ಕರಾವಳಿಯ ರಾಜಕೀಯ ವ್ಯಾಪಾರ ಬಿಚ್ಚಿಟ್ಟ ಬೇರ: ವಿನು ಬಳಂಜ ಮಾತು

ಖ್ಯಾತ ಕಿರುತೆರೆ ನಿರ್ದೇಶಕ ವಿನು ಬಳಂಜ ನಿರ್ದೇಶಿಸಿರುವ ‘ಬೇರ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ದಿವಾಕರ ದಾಸ್ ನೇರ್ಲಾಜೆ ನಿರ್ಮಾಣದ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸುಮನ್, ರಾಕೇಶ್ ಮಯ್ಯ, ದತ್ತಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕುರಿತು ವಿನು ಬಳಂಜ ಸಂದರ್ಶನ.

Bera film director Vinu Balanja exclusive interview vcs

ರಾಜೇಶ್ ಶೆಟ್ಟಿ

ಮೊದಲ ಸಿನಿಮಾ. ಕರಾವಳಿ ಸ್ಟೋರಿ ಎಂದೇ ಬಿಂಬಿತವಾಗಿದೆ. ಏನು ಕತೆ?

ಸಿನಿಮಾ ಮಾಡಬೇಕು ಅನ್ನುವುದು ನನ್ನ ದೊಡ್ಡ ಕನಸು. ಒಂದು ಸಲ ಕಲ್ಲಡ್ಕಕ್ಕೆ ಹೋಗಿದ್ದಾಗ ಅಲ್ಲಿ ಹೊಳ‍ೆದ ಕತೆ ಇದು. ಒಂಥರಾ ಕರಾವಳಿ ಸ್ಟೋರಿಯೇ ಹೌದು. ರಾಜಕೀಯ ಮತ್ತು ನಾಯಕತ್ವ ಬೇರೆ. ರಾಜಕೀಯದಲ್ಲಿ ನಾಯಕತ್ವ ಪಡೆಯುವುದಕ್ಕಾಗಿ ಜೀವಗಳ ಬಲಿ ಕೊಡಲಾಗುತ್ತದೆ. ಒಂದು ಅಮಾಯಕ ಜೀವದ ರಕ್ತ ನೆಲಕ್ಕೆ ಬಿದ್ದಾಗ ಅದನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಕುಟುಂಬ ಅಳುತ್ತದೆ. ತಾಯಿ ಕರುಳು ನೋಯುತ್ತದೆ. ಅದರಿಂದ ಲಾಭ ಆಗುವುದು ಆ ನಾಯಕರಿಗೆ ಮಾತ್ರ. ಅಂಥದ್ದೊಂದು ಕತೆ ಇದು. ಯಾವ ತಾಯಿಯ ಮಕ್ಕಳೂ ಸಾಯಬಾರದು ಎಂಬ ಕತೆ.

ಕೋಮು ಸಂಘರ್ಷದ ಕತೆ ಹೇಳುತ್ತಿದ್ದೀರಾ?

ಕಲ್ಲಡ್ಕ ಎಂದರೆ ಮೊದಲು ಕಣ್ಣಿಗೆ ಬರುವುದೇ ಒಂದು ಪೊಲೀಸ್ ವ್ಯಾನ್. ಅಲ್ಲಿ ಯಾವಾಗಲೂ ಒಂದು ಪೊಲೀಸ್ ವ್ಯಾನ್ ನಿಂತಿರುತ್ತದೆ. ಆದರೆ ಮನುಷ್ಯರು ಎಲ್ಲರೂ ನಮ್ಮವರೇ. ಇಲ್ಲಿ ಸಂಘರ್ಷಕ್ಕಿಂತ ಆ ಸಂಘರ್ಷವನ್ನು ಹುಟ್ಟುಹಾಕಿ ಬೇಳೆ ಬೇಯಿಸುವವರ ಕತೆಯನ್ನು ಹೇಳಿದ್ದೇವೆ. ಹೇಗ್ಹೇಗೆ ನೋಯಿಸಲಾಗುತ್ತದೆ ಎಂಬುದು ಹೇಳಿದ್ದೇವೆ. ನನ್ನ ಉದ್ದೇಶ ಯಾರನ್ನೂ ನೋಯಿಸುವುದಲ್ಲ. ಇಲ್ಲಿ ಯಾವ ಧರ್ಮದವರನ್ನೂ ನೋಯಿಸಿಲ್ಲ. ಇರುವ ವಿಚಾರವನ್ನು ಇದ್ದ ಹಾಗೆ ಹೇಳಿದ್ದೇವೆ. ವಿಚಾರ ಸ್ವಲ್ಪ ಸೂಕ್ಷ್ಮ ಇರಬಹುದು. ಆದರೆ ಯಾರನ್ನೂ ಘಾಸಿಗೊಳಿಸುವ ಹಾಗೆ ಇಲ್ಲ. ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳುತ್ತಾರೆ ಕೂಡ.

'ಬೇರ' ನಿಜ ಅರ್ಥದ ಕರಾ‍ವಳಿ ಫೈಲ್ಸ್: ಹರ್ಷಿಕಾ ಪೂಣಚ್ಚ ಬಿಚ್ಚಿಟ್ಟ ಸತ್ಯಗಳು

ಧರ್ಮಗಳ ವಿಚಾರ ಮುನ್ನೆಲೆಗೆ ತರುವುದು ಎಷ್ಟು ಒಳ್ಳೆಯದು?

ನಾನು ಧರ್ಮಗಳ ಬಗ್ಗೆ ಸಿನಿಮಾ ಮಾಡಿಲ್ಲ. ಧರ್ಮವನ್ನು ಬಳಸಿಕೊಂಡು, ಧರ್ಮವನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಸಿನಿಮಾ ಮಾಡಿದ್ದೇನೆ. ವಾಸ್ತವದ ನೆಲೆಗಟ್ಟಿನಲ್ಲಿ ಸಿನಿಮಾ ಮಾಡಿದ್ದೇನೆ. ಈ ಸಿನಿಮಾದ ಟ್ರೇಲರ್‌ ನೋಡಿ ಪ್ರವೀಣ್ ನೆಟ್ಟಾರು ಪತ್ನಿ, ಸುರತ್ಕಲ್‌ನಲ್ಲಿ ಹತನಾದ ಫಾಸಿಲ್ ತಂದೆ, ಶಿವಮೊಗ್ಗದ ಹರ್ಷನ ಸಹೋದರಿ ಎಲ್ಲರೂ ಮೆಚ್ಚಿ ಮಾತನಾಡಿದ್ದಾರೆ. ಅವರ ಕುಟುಂಬಗಳಿಗೆ ನೋವು ಗೊತ್ತಿದೆ. ಆ ನೋವು ಎಲ್ಲರಿಗೂ ತಾಕಲಿ.

Bera film director Vinu Balanja exclusive interview vcs

ಈ ಕತೆ ರೂಪುಗೊಳ್ಳಲು ಏನು ಪ್ರೇರಣೆ?

ಕಲ್ಲಡ್ಕದಲ್ಲಿ ನಾಸಿರ್‌ ಎಂಬುವವರು ಒಂದು ಅದ್ಭುತವಾದ ಮ್ಯೂಸಿಯಂ ಕಟ್ಟಿದ್ದಾರೆ. ಅದನ್ನು ನೋಡಲು ಹೋದಾಗ ಈ ಕತೆ ಹೊಳೆಯಿತು. ‘ಬೇರ’ ಎಂದರೆ ತುಳುವಿನಲ್ಲಿ ವ್ಯಾಪಾರ ಎಂದರ್ಥ. ಮರ್ಚೆಂಟ್‌ ಆಫ್‌ ಡೆತ್‌ ಎಂಬ ಟ್ಯಾಗ್‌ಲೈನ್‌ ಇದೆ. ಈ ಚಿತ್ರವನ್ನು ನನ್ನ ಗೆಳೆಯರಾದ ದಿವಾಕರ ದಾಸ್‌ ನೇರ್ಲಾಜೆ ಪ್ರೀತಿಯಿಂದ ನಿರ್ಮಿಸಿದ್ದಾರೆ.

ಚಿತ್ರೀಕರಣ ಸಂದರ್ಭದಲ್ಲಿ ಎದುರಾದ ಸವಾಲುಗಳು?

ಅಂಥಾ ದೊಡ್ಡ ಸಮಸ್ಯೆ ಏನೂ ಆಗಲಿಲ್ಲ. ಕತೆ ತಿ‍ಳಿದಾಗ ಕೆಲವು ಕಲಾವಿದರು ನಟಿಸಲು ಹಿಂದೆ ಸರಿದರು ಬಿಟ್ಟರೆ ಮತ್ತೇನೂ ತೊಂದರೆ ಆಗಲಿಲ್ಲ. ಈ ಸಿನಿಮಾ ಮನರಂಜನೆ ಮೂಲಕವೇ ಸತ್ಯ ಹೇಳುವ ಪ್ರಯತ್ನ. ಥ್ರಿಲ್ಲರ್‌ ಮಾದರಿಯಲ್ಲೇ ಚಿತ್ರಕತೆ ರೂಪಿಸಿದ್ದೇವೆ. ನಮ್ಮ ಮಧ್ಯೆ ಇದ್ದೇ ನಮ್ಮ ನಡುವೆ ಬಿರುಕು ತರುವವರನ್ನು ಗುರುತಿಸುವ ಪ್ರಯತ್ನವೂ ಸಿನಿಮಾದಲ್ಲಿ ನಡೆಯಲಿದೆ. ಅಲ್ಲದೇ ಉಗ್ರವಾದದ ಎಳೆಯೂ ಇದೆ. ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ರೂಪಿಸಿದ್ದೇವೆ ಎಂಬ ಸಮಾಧಾನ ಇದೆ.

Latest Videos
Follow Us:
Download App:
  • android
  • ios