ನಮ್ ನಾಣಿ ಮದುವೆ ಪ್ರಸಂಗ'ದ ನಿರ್ದೇಶನಕ ಹೇಮಂತ್ ಹೆಗಡೆ ತಮ್ಮ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. 

ಉತ್ತರ ಕನ್ನಡದ ಹುಡುಗರು ಎದುರಿಸುತ್ತಿರುವ ಸಮಸ್ಯೆಯೊಂದನ್ನು ಇಟ್ಟುಕೊಂಡು ನಿರ್ದೇಶಕ, ನಟ ಹೇಮಂತ್‌ ಹೆಗಡೆ ಹಾಸ್ಯ ಸಿನಿಮಾ ಮಾಡಿದ್ದಾರೆ. ಸಂದೀಪ್‌ ನಾಗರಾಜ್‌ ನಿರ್ಮಾಪಕರು. ಹೇಮಂತ್‌ ಹೆಗಡೆ ಜೊತೆಗೆ ಗೀತಾಂಜಲಿ ಮಂಗಲ್‌, ಸೃಷ್ಟಿ, ರಾಜೇಶ್‌ ನಟರಂಗ ನಟಿಸಿದ್ದಾರೆ. ಸಿನಿಮಾ ಬಗ್ಗೆ ಹೇಮಂತ್‌ ಅವರ ಮಾತು.

- ಈ ಸಬ್ಜೆಕ್ಟ್ ನಿಮಗೆ ಕನೆಕ್ಟ್ ಆದದ್ದು ಹೇಗೆ?

ನಾನು ಉತ್ತರ ಕನ್ನಡದವನು. ಊರಿಗೆ ಹೋದಾಗಲೆಲ್ಲ ಈ ಹುಡುಗಂಗೆ ಮದುವೆ ಆಗಿಲ್ಲ, ಆ ಹುಡುಗಂಗೆ ಮದುವೆ ಆಗಿಲ್ಲ ಅನ್ನೋ ಮಾತೇ ಪದೇ ಪದೇ ಕಿವಿಗೆ ಬೀಳ್ತಿತ್ತು. ಪಾಪ, ಮೂವತ್ತಾರು ಮೂವತ್ತೇಳು ವರ್ಷ ದಾಟಿದ ಹುಡುಗರು ಮುಖ ಒಣಗಿಸಿಕೊಂಡು ಲುಂಗಿ ಉಟ್ಕೊಂಡು ಓಡಾಡ್ತಿದ್ರು. ಇದನ್ನೆಲ್ಲ ಗಮನಿಸುತ್ತಿದ್ದೆ. ಕಾಶ್ಮೀರ, ವಾರಣಾಸಿ, ಬಿಜಾಪುರಕ್ಕೆಲ್ಲ ಹೋಗಿ ಅಲ್ಲಿನ ಹುಡುಗಿಯರನ್ನು ಮದುವೆಯಾಗಲು ಶುರು ಮಾಡಿದ್ರು. ನಾನು ಹುಡುಗ ನೀನು ಹುಡುಗಿ ಅನ್ನೋದೆಷ್ಟೆಅಲ್ಲೀಗ ಉಳ್ಕೊಂಡಿದ್ದು. ಈ ಹತಾಶೆಯಲ್ಲಿ ಒಬ್ಬ ಹುಡುಗ ಏನೇನು ಫಚೀತಿ ಮಾಡ್ಕೊಳ್ಳಬಹುದು ಅನ್ನೋದನ್ನ ನೆನೆಸ್ಕೊಂಡು ನಂಗೆ ನಗು ಬರ್ತಿತ್ತು.

- ಇದನ್ನ ಸಿನಿಮಾದಲ್ಲಿ ಹೇಗೆ ತಂದಿದ್ದೀರಿ?

ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಈಗ ಬಿಡುಗಡೆ ಆಗ್ತಿರೋ ಮೊದಲ ಭಾಗದಲ್ಲಿ ಸಮಸ್ಯೆಯನ್ನಷ್ಟೇ ಎತ್ತಿಕೊಂಡಿದ್ದೇನೆ.

- ಈ ಕಾಲದಲ್ಲಿ ಕಾಮಿಡಿ ಸಬ್ಜೆಕ್ಟ್ ಇಟ್ಕೊಂಡು ಬಂದಿದ್ದೀರಲ್ಲಾ?

ಇದೇ ಈ ಕಾಲದ ಅಗತ್ಯ. ಕೋವಿಡ್‌ ನಂತರ ಜನರಿಗೆ ನಗು ತರಿಸೋ ಸಿನಿಮಾ ಬಯಸ್ತಿದ್ದಾರೆ. ಹಾಗೆ ನೋಡಿದರೆ ಕಳೆದ 8-10 ವರ್ಷಗಳಿಂದ ಒಳ್ಳೊಳ್ಳೆ ಹಾಸ್ಯ ಸಿನಿಮಾಗಳು ಬರ್ತಿಲ್ಲ. ಎಲ್ಲೆಲ್ಲೂ ಆ್ಯಕ್ಷನ್‌ ಸಿನಿಮಾಗಳೇ ರಾರಾಜಿಸುತ್ತಿವೆ. ಹೀಗಿರುವಾಗ ಕಾಮಿಡಿ ಸಬ್ಜೆಕ್ಟ್ ಖಂಡಿತಾ ಜನರಿಗೆ ಇಷ್ಟಆಗುತ್ತೆ. ಮೌತ್‌ ಪಬ್ಲಿಸಿಟಿಯಿಂದಲೇ ಸಿನಿಮಾ ಗೆಲ್ಲುತ್ತೆ ಅಂದುಕೊಂಡಿದ್ದೀನಿ.

- ಎಷ್ಟುಥಿಯೇಟರ್‌ಗಳಲ್ಲಿ ರಿಲೀಸ್‌ ಆಗ್ತಿದೆ?

ನಮಗೀಗ ಥಿಯೇಟರ್‌ದೇ ದೊಡ್ಡ ಸಮಸ್ಯೆ. ಸದ್ಯ 50 ರಿಂದ 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗ್ತಿದೆ. ಜನರ ಪ್ರತಿಕ್ರಿಯೆ ಗಮನಿಸಿ ಮುಂದಿನ ವಾರಗಳಲ್ಲಿ ಥಿಯೇಟರ್‌ ಸಂಖ್ಯೆ ಹೆಚ್ಚಾಗುವ ವಿಶ್ವಾಸ ಇದೆ. ಯುಕೆ ಮತ್ತು ಯುರೋಪ್‌ ರಾಷ್ಟ್ರಗಳಲ್ಲೂ ಸಿನಿಮಾ ರಿಲೀಸ್‌ ಆಗ್ತಿದೆ. ಈಗಾಗಲೇ ಎನ್ನಾರೈ ಒಬ್ಬರು 35 ಲಕ್ಷ ರು. ನೀಡಿ ಸಿನಿಮಾ ಹಕ್ಕು ಖರೀದಿಸಿದ್ದಾರೆ.

- ಇಷ್ಟುಲಾಂಗ್‌ ಗ್ಯಾಪ್‌ ಯಾಕೆ?

‘ಸ’ ಅನ್ನೋ ಸಿನಿಮಾ ನಿರ್ದೇಶಿಸಿದ ಬಳಿಕ ಹಿಂದಿಯಲ್ಲಿ ಒಂದು ಬ್ಲಡ್‌ ಸ್ಟೋರಿ ಮಾಡೋದಕ್ಕೆ ಹೋಗಿದ್ದೆ. ನಿರ್ಮಾಪಕರ ಸಮಸ್ಯೆಯಿಂದ ಆ ಸಿನಿಮಾ ಅರ್ಧಕ್ಕೆ ನಿಂತಿತು. ‘ಮರಳಿ ಬಂದಳು ಸೀತೆ’ ಸೀರಿಯಲ್‌ಗೆ ಕತೆ, ಸ್ಕ್ರೀನ್‌ ಪ್ಲೇ ಬರೀತಿದ್ದೆ. ಆಮೇಲೆ ಕೋವಿಡ್‌ ಬಂತು. ಹೀಗೆ ಗ್ಯಾಪ್‌ ಆಯ್ತು.