Asianet Suvarna News Asianet Suvarna News

ನಾಯಕನಾಗುವ ಚಿತ್ರದ ತಯಾರಿಯಲ್ಲಿದ್ದಾರೆ ಚಿಕ್ಕಣ್ಣ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಚಿಕ್ಕಣ್ಣ ನಾಯಕನಾಗಿರುವ ಚಿತ್ರ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಬೇರೆಯದೇ ಪ್ಲ್ಯಾನ್ ಹಾಕಿತ್ತು. ಸದ್ಯಕ್ಕೆ ಮಂಜು ಮಾಂಡವ್ಯ ಉಪೇಂದ್ರ ಅವರ ಸಿನಿಮಾದ ಕೆಲಸದಲ್ಲಿದ್ದಾರೆ. ಹಾಗಂತ ಚಿಕ್ಕಣ್ಣ ನಾಯಕನಾಗುವ ಅವಕಾಶ ಇಲ್ಲವಾಗಿಲ್ಲ. ಚಿಕ್ಕಣ್ಣ ನಾಯಕನಾಗಿರುವ ಹೊಸ ಚಿತ್ರದ ಕಾರ್ಯ ಪ್ರಗತಿಯಲ್ಲಿದೆ. ಆ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡುವ ಸಂದರ್ಭದಲ್ಲಿ ಅವರೇ ಹೇಳಿದ್ದಾರೆ.
 

kannada actor Chikkanna is ready to play Hero Role
Author
Bengaluru, First Published Jun 28, 2020, 4:17 PM IST

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಚಿಕ್ಕಣ್ಣ ನಾಯಕನಾಗಿರುವ ಚಿತ್ರ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಬೇರೆಯದೇ ಪ್ಲ್ಯಾನ್ ಹಾಕಿತ್ತು. ಸದ್ಯಕ್ಕೆ ಮಂಜು ಮಾಂಡವ್ಯ ಉಪೇಂದ್ರ ಅವರ ಸಿನಿಮಾದ ಕೆಲಸದಲ್ಲಿದ್ದಾರೆ. ಹಾಗಂತ ಚಿಕ್ಕಣ್ಣ ನಾಯಕನಾಗುವ ಅವಕಾಶ ಇಲ್ಲವಾಗಿಲ್ಲ. ಚಿಕ್ಕಣ್ಣ ನಾಯಕನಾಗಿರುವ ಹೊಸ ಚಿತ್ರದ ಕಾರ್ಯ ಪ್ರಗತಿಯಲ್ಲಿದೆ. ಆ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡುವ ಸಂದರ್ಭದಲ್ಲಿ ಅವರೇ ಹೇಳಿದ್ದಾರೆ.

ಶಶಿಕರ ಪಾತೂರು

ನೀವು ನಾಯಕನಾಗುವ ಪ್ರಯತ್ನ ಏನಾಯಿತು?

ನನ್ನನ್ನು ನಾಯಕನಾಗಿಸಲು ತುಂಬ ಮಂದಿ ಪ್ರಯತ್ನ ಪಟ್ಟಿದ್ದರು. ಬಹುಶಃ ಹಾಸ್ಯ ನಟನಾಗಿಯೂ ನಾನು ಕ್ಯಾರೆಕ್ಟರ್ ರೋಲ್ ಮಾಡಿಕೊಂಡು ಬಂದಿದ್ದೇ ಅದಕ್ಕೆ ಕಾರಣ ಇರಬಹುದು. ಆದರೆ ನನಗೆ ಆಗ ಧೈರ್ಯ ಇರಲಿಲ್ಲ. ಆಮೇಲೆ ನೋಡಿದರೆ ನಾಯಕನ ಸ್ನೇಹಿತ, ದ್ವಿತೀಯ ನಾಯಕ ಎನ್ನುವ ಮಟ್ಟಕ್ಕೆ ಪಾತ್ರಗಳು ದೊರಕಿದವು. ಹಾಗೆ ಎಲ್ಲರ ಪ್ರೋತ್ಸಾಹ ಮತ್ತು ಇದುವರೆಗೆ ಪಾತ್ರಗಳನ್ನು ನಿರ್ವಹಿಸಿದ ಅನುಭವ ಸೇರಿದಾಗ ಧೈರ್ಯ ಬಂದಿದೆ. ಈಗ ನಾಯಕನಾಗುವ ಅವಕಾಶವನ್ನು ಒಪ್ಪಿಕೊಂಡಿದ್ದೇನೆ. ಅದಕ್ಕೂ ಮೊದಲು ನನಗೆ ಕತೆ ಇಷ್ಟವಾಗಿದೆ. ಕೊರೊನಾದ ತೊಂದರೆಗಳೆಲ್ಲ ಮುಗಿದ ಮೇಲೆಯೇ ಶೂಟಿಂಗ್ ಕೆಲಸಗಳು ಆರಂಭವಾಗಲಿವೆ. ಮುಖ್ಯವಾಗಿ ಸ್ಕ್ರಿಪ್ಟ್ ವರ್ಕ್ ಇನ್ನೂ ನಡೆಯುತ್ತಿದೆ. ಉಳಿದ ಎಲ್ಲ ವಿಚಾರಗಳನ್ನು ಸ್ಕ್ರಿಪ್ಟ್ ಕೆಲಸ ಪೂರ್ತಿಯಾಗಿ, ಎಲ್ಲ ಫೈನಲ್ ಆದ ಮೇಲೆ ಮಾತ್ರ ತಿಳಿಸುತ್ತೇನೆ. 

kannada actor Chikkanna is ready to play Hero Role

ಲಾಕ್ಡೌನ್ ಸಂದರ್ಭದಲ್ಲಿ ನೀವು ಬೆಂಗಳೂರಲ್ಲೇ ಇದ್ದಿರಾ?

ಇಲ್ಲ. ನಾನು ನಮ್ಮೂರು ಮೈಸೂರಲ್ಲಿದ್ದೆ. ಲಾಕ್ಡೌನ್ ಘೋಷಣೆಗಿಂತ ಮೂರು ದಿನ ಮೊದಲೇ ನಾನು ಊರು ಸೇರಿಕೊಂಡಿದ್ದ ಕಾರಣ, ಇಲ್ಲೇ ಬೆಂಗಳೂರಲ್ಲಿ ಮನೆಯೊಳಗೆ ಸಿಕ್ಕಿಕೊಂಡವರಷ್ಟು ಕಷ್ಟ ಆಗಲಿಲ್ಲ. ಯಾಕೆಂದರೆ ಅಲ್ಲಿ ನಮಗೆ ಕೃಷಿ ಭೂಮಿ ಇದೆ. ಖಾಲಿ ಜಾಗದಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ತಂದೆ ರೈತ. ನನಗೂ ಕೃಷಿ ಕೆಲಸ ಮಾಡಿ ಅಭ್ಯಾಸ ಇದೆ. ನನಗೆ ಹೊಲ ಉಳುವುದು, ಬೆಳೆ ಬೆಳೆಯುವುದು ಎಲ್ಲವೂ ಗೊತ್ತು. ಹಾಗಾಗಿ ನಮ್ಮದು ರೈತರ ಫ್ಯಾಮಿಲಿ ಎಂದೇ ಹೇಳಬಹುದು. ವರ್ಷಾನುಗಟ್ಟಲೆ ಹಳ್ಳಿಯಲ್ಲೇ  ಇದ್ದ ಕಾರಣ ಯಾವುದನ್ನೂ ಮರೆತಿಲ್ಲ. ಹಿಂದೆ ಕೃಷಿಯಲ್ಲಿ ನಷ್ಟವಾದಾಗ ತರಕಾರಿಯನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದೆವು. ಆದರೆ ಈಗ ಅಷ್ಟಾಗಿ ಕೃಷಿಯನ್ನೇ ನಂಬಿಲ್ಲ. ನಮ್ಮ ಖುಷಿಗಾಗಿ ಆತ್ಮತೃಪ್ತಿಗಾಗಿ ಬೆಳೆಯುತ್ತಿದ್ದೇವೆ. ಖಾಲಿ ಭೂಮಿಯಲ್ಲಿ ಮುನ್ನೂರು ನಾನೂರರಷ್ಟು ಗಿಡಗಳನ್ನು ನೆಟ್ಟಿದ್ದೇವೆ. ಅದೇ ಕಾರಣಕ್ಕೆ ಲಾಕ್ಡೌನ್ ತೆಗೆದ ಮೇಲೆಯೂ ಅಲ್ಲೇ ಇದ್ದೆ. ಆದರೆ ಚಿರು ತೀರಿಹೋಗಿದ್ದು ತಿಳಿದಾಗ ತಕ್ಷಣ ಬೆಂಗಳೂರಿಗೆ ಹೊರಟು ಬಂದೆ. ಆಮೇಲೆ ವಾಪಾಸು ಹೋಗಲು ಮನಸು ಆಗಿಲ್ಲ. ಇಲ್ಲಿ ಈಗ ಹೊಸ ಸಿನಿಮಾದ ಸ್ಕ್ರಿಪ್ಟ್ ಡಿಸ್ಕಶನ್ ನಡೆಯುತ್ತಿದೆ.

ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ ಕನ್ನಡದ ಕಾಮಿಡಿ ಸ್ಟಾರ್!

ಇನ್ನು ಮುಂದೆ ನಾಯಕನ ಪಾತ್ರಗಳನ್ನಷ್ಟೇ ಮಾಡುತ್ತೀರಾ?

ಎಲ್ಲಾದರೂ ಉಂಟೇ? ನಾನು ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತೇನೆ. ಆದರೆ ಆಗಲೇ ಹೇಳಿದಂತೆ ಹಾಸ್ಯದ ಪಾತ್ರವಾದರೂ  ಗುರುತಿಸಲ್ಪಡುವ ಕ್ಯಾರೆಕ್ಟರ್‌ಗಳನ್ನೇ  ಆಯ್ಕೆ ಮಾಡಿದ್ದೇನೆ. ಬಹುಶಃ ಅಂಥ ಅವಕಾಶ ಸಿಕ್ಕ ಕಾರಣದಿಂದಲೇ ಜನ ನನ್ನನ್ನು ಇವತ್ತು ಗುರುತಿಸುವ ಮಟ್ಟಕ್ಕೆ ಬೆಳೆದಿದ್ದೇನೆ. ಈಗಾಗಲೇ ನಟಿಸುತ್ತಿರುವ ಚಿತ್ರಗಳು ಕೂಡ ಅಷ್ಟೇ; `ಪೊಗರು' ಚಿತ್ರದಲ್ಲಿ ನನ್ನ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅದರಲ್ಲಿ `ಅಧ್ಯಕ್ಷ'ದ ಬಳಿಕ ಮತ್ತೆ ಕರಿಸುಬ್ಬು ಅವರ ಮಗನಾಗಿ ನಟಿಸಿದ್ದೇನೆ. ಉಳಿದಂತೆ `ಮದಗಜ', ಅನಿಲ್ ಕುಮಾರ್ ಅವರ ನಿರ್ದೇಶನದ `ಕಾಣೆಯಾದವರ ಬಗ್ಗೆ ಪ್ರಕಟಣೆ' ಮತ್ತು ನಿಖಿಲ್ ಕುಮಾರಸ್ವಾಮಿಯವರ ಹೆಸರಿಟ್ಟಿಲ್ಲದ ಸಿನಿಮಾಗಳ ಚಿತ್ರೀಕರಣ ಅರ್ಧದಲ್ಲಿದೆ. ಎರಡು ತಂಡಗಳು ಕೂಡ ಚಿತ್ರೀಕರಣ ಮುಂದುವರಿಸುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಮುಖ್ಯವಾಗಿ ಸರ್ಕಾರ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದರೂ, ನಾವು ಕೋವಿಡ್ ಹರಡದ ಮಾದರಿಯಲ್ಲಿ ಎಚ್ಚರಿಕೆ ವಹಿಸಿ ಶೂಟಿಂಗ್ ಮಾಡಬೇಕಿದೆ. ಸದ್ಯದ ಮಟ್ಟಿಗೆ ಅದು ಕಷ್ಟಸಾಧ್ಯ ಅಥವಾ ರಿಸ್ಕ್ ಬೇಡ ಎನ್ನುವ ಕಾರಣ, ಬಹುಶಃ ಯಾರೂ ಚಿತ್ರೀಕರಣಕ್ಕೆ ಮುಂದಾಗಿಲ್ಲ ಇರಬಹುದು.

ಸಿನಿಮಾಗಳು ಚಿತ್ರಮಂದಿರಗಳನ್ನು ಬಿಟ್ಟು ಮುಂದೆ `ಒಟಿಟಿ'ಗೆ ಸೀಮಿತವಾಗಬಹುದೇ..?

ಅಂಥ ದೊಡ್ಡ ವಿಚಾರಗಳೆಲ್ಲ ನನಗೆ ಗೊತ್ತಿಲ್ಲ. ಆದರೆ ನಾನು ಮಾತ್ರ ಖಂಡಿತವಾಗಿ ಸಿನಿಮಾಗಳನ್ನು ಥಿಯೇಟರಲ್ಲೇ ನೋಡಲಿಕ್ಕೇನೇ ಇಷ್ಟಪಡುತ್ತೇನೆ. ಜನ ಬದಲಾಗುತ್ತಿದ್ದಾರೆ. ಮೊಬೈಲಲ್ಲಿ ಸಮಯ ಮಾಡಿಕೊಂಡು ನೋಡುವವರೇ ಹೆಚ್ಚು ಎಂದಾದರೆ, ಅದು ನಿರ್ಮಾಪಕರಿಗೂ ಲಾಭ ಎಂದಾದರೆ ಅಭಿಪ್ರಾಯ ಹೇಳಲು ನಾವು ಯಾರು? ಒಟ್ಟಿನಲ್ಲಿ ಸಿನಿಮಾ ಗೆಲ್ಲಬೇಕು. ಒಂದು ಸಿನಿಮಾ ಗೆದ್ದರೆ ಒಂದಷ್ಟು ಜನರ ಭವಿಷ್ಯಕ್ಕೆ ಭದ್ರತೆ ಸಿಕ್ಕ ಹಾಗೆ. ಹೊಸಬರಿಗಂತೂ ಮೊದಲ ಸಿನಿಮಾ ಗೆದ್ದರೇನೇ ಮತ್ತೊಂದು ಚಿತ್ರಕ್ಕೆ ಅವಕಾಶ ಸಿಗುವುದು. ನಿರ್ಮಾಪಕರು ಮತ್ತೊಂದು ಚಿತ್ರ ಮಾಡಲು ಸಾಧ್ಯವಾಗುವುದು. ಹಾಗಂತ ಸಿನಿಮಾ ಎನ್ನುವುದು ಒಬ್ಬ ಕಲಾವಿದನಿಗಷ್ಟೇ ಸಂಬಂಧಿಸಿದ್ದಲ್ಲ. ಅದರಲ್ಲಿ ಎಷ್ಟೋ ಮಂದಿಯ ಭವಿಷ್ಯ ಅಡಗಿದೆ. ಯಾರು ಯಾರಿಂದಲೋ ಸಾಲ ತಂದು ಚಿತ್ರ ಮಾಡುವ ನಿರ್ಮಾಪಕರೇ ಇದ್ದಾರೆ. ಅವರಿಗೆ ಮೊದಲು ಶೂಟಿಂಗ್ ಶುರು ಮಾಡುವ, ಚಿತ್ರ ಬಿಡುಗಡೆ ಮಾಡುವ ವಾತಾವರಣ ಸೃಷ್ಟಿಯಾಗಲಿ. ಆಮೇಲೆ ಜನಗಳೇ ತೀರ್ಮಾನ ಮಾಡುತ್ತಾರೆ.

kannada actor Chikkanna is ready to play Hero Role

ಹಾಗೆಯೇ ಈ ವರ್ಷ ವಿವಾಹ ಜೀವನಕ್ಕೂ ಪ್ರವೇಶ ಮಾಡುತ್ತಿದ್ದೀರಂತೆ?

ಮದುವೆ ಬಗ್ಗೆ ಯೋಚನೆಯೇ ಮಾಡಿಲ್ಲ. ಯಾಕೆಂದರೆ ಈ ವರ್ಷ ನನಗೆ ವೈಯಕ್ತಿಕವಾಗಿಯೂ ತುಂಬ ಕೆಟ್ಟದ್ದಾಗಿದೆ. ಕೆಲಸವೇ ಇಲ್ಲವಲ್ಲ? ನನಗೇನೇ ಕೆಲಸ ಇಲ್ಲ  ಎಂದಮೇಲೆ  ಕಟ್ಟಿಕೊಂಡು ಬಂದವಳಿಗೆ ಊಟ ಹೇಗೆ ಕೊಡಲಿ? ಈ ವರ್ಷ ಎಲ್ಲರಿಗೂ ಶಾಪವೇ ಬಿಡಿ! ಕೊರೊನ ಎನ್ನುವ ಕಷ್ಟವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇಂಥದೊಂದು ತೊಂದರೆಗೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ವರ್ಷ ಅಂತ್ಯ ಕಾಣುತ್ತಿದೆ. ಯಾವ ಟೈಮ್ ಗೆ ಏನಾಗಬೇಕೋ ಅದು ಆಗಿಯೇ ಆಗುತ್ತದೆ. ನಾವು ಏನೇ ಅಂದುಕೊಂಡರು ಅದು ಆಗಲ್ಲ. ಹಣೆ ಬರಹದಲ್ಲಿದ್ದರೆ ಯಾವುದನ್ನೂ ತಪ್ಪಿಸಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದು ಹೆಚ್ಚು. ನನ್ನ ಪ್ರಕಾರ "ನಾವು ಏನನ್ನೋ ಪ್ಲ್ಯಾನ್ ಮಾಡುತ್ತೇವೆ" ಎನ್ನುವುದೇ ತಪ್ಪು. ಪ್ಲ್ಯಾನ್ ಎಲ್ಲ ಆಲ್ರೆಡಿ ದೇವರು ಮಾಡಿರುತ್ತಾನೆ. ನಾವು ನಮ್ಮ ಪ್ರಯತ್ನ ಮಾಡುತ್ತೇವೆ ಅಷ್ಟೇ. ಆತ ಆತನ ಯೋಜನೆಯಂತೆ ನಮ್ಮನ್ನು ಬಳಸಿಕೊಳ್ಳುತ್ತಾನೆ! 

Follow Us:
Download App:
  • android
  • ios