ಇದೊಂದು ಡಾರ್ಕ್‌ ಹ್ಯೂಮರ್‌ ಮತ್ತು ಕ್ರೈಮ್‌ ಥ್ರಿಲ್ಲರ್‌ ಕಥೆಯ ಸಿನಿಮಾ. ಎರಡು ದಿನದಲ್ಲಿ ನಡೆಯುವ ಕಥೆ. ವೇಗವಾಗಿ ಚಲಿಸುವ ಸಿನಿಮಾವಿದು. ಇದರ ನಾಯಕ ಎಡಗೈ ಬಳಸೋದು ಬಿಟ್ಟರೆ ಬೇರೇನೂ ತಪ್ಪು ಮಾಡಿರಲ್ಲ.

ಪ್ರಿಯಾ ಕೆರ್ವಾಶೆ

* ಬಲಗೈ ಬಳಸುವವರಾಗಿ ಸೌತ್ ಪಾವ್ ಪಾತ್ರ ಮಾಡಿದ ಎಕ್ಸ್‌ಪೀರಿಯನ್ಸ್ ಹೇಗಿತ್ತು? ಏನೆಲ್ಲ ಎಡವಟ್ಟು ಮಾಡ್ತಿದ್ರಿ?
ಇದು ಅಂಥಾ ದೊಡ್ಡ ಸವಾಲು ಅಂತನಿಸಲಿಲ್ಲ. ಆದರೆ ಪ್ರಾಕ್ಟೀಸ್‌ ಬೇಕೇ ಬೇಕಾಗಿತ್ತು. ಹಾಗಂತ ಇದು ಬರೀ ಎಡಗೈ ಬಳಸೋರ ಬಗ್ಗೆಯೇ ಇರುವ ಸಿನಿಮಾ ಏನಲ್ಲ. ಇದೊಂದು ಡಾರ್ಕ್‌ ಹ್ಯೂಮರ್‌ ಕ್ರೈಮ್‌ ಥ್ರಿಲ್ಲರ್‌. ಎಡಗೈ ಬಳಸೋದು ಸಿನಿಮಾದಲ್ಲಿ ಟರ್ನಿಂಗ್‌ ಫ್ಯಾಕ್ಟರ್‌ ಆಗಿ ಬಂದಿದೆ.

* ಶೂಟಿಂಗ್‌ ನಂತರವೂ ಬಲಗೈ ಬದಲಾಗಿ ಎಡಗೈ ಬಳಸಿದ್ದಿತ್ತಾ?
ಹೌದು. ನಾನು ಸೆಟ್‌ಗೆ ಬರ್ತಿದ್ದ ಹಾಗೆ ನಿರ್ದೇಶಕರು ಲೆಫ್ಟ್‌ ಹ್ಯಾಂಡ್‌ ಪ್ರಾಕ್ಟೀಸ್‌ ಶುರು ಮಾಡಿ ಅಂತಿದ್ರು. ಆಮೇಲೆ ಅಲ್ಲಿದ್ದಷ್ಟು ಹೊತ್ತೂ ಎಡಗೈಯನ್ನೇ ಬಳಸ್ತಿದ್ದೆ. ನಮ್ಮ ಸಿನಿಮಾದಲ್ಲಿ ಬೆಳಕು ಪ್ರಧಾನ ಪಾತ್ರ ವಹಿಸುವ ಕಾರಣ ಹೆಚ್ಚಿನ ಭಾಗದ ಶೂಟ್‌ ರಾತ್ರಿ ಹೊತ್ತೇ ನಡೆಯುತ್ತಿತ್ತು. ರಾತ್ರಿ ಇಡೀ ನಿದ್ದೆ ಬಿಟ್ಟು ಶೂಟ್‌ ಮಾಡಿ ಬೆಳಗಿನ ಜಾವಕ್ಕಾಗುವಾಗ ದೇಹ ಮನಸ್ಸು ಒಂಥರಾ ಆಗಿರ್ತಿತ್ತು. ಆಗ ಯಾವ ಕೈ ಬಳಸಬೇಕು ಅನ್ನೋದು ಒಂದು ಕ್ಷಣ ಕನ್‌ಫ್ಯೂಸ್‌ ಆಗ್ತಿತ್ತು.

* ಈ ಸಿನಿಮಾಕ್ಕೆ ಸಂಭಾವನೆ ಪಡೆಯದೇ ನಟಿಸಿದ್ರಂತೆ?
ಆಗ ಪರಿಸ್ಥಿತಿ ಹಾಗೇ ಇತ್ತು. ಎರಡನೇ ದಿನಕ್ಕೆ ನಿರ್ಮಾಪಕರು ಕೈ ಎತ್ತಿ ಬಿಟ್ಟರು. ಆದರೆ ನಮಗೆಲ್ಲ ಕಾನ್ಸೆಪ್ಟ್‌ ಬಹಳ ಇಷ್ಟವಾಗಿತ್ತು. ನಾನಾಗ ನಿರ್ದೇಶಕ ಸಮರ್ಥ್‌ ಬಳಿ ನನ್ನ ಸಂಭಾವನೆಯ ವಿಚಾರ ಸಿನಿಮಾ ರಿಲೀಸ್‌ ಆದಮೇಲೆ ನೋಡಿಕೊಳ್ಳೋಣ. ಈಗ ಹೇಗಾದ್ರೂ ಸಿನಿಮಾ ಮುಂದುವರಿಸೋಣ ಅಂದಿದ್ದೆ.

* ಸಿನಿಮಾ ಹೈಲೈಟ್‌?
ಇದೊಂದು ಡಾರ್ಕ್‌ ಹ್ಯೂಮರ್‌ ಮತ್ತು ಕ್ರೈಮ್‌ ಥ್ರಿಲ್ಲರ್‌ ಕಥೆಯ ಸಿನಿಮಾ. ಎರಡು ದಿನದಲ್ಲಿ ನಡೆಯುವ ಕಥೆ. ವೇಗವಾಗಿ ಚಲಿಸುವ ಸಿನಿಮಾವಿದು. ಇದರ ನಾಯಕ ಎಡಗೈ ಬಳಸೋದು ಬಿಟ್ಟರೆ ಬೇರೇನೂ ತಪ್ಪು ಮಾಡಿರಲ್ಲ. ಹಾಗಿದ್ದರೆ ಆತ ಎಡಗೈ ಬಳಸೋದು ತಪ್ಪಾ ಎಂಬ ಪ್ರಶ್ನೆ ಬರಬಹುದು, ಅದಕ್ಕುತ್ತರ ಸಿನಿಮಾದಲ್ಲಿದೆ. ಸಿನಿಮಾ ಕಥೆ ನಿಮ್ಮನ್ನು ಕುರ್ಚಿ ತುದಿಯಲ್ಲಿ ಕೂರಿಸುತ್ತದೆ. ಬ್ಯಾಗ್ರೌಂಡ್‌ ಸ್ಕೋರ್‌ಗೆ ಬಹಳ ಪ್ರಯತ್ನ ಹಾಕಿದ್ದೇವೆ. ತಾಂತ್ರಿಕವಾಗಿ, ಕಥೆಯ ವಿಚಾರದಲ್ಲಿ ಇಂಟರೆಸ್ಟಿಂಗ್‌ ಅನಿಸುವ ಸಿನಿಮಾ. ಇದು ಪ್ರೇಕ್ಷಕರಿಗೆ ಹೊಸದೊಂದು ಜಗತ್ತನ್ನು ತೆರೆದಿಡುತ್ತದೆ.

* ನಿಮ್ಮ ಈವರೆಗಿನ ಚಾಕ್ಲೇಟ್‌ ಬಾಯ್‌ ಇಮೇಜ್‌ ಬ್ರೇಕ್‌ ಮಾಡತ್ತಾ?
ಇಲ್ಲ, ಅಂಥಾ ಯಾವ ಪ್ರಯತ್ನವೂ ಇಲ್ಲಿ ನಡೆದಿಲ್ಲ.

* 10 ವರ್ಷದ ಕೆಳಗೆ ಬಾಲಿವುಡ್‌ ನಟಿ ಶೂ ಎಸೆದು ನಿಮ್ಮ ಕಣ್ಣನ್ನೇ ಬಲಿ ತಗೊಂಡು ಬಿಟ್ರಂತೆ?
ನಿಜ. ಅವತ್ತಿನಿಂದ ನಾನು ಒಂದೇ ಕಣ್ಣಲ್ಲಿ ನೋಡುತ್ತೇನೆ. ಅದು ‘ಟಿಕೆಟ್‌ ಟು ಬಾಲಿವುಡ್‌’ ಅನ್ನೋ ಸಿನಿಮಾ. ಒಂದು ಸೀನ್‌ನಲ್ಲಿ ಸಹನಟಿ ಸೂಟ್‌ಕೇಸ್‌ನಿಂದ ಶೂ ತೆಗೆದು ನನ್ನ ಮೇಲೆ ಎಸೆದುಬಿಟ್ಟರು. ಆಮೇಲೆ ಏನಾಯ್ತು ಅಂತಲೇ ಗೊತ್ತಾಗಲಿಲ್ಲ. ಕಣ್ಣು ಬಿಟ್ಟಾಗ ಇನ್ನೊಂದು ಕಣ್ಣಿಗೆ ದೃಷ್ಟಿ ಇರಲಿಲ್ಲ. ಆ ದೃಷ್ಟಿ ಬರೋದಿಲ್ಲ ಅಂತ ಡಾಕ್ಟರ್‌ ಹೇಳಿದ್ರು. ನಾನಾಗ ಖಿನ್ನತೆಗೆ ಜಾರಿದ್ದೆ. ಅದರಿಂದ ಹೊರಬರೋದೇ ಚಾಲೆಂಜಿಂಗ್‌ ಆಗಿತ್ತು. ಜೊತೆಗೆ ಆ ಟೀಮ್‌ನಿಂದ ಏನೂ ಪರಿಹಾರ ಸಿಗಲಿಲ್ಲ. ಆ ಸಿನಿಮಾ ಪ್ರಾಜೆಕ್ಟ್‌ ಕೂಡ ನಿಂತು ಹೋಯ್ತು.

* ಈಗ ನಿಮ್ಮನ್ನು ಹುಡುಕಿಕೊಂಡು ಬರ್ತಿರೋ ಪಾತ್ರಗಳು ಯಾವುವು? ನಿಮಗೆ ಎಂಥಾ ಪಾತ್ರ ಮಾಡೋಕೆ ಇಷ್ಟ?
ನನಗೆ ಎಲ್ಲಾ ಬಗೆಯ ಪಾತ್ರಗಳೂ ಸಿಕ್ತಿವೆ. ನಾನು ಎಲ್ಲಾ ಬಗೆಯ ಪಾತ್ರಗಳನ್ನೂ ಮಾಡುತ್ತೇನೆ. ರಮೇಶ್‌ ಅರವಿಂದ್‌ ಅವರ ‘ದೈಜಿ’ ಸಿನಿಮಾದಲ್ಲೊಂದು ರೋಲ್‌ ಇದೆ. ‘ಲಾಫಿಂಗ್‌ ಬುದ್ಧ’ದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಇಮೇಜ್‌, ಚಿಕ್ಕ ಪಾತ್ರ ದೊಡ್ಡ ಪಾತ್ರ ಅಂತೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಒಂದೊಳ್ಳೆ ಪಾತ್ರ ಸಿಕ್ಕರೆ ಅದಕ್ಕೆ ನ್ಯಾಯ ಒದಗಿಸುವತ್ತ ಗಮನ ಹರಿಸುತ್ತೇನೆ.