಿ?
ನನ್ನದೇ ಆದ ಒಂದು ಆ್ಯಪ್ ರೂಪಿಸಿದ್ದೇನೆ. ಅದರ ಹೆಸರು n1n1ly ಎಂಬುದು. ಇದು ನನ್ನ ವೈಯಕ್ತಿಕ ಆ್ಯಪ್. ಸಾಕಷ್ಟುಸಮಯ ತೆಗೆದುಕೊಂಡು ಎರಡು ತಿಂಗಳು ಇದಕ್ಕೇ ಮೀಸಲಿಟ್ಟು ರೂಪಿಸಿದ್ದೇನೆ. ಇನ್ನೊಂದು ತಿಂಗಳ ಒಳಗೆ ಬಿಡುಗಡೆಯಾಗಲಿದೆ.
ಈ ಆ್ಯಪ್‌ನಲ್ಲಿ ಏನೆಲ್ಲ ಇರುತ್ತವೆ?
ನಮ್ಮನ್ನು ರೂಪಿಸಿದ ಈಶ್ವರಿ ಸಂಸ್ಥೆಯ ಹೆಜ್ಜೆ ಗುರುತುಗಳು, ನಾನು ನಡೆದು ಬಂದ ಹಾದಿ, ನನ್ನ ಸಿನಿಮಾಗಳು, ನನ್ನ ಬದುಕಿನ ತಿರುಗುಳು, 60 ವರ್ಷಕ್ಕೆ ಒಂದು ವರ್ಷ ಬಾಕಿ ಉಳಿಸಿಕೊಂಡಿರುವ ನನ್ನ ಬುದುಕಿನ ಪುಟುಗಳು ಹೀಗೆ ಸಾಕಷ್ಟುವಿಚಾರಗಳು, ಮಾತು- ವಿಡಿಯೋಗಳ ಮೂಲಕ ಹೇಳುತ್ತ ಹೇಗುತ್ತೇನೆ. ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಈ ಆ್ಯಪ್ ಬಳಸಕ್ಕೆ ಸಾಧ್ಯ. ಇಲ್ಲಿ ನಾನು ಹೇಳುವ ವಿಚಾರಗಳನ್ನು ನಕಲು ಮಾಡಕ್ಕೆ ಆಗಲ್ಲ. ಆ್ಯಪ್‌ನಲ್ಲೇ ನೋಡಬೇಕು, ಇಲ್ಲೇ ಓದಕ್ಕೆ.
ಯಾಕೆ ಇಂಥದ್ದೊಂದು ಆ್ಯಪ್ ಮಾಡಬೇಕು ಅನಿಸಿತು?
ನಾವು ಮುಂದಕ್ಕೆ ಸಾಗಬೇಕು ಅಂದರೆ ಹೊಸ ಹೊಸ ದಾರಿಗಳನ್ನು ಕಂಡು ಹಿಡಿದುಕೊಳ್ಳಬೇಕು. ಎಲ್ಲರು ಮನೆಯಲ್ಲಿದ್ದಾರೆ. ಮುಂದೆ ಏನು ಅಂತ ಗೊತ್ತಿಲ್ಲ. ಈ ಸಂದರ್ಭದಲ್ಲಿ ನಾವು ಜನರ ಜತೆ ಮಾತನಾಡಬೇಕು. ನಮ್ಮ ಬಗ್ಗೆ ಅವರಿಗೆ ಹೇಳಿಕೊಳ್ಳಬೇಕು. ಅದಕ್ಕೊಂದು ಸೇತು ಅಥವಾ ವೇದಿಕೆ ಬೇಕು ಅನಿಸಿದಾಗ ಹುಟ್ಟಿಕೊಂಡ ಐಡಿಯಾ ಇದು. ಜತೆಗೆ ನಾನು ನನ್ನದೇ ಆದ ದಾಟಿಯಲ್ಲಿ ಹೇಳುತ್ತ ಬಂದ ಮಾತುಗಳು, ಸಿನಿಮಾಗಳ ಕುರಿತ ನನ್ನ ಅಭಿಪ್ರಾಯಗಳು ಬೇರೆ ಎಲ್ಲೆಲ್ಲೋ ಹೇಗೇಗೋ ಬಳಕೆ ಆಗುತ್ತಿವೆ. ಹಾಗೆ ಆಗಬಾರದು. ಅದೊಂದು ಅಧಿಕೃತ ದಾಖಲೆ ಆಗಿರಬೇಕು ಎನ್ನುವುದು ಕೂಡ ಈ ಆ್ಯಪ್‌ನ ಉದ್ದೇಶ. ಅಲ್ಲದೆ ಈ ಆ್ಯಪ್ ಹೇಗೆ ಚಾಲ್ತಿಗೆ ಬರುತ್ತದೆ ಎನ್ನುವುದರ ಮೇಲೆ ನನ್ನ ಮತ್ತೊಂದು ಕನಸು ನಿಂತಿದೆ.
ಮಗನಿಗೆ ಲವ್ವೇ ಆಗಿಲ್ವಂತೆ; ಹುಡುಗಿ ಹುಡುಕ್ತಿದ್ದಾರೆ ರವಿಚಂದ್ರನ್!
ಆ ಕನಸು ಯಾವುದು?
ಮುಂದೆ ನನ್ನದೇ ಆದ ಸ್ವಂತ ಓಟಿಟಿ ಪ್ಲಾಟ್‌ಫಾರಂ ಮಾಡುವ ಗುರಿ ಇದೆ. ಈಗ ಎದುರಾಗಿರುವ ಪರಿಸ್ಥಿತಿ ಮುಂದೆ ಏನಾಗುತ್ತದೋ ಗೊತ್ತಿಲ್ಲ. ಇಂಥ ವಿಪತ್ತುಗಳು ಬೇರೆ ಬೇರೆ ರೂಪದಲ್ಲಿ ಬರಬಹುದು. ಅದಕ್ಕೆ ನಾವು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಹೀಗಾಗಿ ಡಿಜಿಟಲ್ ಮಾಧ್ಯವನ್ನು ಸೂಕ್ತ ರೀತಿಯಲ್ಲಿ ಬಳಸಬೇಕು ಅಂತ ಈಗ ಗಟ್ಟಿಯಾಗಿ ಅನಿಸುತ್ತಿದೆ. ನೋಡೋಣ ಏನಾಗುತ್ತದೆ ಅಂತ.
ಕೊರೋನಾ, ಲಾಕ್‌ಡೌನ್ ಸಂಕಷ್ಟವೇ ಇಂಥ ಐಡಿಯಾಗೆ ದಾರಿ ಆಯಿತಾ?
ನಾವು ಏನೇ ಮಾಡಿದರೂ ಅದು ಜನಕ್ಕೆ ಸೇರಬೇಕು. ಸಿನಿಮಾ ಜನರಿಂದ ಕೂಡಿದ ಕ್ಷೇತ್ರ. ಈಗ ಅವರಿಂದಲೇ ನಾವು ದೂರ ಆಗಿದ್ದೇವೆ. ಈಗ ಜೀವನವನ್ನು ರೀವೈಂಡ್ ಮಾಡಕ್ಕೆ ಆಗಲ್ಲ. ಹೊಸದಾಗಿಯೇ ನಿರ್ಮಾಣ ಮಾಡಿಕೊಳ್ಳಬೇಕು. ಅದಕ್ಕೆ ಮತ್ತೊಂದು ವೇದಿಕೆ, ದಾರಿ ರೆಡಿಯಾಗಿರಬೇಕು.
ಸಿನಿಮಾ ಮಾಡಿ ಜನರಿಗಾಗಿ ಥಿಯೇಟರ್‌ನಲ್ಲಿ ಕಾಯಬೇಕಿಲ್ಲವೇ?
ಮಾಲ್ ಸಂಸ್ಕೃತಿ ಬಂದ ಮೇಲೆ ಸಿನಿಮಾ ಟ್ರೆಂಡ್ ಬದಲಾಯಿತು. ಸಿನಿಮಾ ಮಾಡಿ ಒಂದು ವಾರದಲ್ಲಿ ದುಡ್ಡು ಮಾಡಿಕೊಳ್ಳಬಿಡಬೇಕು. ಯಾರಿಗೂ ಕಾಯುವ ತಾಳ್ಮೆ ಇಲ್ಲ. ಈಗಿನ ಸಿನಿಮಾಗಳು ಗಳಿಕೆಯ ಆಧಾರದ ಮೇಲೆ ನಿಂತಿವೆ. ನಾವು ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡಿ ಜನ ಏನಂತಾರೆ ಅಂತ ಕಾಯುತ್ತಿದ್ವಿ. ಜನರ ಅಭಿಪ್ರಾಯಗಳ ನಂತರವೇ ಗಳಿಕೆ ಕಡೆ ಗಮನ. ಆದರೆ ಈಗ ಕೋಟಿ ಲೆಕ್ಕದ ಸಿನಿಮಾಗಳು ಬಂದು ಬಂದು ಬೀಳುತ್ತಿವೆ. ಯಾರೂ ಯಾರಿಗೂ ಕಾಯಲ್ಲ. ಹಣ ಮಾಡ್ಕೊತ್ತಾರೆ ಹೋಗ್ತಾರೆ. ಸಕ್ಸಸ್‌ಗಿಂತ ವ್ಯಾಪಾರಕ್ಕೆ ಮಹತ್ವ ಸಿಕ್ಕಿದೆ. ಸಿನಿಮಾ ಮಾಡುವವನ ತಂತ್ರ, ಸಿನಿಮಾ ನೋಡುವವರ ದಾರಿ ಬದಲಾಗುತ್ತಿದೆ. ಅದಕ್ಕೆ ನಾವೂ ಕೂಡ ಹೊಸ ದಾರಿಗಳನ್ನು ರೂಪಿಸಿಕೊಳ್ಳಬೇಕಿದೆ.
ನಿಮ್ಮ ಮಗಳ ಮದುವೆ ಸಂಭ್ರಮದ ವಿಡಿಯೋಗಳು, ಅದರ ಬಗ್ಗೆ ನಿಮ್ಮ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ತುಂಬಾ ಸದ್ದು ಮಾಡಿದವಲ್ಲ?
ಹೌದು. ಯಾಕೆಂದರೆ ಜನ ರಿಯಾಲಿಟಿ ಮಿಸ್ ಮಾಡಿಕೊಂಡಿದ್ದಾರೆ. ಕುಟುಂಬ, ಸಂಬಂಧಗಳು, ಎಮೋಷನ್ ಎಲ್ಲವನ್ನೂ ನಾವು ಮರೆತಿದ್ವಿ. ಈ ಹೊತ್ತಿನಲ್ಲಿ ಅವರಿಗೆ ನಮ್ಮ ಕುಟುಂಬದ ಸಂಭ್ರಮವನ್ನು ಅವರ ಮನೆಯ ಸಂಭ್ರಮವಾಗಿ ಸವಿದಿದ್ದಾರೆ. ನಾನು ಏನೇ ಮಾಡಿದರೂ ಅದು ಕುಟುಂಬದ ಸಂಭ್ರಮದಂತೆ ಕಾಣುತ್ತದೆ. ನನ್ನ ಮಗಳ ಬಗ್ಗೆ ಮಾತನಾಡಿದ ಮದುವೆ ವಿಡಿಯೋ ಹೆಚ್ಚು ಹೆಚ್ಚು ನೋಡುತ್ತಿದ್ದಾರೆ ಎಂದರೆ ಅವರು ಮಿಸ್ ಮಾಡಿಕೊಂಡಿದ್ದನ್ನು ನನ್ನ ಕುಟುಂಬದ ಸಂಭ್ರಮದಲ್ಲಿ ಕಾಣುತ್ತಿದ್ದಾರೆ ಎಂದರ್ಥ.
ಮಕ್ಕಳ ವಿಚಾರ ಬೇಡ
ಮಕ್ಕಳ ವಿಚಾರದಲ್ಲಿ ನಾನು ಮದ್ಯ ಪ್ರವೇಶ ಮಾಡಲ್ಲ. ಅವರೇ ತಪ್ಪು ಮಾಡಬೇಕು, ಅವರೇ ಅದನ್ನು ಸರಿ ಮಾಡಿಕೊಂಡು ಹೋಗಬೇಕು. ನಮ್ಮ ಅನುಭವಗಳನ್ನು ಮಕ್ಕಳ ಮೇಲೆ ಹೇರಬಾರದು. ಅವರೇ ಅನುಭವಿಸಬೇಕು. ನಮ್ಮ ಅಪ್ಪ ನನ್ನ ಹಾಗೆ ಬಿಟ್ಟಿದ್ದು. ನಾನೂ ಹಾಗೆ ನನ್ನ ಮಕ್ಕಳನ್ನು ಸ್ವಂತ ಯೋಚನೆಯ ದಾರಿಯಲ್ಲಿ ಬಿಟ್ಟಿದ್ದೇನೆ. ನಮ್ಮ ತಪ್ಪುಗಳನ್ನು ಹೇಳುವವರೇ ನಮ್ಮ ಒಳ್ಳೆಯದನ್ನು ಬಯಸುತ್ತಾರೆ. ಒಳ್ಳೆಯದನ್ನು ಹೇಳುವರರು ಸಾವಿರ ಜನ ಇದ್ದಾರೆ. ಆದರೆ, ನಮ್ಮಲ್ಲಿ ತಪ್ಪುಗಳನ್ನು ಕಂಡು ಹಿಡಿಯುವವರಿಗೆ ಮಹತ್ವ ಕೊಡಬೇಕು. ಯಾಕೆಂದರೆ ಅವರೇ ನಮ್ಮಲ್ಲಿ ನಿಜವನ್ನು ಹುಡುಕುವುದು.