ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಆ ಪ್ರಯುಕ್ತ ಯುವ ಚಿತ್ರದ ನಾಯಕಿ ಸಪ್ತಮಿ ಗೌಡ ಸಂದರ್ಶನ. ಸಿನಿಮಾ ರಂಗದಲ್ಲಿ ಹೆಣ್ಮಕ್ಕಳ ಸ್ಥಾನಮಾನದ ಬಗ್ಗೆ ಅವರು ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

- ಯುವ ಚಿತ್ರದ ಹವಾ ಜೋರಾಗಿದೆ, ಆ ಹೊತ್ತಿಗೇ ಮಹಿಳಾ ದಿನ ಬಂದಿದೆ..

ಹೌದು. ಇದು ಬಹಳ ಖುಷಿಕೊಟ್ಟ ವಿಚಾರ. ಅಣ್ಣಾವ್ರ ಕುಟುಂಬದ ಕುಡಿ ಜೊತೆ, ಹೊಂಬಾಳೆಯಂಥಾ ನಿರ್ಮಾಣ ಸಂಸ್ಥೆ, ಸಂತೋಷ್‌ ಆನಂದ್‌ರಾಮ್‌ ಅವರಂಥಾ ಸೆನ್ಸಿಟಿವ್‌ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ಖುಷಿಯ ಸಂಗತಿ. ಇದಕ್ಕೋಸ್ಕರ ಬಾಡಿ ಟ್ರಾನ್ಸ್‌ಫಾರ್ಮೇಶನ್‌ ಮಾಡ್ತಿದ್ದೀನಿ. ಪಾತ್ರಕ್ಕೆ ಮಾನಸಿಕವಾಗಿಯೂ ಸಿದ್ಧಳಾಗ್ತಿದ್ದೀನಿ. ಶೀಘ್ರ ಶೂಟಿಂಗ್‌ ಶುರುವಾಗಲಿದೆ.

- ಏನೇ ಅಂದರೂ ಸಿನಿಮಾರಂಗದಲ್ಲಿ ಹೀರೋಗೆ ಹೆಚ್ಚು ಪ್ರಾಶಸ್ತ್ಯ. ಇದು ನಿಮ್ಮನ್ನು ಇರಿಟೇಟ್‌ ಮಾಡಿಲ್ವಾ?

ನನಗೆ ಹಾಗನಿಸಲ್ಲ. ನಮ್ಮಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಚಿತ್ರಗಳೂ ಬರ್ತಿವೆ. ಹೊಂಬಾಳೆಯವರೇ ಕೀರ್ತಿ ಸುರೇಶ್‌ ಮುಖ್ಯ ಪಾತ್ರದಲ್ಲಿ ಮಾಡ್ತಿರೋ ಸಿನಿಮಾ ನಿರ್ಮಿಸುತ್ತಿದ್ದಾರೆ. ಕನ್ನಡಲ್ಲೂ ಆ ಥರ ಸಿನಿಮಾಗಳು ಬರ್ತಿವೆ.

ಮಾಲ್ಡೀವ್ಸ್‌ನಲ್ಲಿ ಮಿಂಚುತ್ತಿರುವ ಕಾಂತಾರ ಲೀಲಾ; ಪಡ್ಡೆ ಹುಡುಗರ ನಿದ್ದೆಗೆಡಿಸಿದ ಲುಕ್‌

- ಆ ಥರ ಸಿನಿಮಾ ಬಂದರೆ ಕಮರ್ಷಿಯಲೀ ಓಡೋದಿಲ್ವಲ್ಲಾ?

ಅದು ಪ್ರೇಕ್ಷಕರಿಗೆ ಬಿಟ್ಟಿದ್ದು. ಒಂದೊಳ್ಳೆ ಸಿನಿಮಾ ಬಂದ್ರೆ ಯಾಕೆ ನೋಡಲ್ಲ? ಹಿಂದೆ ಮಾಲಾಶ್ರೀ ಅವರ ಸಿನಿಮಾಗಳನ್ನು ಯಾವ ಲೆವೆಲ್‌ಗೆ ಗೆಲ್ಲಿಸ್ತಿದ್ರು..

- ಮಹಿಳಾ ಪ್ರಧಾನ ಸಿನಿಮಾ ಸಿಕ್ಕರೆ ನೀವು ನಟಿಸ್ತೀರಾ?

ಸ್ಕ್ರಿಪ್ಟ್‌ ಚೆನ್ನಾಗಿದ್ದರೆ ಖಂಡಿತಾ ನಟಿಸ್ತೀನಿ. ಒಬ್ಬ ಕಲಾವಿದೆಯಾಗಿ ಈ ಥರದ ಪಾತ್ರಗಳನ್ನು ಮಾತ್ರ ಮಾಡೋದು ಅಂತ ನನಗೆ ನಾನು ಯಾವತ್ತೂ ರಿಸ್ಟ್ರಿಕ್ಷನ್ಸ್‌ ಹಾಕಿಕೊಂಡಿಲ್ಲ.

- ಇಂದು ಸೆಲೆಬ್ರೇಟ್‌ ಮಾಡ್ತಿರೋ ಮಹಿಳಾ ದಿನಕ್ಕೆ ಒಂದು ಹೋರಾಟದ ಹಿನ್ನೆಲೆಯಿದೆ. ಆದರೆ ಅದನ್ನು ನೆನಪಿಸಿಕೊಳ್ತಿದ್ದೀವಾ ನಾವು?

ಅವರನ್ನು ನೆನಪಿಸಿಕೊಂಡರೇ ಆ ದಿನದ ಆಚರಣೆ ಅರ್ಥಪೂರ್ಣ ಆಗೋದು. ಇವತ್ತು ವಿವಿಧ ಕ್ಷೇತ್ರಗಳಲ್ಲಿ ಸಮಾನ ವೇತನ, ಸಮಾನ ಹಕ್ಕುಗಳು ನಮಗೆ ಸಿಕ್ಕಿದೆ ಅಂತಾದರೆ ಅದಕ್ಕೆ ಅವರೇ ಕಾರಣ.

ಕಾಂತಾರ ಸಪ್ತಮಿ ಗೌಡ ಹೊಸ ಫೋಟೋಶೂಟ್‌; 6 ಪ್ಯಾಕ್ಸ್‌ ಲೇಡಿ ಎಂದ ನೆಟ್ಟಿಗರು

- ನೀವು ನ್ಯಾಶನಲ್‌ ಲೆವೆಲ್‌ ಸ್ವಿಮ್ಮರ್‌ ಆಗಿದ್ದವರು. ಕ್ರೀಡಾ ಕ್ಷೇತ್ರದ ತಾರತಮ್ಯ ನಿಮ್ಮ ಗಮನಕ್ಕೆ ಬಂದಿಲ್ವಾ?

ಇಲ್ಲ. ಅಲ್ಲಿ ಗಂಡು ಹೆಣ್ಣು ಅಂತೆಲ್ಲ ಭೇದ ಮಾಡೋದಿಲ್ಲ. ಅಲ್ಲಿರೋದು ಸ್ಪರ್ಧಿಗಳಷ್ಟೇ. ಸ್ಪರ್ಧೆಯಷ್ಟೇ ಅಲ್ಲಿ ಮುಖ್ಯ.

- ಮನೆ, ಸಮಾಜದಲ್ಲಿ ಹೆಣ್ಣಿಗೆ ಟ್ರೀಟ್‌ಮೆಂಟ್‌?

ನಮ್ಮ ಮನೆಯಲ್ಲಂತೂ ನನ್ನನ್ನು ಬಹಳ ಸ್ಟ್ರಾಂಗ್‌ ಆಗಿಯೇ ಬೆಳೆಸಿದ್ದಾರೆ. ಇನ್ನೊಬ್ಬರಿಗೆ ಹರ್ಟ್ ಮಾಡದ ಹಾಗೆ ಬದುಕಬೇಕು ಅನ್ನೋದನ್ನಷ್ಟೇ ಪದೇ ಪದೇ ಹೇಳ್ತಿದ್ರು. ಆದರೂ ನನಗನಿಸೋದು ನಮ್ಮ ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗಬೇಕು. ತಿಂಗಳಿಗೆ ಸಾವಿರ ರು. ಸಿಗಲಿ, ಲಕ್ಷ ರು. ಸಿಗಲಿ. ಆರ್ಥಿಕ ಸ್ವಾವಲಂಬನೆ ಇದ್ದರಷ್ಟೇ ಅವಳಿಗೆ ಸ್ವಾಭಿಮಾನಿಯಾಗಿ ಬದುಕೋದಕ್ಕೆ ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ನಮ್ಮ ಹೆಣ್ಮಕ್ಕಳು ಕಾರ್ಯಪ್ರವೃತ್ತರಾಗಬೇಕು.