Yaduveera ಚಿತ್ರಕ್ಕೂ ಮೈಸೂರು ಮಹಾರಾಜರಿಗೂ ಸಂಬಂಧವಿಲ್ಲ: ಮಂಜು ಅಥರ್ವ
ಕನ್ನಡ ಚಿತ್ರರಂಗದ ಯುವರಾಜ, ರಾಜಕಾರಣಿ ನಿಖಿಲ್ ಕುಮಾರ್ ನಟನೆಯ ‘ಯದುವೀರ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಆಗಿದ್ದು, ಚಿತ್ರದ ನಿರ್ದೇಶಕ ಮಂಜು ಅಥರ್ವ ಅವರ ಮಾತುಗಳು ಇಲ್ಲಿವೆ.
ಆರ್.ಕೇಶವಮೂರ್ತಿ
ಕನ್ನಡ ಚಿತ್ರರಂಗದ ಯುವರಾಜ, ರಾಜಕಾರಣಿ ನಿಖಿಲ್ ಕುಮಾರ್ (Nikhil Kumar)ನಟನೆಯ ‘ಯದುವೀರ’ (Yaduveera) ಚಿತ್ರದ ಫಸ್ಟ್‌ಲುಕ್ (FistLook) ಬಿಡುಗಡೆ ಆಗಿದ್ದು, ಚಿತ್ರದ ನಿರ್ದೇಶಕ ಮಂಜು ಅಥರ್ವ (Manju Atharva) ಅವರ ಮಾತುಗಳು ಇಲ್ಲಿವೆ.
* ನೀವು ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ಡಿಗ್ರಿ ಓದುವಾಗ ಸಿನಿಮಾಗಳ ಮೇಲೆ ನನಗೆ ಆಸಕ್ತಿ ಹುಟ್ಟಿತ್ತು. ಅಲ್ಲಿಂದ ಒಂದಿಷ್ಟು ತಯಾರಿ ಮಾಡಿಕೊಂಡೆ. ಕನ್ನಡ ಸಾಹಿತ್ಯ ಓದು, ಸಿನಿಮಾ ನೋಡಲು ಶುರು ಮಾಡಿದೆ. ಮುಂದೆ ಸಂಭಾಷಣೆಕಾರ ಹಾಗೂ ನಿರ್ದೇಶಕ ಮಂಜು ಮಾಂಡವ್ಯ ಅವರ ಪರಿಚಯದಿಂದ ನಾನು ಚಿತ್ರರಂಗಕ್ಕೆ ಬಂದೆ.
* ನಿಮ್ಮ ಹಿನ್ನೆಲೆ ಏನು?
ನನ್ನದು ಮಂಡ್ಯ ಸಿಟಿ. ಎಂಎಸ್ಸಿ ಕೆಮಿಸ್ಟ್ರಿ ಓದಿದ್ದೇನೆ. ನಮ್ಮ ತಂದೆಯವರದ್ದು ಕಾರ್ಪೆಂಟರ್ ಕೆಲಸ. ನನ್ನ ಮನೆಯಿಂದ ಚಿತ್ರರಂಗಕ್ಕೆ ಬಂದಿರುವ ಮೊದಲಿಗ ನಾನೇ.
* ಯಾರ ಬಳಿ ಕೆಲಸ ಮಾಡಿದ್ದೀರಿ?
ಮೊದಲಿಗೆ ತಮಿಳಿನ ನಿರ್ದೇಶಕ ಕದೀರೇಶ್ ಅವರ ಜತೆ ಕೆಲಸ ಮಾಡಿದೆ. ಯಶ್ ನಟನೆಯ ‘ಮಾಸ್ಟರ್ ಪೀಸ್’, ಶಿವರಾಜ್‌ಕುಮಾರ್ ಹಾಗೂ ಶ್ರೀಮುರಳಿ ಅಭಿನಯದ ‘ಮಫ್ತಿ ಚಿತ್ರಗಳಿಗೆ ಅಸೋಸಿಯೇಟ್, ಪ್ರೇಮ್ ಅವರ ‘ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ.
* ಯದುವೀರ ಚಿತ್ರದ ಕತೆ ಏನು?
ಫ್ಯಾಮಿಲಿ ಕೂತು ನೋಡುವ ಕತೆ ಇಲ್ಲಿದೆ ಆ್ಯಕ್ಷನ್ ಹಾಗೂ ಫ್ಯಾಮಿಲಿ ಡ್ರಾಮಾ ಕತೆಯನ್ನು ನಮ್ಮ ಚಿತ್ರ ಒಳಗೊಂಡಿದೆ. ಸ್ವಮೇಕ್‌ನಿಂದ ಕೂಡಿದ ಪಕ್ಕಾ ನೇಟಿವಿಟಿ ಸಿನಿಮಾ.
Nikhil Kumaraswamy: 'ಯದುವೀರ'ನಾದ ಸ್ಯಾಂಡಲ್‌ವುಡ್‌ನ ಯುವರಾಜ: ಫಸ್ಟ್ ಲುಕ್ ರಿವೀಲ್
* ಈ ಕತೆ ಹುಟ್ಟಿಕೊಂಡಿದ್ದು ಹೇಗೆ?
ಪತ್ರಿಕೆಯಲ್ಲಿ ಬಂದ ವರದಿಯಿಂದ ‘ಯದುವೀರ’ ಕತೆಗೆ ಐಡಿಯಾ ಹುಟ್ಟಿಕೊಂಡಿತು. ಮುಂದೆ ಒಂದಿಷ್ಟು ಅಧ್ಯಯನ ಮಾಡಿದಾಗ ಕತೆ ಹುಟ್ಟಿಕೊಂಡಿದ್ದು.
* ನಿಖಿಲ್ ಅವರಿಗೆ ಈ ಚಿತ್ರ ಹೇಗೆ ಭಿನ್ನ?
ನಾಯಕನಿಗೆ ಎರಡು ಶೇಡ್ ಪಾತ್ರವಿದೆ. ಇಲ್ಲಿವರೆಗೂ ನಿಖಿಲ್ ಅವರು ನಗರ ಕೇಂದ್ರಿತ ಕತೆಗಳಲ್ಲಿ ನಟಿಸಿದ್ದಾರೆ. ಇದು ಮಂಡ್ಯ ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಕತೆ. ನಾಯಕನ ಲುಕ್ ವಿಶೇಷವಾಗಿದೆ.
* ಈ ಚಿತ್ರದ ಹೆಸರು ಮೈಸೂರು ಮಹಾರಾಜರನ್ನು ನೆನಪಿಸುತ್ತಿದೆಯಲ್ಲ?
ಖಂಡಿತವಾಗಿಯೂ ಮಹಾರಾಜರ ಕುಟುಂಬಕ್ಕೂ ನಮ್ಮ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಯದುವೀರ ಎಂಬುದು ಚಿತ್ರದಲ್ಲಿ ನಾಯಕನ ಹೆಸರು. ಜತೆಗೆ ಯದುವೀರ ಎಂಬುದಕ್ಕೆ ಬೇರೆಯದ್ದೇ ಅರ್ಥ ಇದೆ. ಅದೇನು ಎಂಬುದು ನೀವು ಚಿತ್ರದಲ್ಲಿ ನೋಡಬೇಕು.
Nikhil Kumaraswamy: ನಿಖಿಲ್ ಹುಟ್ಟುಹಬ್ಬದಂದು ಹೊಸ ಚಿತ್ರದ ಟೈಟಲ್-ಫಸ್ಟ್ ಲುಕ್ ರಿಲೀಸ್
* ಈ ಚಿತ್ರದ ಶಕ್ತಿ ಏನು?
ಕತೆ ಮತ್ತು ಮೇಕಿಂಗ್. ಬರೀ ವಿಷ್ಯುವಲ್ ಟ್ರೀಟ್‌ಮೆಂಟ್ ಇದ್ದರೆ ಸಾಲದು. ಮೇಕಿಂಗ್ ಇರಬೇಕು. ಇದರ ಜತೆಗೆ ಕತೆನೂ ಇರಬೇಕು. ಸಿನಿಮಾ ಮಾರುಕಟ್ಟೆ ತುಂಬಾ ದೊಡ್ಡದು. ಇಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಪರ್ಧೆ ಇಲ್ಲಿದೆ. ಅದಕ್ಕೆ ತಕ್ಕಂತೆ ಕತೆ ಮತ್ತು ಮೇಕಿಂಗ್ ಇರಬೇಕು. ಈ ಎರಡೂ ನನ್ನ ‘ಯದುವೀರ’ ಚಿತ್ರದಲ್ಲಿ ನೋಡುತ್ತೀರಿ.
* ನಿಖಿಲ್ ಕುಮಾರ್ ಅವರಿಗೆ ಕತೆ ಒಪ್ಪಿಸಿದ್ದು ಹೇಗೆ?
ಮೊದಲು ಪ್ರೊಡಕ್ಷನ್ ಸಂಸ್ಥೆ ಈ ಕತೆ ಒಪ್ಪಿಕೊಂಡು, ಯಾರು ಇದಕ್ಕೆ ಸೂಕ್ತ ಅಂತ ಕೇಳಿದರು. ನಾನು ನಿಖಿಲ್ ಕುಮಾರ್ ಅವರು ಅಂತ ಹೇಳಿದೆ. ಹಾಗೆ ನಾನು ನಿಖಿಲ್ ಕುಮಾರ್ ಅವರಿಗೆ ಕನೆಕ್ಟ್ ಆದೆ. ಅವರು ಈ ಚಿತ್ರ ಒಪ್ಪಲು ಕಾರಣ ಕತೆನೇ.