ಹಾರ್ಡ್‌ವರ್ಕ್ ಗೆಲ್ಲಿಸುತ್ತ: ದಿಯಾ ಚಿತ್ರದ ನಾಯಕಿ ಖುಷಿ
ದಿಯಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಖುಷಿ ರಿಯಲ್ ಲೈಫ್‌ನಲ್ಲಿ ಎಷ್ಟು ಖುಷಿಯಾಗಿದ್ದಾರೆ ಗೊತ್ತಾ?
ಆರಂಭದ ದಿನಗಳನ್ನು ಈಗ ನೆನಪಿಸಿಕೊಂಡಾಗ?
ಸಿನಿಮಾಗಳಿಗಾಗಿ ಅಲೆದಾಡುವುದು, ಆಡಿಷನ್ ಕೊಟ್ಟು ಬರುವುದು, ಯಾರಾದರೂ ಕರೆಯುತ್ತಾರೆಯೇ ಎಂದು ಕಾಯುವುದು, ಅವರಿಂದ ಯಾವುದೇ ಮಾಹಿತಿ ಬಾರದಿದ್ದಾಗ ‘ಈ ಚಿತ್ರರಂಗ ಸಾಕಪ್ಪ’ ಅನಿಸುತ್ತಿತ್ತು ಆಗ. ಮುಂದೆ ‘ದಿಯಾ’ ಸಿನಿಮಾ ಬಿಡುಗಡೆ ಆಗಿ ಎಲ್ಲರೂ ಚೆನ್ನಾಗಿದೆ ಎಂದು ಹೇಳುತ್ತಿದ್ದಾಗಲೂ ಜನ ಥಿಯೇಟರ್‌ಗೆ ಬಾರದಿದ್ದಾಗ ಇನ್ನೂ ಬೇಸರ ಆಯಿತು. ಇಂಥ ಸಂಕಷ್ಟಗಳನ್ನು ಆರಂಭದಲ್ಲಿ ನೋಡಿದ್ದೇನೆ. ಆದರೆ, ಯಾವಾಗ ‘ದಿಯಾ’ ಚಿತ್ರವನ್ನು ನೋಡಿದವರು ಮೆಚ್ಚಿಕೊಂಡರೋ, ಲಾಕ್‌ಡೌನ್ ಸಮಯದಲ್ಲಿ ಓಟಿಟಿಯಲ್ಲಿ ಚಿತ್ರ ನೋಡಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕೊಟ್ಟ ಮೇಲೆ ಅನಿಸಿದ್ದು, ಹಾರ್ಡ್‌ವರ್ಕ್ ಮಾಡಿದರೆ ಖಂಡಿತ ಸಕ್ಸಸ್ ಸಿಗುತ್ತದೆ ಎಂಬುದು.
ಖುಷಿ ಕೊಟ್ಟ ಆ ಕ್ಷಣಗಳು ಯಾವುವು?
ಸಿನಿಮಾ ಬಿಡುಗಡೆಗೂ ಮೊದಲೇ ಶ್ರೀಮುರಳಿ ಅವರು ನಮ್ಮ ‘ದಿಯಾ’ ಚಿತ್ರ ನೋಡಿ ಬಂದು ನನ್ನ ಕಡೆ ನೋಡಿ ‘ಅಬ್ಬಾ ಎಷ್ಟು ಚೆನ್ನಾಗಿ ನಟನೆ ಮಾಡಿದ್ದೀರಿ. ಸೂಪರ್’ ಎಂದು ಹೊಗಳಿದ್ದು, ಈ ಕ್ಷಣಕ್ಕೂ ಮರೆಯಲಾಗದ ಸಂಗತಿ. ಆ ಖುಷಿಯನ್ನು ಪದಗಳಲ್ಲಿ ಹೇಳಲಾಗದು. ಸ್ಟಾರ್ ನಟರೊಬ್ಬರು ನನ್ನಂತಹ ಹೊಸ ನಟಿಯನ್ನು ಮೆಚ್ಚಿಕೊಂಡಿದ್ದು ತುಂಬಾ ಖುಷಿ ಕೊಟ್ಟಿತು.
ಒಂದು ಗೆಲುವು ನನ್ನ ವರ್ಷ ಪೂರ್ತಿ ಬ್ಯುಸಿಯಾಗಿಸಿತು: ಖುಷಿ
ನಿರೀಕ್ಷೆಯೇ ಇಲ್ಲದೆ ಬಂದ ಸಂಭ್ರಮ?
ಖಂಡಿತವಾಗಿಯೂ ‘ದಿಯಾ’ ಸಿನಿಮಾದ ಯಶಸ್ಸು. ಯಾಕೆಂದರೆ ತುಂಬಾ ಜನರನ್ನು ಈ ಚಿತ್ರದ ಆಡಿಷನ್‌ಗೆ ಕರೆದಿದ್ದರು. ನಾನೂ ಕೂಡ ಎಲ್ಲರಂತೆ ಹೋಗಿದ್ದೆ. ಆಡಿಷನ್ ಕೊಟ್ಟು ಒಂದು ವಾರ ಕಳೆದರೂ ಫೋನ್ ಬರಲಿಲ್ಲ. ಬೇರೆ ಯಾರೋ ಆಯ್ಕೆ ಆಗಿರಬೇಕು ಎಂದುಕೊಂಡಿದ್ದೆ. ಒಂದು ತಿಂಗಳು ಆದ ನಂತರ ಮತ್ತೆ ಕರೆದು ಆಡಿಷನ್ ಕೊಡಕ್ಕೆ ಹೇಳಿದರು. ಆಗ ನಾನು ‘ನನಗೆ ನಟನೆ ಬರಲ್ಲ’ ಅಂದೆ. ನಮಗೆ ಅದೇ ರೀತಿ ಇರುವವರು ಬೇಕು. ಸಹಜವಾಗಿ ಕಾಣಬೇಕು ಎಂದು ನಾಯಕಿ ಪಾತ್ರಕ್ಕೆ ನನ್ನೇ ಆಯ್ಕೆ ಮಾಡಿಕೊಂಡಾಗ ಅಚ್ಚರಿ ಆಯಿತು. ಅದರಲ್ಲೂ ಟೈಟಲ್ ರೋಲ್ ನನ್ನದೇ. ಇದಕ್ಕಿಂತ ಸರ್ಪ್ರೈಸ್ ಇನ್ನೊಂದಿಲ್ಲ ಅನಿಸುತ್ತದೆ.
ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!
ಯಶಸ್ಸಿನ ಸೂತ್ರಗಳೇನು?
ಸಕ್ಸಸ್ ಅನ್ನೋದು ಖಾಯಂ ಆಗಿ ನಮ್ಮ ಜತೆ ಇರಲ್ಲ. ಅದು ಪದೇ ಪದೇ ಬದಲಾಗುತ್ತಿರುತ್ತದೆ. ಈಗ ನಾನು 5 ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಪ್ರತಿ ಹೆಜ್ಜೆ ಇಟ್ಟಾಗಲೂ ನಾನು ಹೊಸಬಳು, ಇದು ನನಗೆ ಮೊದಲ ಸಿನಿಮಾ, ಮೊದಲ ಉದ್ಯೋಗ, ಮೊದಲ ಕಂಪನಿ ಹೀಗೆ ಯೋಚನೆ ಮಾಡಿದರೆ ಸಾಕು. ನಾನು ಈಗಷ್ಟೆ ಪಯಣ ಆರಂಭಿಸಿರುವ ನಟಿ. ‘ದಿಯಾ’ ಚಿತ್ರದ ಮೂಲಕ ಯಶಸ್ಸು ಬಂತು. ಆದರೆ, ಅದು ಆ ಚಿತ್ರಕ್ಕೆ ಮಾತ್ರ ಸೀಮಿತ. ಮುಂದೆ ಅದೇ ಚಿತ್ರದ ಯಶಸ್ಸನ್ನು ಕ್ಯಾರಿ ಮಾಡುತ್ತ ಹೋಗಬಾರದು. ಮತ್ತೊಂದು ಸಿನಿಮಾ, ಮತ್ತೊಂದು ಪಾತ್ರ, ಮತ್ತೊಂದು ಕತೆ- ತಂಡದ ಕಡೆ ನಮ್ಮ ಗುರಿ ಇರಬೇಕು. ಇದನ್ನು ನೀವು ಸಕ್ಸಸ್ ಸೂತ್ರ ಅಂತ ಬೇಕಾದರೂ ಅಂದುಕೊಳ್ಳಿ.
ಏಕಾಂತದಲ್ಲಿ ರೆಟ್ರೋ ಸಾಂಗ್ ಕೇಳುವ ಖುಷಿ ಇನ್‌ಸ್ಟಾಗ್ರಾಂನಲ್ಲಿ ಎಷ್ಟು ಆ್ಯಕ್ಟೀವ್ ನೋಡಿ!
ನಿಮ್ಮ ಮುಂದಿರುವ ಕನಸುಗಳೇನು?
ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸುವ ಕನಸು ಇದೆ. ಒಳ್ಳೆಯ ತಂಡ ಹಾಗೂ ಪ್ಯಾಷನೇಟ್ ನಿರ್ದೇಶಕರ ಚಿತ್ರಗಳಲ್ಲಿ ಅತ್ಯುತ್ತಮ ನಟಿ ಎನಿಸಿಕೊಳ್ಳುವ ಪಾತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಕನಸು.