ನಿರ್ದೇಶಕರನ್ನು ನಂಬುವುದೇ ನನ್ನ ಸಕ್ಸಸ್ ಗುಟ್ಟು; ಆಶಿಕಾ ರಂಗನಾಥ್
ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಸಿನಿ ಜರ್ನಿಯ ಆರಂಭದ ದಿನಗಳ ಬಗ್ಗೆ ನೆನಪಿಸಿಕೊಂಡು ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿರುವ ಚಿತ್ರಗಳು ಯಾವುದು ಗೊತ್ತಾ?
ಆರಂಭದ ದಿನಗಳನ್ನು ಈಗ ನೆನಪಿಸಿಕೊಂಡಾಗ?
ನಾನು ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷ ಕಳೆದು ಐದನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಕಲಿಯುವ ವಿಚಾರದಲ್ಲಿ, ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎನ್ನುವ ವಿಚಾರದಲ್ಲಿ ವ್ಯಕ್ತಿಯಾಗಿ ನಾನು ಬದಲಾಗಿಲ್ಲ. ಆರಂಭದಲ್ಲಿ ಹೇಗಿದ್ದೀನೋ ಈಗಲೂ ಹಾಗೆ ಇದ್ದೇನೆ. ಆ ಹೊಸತನದ ಕುತೂಹಲ ನನ್ನಿಂದ ದೂರವಾಗಿಲ್ಲ. ನಟಿಯಾಗಿ ಹೇಳುವುದಾದರೆ ಆಗ ಅವಕಾಶಗಳು ಇಲ್ಲದೆ ಯಾರೂ ನಮ್ಮನ್ನು ಗುರುತಿಸುತ್ತಿರಲಿಲ್ಲ. ಈಗ ಅವಕಾಶಗಳು ಇದ್ದಾವೆ. ಎಲ್ಲರು ಗುರುತಿಸುತ್ತಾರೆ. ಚಿತ್ರರಂಗದ ಅನುಭವ ತಕ್ಕಮಟ್ಟಿಗೆ ಆಗಿದೆ. ದೊಡ್ಡ ನಟರ ಚಿತ್ರಗಳಲ್ಲಿ ನಾಯಕಿ ಆಗುತ್ತಿದ್ದೇನೆ. ಬಂದ ಎಲ್ಲ ಚಿತ್ರಗಳನ್ನು ಒಪ್ಪಿಕೊಂಡು ಡೇಟ್‌ಸ್ ಕೊಡಕ್ಕೆ ಆಗುತ್ತಿಲ್ಲ. ಈಗ ನನ್ನ ಜನ ಗುರುತಿಸಿ, ನಟಿ ಎನ್ನುತ್ತಿದ್ದಾರೆ.
ಖುಷಿ ಕೊಟ್ಟ ಆ ಕ್ಷಣಗಳು ಯಾವುವು?
ನನ್ನ ಮೊದಲ ಚಿತ್ರದ ಬಿಡುಗಡೆಯ ದಿನ. ಮೊದಲ ದಿನ ಫಸ್‌ಟ್ ಶೋಗೆ ಹೋಗಿ ಜನರ ಜತೆ ಕೂತು ನನ್ನ ದೊಡ್ಡ ಪರದೆ ಮೇಲೆ ನೋಡಿಕೊಂಡಾಗ ಆದ ಖುಷಿಯನ್ನು ಕೊನೆಯವರೆಗೂ ಮರೆಯಲಾರೆ. ಆ ಕಾರಣಕ್ಕೆ ಈಗಲೂ ನನ್ನ ಪ್ರತಿ ಚಿತ್ರವನ್ನೂ ಮೊದಲ ದಿನವೇ ಚಿತ್ರಮಂದಿರದಲ್ಲಿ ನೋಡುತ್ತೇನೆ. ‘ರ್ಯಾಂಬೋ 2’ ಚಿತ್ರಕ್ಕೆ ಜನ ಕೊಟ್ಟ ಯಶಸ್ಸು. ಚುಟು ಚುಟು ಹಾಡು ಬಂದಾಗ ಪರದೆ ಮುಂದೆ ಬಂದು ಪ್ರೇಕ್ಷಕರು ಕುಣಿದ್ದು, 100 ಮಿಲಿಯನ್ ಹಿಟ್‌ಸ್ ಪಡೆದುಕೊಂಡ ಮೊದಲ ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು... ಇವು ನನ್ನ ವೃತ್ತಿ ಪಯಣದಲ್ಲಿ ಮರೆಯಲಾಗದ ಖುಷಿ ಸಂಗತಿಗಳು.
ನಟಿ ಆಶಿಕಾ ರಂಗನಾಥ್‌ನ ಹುಡುಕಿಕೊಂಡು ಬರ್ತಿದೆ ಮದುವೆ ಪ್ರಪೋಸಲ್?
ನಿರೀಕ್ಷೆಯೇ ಇಲ್ಲದೆ ಬಂದ ಸಂಭ್ರಮ?
ನಿರ್ದಿಷ್ಟವಾಗಿ ನೆನಪಾಗುತ್ತಿಲ್ಲ. ಆದರೆ, ಚಿತ್ರರಂಗದಲ್ಲಿ ಈ ಕ್ಷಣದವರೆಗೂ ನನಗೆ ಸಿಕ್ಕ ಎಲ್ಲವೂ ನಿರೀಕ್ಷೆಯೇ ಇಲ್ಲದೆ ಬಂದಿದ್ದು ಅಂತ ಹೇಳಬಹುದು.
ಯಶಸ್ಸಿನ ಸೂತ್ರಗಳೇನು?
ನನಗೆ ಸಕ್ಸಸ್ ಸೂತ್ರ ಗೊತ್ತಿಲ್ಲ. ಯಾಕೆಂದರೆ ಒಬೊಬ್ಬರು ಒಂದೊಂದು ವಿಚಾರದಲ್ಲಿ ವರ್ಕ್ ಆಗಿ ಯಶಸ್ಸು ಪಡೆದುಕೊಂಡಿರುತ್ತಾರೆ. ಇಂಥದ್ದೇ ಸೂತ್ರ ಅಂತ ಹೇಳಲಾಗದು. ಆಸಕ್ತಿ, ಶ್ರದ್ದೆಯಿಂದ ಕೆಲಸ ಮಾಡಬೇಕು. ನಂಬಿಕೆ ಮತ್ತು ವಿಶ್ವಾಸ ಮುಖ್ಯ. ನಾವು ಒಪ್ಪಿಕೊಳ್ಳುವ ಚಿತ್ರದ ಮೇಲೆ ನಂಬಿಕೆ ಇಡಬೇಕು. ನಮ್ಮ ಪಾತ್ರ, ಕತೆಯನ್ನು ರೂಪಿಸುವ ನಿರ್ದೇಶಕನ ಮೇಲೆ ವಿಶ್ವಾಸ ಇಡಬೇಕು. ಇದು ನಾನು ಅಂದುಕೊಂಡಿರುವ ಸಕ್ಸಸ್ ಸೂತ್ರ. ಈ ಎಲ್ಲದರ ನಂತರ ಅದೃಷ್ಟ ಅನ್ನೋದು ಬೇಕಿರುತ್ತದೆ.
ಮುಗುಳುನಗೆ ಸುಂದರಿ ಆಶಿಕಾ ಕೆನ್ನೆಗೆ ಕಿಸ್ ಕೊಟ್ಟು ಓಡಿಹೋದವ ಸಿಗಲೇ ಇಲ್ಲ!
ನಿಮ್ಮ ಮುಂದಿರುವ ಕನಸುಗಳೇನು?
ನಿರ್ದೇಶಕ ಕಲ್ಪಿಸುವ ಪ್ರತಿಯೊಂದು ಪಾತ್ರಕ್ಕೂ ನಟಿಯಾಗಿ ಕೊನೆಯ ತನಕ ಜೀವ ತುಂಬಬೇಕು ಎಂಬುದು ನನ್ನ ಕನಸು. ಪ್ರತಿ ಚಿತ್ರದಲ್ಲೂ ನಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು, ನಾನು ಮಾಡುವ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬೇಕು. ಇದು ನಾನು ಪ್ರತಿ ದಿನ ಕಾಣುವ ಕನಸು.