ರಕ್ಷಿತ್ ಶೆಟ್ಟಿ ಮಗು ಮನಸ್ಸಿನ ಜೀವ, ಅವರ ಬಳಿ ಮಾತನಾಡುತ್ತಿದ್ದರೆ ವಿನಯ ಬರುತ್ತದೆ: ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ

ಇಬ್ಬನಿ ತಬ್ಬಿದ ಇಳೆಯಲಿ ಒಂದು ಕಾವ್ಯಾತ್ಮಕ ಸಿನಿಮಾ. 90ರ ದಶಕದ ಸೌಂದರ್ಯ, ಮೌನ, ಮ್ಯಾಜಿಕ್‌ ಅನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಇದಾಗಿದೆ ಎಂದು ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಸಂದರ್ಶನದಲ್ಲಿ ತಿಳಿಸಿದ್ದಾರೆ.

Ibbani Tabbida Ileyali Director Chandrajith Beliappa Talks Over Rakshit Shetty gvd

ರಾಜೇಶ್ ಶೆಟ್ಟಿ

* ವೇಗದ ಅಬ್ಬರದ ಜಗತ್ತಿನಲ್ಲಿ ನೀವು ಕಾವ್ಯಾತ್ಮಕವಾದ ಸಿನಿಮಾ ಜೊತೆ ಬಂದಿದ್ದೀರಿ, ಏನು ಉದ್ದೇಶ?
ನಾನು 90ರ ದಶಕದಲ್ಲಿ ಜನಿಸಿದವನು. ಆಗ ಒಂದು ಸೌಂದರ್ಯ ಇತ್ತು. ಅದು ಈಗ ಕಳೆದು ಹೋಗಿದೆ ಅಂತ ಅನ್ನಿಸುತ್ತಿದೆ. ಆ ಸೌಂದರ್ಯ, ಮೌನ, ಮ್ಯಾಜಿಕ್‌ ಈಗ ಮರೆತು ಹೋಗಿದೆ. ಈಗ ಕತೆಗಳಲ್ಲಿ ಎಲ್ಲವನ್ನೂ ದಾಟಿಸಬೇಕು ಅನ್ನುವ ಧಾವಂತ ಕಾಣಿಸುತ್ತದೆ. ಆದರೆ ನನಗೆ ಆ ಕ್ಷಣವನ್ನು ಫೀಲ್‌ ಮಾಡುವುದು ತುಂಬಾ ಮುಖ್ಯ ಅನ್ನಿಸುತ್ತದೆ. ಆ ಭಾವನೆಗಳಿಗೆ ಮರಳಬೇಕು. ಆ ಸೌಂದರ್ಯಕ್ಕೆ, ಮೌನಕ್ಕೆ ಮರಳಬೇಕು. ಆ ಪ್ರೀತಿಯ ಜಗತ್ತಿಗೆ, ಮ್ಯಾಜಿಕ್‌ ಜಗತ್ತಿಗೆ ನನ್ನ ಸಿನಿಮಾ ನಿಮ್ಮನ್ನು ಕರೆದುಕೊಂಡು ಹೋದರೆ ನನ್ನ ಪ್ರಯತ್ನ ಸಾರ್ಥಕ.

* ಯಾಕೆ ಸಿನಿಮಾ ಮಾಡಬೇಕು ಅನ್ನಿಸಿತು?
ನನ್ನೂರು ಮಡಿಕೇರಿ. ಅಲ್ಲಿ ಇದ್ದಿದ್ದೇ ಎರಡು ಚಿತ್ರಮಂದಿರಗಳು. ನಮ್ಮ ಮನೆಯಲ್ಲಿ ಬ್ಲ್ಯಾಕ್‌ ಆ್ಯಂಡ್ ವೈಟ್ ಟಿವಿ ಇತ್ತು. ಮೂರನೇ ತರಗತಿಯಲ್ಲಿ ಇದ್ದಾಗಲೊಮ್ಮೆ ಶಾಲೆಯಿಂದ ಸಂತೋಷ್ ಶಿವನ್ ಅವರ ‘ಹ್ಯಾಲೋ’ ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದರು. ಸಿನಿಮಾ ಮೋಹ ಶುರುವಾಗಿದ್ದು ಆ ಕ್ಷಣದಿಂದ ಅನ್ನಿಸುತ್ತದೆ. ಇಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುತ್ತಿರುವಾಗ ಸಿನಿಮಾ ಆಸೆ ತೀವ್ರವಾಯಿತು.

ಝೈದ್‌ ಖಾನ್‌ ಕಲ್ಟ್‌ ಸಿನಿಮಾದಲ್ಲಿ ಉಪಾಧ್ಯಕ್ಷ ನಾಯಕಿ ಮಲೈಕಾ ವಸುಪಾಲ್‌: ರಚಿತಾ ರಾಮ್ ಇದ್ರೂ ಇವರ್ಯಾಕೆ ಗೊತ್ತಾ?

* ರಕ್ಷಿತ್ ಶೆಟ್ಟಿ ಭೇಟಿ ಆಗಿದ್ದು ಹೇಗೆ?
ಬ್ಲಾಗ್‌ ಬರವಣಿಗೆ ಶುರು ಮಾಡಿದ್ದೆ. ಒಂದು ದಿನ ನನ್ನದೊಂದು ಬರಹವನ್ನು ರಕ್ಷಿತ್‌ ಶೆಟ್ಟಿ ಅವರಿಗೆ ಕಳುಹಿಸಿದೆ. ಅಚ್ಚರಿ ಎಂದರೆ ಅವರು ಅದಕ್ಕೆ ರಿಪ್ಲೈ ಮಾಡಿದರು. ಆಗ ಅವರು ಥಗ್ಸ್‌ ಆಫ್‌ ಮಾಲ್ಗುಡಿ ಬರವಣಿಗೆಗೆ ಸೇರಿಕೊಳ್ಳಲು ಹೇಳಿದರು. ನಾನು ನಾಲ್ಕು ತಿಂಗಳು ಆ ಪ್ರಯಾಣದಲ್ಲಿ ಅವರ ಜೊತೆ ಇದ್ದೆ. ಆಮೇಲೆ ಕಿರಿಕ್‌ ಪಾರ್ಟಿ ಶುರು ಮಾಡುವಾಗ ಕೆಲಸ ಬಿಟ್ಟು ಬರಬಹುದಾ, ಬರವಣಿಗೆ ತಂಡ ಕಟ್ಟುತ್ತಿದ್ದೇನೆ ಎಂದರು. ನಾನು ಬಂದುಬಿಟ್ಟೆ. ನನ್ನ ಸಿನಿಮಾ ಪ್ರಯಾಣಕ್ಕೆ ಅವರೇ ಮುಖ್ಯ ಕಾರಣ. ಅವರು ತೋರಿದ ಹಾದಿಯಲ್ಲೆಲ್ಲಾ ನಾನು ನಡೆದು ಬಂದಿದ್ದೇನೆ.

* ಇಬ್ಬನಿ ತಬ್ಬಿದ ಇಳೆಯಲಿ ಹುಟ್ಟಿಕೊಂಡಿದ್ದು ಹೇಗೆ?
ಬೆಂಗಳೂರು ಡೇಸ್‌ ಸಿನಿಮಾ ಬಂದಾಗ ಅದರಲ್ಲಿ ನಜ್ರಿಯಾ ನಝೀಮ್ ಪಾತ್ರದ ಬಗ್ಗೆ ನನಗೆ ಸಮಾಧಾನ ಇರಲಿಲ್ಲ. ಆ ಪಾತ್ರಕ್ಕೆ ಅನ್ಯಾಯ ಆಗಿದೆ ಅಂತನ್ನಿಸಿ ನಾನು ಮತ್ತೊಂದು ಕತೆ ಬರೆದೆ. ನಾನು ಕತೆಯನ್ನು ನನಗೋಸ್ಕರ ಬರೆಯುತ್ತೇನೆ. ಒಂದೇ ಹಳೆಯ ನೆನಪಿಗೆ ಮರಳಲು ಅಥವಾ ನನಗೆ ಸಮಾಧಾನ ಆಗದ ವಿಚಾರವನ್ನು ಸಮಾಧಾನ ಆಗುವಂತೆ ಮಾಡಲು. ಹೀಗೆ ಬರೆದ ಕತೆ ಬಹಳ ಮಂದಿಗೆ ಇಷ್ಟವಾಯಿತು. ಅದೇ ಕಥೆ ವಿಸ್ತಾರವಾಗಿದೆ. ಕಾಲದ ಪ್ರವಾಹಕ್ಕೆ ಸಿಕ್ಕಿ ಬದಲಾಗಿದೆ. ಸಿನಿಮಾ ಆಗಿ ನಿಮ್ಮ ಮುಂದೆ ಬಂದಿದೆ.

* ನಿಮ್ಮ ಪಾತ್ರ ಪ್ರಪಂಚ ಹೇಗಿದೆ?
ನಾನು ಈ ಜಗತ್ತಿನಲ್ಲಿರುವ ಎಲ್ಲರೂ ಒಳ್ಳೆಯವರು ಎಂದು ನಂಬುತ್ತೇನೆ. ಎಂಥಾ ಕೆಟ್ಟ ವ್ಯಕ್ತಿಯಲ್ಲಿಯೂ 5 ಪರ್ಸೆಂಟ್ ಆದರೂ ಒಳ್ಳೆಯತನ ಇರುತ್ತದೆ. ನನ್ನ ಕತೆಯಲ್ಲಿ ವಿಲನ್‌ಗಳಿಲ್ಲ. ಆದರೆ ಪರಿಸ್ಥಿತಿಗಳೇ ವಿಲನ್‌ಗಳು. ಸಿದ್ದಾರ್ಥ ಎಂಬ ಪಾತ್ರದ ಮೂಲಕ ಕತೆ ಸಾಗುತ್ತದೆ. ಹಂತಹಂತವಾಗಿ ಪ್ರೀತಿಯ ವ್ಯಾಖ್ಯೆ ಬದಲಾಗುತ್ತಾ ಕತೆ ಸಾಗುತ್ತದೆ. ಸಿದ್ದಾರ್ಥ ವಾಸ್ತವ ಜಗತ್ತಿನ ಪಾತ್ರವಾದರೆ ಅನಾಹಿತಾ ಕಲ್ಪನೆಯ ಪಾತ್ರ. ಸಾಧು ಪಾತ್ರ. ಆಕೆ ನೆನಪಲ್ಲಿ ಇರಲು ಇಷ್ಟ ಪಡುತ್ತಾಳೆ. ಸೌಮ್ಯವಾಗಿರುತ್ತಾಳೆ. ಅವಳಿಗೆ ಪೊಯೆಟ್ರಿ ಇಷ್ಟ. ಅವಳ ಥರಾನೇ ಇರಬೇಕು ಅಂತ ಆಸೆ ಹುಟ್ಟಿಸುವ ಪಾತ್ರ. ಇನ್ನೊಬ್ಬಳು ರಾಧೆ. ಆಕೆ ಚಿಟ್ಟೆಯ ಪ್ರತಿರೂಪ. ಇವರೆಲ್ಲರ ಜಗತ್ತು ಇಬ್ಬನಿ ತಬ್ಬಿದ ಇಳೆಯಲಿ. ಈ ಸಿನಿಮಾ ನಂತರ ಈ ಚಿತ್ರದ ಪ್ರತಿಯೊಬ್ಬ ಕಲಾವಿದರು. ತಂತ್ರಜ್ಞರು ಎಲ್ಲರೂ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಅಷ್ಟು ತೃಪ್ತಿ ನನಗಿದೆ.

* ರಕ್ಷಿತ್ ಶೆಟ್ಟಿ ಮತ್ತು ನಿಮ್ಮ ಬಾಂಧವ್ಯ?
ಕಿರಿಕ್‌ ಪಾರ್ಟಿ ಸಂದರ್ಭದಲ್ಲಿ ಅವರೊಂದು ಮೆಸೇಜ್‌ ಕಳುಹಿಸಿದ್ದರು. ನಿನ್ನನ್ನು ನೋಡುತ್ತಿದ್ದರೆ ನನ್ನನ್ನೇ ನೋಡಿದಂತೆ ಅನ್ನಿಸುತ್ತದೆ ಎಂಬರ್ಥದ ಮೆಸೇಜ್. ನನಗೆ ಈಗ ಹೇಳಬೇಕು, ಅವರನ್ನು ನೋಡುತ್ತಿದ್ದರೆ ನಾನು ನನ್ನನ್ನೇ ನೋಡುತ್ತಿದ್ದೇನೆ ಅನ್ನಿಸುತ್ತದೆ. ಮಗು ಮನಸ್ಸಿನ ಜೀವ ಅವರು. ಅವರ ಬದುಕೇ ಸಿನಿಮಾ. ಒಳ್ಳೆಯ ಸಿನಿಮಾ ಮಾಡಬೇಕು, ಸಿನಿಮಾ ಪ್ರತಿಭೆಗಳನ್ನು ಬೆಳೆಸಬೇಕು ಅನ್ನುವುದಷ್ಟೇ ಅವರ ಜಗತ್ತು. ಅವರ ಬಳಿ ಮಾತನಾಡುತ್ತಿದ್ದರೆ ನಮಗೆ ಮತ್ತಷ್ಟು ವಿನಯ ಬರುತ್ತದೆ. ಅಹಂ ಹೋಗುತ್ತದೆ. ಎಷ್ಟು ಕಲಿಯಲು ಬಾಕಿ ಇದೆ ಅನ್ನಿಸುತ್ತದೆ. ಅವರು ತುಂಬಾ ಮುಗ್ಧ. ಒಳ್ಳೆಯ ಮಾರ್ಗದರ್ಶಿ. ಉತ್ತಮ ನಾಯಕ.

* ಇಂಜಿನಿಯರಿಂಗ್ ಹಿನ್ನೆಲೆಯವರು ನೀವು, ಮತ್ತೆ ಅಲ್ಲಿಗೆ ಹೋಗಬೇಕು ಅನ್ನಿಸ್ಲಿಲ್ವಾ?
ಕೋವಿಡ್‌ ಸಮಯದಲ್ಲಿ ಅನ್ನಿಸಿತ್ತು. ವೃತ್ತಿ ಬದುಕಿನಲ್ಲಿ ಏನೇನೂ ನಡೆಯುತ್ತಿಲ್ಲ, ವೈಯಕ್ತಿ ಬದುಕಿನಲ್ಲೂ ಬೆಳವಣಿಗೆ ಇಲ್ಲ. ಮತ್ತೆ ವಾಪಸ್‌ ಹೋಗಲೇ ಅನ್ನಿಸುತ್ತಿತ್ತು. ಅಷ್ಟು ಹೊತ್ತಿಗೆ ಮತ್ತೇನೋ ಪಾಸಿಟಿವ್‌ ಘಟನೆಗಳು ಜರುಗಿ ಆ ನಿರ್ಧಾರ ಬದಲಾಗುತ್ತಿತ್ತು. ಎಷ್ಟೋ ಸಲ ನಾನು ಅಲ್ಲಿದ್ದಿದ್ದರೆ ಅಪ್ಪ, ಅಮ್ಮನಿಗೆ ಇದಕ್ಕಿಂತ ಒಳ್ಳೆಯ ಬದುಕು ಕೊಡಬಹುದಿತ್ತಾ, ಅವರಿಗೆ ಹೆಚ್ಚು ಸಮಯ ಕೊಡಬಹುದಿತ್ತಾ ಅಂತ ಅನ್ನಿಸುತ್ತಿರುತ್ತದೆ. ಆದರೆ ನಾನು ಮ್ಯಾಜಿಕ್‌ ನಂಬುವವನು. ಏನೋ ಆಗತ್ತೆ ಅನ್ನುವುದರಲ್ಲಿ ನಂಬಿಕೆ ಇದೆ ನನದೆ. ಚಿತ್ರರಂಗದಲ್ಲಿ 8 ವರ್ಷದಿಂದ ಇದ್ದೇನೆ. ಈ ಚಿತ್ರಕ್ಕೆ 4 ವರ್ಷ ಕೊಟ್ಟಿದ್ದೇನೆ. ಈ ಸಿನಿಮಾ ನೋಡಿದ ಬಳಿಕ ಮಗ ಏನೋ ಮಾಡಿದ್ದಾನೆ ಎಂದು ಅಪ್ಪ, ಅಮ್ಮ ಖುಷಿಯಾದರೆ ನನಗಷ್ಟೇ ಸಾಕು.

ಉದ್ದವಾದ ಕೂದಲನ್ನು ಗಿಡ್ಡ ಮಾಡಿಕೊಂಡು ಒಂದು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡೆ ಎಂದ ದೀಪಿಕಾ ದಾಸ್!

* ಸಿನಿಮಾ ಬಿಡುಗಡೆ ಸಮಯ ಮನಸ್ಸಲ್ಲಿ ಏನಿದೆ?
ಭಯ, ಆತಂಕ, ಸಂಕಟ, ಖುಷಿ ಎಲ್ಲವೂ ಇದೆ. ನಾನು ನೋಡಬೇಕು ಅಂತ ಆಸೆ ಇದ್ದ ಸಿನಿಮಾ ಮಾಡಿದ್ದೇನೆ. ನನಗೆ ಇಷ್ಟವಾಗಿದೆ. ನನಗೆ ಇಷ್ಟವಾಗಿದ್ದು ಇನ್ನೊಬ್ಬರಿಗೂ ಇಷ್ಟ ಆಗುತ್ತದೆ ಎನ್ನುವ ನಂಬಿಕೆ ಇದೆ. ರಕ್ಷಿತ್‌ ಶೆಟ್ಟಿ ಅವರು ಈ ಸಿನಿಮಾ ನೋಡಿ ನೀನು ಒಂದು ಸುಂದರ ಸಿನಿಮಾ ಮಾಡಿದ್ದೀ ಎಂದು ತಬ್ಬಿಕೊಂಡರು. ಈ ಸಿನಿಮಾದಲ್ಲಿ ನಾನು ಪ್ರೀತಿಯನ್ನು ಸಾರಿದ್ದೇನೆ. ಆ ಪ್ರೀತಿ ಮರಳಿ ಸಿಗುತ್ತದೆ ಎಂಬ ನಂಬಿಕೆ ಇದೆ.

Latest Videos
Follow Us:
Download App:
  • android
  • ios