ದಿಯಾ `ಖುಷಿ'ಯಾಗಿ ಮನಸು ತೆರೆದಾಗ
`ದಿಯಾ' ಸಿನಿಮಾ ಕಂಡ ಒಂದು ದೊಡ್ಡ ಸಮೂಹ ಚಿತ್ರವನ್ನು ಮೆಚ್ಚಿವೆ. ಅವರೊಳಗೆ ಸಿನಿಮಾವನ್ನು ಥಿಯೇಟರಲ್ಲಿ ರಿರಿಲೀಸ್ ಮಾಡಿಸಿ ಎನ್ನುವಷ್ಟು ಹುಚ್ಚಿದೆ! ಅದರಲ್ಲಿಯೂ ನಾಯಕಿಯ ನಟನೆಯ ಬಗ್ಗೆಯೇ ಈಗ ಎಲ್ಲೆಡೆ ಮಾತು. ಸದ್ಯಕ್ಕೆ ಕರ್ನಾಟಕ ಮಾತ್ರವಲ್ಲ; ಆಲ್ ಇಂಡಿಯಾ ಕ್ರಶ್ ಎನ್ನುವಂತೆ ಬೆಳೆದು ನಿಂತಿದ್ದಾರೆ ದಿಯಾ ಪಾತ್ರಧಾರಿ ಖುಷಿ ಎನ್ನುವ ಹೆಣ್ಣುಮಗಳು. ಅಂಥ ದಿಯಾ ಎನ್ನುವ ಖುಷಿಯ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.
ಒಂದು ಕಡೆ ಕೊರೊನ ವೈರಸ್ ಹರಡುವ ಭಯದಿಂದ ಚಿತ್ರಮಂದಿಗಳು ಮುಚ್ಚಿವೆ. ಮನೆಯಲ್ಲಿ ಕುಳಿತು ಅಮೆಜಾನಲ್ಲೇ ಚಿತ್ರ ನೋಡುವವರ ಸಂಖ್ಯೆ ಹೆಚ್ಚಿವೆ! ಹಾಗೆ `ದಿಯಾ' ಸಿನಿಮಾ ಕಂಡ ಒಂದು ದೊಡ್ಡ ಸಮೂಹ ಚಿತ್ರವನ್ನು ಮೆಚ್ಚಿವೆ. ಅವರೊಳಗೆ ಸಿನಿಮಾವನ್ನು ಥಿಯೇಟರಲ್ಲಿ ರಿರಿಲೀಸ್ ಮಾಡಿಸಿ ಎನ್ನುವಷ್ಟು ಹುಚ್ಚಿದೆ! ಅಂಥ ಚಿತ್ರ ನೀಡಿರುವ ನಿರ್ದೇಶಕ ಅಶೋಕ್ ಅವರು ಪಾತ್ರಗಳಿಗಾಗಿ ಆಯ್ದುಕೊಂಡಿರುವ ಕಲಾವಿದರೆಲ್ಲ ಡಿಮ್ಯಾಂಡ್ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ನಾಯಕಿಯ ನಟನೆಯ ಬಗ್ಗೆಯೇ ಈಗ ಎಲ್ಲೆಡೆ ಮಾತು. ಸದ್ಯಕ್ಕೆ ಕರ್ನಾಟಕ ಮಾತ್ರವಲ್ಲ; ಆಲ್ ಇಂಡಿಯಾ ಕ್ರಶ್ ಎನ್ನುವಂತೆ ಬೆಳೆದು ನಿಂತಿದ್ದಾರೆ ದಿಯಾ ಪಾತ್ರಧಾರಿ ಖುಷಿ ಎನ್ನುವ ಹೆಣ್ಣುಮಗಳು. ಅದಕ್ಕೆ ಇಂದು ಭಾರತದಾದ್ಯಂತ ಚಿತ್ರಕ್ಕೆ ದೊರಕಿರುವ ಅಭಿಮಾನಿಗಳೇ ಉದಾಹರಣೆ! ನಮ್ಮಲ್ಲಿ ಒಂದೇ ಚಿತ್ರಕ್ಕೆ ಕಟೌಟ್ ಹಾಕಿಸುವ ನಟಿಯರಿದ್ದಾರೆ. ಆದರೆ ದಿಯಾ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಈ ನಟಿಯನ್ನು ತಮ್ಮ ಹೃದಯದೊಳಗೆ ಕಟೌಟಾಗಿಸಿರುವುದು ಕಾಣುತ್ತಿದ್ದೇವೆ. ಅಂಥ ದಿಯಾ ಎನ್ನುವ ಖುಷಿಯ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.
- ಶಶಿಕರ ಪಾತೂರು
ನಿಜವಾಗಿ ನಿಮ್ಮ ಕ್ಯಾರೆಕ್ಟರ್ ಗೂ ದಿಯಾಗೂ ಹೋಲಿಕೆ ಇದೆಯೇ?
ಸುಮಾರು ಐವತ್ತು ಪರ್ಸೆಂಟ್ ನಷ್ಟು! ಯಾಕೆಂದರೆ ನಾನು ಪೂರ್ತಿಯಾಗಿ ಇಂಟ್ರಾವರ್ಟ್ ಆಗಲೀ, ಎಕ್ಸ್ಟ್ರಾವರ್ಟ್ ಆಗಲೀ ಅಲ್ಲ! ಇನ್ನು ಕ್ರಶ್ ಮೊದಲಾದವು ಶಾಲಾ ದಿನಗಳಿಂದಲೇ ಇತ್ತು. ಅಂದರೆ ಅದರಲ್ಲಿ ಪ್ರೀತಿ-ಪ್ರೇಮ, ವಿವಾಹದ ದೊಡ್ಡ ದೊಡ್ಡ ಕನಸುಗಳೇನೂ ಇರಲಿಲ್ಲ. ಅದು ಒಂದು ಮೆಚ್ಚುಗೆಯ ರೂಪದಲ್ಲಿ ಹಲವರ ಬಗ್ಗೆ ಮೂಡಿತ್ತು. ಅದನ್ನು ಅವರಿಗೆ ಹೇಳಬೇಕು ಅನಿಸಿಲ್ಲ. ಹೇಳಲಾಗದೇ ಹೋದೆ ಎಂದು ಪರಿತಪಿಸಿದ್ದೂ ಇಲ್ಲ!
ಮನದ ಅಂತರಾಳ ತೆರೆದಿಟ್ಟ ನಟಿ ಮಾನಸ ಜೋಶಿ
ನಿಮಗೆ ಕೌಟುಂಬಿಕವಾಗಿ ಸಿನಿಮಾ ಹಿನ್ನೆಲೆ ಇತ್ತೇ?
ಇಲ್ಲವೇ ಇಲ್ಲ! ನನ್ನ ತಂದೆ ರವಿಯವರು ನ್ಯೂಸ್ ಪೇಪರ್ ಏಜೆನ್ಸಿ ನಡೆಸುತ್ತಿದ್ದಾರೆ. ಅಮ್ಮ ಸೌಭಾಗ್ಯ ಗೃಹಿಣಿ. ತಮ್ಮ ಲೋಹಿತ್ ಈಗ ಉನ್ನತ ಶಿಕ್ಷಣಕ್ಕಾಗಿ ಯು.ಕೆಗೆ ಹೋಗಲು ತಯಾರಿ ನಡೆಸಿದ್ದಾನೆ. ನಾನು ಮಾತ್ರ ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಆಸಕ್ತಿ ತೋರಿಸಿದೆ. ಭರತನಾಟ್ಯ, ಶಾಸ್ತ್ರೀಯ ಸಂಗೀತ ಎಲ್ಲದರ ಕಲಿಕೆಗೂ ಮುಂದಾಗಿದ್ದ ನನಗೆ ಸಂಗೀತವೇ ರಂಗಭೂಮಿಗೆ ಸಂಪರ್ಕ ಮಾಡಿಕೊಟ್ಟಿತು. ಇದುವರೆಗೆ ಏಳೆಂಟು ನಾಟಕಗಳ ಮೂಲಕ ಅರ್ಧ ಶತಕದಷ್ಟು ಪ್ರದರ್ಶನಗಳನ್ನು ನೀಡಿದ್ದೇನೆ.
`ದಿಯಾ' ನಿಮಗೆ ಪ್ರಥಮ ಚಿತ್ರವೇ?
ನಾಯಕಿಯಾಗಿ ನನಗೆ ಪ್ರಥಮ ಚಿತ್ರ ಎಂದೇ ಹೇಳಬಹುದು. ಅದರ ಹೊರತು ಸಣ್ಣಪುಟ್ಟ ಪಾತ್ರಗಳ ಮೂಲಕ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದೇನೆ. ನಿಜ ಹೇಳಬೇಕೆಂದರೆ ಸಿನಿಮಾ ನನ್ನ ಗುರಿಯಾಗಿರಲಿಲ್ಲ. ಹಿಂಗ್ಯಾಕೆ, ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಮೊದಲಾದವು ನಾನು ಈ ಹಿಂದೆ ಕಾಣಿಸಿಕೊಂಡಂಥ ಸಿನಿಮಾಗಳು. ಇದಲ್ಲದೆ ಜಾತ್ರೆ ಎನ್ನುವ ಕಿರುಚಿತ್ರದಲ್ಲಿಯೂ ಪಾತ್ರ ಮಾಡಿದ್ದೆ. ತಮಿಳು, ತೆಲುಗು, ವಿಡಿಯೋ ಆಲ್ಬಮ್ ಗಳ ಜತೆಗೆ ಒಂದು ಜಾಹೀರಾತಿನಲ್ಲಿಯೂ ನಟಿಸಿದ ಅನುಭವ ಇತ್ತು. ಆದರೆ `ದಿಯಾ' ದಲ್ಲಿನ ನಟನೆ ಇವೆಲ್ಲಕ್ಕಿಂತ ವಿಭಿನ್ನವಾಗಿತ್ತು.
ಅಶೋಕ್ ಅವರ ನಿರ್ದೇಶನದಲ್ಲಿ ವಿಶೇಷತೆ ಏನಿತ್ತು?
ಅಶೋಕ್ ಸರ್ ಅವರು ನಿರ್ದೇಶನದ ವಿಚಾರಕ್ಕೆ ಬಂದರೆ ತುಂಬ ಕಟ್ಟುನಿಟ್ಟಿನ ಮನುಷ್ಯ. ಕಲಾವಿದರನ್ನು ವಿದ್ಯಾರ್ಥಿಗಳ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಶೂಟಿಂಗ್ ಸೆಟ್ ನಲ್ಲಿ ಒಂದು ಶಿಸ್ತಿನ ವಾತಾವರಣ ಕಾಯ್ದುಕೊಳ್ಳುತ್ತಾರೆ. ನನ್ನದು ಅಂತರ್ಗತ ಭಾವವುಳ್ಳ ಹುಡುಗಿಯ ಪಾತ್ರವಾಗಿತ್ತು. ಹಾಗಾಗಿ ಸೆಟ್ ನಲ್ಲಿ ಕೂಡ ಹೆಚ್ಚು ಯಾರ ಜತೆಗೂ ಬೆರೆಯದಿರುವ ಹಾಗೆ ನೋಡಿಕೊಳ್ಳುತ್ತಿದ್ದರು! ಸದಾ ಅದೇ ಮೂಡ್ ಕಾಯ್ದುಕೊಳ್ಳುವಂತೆ ಸಲಹೆ ನೀಡಿದ್ದರು. ಇಂದು ಯಾವೆಲ್ಲ ದೃಶ್ಯಗಳನ್ನು ಪ್ರೇಕ್ಷಕರು ಮೆಚ್ಚುತ್ತಿದ್ದಾರೋ, ಅವೆಲ್ಲದರ ಬಗ್ಗೆ ಶೂಟಿಂಗ್ ವೇಳೆಯೇ ಇದು ಚೆನ್ನಾಗಿ ವರ್ಕೌಟ್ ಆಗಲಿದೆ ಎಂದು ಹೇಳುತ್ತಿದ್ದುದು ಅಶೋಕ್ ಸರ್ ಅವರ ದೂರದೃಷ್ಟಿಗೆ ಸಾಕ್ಷಿ.
ಅಪ್ಪನಂತೆ ನಟನಾಗಲು ಬರುತ್ತಿದ್ದಾರೆ ಅಕ್ಷಿತ್
ಚಿತ್ರ ನೋಡುವಾಗ ನಿಮಗೆ ಇಷ್ಟವಾಗುವ ದೃಶ್ಯಗಳು ಯಾವುದು?
ನನಗೆ ಶೂಟಿಂಗ್ ವೇಳೆಯಲ್ಲಿಯೇ ನಟನೆಗೆ ತುಂಬ ಇಷ್ಟವಾದ ಕೆಲವು ದೃಶ್ಯಗಳಿದ್ದವು. ಅವುಗಳನ್ನು ನಿರ್ದೇಶಕರು ವಿವರಿಸುವಾಗಲೇ ಇದು ವಿಭಿನ್ನವಾಗಿರುತ್ತದೆ, ಚೆನ್ನಾಗಿರುತ್ತದೆ ಎಂದು ನನಗೆ ಅನಿಸುತ್ತಿತ್ತು. ಅವುಗಳಲ್ಲಿ ಒಂದು ಕೈಯ್ಯನ್ನು ಗೋಡೆಗೆ ಉಜ್ಜಿಕೊಂಡು ಹೋಗುವ ದೃಶ್ಯ; ಮತ್ತೊಂದು ಆಸ್ಪತ್ರೆಯಲ್ಲಿ ರೋಹಿತ್ ಸಾವಿನ ಬಗ್ಗೆ ನನಗೆ ಹೇಳುವ ಸನ್ನಿವೇಶ.. ಎರಡೂ ದೃಶ್ಯಗಳು ಮೂಡಿ ಬರುವ ರೀತಿಯ ಬಗ್ಗೆ ನನಗೆ ಕುತೂಹಲವಿತ್ತು. ಅದೇ ರೀತಿ ಬೈಕ್ ಟ್ರಿಪ್ ದೃಶ್ಯ ಶೂಟ್ ಮಾಡುವಾಗಲೂ, ತೆರೆಯ ಮೇಲೆ ತಂದಿರುವ ರೀತಿ ನೋಡುವಾಗಲೂ ತುಂಬ ಇಷ್ಟವಾಗಿದೆ.