ಕನ್ನಡದ ಸ್ಫುರದ್ರೂಪಿ ನಟ ಎಂದು ಗುರುತಿಸಿಕೊಂಡವರು ಶಶಿಕುಮಾರ್. ಇದೀಗ ಅವರ ಪುತ್ರ ಅಕ್ಷಿತ್‌ ಶಶಿಕುಮಾರ್ ನವ ಚೆಲುವನಾಗಿ, ನಾಯಕನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ `ಮೊಡವೆ' ಎನ್ನುವ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುವ ಸುದ್ದಿ ಮಾಡಿದ್ದ ಅಕ್ಷಿತ್ ಶಶಿಕುಮಾರ್‌ ಅವರ ಆ ಚಿತ್ರ ಪೂರ್ತಿಯಾಗದೇ ಹೋಯಿತು. ಆದರೆ ಛಲ ಬಿಡದ ಕಲೆಗಾರ ಅಕ್ಷಿತ್‌ ಇದೀಗ `ಸೀತಾಯಣ' ಎನ್ನುವ ಚಿತ್ರದಲ್ಲಿ ನಾಯಕನಾಗಿದ್ದು ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದೆ! ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ತೆರೆಕಾಣುತ್ತಿರುವ ಸಿನಿಮಾದಲ್ಲಿ ಅಕ್ಷಿತ್‌ ಕುಮಾರ್‌ಗೆ ಮುಂಬೈ ಬೆಡಗಿ ಅನಹಿತಾ ಭೂಷಣ್‌ ಜೋಡಿಯಾಗಿದ್ದಾರೆ. ಪ್ರಭಾಕರ್ ಅರಿಪಾಕ ನಿರ್ದೇಶನದ ಸೀತಾಯಣ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದ ನಾಯಕ ಅಕ್ಷಿತ್‌ ಜತೆಗೆ ಸುವರ್ಣ ನ್ಯೂಸ್‌.ಕಾಮ್‌ ನಡೆಸಿರುವ ವಿಶೇಷ ಸಂದರ್ಶನ ಇದು.

- ಶಶಿಕರ ಪಾತೂರು

ಹೊಸ ತಂಡಕ್ಕೆ ನಿಮ್ಮ ಪ್ರವೇಶ ಹೇಗಾಯಿತು?
ತೀರ ಸಹಜವೆನಿಸುವ ರೀತಿಯಲ್ಲಿ ಆಯಿತು. ಈಗಾಗಲೇ `ಮೊಡವೆ' ಎನ್ನುವ ಚಿತ್ರ ಆರಂಭಿಸಿ ಅರ್ಧದಲ್ಲಿ ಸ್ಥಗಿತವಾಗಿತ್ತು. ಹಾಗಾಗಿ ನಾನೇ ಹೇಗಾದರೂ ಮಾಡಿ ಒಂದು ಒಳ್ಳೆಯ ಅವಕಾಶ ಪಡೆಯಬೇಕು ಎನ್ನುವ ಹುಡುಕಾಟದಲ್ಲಿದ್ದೆ. ನನ್ನ ಹುಡುಕಾಟಕ್ಕೆ ಮೊಡವೆ ತಂಡದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರು ಕೂಡ ಬೆಂಬಲವಾಗಿದ್ದರು. ಅರ್ಧಕ್ಕರ್ಧ ತೆಲುಗು ಮಂದಿ ತುಂಬಿದ್ದ ಟೀಮ್ ಒಂದು ಆಡಿಶನ್‌ ನಡೆಸುತ್ತಿರುವ ವಿಚಾರವನ್ನು ಅವರೇ ನನಗೆ ತಿಳಿಸಿದರು. ಅವರು ಒಂದು ದ್ವಿಭಾಷಾ ಚಿತ್ರ ಮಾಡುವುದಾಗಿ ಜಾಹೀರಾತು ನೀಡಿದ್ದರು. ಹೊಸ ಮುಖದ ಪ್ರತಿಭೆಗಳಿಗಾಗಿ ತಲಾಷೆಯಲ್ಲಿದ್ದರು.  ಚಿತ್ರತಂಡದವರೆಲ್ಲ ತೆಲಂಗಾಣದವರಾಗಿದ್ದರು. ನಾನು ಎಲ್ಲ ಹೊಸಬರ ಹಾಗೆ ಹೋಗಿ ಅಟೆಂಡ್ ಮಾಡಿದ್ದೆ. ನಾನು ಸೆಲೆಕ್ಟ್ ಆದಮೇಲೆಯೇ ಅವರಿಗೆ ನಾನು ಶಶಿಕುಮಾರ್ ಅವರ ಮಗ ಎನ್ನುವುದನ್ನು ತಿಳಿಸಿದ್ದೆ. ಬಳಿಕ ತಂದೆಯ ಜತೆಗೆ ಹೋಗಿ ಭೇಟಿ ಮಾಡಿದ್ದೆ.

`ಸೀತಾಯಣ' ಹೆಸರು ಕೇಳಿದರೆ ಹೀರೋಯಿನ್‌ ಓರಿಯೆಂಟೆಡ್‌ ಸಿನಿಮಾ ಇದ್ದಂತಿದೆ?
ಹೌದು! ಹೆಸರು ಕೇಳುವಾಗ ಹಾಗೆ ಅನಿಸಬಹುದು.  ಒಬ್ಬ ಸ್ಟಾರ್‌ ಮಗನ ಎಂಟ್ರಿಗೆ ಬೇಕಾದ ಸೌಂಡಿಂಗ್‌ ಇಲ್ಲದಂತೆ ಕಾಣಬಹುದು. ಆದರೆ ನನಗೊಂದು ನಂಬಿಕೆ ಇದೆ. `ಸ್ಟಾರ್‌ ಮಗ'  ಎನ್ನುವುದು ನನ್ನ ಸಿನಿಮಾಗೆ ಜನ ಥಿಯೇಟರ್‌ ತನಕ ಬರುವವರೆಗೆ ಸಹಾಯ ಮಾಡಬಹುದು. ಆದರೆ ಬಂದ ಮೇಲೆ ಫೈನಲಾಗಿ ಪ್ರೇಕ್ಷಕರು ನನ್ನ ನಟನೆ ನೋಡಿಯೇ ಇವನು ಎಂಥ ಕಲಾವಿದ ಎಂದು ತೀರ್ಮಾನಿಸುತ್ತಾರೆ. ಹಾಗಾಗಿ ಒಂದುವೇಳೆ ಚಿತ್ರದ ಹೆಸರಲ್ಲಿ, ಕತೆಯಲ್ಲಿ ನಾಯಕಿಗೆ ಪ್ರಾಧಾನ್ಯತೆ ಕಂಡರೂ ನನ್ನ ಪಾತ್ರ ಮತ್ತು ಅಭಿನಯ ಎಲ್ಲರಿಗೆ ಸಂತೃಪ್ತಿ ನೀಡಬಹುದೆನ್ನುವ ಭರವಸೆ ನನಗಿದೆ. ಮಾತ್ರವಲ್ಲ ಕತೆಯೊಳಗೆ ಒಂದು ಕ್ರೈಮ್‌ ಕೂಡ ನಡೆಯುತ್ತದೆ. ಇದರಲ್ಲಿ ಲವ್‌ ಸ್ಟೋರಿ, ಥ್ರಿಲ್ಲರ್‌ ಮತ್ತು ಮಿಸ್ಟರಿ ಸೇರಿರುವುದರಿಂದ ಚಿತ್ರವು ಕತೆಯ ಮೇಲೆ ಹಾಗೂ ನನ್ನ ಪಾತ್ರದ ಮೇಲೆ ಕೇಂದ್ರೀಕೃತವಾಗುತ್ತಾ ಸಾಗುತ್ತದೆ.

ಅರೆಸ್ಟ್ ವಾರೆಂಟ್‌ಗೆ ಖಡಕ್ ಉತ್ತರ ನೀಡುತ್ತಾರಂತೆ ರಕ್ಷಿತ್


ಚಿತ್ರೀಕರಣದ ವೇಳೆ ನಿಮಗೆ ಮೋಜು ನೀಡುವಂಥ ಘಟನೆಗಳೇನಾದರೂ ನಡೆಯಿತೇ?
ಮಂಗಳೂರಿನಲ್ಲಿ ಚಿತ್ರೀಕರಣ ನಡೆದಾಗ ಅಂಥ ಘಟನೆಗಳಿಗೆ ನಾವು ಸಾಕ್ಷಿಯಾದೆವು. ಅಲ್ಲಿಗೆ ನಮ್ಮದೇನೂ ದೊಡ್ಡ ಯುನಿಟ್‌ ಹೋಗಿರಲಿಲ್ಲ; ಸಣ್ಣ ಟೀಮ್‌ ಆಗಿ ಹೋಗಿದ್ದೆವು. ಹಾಗಾಗಿ ನನಗೆ ಶೂಟಿಂಗ್‌ ವೇಳೆ ತಂದೆ ಹೇಳಿದ ಮಾತುಗಳು ನೆನಪಾಗುತ್ತಿದ್ದವು. ಅವರು ಹೇಳಿದ್ದರು, `ಆಗಿನ ಕಾಲದಲ್ಲಿ ಕ್ಯಾರವಾನ್‌ ಇರಲಿಲ್ಲ' ಎಂದು. ಆಗ ಬಿಡುವಿನ ವೇಳೆಯಲ್ಲಿ ತಂತ್ರಜ್ಞರು, ಕಲಾವಿದರು ಎಲ್ಲರೂ ರೌಂಡ್‌ ಟೇಬಲ್ ಹಾಕಿ ಕುಳಿತುಕೊಂಡು ಮಾತನಾಡುತ್ತಿದ್ದೆವು, ಅದರಲ್ಲೊಂದು ಖುಷಿ ಇತ್ತು ಎಂದು ಹೇಳಿದ್ದರು. ಆ ಖುಷಿ ಏನು ಎಂದು ನನಗೆ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಅರಿವಾಯಿತು. ಅಲ್ಲಿ ಊಟದ ವೇಳೆ ಸಪರೇಟಾಗಿ ವ್ಯಾನು ಗೀನು ಏನೂ ಬೇಡ ಎಂದು ನಾನು ಕೂಡ ನಿರ್ದೇಶಕರಿಗೆ ಹೇಳಿದ್ದೆ.  ಶೂಟಿಂಗ್‌ ವಿರಾಮದಲ್ಲಿ ಎಲ್ಲರೂ ಸ್ನೇಹಿತರಂತೆ ಬೀಚ್‌ ಬದಿಯಲ್ಲೇ ಊಟ, ತಿಂಡಿ ಮಾಡಿದ್ದು ನನಗೆ ಮರೆಯಲಾಗದ ಖುಷಿ ನೀಡಿತ್ತು.


ನಿಮ್ಮ ನಟನೆಯ ತಯಾರಿ ಹೇಗಿತ್ತು?
ಡ್ರಾಮ ಮತ್ತು ಸ್ಪೋರ್ಟ್ಸ್‌ನಲ್ಲಿ ನಾನು ಚಿಕ್ಕಂದಿನಲ್ಲೇ ಆಸಕ್ತಿ ಹೊಂದಿದ್ದೆ. ಸಿನಿಮಾ ಮಾಡಲು ತೀರ್ಮಾನಿಸಿದ ಮೇಲೆ ದೇಹದ ಫ್ಲೆಕ್ಸಿಬಿಲಿಟಿಗಾಗಿ ನಾಗರಬಾವಿಯ ಚೀತ ಸೀನ ಅವರ ಬಳಿಯಲ್ಲಿ ಒಂದು ವರ್ಷ ಜಿಮ್ನಾಸ್ಟಿಕ್‌ ಕಲಿತುಕೊಂಡೆ. `ಕಾಮಿಡಿ ಕಿಲಾಡಿ', `ಡ್ರಾಮ ಜ್ಯೂನಿಯರ್‌' ಮೊದಲಾದ ಕಾರ್ಯಕ್ರಮಗಳಲ್ಲಿ ಕಲಾವಿದರ ಮೆಂಟರ್‌ ಆಗಿದ್ದ ಪ್ರಭು ರಾಜ್‌ ಅವರು ನನ್ನ ನಟನಾ ಗುರುಗಳು. ಅವರ ಬಳಿ ಆಕ್ಟಿಂಗ್‌ ಸ್ಕೂಲ್‌ಗೆ ಹೋಗಿದ್ದೇನೆ. ಅಲ್ಲಿ ಒಂದು ಬಾಕ್ಸ್‌ನಲ್ಲಿ ವಿವಿಧ ರೀತಿಯ ಕ್ಯಾರೆಕ್ಟರ್‌ಗಳ ಹೆಸರು ಬರೆದು ಹಾಕುತ್ತೇವೆ.  ಅದರಲ್ಲಿ ಭಿಕ್ಷುಕ, ತರಕಾರಿ ಮಾರುವವ ಹೀಗೆ ವೆರೈಟಿ ಪಾತ್ರಗಳಿರುತ್ತವೆ. ಅವುಗಳಲ್ಲಿ ದಿನವೂ ವಿಭಿನ್ನವಾದ ಆಯ್ಕೆಗಳು ಸಿಕ್ಕು, ಒಂದೊಂದನ್ನೇ ಎತ್ತಿ ಆಯಾ ಪಾತ್ರವನ್ನು ಅಭಿನಯಿಸುತ್ತಿದ್ದೆವು. ಮತ್ತೆ ಸ್ನೇಹಿತನ ಜತೆಗೆ ಸೇರಿಕೊಂಡು ಬೇರೆ ಕಲಾವಿದರನ್ನು ಇಮಿಟೇಟ್ ಮಾಡುವುದು ಇವಷ್ಟೇ ನನಗಿರುವ ಅನುಭವ. ಕ್ಯಾಮೆರಾ ಮುಂದೆ ನಟಿಸಿ ಗೊತ್ತೇ  ಇರಲಿಲ್ಲ. ಅದೇ ಅಭಿನಯವನ್ನು ಕ್ಯಾಮೆರಾ ಮುಂದೆ ನೀಡುತ್ತಾ, ಸಿನಿಮಾದ ಸೆಟ್‌ನಲ್ಲಿಯೇ ತಾಂತ್ರಿಕ ವಿಚಾರಗಳ ಬಗ್ಗೆ ಕಲಿತುಕೊಂಡೆ.

ಯಶಸ್ಸಿನ ಕುದುರೆ ಮೇಲೆ ಏರಿ ಕುಳಿತ ರೂಪಿಕಾ

ತಂದೆಯ ಪ್ರಭಾವ ನಿಮ್ಮ ಮೇಲೆ ಎಷ್ಟರ ಮಟ್ಟಿಗೆ ಇದೆ?
ತಂದೆಯ ಸಿನಿಮಾ ನೋಡಿಯೇ ನನಗೆ ಸಿನಿಮಾದ ಮೇಲೆ ವ್ಯಾಮೋಹ ಬಂದಿತ್ತು. ಅವರ `ಅಲೆಗ್ಸಾಂಡರ್‌' ಸಿನಿಮಾ ತುಂಬಾನೇ ಇಷ್ಟಪಟ್ಟಿದ್ದೆ. ಹಾಗಾಗಿ ನನಗೆ ಚಿಕ್ಕೋನಾಗಿದ್ದಾಗಲೇ ಸಿನಿಮಾರಂಗಕ್ಕೆ  ಬರಬೇಕು ಅಂತ ಇತ್ತು. `ಪೊಲೀಸನ ಹೆಂಡ್ತಿ', `ಎದುರು ಮನೇಲಿ ಗಂಡ ಪಕ್ಕದ್ಮನೇಲಿ ಹೆಂಡ್ತಿ' ಮೊದಲಾದ ಚಿತ್ರಗಳ ಮೂಲಕ ನಮ್ಮ ತಂದೆ ಜನರನ್ನು ತುಂಬ ನಗಿಸುತ್ತಿದ್ದರು, ಜನರಿಗೆ ಮನರಂಜನೆ ನೀಡಿದ್ದರು ಎನ್ನುವುದು ಗೊತ್ತಾಗಿ ನನಗೂ ಹಾಗೇ ಆಗುವ ಸ್ಫೂರ್ತಿ ಮೂಡಿತ್ತು.  ಆದರೆ ನಾನು ಚಿಕ್ಕೋನಾಗಿದ್ದಾಗಲೇ ತಂದೆಗೆ ಅಪಘಾತವಾಯಿತು. ಆಗ ನಾನು ನಾಲ್ಕೈದು ವರ್ಷದ ಹುಡುಗನಷ್ಟೇ.  ಅದರ ಬಳಿಕವಂತೂ ಅವರು ನೀನು ಸಿನಿಮಾರಂಗಕ್ಕೆ ಹೋಗಲೇಬಾರದು ಎಂದು ತಾಕೀತು ಮಾಡಿದ್ದರು. ಕೊನೆಗೆ ಅವರ ಒಪ್ಪಿಗೆ, ಆಶೀರ್ವಾದದೊಂದಿಗೇನೆ ಚಿತ್ರರಂಗ ಪ್ರವೇಶಿಸಿದ್ದೇನೆ. ಆದರೆ ತಂದೆ ಬಿಟ್ಟು ಹೋದ ಲೆಗಸಿಯನ್ನು ನಾನು ಕಂಟಿನ್ಯೂ ಮಾಡಿದ್ದೇನೆ ಎಂದು ಜನ ಹೇಳುವಂತಾಗಬೇಕು. ನನ್ನ ನಟನೆ ನೋಡಿ ತಂದೆಯ ಮುಖದಲ್ಲೊಂದು ಸಂತೃಪ್ತಿಯ ನಗು ಮೂಡಬೇಕು ಎನ್ನುವುದು ನನ್ನ ಆಸೆ.